ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್‌ ಹೆಸರಿನಡಿ ಸಾಮಾಜಿಕ ತಾಣದಲ್ಲಿರುವ ನಕಲಿ ಅಕೌಂಟ್‌ಗಳೆಷ್ಟು ಗೊತ್ತೇ?

Last Updated 6 ಅಕ್ಟೋಬರ್ 2020, 11:11 IST
ಅಕ್ಷರ ಗಾತ್ರ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ರಜಪೂತ್‌ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ಪ್ರಕರಣದ ಸುತ್ತ ಮಾದಕವಸ್ತುಗಳ ಜಾಲದ ನಂಟಿರುವ ಬಗ್ಗೆಯೂ ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಯು ತನಿಖೆ ನಡೆಸುತ್ತಿದೆ.

ಮತ್ತೊಂದೆಡೆ ‘#justiceforsushant, #sushantsinghrajput, #SSR’ ಹ್ಯಾಷ್‌ಟ್ಯಾಗ್‌ನಡಿ ಸಾಮಾಜಿಕ ಜಾಲತಾಣಗಳಲ್ಲೂ ನ್ಯಾಯಯುತವಾಗಿ ಸುಶಾಂತ್‌ ‍ಪ್ರಕರಣದ ತನಿಖೆ ನಡೆಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಇನ್ನೊಂದೆಡೆ ಪೊಲೀಸರು ಸರಿಯಾದ ದಿಕ್ಕಿನಡಿ ತನಿಖೆ ನಡೆಸುತ್ತಿಲ್ಲ ಎಂಬ ಆರೋಪ ಕೂಡ ಮಾಡಲಾಗುತ್ತಿದೆ. ಈ ಕೂಗಿನ ಹಿಂದಿರುವ ಅಸಲಿಯತ್ತೇನು? ಎಂಬುದು ಮಹಾರಾಷ್ಟ್ರ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್‌ ಹೆಸರಿನಡಿ 80 ಸಾವಿರ ನಕಲಿ ಖಾತೆಗಳು ಸಕ್ರಿಯವಾಗಿವೆಯಂತೆ. ಮಹಾರಾಷ್ಟ್ರ ಸರ್ಕಾರ ಮತ್ತು ಪೊಲೀಸರನ್ನು ಗುರಿಯಾಗಿಟ್ಟುಕೊಂಡೇ ಈ ಖಾತೆಗಳ ಮೂಲಕ ಅಭಿಯಾನ ನಡೆಸಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ.

ಈ ನಕಲಿ ಅಕೌಂಟ್‌ಗಳ ಬೆನ್ನಬಿದ್ದಿರುವ ಪೊಲೀಸರಿಗೂ ಬಿಕ್‌ ಶಾಕ್‌ ಆಗಿದೆಯಂತೆ. ಇಟಲಿ, ಜಪಾನ್‌, ಪೋಲೆಂಡ್‌, ಸ್ಲೊವೆನಿಯಾ, ಇಂಡೋನೇಷ್ಯಾ, ಟರ್ಕಿ, ಥಾಯ್ಲೆಂಡ್‌, ರೊಮೆನಿಯಾ ಮತ್ತು ಫ್ರಾನ್ಸ್‌ನಿಂದ ಈ ಅಕೌಂಟ್‌ಗಳು ಕಾರ್ಯನಿರತವಾಗಿವೆ ಎಂಬುದು ಬಯಲಾಗಿದೆ. ವಿದೇಶಿ ಭಾಷೆಗಳಲ್ಲೂ ಸುಶಾಂತ್‌ ಸಾವಿಗೆ ನ್ಯಾಯ ಕೊಡಿಸುವ ಹೆಸರಿನಡಿ ನಕಲಿ ಅಕೌಂಟ್‌ಗಳನ್ನು ತೆರೆಯಲಾಗಿದೆ. ಈ ಬಗ್ಗೆಯೂ ಮಹಾರಾಷ್ಟ್ರ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

‘ಕೋವಿಡ್‌–19 ಸೋಂಕು ತಗುಲಿ 84 ಪೊಲೀಸರು ಮೃತಪಟ್ಟಿದ್ದಾರೆ. 6 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ನಡುವೆಯೇ ಸುಶಾಂತ್‌ ಪ್ರಕರಣದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸುತ್ತಿರುವ ಪೊಲೀಸ್‌ ಇಲಾಖೆಯ ಮಾನಸಿಕ ಸ್ಥೈರ್ಯ ಕುಗ್ಗಿಸಲು ಈ ನಕಲಿ ಖಾತೆಗಳು ಮುಂದಾಗಿವೆ. ಮುಂಬೈ ಪೊಲೀಸರನ್ನು ಗುರಿಯಾಗಿಸಿಟ್ಟುಕೊಂಡೇ ಈ ಖಾತೆಗಳು ಸಕ್ರಿಯವಾಗಿವೆ’ ಎಂದು ಹೇಳಿದ್ದಾರೆ ಮುಂಬೈ ಪೊಲೀಸ್‌ ಆಯುಕ್ತ ‍ಪರಂ ಬೀರ್‌ ಸಿಂಗ್.

ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿರುವ ಈ ನಕಲಿ ಅಕೌಂಟ್‌ಗಳ ಬಗ್ಗೆ ತನಿಖೆ ನಡೆಸಲು ಮುಂಬೈ ಸೈಬರ್‌ ಸೆಲ್‌ ಮುಂದಾಗಿದೆ. ತಪ್ಪಿತಸ್ಥರನ್ನು ಪತ್ತೆಹಚ್ಚಿ ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕ್ರಮ ಜರುಗಿಸಲು ನಿರ್ಧರಿಸಿದೆ ಎಂಬ ಸುದ್ದಿ ಬಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT