‘ಅಮ್ಮನ ಆಸೆಯಂತೆ ಮೊದಲು ಕನ್ನಡ ಸಿನಿಮಾ ಮಾಡುವಾಸೆ!’

7

‘ಅಮ್ಮನ ಆಸೆಯಂತೆ ಮೊದಲು ಕನ್ನಡ ಸಿನಿಮಾ ಮಾಡುವಾಸೆ!’

Published:
Updated:
Deccan Herald

ಸಾಧನೆಯ ಹಾದಿಯಲ್ಲಿ ಕಲ್ಲು, ಮುಳ್ಳು ಬರುವುದು ಸಹಜ. ಆದರೆ, ದೃಢ ನಿಶ್ಚಯ, ಅಚಲತೆ, ಆತ್ಮವಿಶ್ವಾಸವೊಂದಿದ್ದರೆ ಮನುಷ್ಯ ಎಷ್ಟೇ ದೊಡ್ಡ ಬೆಟ್ಟವನ್ನಾದರೂ ಉರುಳಿಸಬಹುದು ಎನ್ನುವುದು ಅಕ್ಷರಶಃ ಸತ್ಯ. ಸಮಸ್ಯೆಗಳು ಮನುಷ್ಯನಿಗೆ ಎಷ್ಟೇ ಕಷ್ಟ ಕೊಟ್ಟರೂ ಕೊನೆಗೆ ಒಂದು ನೀತಿ ಪಾಠ ಹೇಳಿ ಹೋಗುವುದುನಿಜ. ಇಷ್ಟೊಂದು ಪ್ರಬುದ್ಧವಾಗಿ ತಮ್ಮ ಇಪ್ಪತ್ತೆರಡನೇ ವಯಸ್ಸಲ್ಲಿ ಅರಳು ಹುರಿದಂತೆ ಮಾತನಾಡುವ ಈ ನಟಿಯ ಹೆಸರು ಪ್ರಿಯಾಂಕಾ ಸಿರಿಗೆರೆ.

ಮೂಲತಃ ಚಿತ್ರದುರ್ಗದವರಾದ ಪ್ರಿಯಾಂಕಾ ಸದ್ಯ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಬೆಡಗಿ. ಮಾಡೆಲಿಂಗ್ ಜೊತೆಗೆ ಫ್ಯಾಷನ್ ಷೋ ಮತ್ತು ಪ್ರಸಿದ್ಧ ವಸ್ತ್ರವಿನ್ಯಾಸಕರ ವಸ್ತ್ರ ಪ್ರದರ್ಶನದಲ್ಲಿ ಮುಂಚೂಣಿಯಲ್ಲಿದ್ದಾರೆ. ಜೊತೆಗೆ ಚಂದನವನದಲ್ಲಿ ತಮ್ಮ ಛಾಪು ಮೂಡಿಸುವ ಹಂಬಲ ಹೊಂದಿರುವ ಈ ಹದಿಹರೆಯದ ಬೆಡಗಿ  ಮೆಟ್ರೊ ಜೊತೆ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಸಕತ್ ಬ್ಯೂಸಿಯಾಗಿರುವ ಪ್ರಿಯಾಂಕಾಗೆ ಚಂದನವನದಲ್ಲಿ ನೆಗೆಟಿವ್ ರೋಲ್‌ನಲ್ಲಿ ಮಿಂಚುವಾಸೆ. ತಮ್ಮ ಮಗಳು ನಾಯಕಿ ಪಾತ್ರದಲ್ಲಿ ಮೊದಲು ಕನ್ನಡ ಸಿನಿಮಾದಲ್ಲಿಯೇ ಕಾಣಿಸಿಕೊಳ್ಳ
ಬೇಕೆನ್ನುವುದು ಪ್ರಿಯಾಂಕಾ ಅವರ ತಾಯಿಯ ಆಸೆ. ಅದಕ್ಕಾಗಿ ಸದ್ಯ ಪ್ರಿಯಾಂಕಾ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಮುಖ್ಯ ಪಾತ್ರಕ್ಕಾಗಿ ನಟಿಸಲು ವಿಪುಲ ಅವಕಾಶಗಳು ದೊರೆತರೂ ಕನ್ನಡ ಚಿತ್ರದಲ್ಲಿಯೇ ನಾಯಕಿಯಾಗಿ ಕಾಣಿಸಿಕೊಳ್ಳಬೇಕು ಎಂದು ಬಂದಿರುವ ಎಲ್ಲ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕನ್ನಡಕ್ಕೆ ಮೊದಲ ಪ್ರಾಧಾನ್ಯತೆ ಕೊಡುವ ಜೊತೆಗೆ ತಮ್ಮ ಅಮ್ಮನ ಆಸೆಯನ್ನು ಈಡೇರಿಸುವ ಬಯಕೆಯಿಂದ ಈ ಕನ್ನಡತಿ ಒಂದು ಸುಂದರವಾದ ಕಥಾನಕಕ್ಕಾಗಿ ಕಾಯುತ್ತಿದ್ದಾರೆ.

2016ರಲ್ಲಿ ಸಿಲ್ವರ್ ಸ್ಟಾರ್ ಏಜೆನ್ಸಿಯಿಂದ ತಮ್ಮ ಮಾಡೆಲಿಂಗ್ ಜೀವನವನ್ನು ಪ್ರಾರಂಭಿಸಿದ ಪ್ರಿಯಾಂಕಾ ಅದೇ ವರ್ಷ ಪ್ರಿನ್ಸೆಸ್ ಕರ್ನಾಟಕ್-2016 ಟೈಟಲ್ ಅನ್ನು ಮುಡಿಗೇರಿಸಿಕೊಂಡವರು. ನಂತರ 2017 ರಲ್ಲಿ ಮಿಸ್ ಸೌತ್ ಕರ್ನಾಟಕ, ಮಿಸ್ ಬಾಡಿ ಬ್ಯೂಟಿಫುಲ್ ಕರ್ನಾಟಕ, ಮಿಸ್ ರನ್‌ವೇ ಹೀಗೆ ಮುಂತಾದ ಗರಿಗಳನ್ನು ತಮ್ಮ ಮುಡಿಗೇರಿಸಿಕೊಂಡವರು.

ಪ್ರಿಯಾಂಕಾ ಇಲ್ಲಿಯವರೆಗೆ ವಿಕ್ಟೋರಿಯಾ ಆಂಜೆಲ್ಸ್ ಷೋ, ಹೈಪರ್‌ಸಿಟಿ ರ‍್ಯಾಂಪ್ ಷೋ, ಚೆನ್ನೈ ಫ್ಯಾಷನ್, ಎಸಿಸಿ ಫ್ಯಾಷನ್, ಮಿಸ್ ಕರ್ನಾಟಕ 2017, ಹೈದರಾಬಾದ್ ಡಿಸೈನರ್ ಬ್ರೈಡಲ್ ಕಲೆಕ್ಷನ್, ಕೊಚ್ಚಿನ್ ಫ್ಯಾಷನ್ ಷೋ, ಮಧುರೈ ಷೋ,ವರಮಹಾಲಕ್ಷ್ಮೀ ಸಿಲ್ಕ್ ಆಂಡ್ ಚಾಮುಂಡಿ ಸಿಲ್ಕ್, ಜ್ಯುವೆಲ್ಲರಿ ಫ್ಯಾಷನ್ ಷೋ...ಅಬ್ಬಾ.. ಹೀಗೆ ಬರೆಯುತ್ತ ಹೋದರೆ ಇನ್ನೂ ಎರಡು ಪುಟ ತುಂಬುವಷ್ಟು ಷೋಗಳಲ್ಲಿ ಹೆಜ್ಜೆ ಹಾಕಿದ ಅನುಭವ ಈ ಬೆಡಗಿಯದು.

ಲಾರಿಯಲ್, ಝಿಲಸ್, ಜಿಂಜರ್, ಎಫ್‌ಬಿಬಿ, ಪ್ಯಾಂಥಲೂನ್ಸ್, ರಿಲಯನ್ಸ್ ಟ್ರೆಂಡ್ಸ್, ವಿಐಪಿ ಬ್ಯಾಗ್ಸ್, ಲೈಫ್‌ಸ್ಟೈಲ್ ಹೀಗೆ ಅನೇಕ ಬ್ರ್ಯಾಂಡ್‌ಗಳನ್ನು ಪ್ರತಿನಿಧಿಸಿರುವ ಪ್ರಿಯಾಂಕಾ ಅತಿ ಚಿಕ್ಕ ವಯಸ್ಸಿನಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಅಚ್ಚೊತ್ತಿದ್ದಾರೆ.

ಮಾಡೆಲಿಂಗ್, ರ‍್ಯಾಂಪ್ ಷೋ ಮತ್ತು ಷೋ ಸ್ಟಾಪರ್ ಆಗುವುದರ ಜೊತೆಗೆ ಪ್ರಿಯಾಂಕಾ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಜಸ್ಟ್ ಮಾತ್ ಮಾತಲ್ಲಿ’ ಧಾರಾವಾಹಿ, ‘ಶಾಂತಂ ಪಾಪಂ’ ಎಪಿಸೋಡ್‌ಗಳಲ್ಲಿ ನಟಿಸುವ ಜೊತೆಗೆ ‘ಅಂಬಿ ನಿಂಗ್ ವಯಸ್ಸಾಯ್ತೋ’ ಮತ್ತು ‘ಸಂಕಷ್ಟಕರ ಗಣಪತಿ’ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.

ಕನ್ನಡದ ಸ್ಟಾರ್ ನಟ, ನಟಿಯರ ಜೊತೆಗೆ ಯುವ ನಟ, ನಟಿಯರ ಜೊತೆಗೂ ತೆರೆ ಮೇಲೆ ಯಾವುದೇ ಪಾತ್ರದಲ್ಲಿ ಕಾಣಿಸಿಕೊಳ್ಳಲು ಪ್ರಿಯಾಂಕಾ ರೆಡಿ. ಯಾವುದೇ ಗಾಡಫಾದರ್ ಇಲ್ಲದೇ, ಚಿಕ್ಕ ವಯಸ್ಸಿನಲ್ಲಿ ಅಪ್ಪನನ್ನು ಕಳೆದುಕೊಂಡು, ಮನೆಯ ಹಿರಿಯ ಮಗಳಾಗಿ, ಅಮ್ಮನ ಮುದ್ದಿನ ಮಗಳಾಗಿ ಚಂದನವನದಲ್ಲಿ ನೆಲೆಯೂರಿ, ಕನ್ನಡದ ಜನತೆಗೆ ತಮ್ಮ ನಟನೆಯ ಮೂಲಕ ಹತ್ತಿರವಾಗಬೇಕೆಂಬ ಕನಸು ಕಟ್ಟಿಕೊಂಡು ಆ ಕನಸುಗಳನ್ನು ನನಸಾಗಿಸಲು ಇವರು ತುಂಬಾ ಶ್ರದ್ಧೆ ಮತ್ತು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದ್ದಾರೆ.

ಪ್ರಿಯಾಂಕಾ ಮುಗ್ಧ ಮನಸ್ಸಿನ, ಮುದ್ದು ಮುದ್ದಾಗಿ ಕಾಣುವ ನಟಿ. ಆಚಾರ್ಯ ಕಾಲೇಜ್, ಕೆಎಲ್‌ಇ ಕಾಲೇಜ್, ಟಿ. ಜಾನ್ ಕಾಲೇಜ್‌ನಲ್ಲಿ ಷೋ ಸ್ಟಾಪರ್ ಆಗಿ ತಮ್ಮ ಬಳಕುವ ಸೌಂದರ್ಯದಿಂದ ಸೌಂದರ್ಯಪ್ರಿಯರ ಕಣ್ಮಣಿಯಾಗಿದ್ದಾರೆ.

ಬಿಡುವಿನ ಸಮಯದಲ್ಲಿ ಅಮ್ಮ ಮತ್ತು ತಂಗಿಯ ಜೊತೆಗೆ ಕಾಲ ಕಳೆಯಲು ಇಷ್ಟ ಪಡುವ ಪ್ರಿಯಾಂಕಾ ವಾರಕ್ಕೆರಡು ಬಾರಿ ಬೈಕ್ ಮೇಲೆ ಜಾಲಿರೈಡ್ ಮಾಡುವುದನ್ನು ಯಾವತ್ತೂ ಮರೆಯುವುದಿಲ್ಲ. ಡಯಟ್ ಮತ್ತು ಜಿಮ್ ಪ್ರಿಯೆಯಾಗಿರುವ ಇವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ನಿಲ್ಲುವ ಸರಳತೆಯನ್ನು ರೂಢಿಸಿಕೊಂಡಿದ್ದಾರೆ.

ಜೀವನದ ಪ್ರತಿ ಹಂತದಲ್ಲಿ ಅನೇಕ ಅಡೆತಡೆಗಳನ್ನು ದಾಟಿ ಯಶಸ್ಸಿನ ದಾರಿಯಲ್ಲಿ ಪಯಣಿಸುತ್ತಿರುವ ಪ್ರಿಯಾಂಕಾ ಪಡ್ಡೆ ಹುಡುಗರ ನಿದ್ದೆಗೆಡಿಸುವ ಜೊತೆಗೆ ಕನ್ನಡ ಜನತೆಯ ಮುಂದೆ ತಮ್ಮ ಅದೃಷ್ಟ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !