ಮಂಗಳವಾರ, ಅಕ್ಟೋಬರ್ 19, 2021
23 °C
ಬಿಡುಗಡೆಯಾಗದ ಸ್ಟಾರ್ ನಟರ ಸಿನಿಮಾ; ಹಬ್ಬದ ವೇಳೆ ಹೆಚ್ಚಿನ ಪ್ರೇಕ್ಷಕರು ಬರುವ ನಿರೀಕ್ಷೆ

ಕಲಬುರ್ಗಿ: ಹೌಸ್‌ಫುಲ್ ಆಗದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳಲ್ಲಿ ಪೂರ್ಣಪ್ರಮಾಣದಲ್ಲಿ ಆಸನಗಳನ್ನು ಭರ್ತಿ ಮಾಡಲು ಸರ್ಕಾರ ಅಕ್ಟೋಬರ್ 1ರಿಂದ ಅನುಮತಿ ನೀಡಿದೆ. ಆದರೆ, ನಗರದ ಯಾವ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿಯೂ ಹೌಸ್‌ಫುಲ್ ಪ್ರದರ್ಶನಗಳು ನಡೆಯುತ್ತಿಲ್ಲ.

ನಗರದಲ್ಲಿ ಎರಡು ಮಲ್ಟಿಪ್ಲೆಕ್ಸ್, ಎರಡು ಚಿತ್ರಮಂದಿರಗಳಿವೆ. ಸದ್ಯ ಯಾವುದೇ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗದಿರುವುದು ಒಂದೆಡೆಯಾದರೆ, ಜನರಲ್ಲಿ ಇನ್ನೂ ಕೋವಿಡ್ ಭಯ ನಿವಾರಣೆ ಆಗಿಲ್ಲ. ಹೀಗಾಗಿ ಜನರು ಮೊದಲಿನಷ್ಟು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎನ್ನುತ್ತಾರೆ ಚಿತ್ರಮಂದಿರಗಳ ಮಾಲೀಕರು.

ಅಕ್ಟೋಬರ್ 14ರಂದು ದುನಿಯಾ ವಿಜಯ್ ಅಭಿನಯದ ಸಲಗ, ಸುದೀಪ್ ನಟನೆಯ ಕೋಟಿಗೊಬ್ಬ–3  ಸಿನಿಮಾಗಳು ಬಿಡುಗಡೆ ಆಗಲಿವೆ. ಅಲ್ಲದೆ, ಇದೇ ತಿಂಗಳ ಅಂತ್ಯದಲ್ಲಿ ಶಿವರಾಜ್‌ಕುಮಾರ್ ನಾಯಕರಾಗಿ ನಟಿಸಿರುವ ಭಜರಂಗಿ–2 ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಆ ನಂತರ ಚಿತ್ರಮಂದಿರಗಳು ಕಳೆಗಟ್ಟ ಬಹುದು ಎಂಬ ನಿರೀಕ್ಷೆ ಸಿಬ್ಬಂದಿಯದ್ದು.

ನಗರದ ಸಂಗಮ ಮತ್ತು ತ್ರಿವೇಣಿ ಚಿತ್ರಮಂದಿರಗಳಿಗೆ ಶೇ 10ರಿಂದ 15ರಷ್ಟು ಪ್ರೇಕ್ಷಕರು ಮಾತ್ರ ಬರುತ್ತಿದ್ದಾರೆ. ಇಲ್ಲಿ ಸದ್ಯ ಕನ್ನಡದ ‘ಲಂಕೆ’ ಮತ್ತು ತೆಲುಗಿನ ‘ರಿಪಬ್ಲಿಕ್’ ಸಿನಿಮಾಗಳು ಪ್ರದರ್ಶನವಾಗುತ್ತಿವೆ.

‘ಸೆಪ್ಟೆಂಬರ್ 10ರಿಂದ ಪ್ರದರ್ಶನ ಆರಂಭಿಸಿದ್ದೇವೆ. ಸರ್ಕಾರ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವ ಕಾಶ ನೀಡಿದ್ದಕ್ಕೆ ಖುಷಿಯಾಗಿದೆ. ಆದರೆ, ಪ್ರೇಕ್ಷಕರು ಮಾತ್ರ ಮೊದಲಿನಂತೆ ಬರುತ್ತಿಲ್ಲ’ ಎನ್ನುತ್ತಾರೆ ಸಂಗಮ ಚಿತ್ರಮಂದಿರದ ವ್ಯವಸ್ಥಾಪಕ ಶ್ರೀಕಾಂತ ಪಾಟೀಲ.

‘ಪ್ರತಿ ದಿನ 3 ಪ್ರದರ್ಶನಗಳು ಇರುತ್ತವೆ. ಪ್ರತಿ ಶೋಗೆ ಎರಡೂ ಚಿತ್ರ ಮಂದಿರ ಸೇರಿದರೂ ಪ್ರೇಕ್ಷಕರ ಸಂಖ್ಯೆ 100 ದಾಟುವುದಿಲ್ಲ. ಸಂಜೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಇದ್ದರೆ ಪ್ರದರ್ಶನವನ್ನು ರದ್ದು ಮಾಡುತ್ತೇವೆ’ ಎಂದು ಹೇಳಿದರು.

‘ಚಿತ್ರಮಂದರಿದಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡಲಾಗುತ್ತದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹೇಳಲಾಗುತ್ತದೆ. ಆದರೂ ಜನರಲ್ಲಿ ಭಯ ಇದೆ. ಒಂದು ಪ್ರದರ್ಶನ ನಡೆಸಿದರೆ ಕನಿಷ್ಠ ₹400 ರಿಂದ 500 ವಿದ್ಯುತ್ ಬಿಲ್ ಬರುತ್ತದೆ. ಆದರೂ ಮುಂದೆ ಒಳ್ಳೆಯ ದಿನಗಳು ಬರಬಹುದು ಎಂಬ ಆಶಾಭಾವದಿಂದ ಪ್ರದರ್ಶನ ನಡೆಸುತ್ತಿದ್ದೇವೆ’ ಎಂದರು.

ನಿಧಾನವಾಗಿ ಚೇತರಿಕೆ: ನಗರದ ಮಿರಾಜ್ ಸಿನಿಮಾಸ್‌ನಲ್ಲಿ ಪ್ರೇಕ್ಷಕರ ಸಂಖ್ಯೆ ನಿಧಾನವಾಗಿ ಏರಿಕೆ ಆಗುತ್ತಿದೆ. ಇಲ್ಲಿ ಒಟ್ಟು ಮೂರು ಸ್ಕ್ರೀನ್‌ಗಳು ಇದ್ದು, 938 ಆಸನಗಳ ಸಾಮರ್ಥ್ಯ ಇದೆ.

ಕಾಗಿಮೊಟ್ಟೆ, ರಿಪಬ್ಲಿಕ್ ಮತ್ತು ‘ನೋ ಟೈಮ್ ಟು ಡೈ’ ಸಿನಿಮಾಗಳು ಪ್ರದರ್ಶನವಾಗುತ್ತಿವೆ. ವಾರಾಂತ್ಯದಲ್ಲಿ ಶೇ 70ರಷ್ಟು ಪ್ರೇಕ್ಷಕರು ಬಂದರೆ ಉಳಿದ ದಿನಗಳಲ್ಲಿ ಶೇ 30ರಿಂದ 40ರಷ್ಟು ಪ್ರೇಕ್ಷಕರು ಬರುತ್ತಾರೆ.

‘ಶೇ 50 ರಷ್ಟು ಆಸನಗಳ ಭರ್ತಿಗೆ ಅವಕಾಶ ಇದ್ದಾಗ ಎರಡು ಸ್ಕ್ರೀನ್‌ಗಳನ್ನು ಮಾತ್ರ ಆರಂಭಿಸಿದ್ದೆವು. ಈಗ ಮೂರು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ನಡೆಯುತ್ತಿದೆ’ ಎಂದು ಮಿರಾಜ್ ಸಿನಿಮಾಸ್‌ನ ವ್ಯವಸ್ಥಾಪಕ ಅಮಿತ್ ಹೇಳಿದರು.

‘ಶೇ 40ರಷ್ಟು ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕ್ ಆಗುತ್ತಿವೆ. ಕೋವಿಡ್ ಕಾರಣ ಕೌಂಟರ್‌ನಲ್ಲಿ ಜನರು ಹೆಚ್ಚು ಟಿಕೆಟ್ ಖರೀದಿಸುತ್ತಿಲ್ಲ. ನಮ್ಮ ಮಲ್ಟಿಪ್ಲೆಕ್ಸ್‌ನಲ್ಲಿ ಜನರ ಸುರಕ್ಷತೆಗೆ ಸ್ಯಾನಿಟೈಸ್ ಮಾಡುವುದು ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.

ಮುಕ್ತಾ ಮಲ್ಟಿಪ್ಲೆಕ್ಸ್ ಶಾಶ್ವತ ಬಂದ್
ಸುಮಾರು ಎಂಟು ವರ್ಷ ಪ್ರದರ್ಶನ ನಡೆಸಿದ್ದ, ನಗರದ ಮೊದಲ ಸುಸಜ್ಜಿತ ಮಲ್ಟಿಪ್ಲೆಕ್ಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮುಕ್ತಾ ಮಲ್ಟಿಪ್ಲೆಕ್ಸ್ ಅನ್ನು ಶಾಶ್ವತವಾಗಿ ಮುಚ್ಚಲಾಗಿದೆ.

ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆ ಆದಾಗ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. ಆ ಸಮಯದಲ್ಲಿ ಸಿನಿಮಾ ಪ್ರದರ್ಶನ ನಡೆಯದಿದ್ದರೂ ಸುಮಾರು ₹25 ಲಕ್ಷ ವಿದ್ಯುತ್ ಬಿಲ್ ಕಟ್ಟಬೇಕಾಯಿತು ಎನ್ನುತ್ತಾರೆ ಮಲ್ಟಿಪ್ಲೆಕ್ಸ್ ಸಿಬ್ಬಂದಿ.

ಎರಡನೇ ಅಲೆಯ ನಂತರವೂ ಪ್ರದರ್ಶನ ಆರಂಭಿಸಲು ಆಗಲಿಲ್ಲ. ಸರ್ಕಾರ  ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳಿಗೆ ಯಾವುದೇ ನೆರವು ನೀಡಲಿಲ್ಲ. ಸಿನಿಮಾ ಪ್ರದರ್ಶನದಿಂದ ಬರುವ ಆದಾಯಕ್ಕಿಂತ ವಿದ್ಯುತ್ ಬಿಲ್ ಹೆಚ್ಚಾಗುತ್ತಿತ್ತು. ಈ ನಷ್ಟ ಭರಿಸಲಾಗದೆ ಶಾಶ್ವತವಾಗಿ ಮುಚ್ಚುವ ನಿರ್ಣಯಕ್ಕೆ ಬರಲಾಗಿದೆ ಎಂದರು.

ಕಾರ್ಮಿಕರಿಗೆ ಸಿಗದ ಪರಿಹಾರ
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಚಿತ್ರಮಂದಿರ ಕಾರ್ಮಿಕರಿಗೆ ₹3,000 ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆ, ಯಾವುದೇ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ನಗರದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.‌

ಪರಿಹಾರ ಪಡೆಯಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಅರ್ಜಿ ಸಲ್ಲಿಸಿದ್ದರೂ ಕೆಲವರಿಗೆ ಪರಿಹಾರ ಬಂದಿಲ್ಲ. ಅಲ್ಲದೆ, ಹಲವು ಷರತ್ತುಗಳನ್ನು ವಿಧಿಸಿದ್ದರಿಂದ ಬಹುತೇಕರು ಅರ್ಜಿ ಸಲ್ಲಿಸುವ ಗೋಜಿಗೆ ಹೋಗಲಿಲ್ಲ ಎನ್ನುತ್ತಾರೆ ಕಾರ್ಮಿಕರು.

ಕೋವಿಡ್ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್‌ಗಳು, ಚಿತ್ರಮಂದಿರಗಳು ಮುಚ್ಚಿದ್ದವು. ಆ ಸಂದರ್ಭದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಸರ್ಕಾರ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ಈಗಲಾದರೂ ಆ ಪರಿಹಾರ ಒದಗಿಸಬೇಕು ಎಂಬುದು ಕಾರ್ಮಿಕರ ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು