ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣನ ಕೊಳಲಿಗೆ ನಾದ ಜೋಡಿಸಿದ ಹೊನ್ನಪ್ಪಾಚಾರ್‌

Last Updated 22 ಆಗಸ್ಟ್ 2019, 14:25 IST
ಅಕ್ಷರ ಗಾತ್ರ

ಪಂಚಲೋಹದ ಕೃಷ್ಣನ ಮೂರ್ತಿಯ ಕೊಳಲಿನಲ್ಲಿ ತಲೆದೂಗಿಸುವಂಥ ನಾದ! ನೋಡುಗರಿಗೆ ಕೃಷ್ಣನೇ ಕೊಳಲು ನುಡಿಸುತ್ತಿದ್ದಾನೆ ಎನ್ನಿಸುತ್ತದೆ. ನಿನಾದಕ್ಕೆ ಕಿವಿಗೊಟ್ಟರೆ ಕೃಷ್ಣನ ಜಪದಲ್ಲಿ ಮೈ ಮರೆಯಬಹುದು.ಇಂತಹ ವಿಭಿನ್ನ ಶಿಲ್ಪವನ್ನು ರಚಿಸಿದವರು ನಗರದ ಓಕಳೀಪುರಂ ನಿವಾಸಿ, ಲೋಹ ಶಿಲ್ಪದಲ್ಲಿ ಸಿದ್ಧಹಸ್ತ ಹೊನ್ನಪ್ಪಾಚಾರ್.

ಹಲವಾರು ವರ್ಷಗಳಿಂದ ಮೂರ್ತಿ ಕೆತ್ತನೆ ಮಾಡುತ್ತಿರುವ ಈ ಶಿಲ್ಪಿಗೆ ಈ ಬಾರಿ ವಿಶೇಷವಾದ ಮೂರ್ತಿಯೊಂದನ್ನು ತಯಾರಿಸಬೇಕು ಎನ್ನುವ ಹಂಬಲವಿತ್ತು. ಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿಆ ಹಂಬಲವನ್ನು ನೆರವೇರಿಸಿಕೊಳ್ಳುವಲ್ಲಿ ಇವರು ಯಶಸ್ವಿಯಾಗಿದ್ದಾರೆ.

ಶಿಲ್ಪದ ವಿಶೇಷತೆ

ಪಂಚಲೋಹದಿಂದ ತಯಾರಿಸ ಲಾದ ಮೂರು ಕಾಲು ಅಡಿ ಎತ್ತರದಈ ಶಿಲ್ಪ ಸುಮಾರು 40 ಕೆ.ಜಿ ತೂಕವಿದೆ. ಕೊಳಲಿನ ತುದಿಯಲ್ಲಿ ನಾದ ಹೊಮ್ಮುವಂತೆ ಒಳಗಡೆ ಸ್ಪೀಕರ್‌ ಜೋಡಣೆ ಮಾಡಲಾಗಿದೆ.ಮೂರ್ತಿಯ ಕೆಳಭಾಗದಲ್ಲಿ ಅದರ ಬ್ಯಾಟರಿ ಅಳವಡಿಸಲಾಗಿದೆ.

ಹೇಗೆ ವೀಕ್ಷಿಸಿದರೂ ನೋಡುಗರಿಗೆ ಈ ಜೋಡಣೆ ತಕ್ಷಣಕ್ಕೆ ಕಾಣಸಿಗುವುದಿಲ್ಲ. ಕೊಳಲಿನಿಂದ ನಾದ ಕೇಳಿಸುತ್ತದೆ. ಎರಡು ಗಂಟೆ ನಾದ ಹೊಮ್ಮುವಂಥ ಸೆಟ್ಟಿಂಗ್ ಮಾಡಲಾಗಿದೆ. ರಿಮೋಟ್ ಮೂಲಕ ಇದನ್ನು ನಿಯಂತ್ರಿಸಬಹುದು.ನಾದದ ಗುಟ್ಟು ವೀಕ್ಷಿಸುವವರಿಗೆ ತಕ್ಷಣಕ್ಕೆ ತಿಳಿಯದಂತೆ ನೋಡಿಕೊಳ್ಳಬಹುದು.

'ಇಂಥದೊಂದು ಶಿಲ್ಪ ತಯಾರಿಸಬೇಕು ಎಂಬ ಆಸೆ ಮೊದಲಿನಿಂದಲೇ ಇತ್ತು. ಸಮಯ ಕೂಡಿ ಬಂದಿರಲಿಲ್ಲ.ಲೋಹ ಶಿಲ್ಪ ತಯಾರಿಕೆಗೆ ಹೆಚ್ಚು ಸಮಯ ಬೇಕಾಗುವುದರಿಂದ ಮೂರು ತಿಂಗಳಿಗೆ ಮೊದಲೇ ಶಿಲ್ಪದ ಹದಮಾಡುವಿಕೆ ಆರಂಭವಾಗುತ್ತದೆ. ಆದರೆ, ದಿನನಿತ್ಯದ ಕೆಲಸಗಳ ಜತೆಗೆ ಬಿಡುವಿನ ವೇಳೆಯಲ್ಲಿ ಈ ಮೂರ್ತಿ ತಯಾರಿಸಲು ಒಂದು ವರ್ಷ ಹಿಡಿಯಿತು. ವಿಗ್ರಹದಲ್ಲಿ ಈ ರೀತಿಯ ಸಂಗೀತ ಬರುವಂತೆ ಮಾಡುವ ಕೆಲಸ ಸುಲಭವಲ್ಲ. ಅದು ದೊಡ್ಡ ಕಸುಬುಗಾರಿಕೆ. ಹೆಚ್ಚು ದಿನಗಳು ಬೇಕು. ಮೂರ್ತಿಗೆ ಯಾವುದೇ ಲೋಪವಾಗದಂತೆ ಹೊಸ ರೂಪ ನೀಡಲು ಹೆಚ್ಚು ಅನುಭವ ಬೇಕು’ ಎನ್ನುತ್ತಾರೆ ಹೊನ್ನಪ್ಪಾಚಾರ್.

‘ಈ ಮೂರ್ತಿ ವಿದೇಶ ಸೇರಲು ಸಜ್ಜಾಗಿದೆ. ಆದರೆ, ಕರ್ನಾಟಕದಲ್ಲಿ ಯಾರಾದರು ಭಕ್ತರು ಬಯಸಿದರೆ ನೀಡುತ್ತೇನೆ. ನಾನು ತಯಾರಿಸಿದ ಹಲವಾರು ವಿಗ್ರಹಗಳು ವಿದೇಶ ಸೇರಿವೆ. ಇಂತಹ ಅಪರೂಪದ ವಿಗ್ರಹಗಳು ನಮ್ಮಲ್ಲಿ ಕಡಿಮೆ’ ಎನ್ನುವುದು ಹೊನ್ನಪ್ಪಾಚಾರ್ ಪ್ರತಿಪಾದನೆ. ಸಂಪರ್ಕಕ್ಕೆ ಮೊ: 9448558984

ಪರಿಸರ ಪ್ರೇಮಿ ಆಚಾರ್‌

50 ವರ್ಷಗಳಿಂದ ವಿಗ್ರಹ ತಯಾರಿಕೆ ವೃತ್ತಿಯಲ್ಲಿ ತೊಡಗಿರುವ ಇವರು ಲೋಹ ಶಿಲ್ಪದಲ್ಲಿ ಸಿದ್ಧಹಸ್ತರು. ಈಗಾಗಲೇ ಇವರು ವಿಭಿನ್ನ ರೂಪದ ಗಣೇಶ, ಸರಸ್ವತಿ, ಬುದ್ಧ, ಶಿವನ ಲೋಹದ ಮೂರ್ತಿಗಳನ್ನು ತಯಾರಿಸಿದ್ದಾರೆ. ಹೊನ್ನಪ್ಪಾಚಾರ್ ಗರಡಿಯಲ್ಲಿ ಪಳಗಿರುವ 200ಕ್ಕೂ ಹೆಚ್ಚು ಜನರುಶಿಲ್ಪಕಲೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.

ದೇಶ, ವಿದೇಶದಲ್ಲಿ ಶಿಲ್ಪ ಪ್ರದರ್ಶನ ಮಾಡಿ ಹೆಸರಾಗಿದ್ದು,ಕರ್ನಾಟಕ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಆಚಾರ್‌ ಕೈಯಲ್ಲಿ ಅರಳಿದ ಬೆಳ್ಳಿ ವಿಗ್ರಹಗಳು ಸ್ಥಾಪನೆಯಾಗಿವೆ.

ಇವರ ಕಲೆಗೆ ಸಂಘ, ಸಂಸ್ಥೆಗಳಿಂದ ಪ್ರಶಸ್ತಿಗಳು ಸಂದಿವೆ. ಇವರು ಪರಿಸರ ಪ್ರೇಮಿಯೂ ಹೌದು. ಗಿಡ, ಮರ ಬೆಳೆಸುವ ಪರಿಸರ ಪ್ರೇಮವನ್ನೂ ಕಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT