ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಣ್‌ ಮನದಲ್ಲಿ ಹೊಸತನದ ಗಾಳಿ

Last Updated 2 ಜನವರಿ 2020, 19:30 IST
ಅಕ್ಷರ ಗಾತ್ರ

‘ನಾನು ಯಾವಾಗಲೂ ಕಡಿಮೆ ಕೆಲಸ ಮಾಡುತ್ತಿದ್ದೆ. ಈಗ ಜಾಸ್ತಿ ಸಿನಿಮಾಗಳಿಗೆ ಕೆಲಸ ಮಾಡಬೇಕು. ಹೆಚ್ಚು ಜನರಿಗೆ ಸಂಗೀತ ತಲುಪಿಸಬೇಕು ಎಂಬುದು ನನ್ನಾಸೆ’

‘ಟಗರು’ ಚಿತ್ರದ ಮೂಲಕ ಸಂಗೀತದಲ್ಲಿ ಹೊಸ ಅಲೆ ಸೃಷ್ಟಿಸಿದ ಸಂಗೀತ ನಿರ್ದೇಶಕ ಚರಣ್‌ ರಾಜ್‌ ಅವರ ಹೊಸ ವರ್ಷದ ಸಂಕಲ್ಪ ಇದು. ಹಾಗೆಂದು ಅವರು ಇಂತಿಷ್ಟೇ ಸಿನಿಮಾಗಳಿಗೆ ಸಂಗೀತ ಸಂಯೋಜಿಸಬೇಕು ಎಂಬ ಸಂಖ್ಯೆಯ ಗಡಿ ನಿಗದಿಪಡಿಸಿಕೊಂಡಿಲ್ಲ. ‘ನನಗೆ ಟಾರ್ಗೆಟ್‌ ಎಂಬುದು ಇಲ್ಲ. ಸಮಯದ ಹೊಂದಾಣಿಕೆ ಮಾಡಿಕೊಂಡು ಕೇಳುಗರಿಗೆ ಹೊಸತನ ಉಣಬಡಿಸುವುದೇ ನನ್ನ ಗುರಿ’ ಎನ್ನುತ್ತಾರೆ ಅವರು.

‘ಟಗರು’ ಚಿತ್ರಕ್ಕೆ ಸಂಗೀತ ಹೊಸೆದ ಬಳಿಕ ವೃತ್ತಿಬದುಕಿನಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಒಳ್ಳೆಯ ಸಿನಿಮಾಗಳಲ್ಲಿ ಕೆಲಸ ಮಾಡಲು ಅವಕಾಶಗಳ ಮಹಾ‍ಪೂರವೇ ಹರಿದು ಬರುತ್ತಿದೆಯಂತೆ. ಚೇತನ್‌ಕುಮಾರ್‌ ನಿರ್ದೇಶನದ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಜೇಮ್ಸ್‌’ ಚಿತ್ರಕ್ಕೆ ಸಂಗೀತ ನೀಡುವ ಅವಕಾಶ ಚರಣ್‌ ರಾಜ್‌ಗೆ ದೊರೆಕಿದೆ.

ಸತ್ಯಜ್ಯೋತಿ ಪ್ರೊಡಕ್ಷನ್‌ನಡಿ ನಟ ಶಿವರಾಜ್‌ಕುಮಾರ್‌ ಅವರ ಹೊಸ ಸಿನಿಮಾವೊಂದು ಸೆಟ್ಟೇರುತ್ತಿದೆ. ಇನ್ನೂ ಇದರ ಟೈಟಲ್‌ ಅಂತಿಮಗೊಂಡಿಲ್ಲ. ಇದಕ್ಕೂ ಚರಣ್‌ ರಾಜ್‌ ಅವರೇ ಸಂಗೀತ ಸಂಯೋಜಿಸುತ್ತಿದ್ದಾರೆ. ‘ದೊಡ್ಡ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶಗಳು ಬರುತ್ತಿವೆ. ನನ್ನ ಮೇಲೆ ನಿರ್ಮಾಪಕರಿಗೆ ವಿಶ್ವಾಸ ಬಂದಿದೆ. ಇದು ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ನಗುತ್ತಾರೆ.

*ನಿಮ್ಮ ಆರಂಭದ ದಿನಗಳು ಹೇಗಿದ್ದವು?

ಕಾಲೇಜು ಶಿಕ್ಷಣ ಮುಗಿದ ಬಳಿಕ ಸಂಪೂರ್ಣವಾಗಿ ಸಂಗೀತದಲ್ಲಿ ತೊಡಗಿಸಿಕೊಂಡೆ. ಹಲವು ಸಂಗೀತ ನಿರ್ದೇಶಕರ ಕೈಕೆಳಗೆ ಸಹಾಯಕನಾಗಿ ದುಡಿದೆ. ಸಂಗೀತವನ್ನು ಆನಂದಿಸುತ್ತಿದ್ದೆ. ಹಾಗಾಗಿಯೇ, ಕಲಿಕೆಗೆ ಕಷ್ಟ ಆಗಲಿಲ್ಲ. ಸಂಗೀತ ನಿರ್ದೇಶನಕ್ಕೂ ಮೊದಲು ಪ್ರೋಗ್ರಾಮರ್‌ ಆಗಿದ್ದೆ. ಆಗ ನನ್ನ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದರು. ಆಗಲೂ ಕೆಲಸ ಹೆಚ್ಚಿರುತ್ತಿತ್ತು. ಆದರೆ, ಎಷ್ಟೇ ಕೆಲಸ ಮಾಡಿದರೂ ನನಗೆ ಕ್ರೆಡಿಟ್‌ ಸಿಗುತ್ತಿರಲಿಲ್ಲ. ಈಗ ನನ್ನದೇ ಶೈಲಿಯ ಸಂಗೀತ ಮಾಡಲು ಸಾಧ್ಯವಾಗುತ್ತಿದೆ. ಅದನ್ನು ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ನನಗೆ ಅದಕ್ಕಿಂತ ತೃಪ್ತಿ ಬೇರೊಂದಿಲ್ಲ.

*ನಿಮ್ಮ ಹೊಸತನ, ಪ್ರಯೋಗವನ್ನು ನಿರ್ದೇಶಕರು, ನಿರ್ಮಾಪಕರು ಗುರುತಿಸುತ್ತಿದ್ದಾರೆಯೇ?

ನನ್ನ ಸಂಗೀತವನ್ನು ಎಲ್ಲರೂ ಮೆಚ್ಚಬೇಕು ಎಂದು ನಾನು ಯಾವತ್ತಿಗೂ ಕೆಲಸ ಮಾಡುವುದಿಲ್ಲ. ಸಿನಿಮಾದ ಸ್ಕ್ರಿಪ್ಟ್‌ಗೆ ತಕ್ಕಂತೆ ಸಂಗೀತ ಹೊಸೆಯುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುವುದಷ್ಟೇ ನನಗೆ ಗೊತ್ತು. ಒತ್ತಡದಿಂದ ಎಲಿಮೆಂಟ್‌ ಹಾಕುವುದಿಲ್ಲ. ನ್ಯಾಚುರಲ್‌ ಆಗಿ ಜನರು ಇಷ್ಟಪಡುವಂತಹ ಸಂಗೀತವನ್ನಷ್ಟೇ ನೀಡುತ್ತಿರುವೆ. ಇಲ್ಲಿಯವರೆಗೂ ನಾನು ಕೆಲಸ ಮಾಡಿರುವ ಸಿನಿಮಾಗಳ ನಿರ್ದೇಶಕರು, ನಿರ್ಮಾಪಕರು ನನ್ನ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಕಮರ್ಷಿಯಲ್‌ ಹಾಗೂ ಪರ್ಯಾಯ ಸಿನಿಮಾಗಳಿಗೂ ಸಂಗೀತ ಸಂಯೋಜಿಸುತ್ತಿದ್ದೇನೆ. ಎರಡೂ ರೀತಿಯಲ್ಲಿಯೂ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ನೀನು ಇದೇ ರೀತಿ ಕೆಲಸ ಮಾಡು ಎಂದು ಯಾರೊಬ್ಬರು ನಿರ್ಬಂಧ ಹಾಕಿಲ್ಲ. ಒಂದೇ ಶೈಲಿಗೆ ಸೀಮಿತಗೊಳ್ಳಬಾರದು ಎನ್ನುವುದು ನನ್ನಾಸೆ. ಸಂಗೀತದಲ್ಲಿನ ಹೊಸತನದ ಬಗ್ಗೆ ಕಲಿಯುತ್ತಿರಬೇಕು. ಪ್ರಯೋಗಗಳಿಗೂ ಒಗ್ಗಿಕೊಳ್ಳಬೇಕು. ಆಗಷ್ಟೇ ಸಂಗೀತದಲ್ಲಿ ಹೊಸ ಅಲೆ ಸೃಷ್ಟಿಸಲು ಸಾಧ್ಯ.

*ಸಂಗೀತ ಸಂಯೋಜಿಸುವಾಗ ನಿಮಗೆ ಎದುರಾಗುವ ನೈಜ ಸವಾಲುಗಳೇನು?

ಈ ಹಿಂದೆ ಮಾಡಿದ ಕೆಲಸ ಮಾಡಬಾರದು ಎಂದುಕೊಂಡು ಸಂಗೀತದಲ್ಲಿ ಹೊಸತನ ತರ‍ಲು ಹೊರಟಾಗ ಸವಾಲು ಎದುರಾಗುತ್ತದೆ. ಹಾಗಾಗಿ, ನನಗೆ ಪ್ರತಿಯೊಂದು ಸಿನಿಮಾವೂ ಸವಾಲಾಗಿಯೇ ಇರುತ್ತದೆ. ಸಂಗೀತ ಸಂಯೋಜಿಸುವಾಗ ನಾವು ಹಿಂದೆ ಮಾಡಿರುವ ಕೆಲಸಗಳು ಒಮ್ಮೆಲೆ ನುಸುಳುತ್ತವೆ. ಅದರ ಬಗ್ಗೆ ಎಚ್ಚರಿಕೆವಹಿಸಬೇಕು. ಅದನ್ನು ಬದಿಗೆ ಸರಿಸಿ ಕೆಲಸ ಮಾಡಬೇಕು.

*ಸಂಗೀತ ನಿರ್ದೇಶನದ ‘ಪ್ಯಾಕೇಜ್‌ ವ್ಯವಸ್ಥೆ’ ಮ್ಯೂಸಿಕ್‌ ಡೈರೆಕ್ಷರ್‌ನ ಸೃಜನಶೀಲತೆಗೆ ಧಕ್ಕೆ ತರುವುದಿಲ್ಲವೇ?

ನಾನು ಇಲ್ಲಿಯವರೆಗೆ ಯಾವುದೇ ಸಿನಿಮಾಕ್ಕೂ ಪ್ಯಾಕೇಜ್‌ ವ್ಯವಸ್ಥೆಯಡಿ ಕೆಲಸ ಮಾಡಿಲ್ಲ. ನನಗೊಂದು ಪೇಮೆಂಟ್‌ ಇರುತ್ತದೆ. ಅದನ್ನು ಹೊರತುಪಡಿಸಿ ಏನು ಬೇಕೊ ಅದನ್ನು ಮಾಡಿ ಎಂದು ನಿರ್ಮಾಪಕರು ಹೇಳುತ್ತಾರೆ. ನನಗೆ ಯಾವುದೇ ಮಿತಿ ವಿಧಿಸಿಲ್ಲ. ಸಂಗೀತ ಸಿನಿಮಾದ ಒಂದು ಭಾಗ. ಅದಕ್ಕೂ ಒಂದು ಬಜೆಟ್‌ ಇರುತ್ತದೆ. ಅದರ ಇತಿಮಿತಿಯಲ್ಲಿ ಖರ್ಚು ಮಾಡಬೇಕು. ಆ ವಿಷಯದಲ್ಲಿ ನನಗೆ ಅಡೆತಡೆ ಇಲ್ಲ. ಒಂದು ಹಾಡಿಗೆ ಎಷ್ಟು ವ್ಯಯಿಸಬೇಕು ಎಂದು ಅಂದುಕೊಂಡಿರುತ್ತೇನೆಯೋ ಅಷ್ಟನ್ನು ಖರ್ಚು ಮಾಡಲು ನಿರ್ಮಾಪಕರು ಅವಕಾಶ ನೀಡುತ್ತಾರೆ. ಒಳ್ಳೆಯ ನಿರ್ಮಾಪಕರೊಟ್ಟಿಗೆ ಕೆಲಸ ಮಾಡುತ್ತಿರುವುದು ಖುಷಿಯಿದೆ.

*‘ಸಲಗ’ ಚಿತ್ರದ ಮ್ಯೂಸಿಕ್‌ ಬಗ್ಗೆ ಹೇಳಿ.

ಜ. 5ರಂದು ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದೆ. ಇದು ನನಗೆ ಹೊಸ ಅನುಭವ. ‘ಟಗರು’ವಿನ ಯಾವ ಛಾಯೆಯೂ ಇಲ್ಲಿಲ್ಲ. ಸಂಪೂರ್ಣ ಬದಲಾವಣೆ ಕಾಣಬಹುದು. ನಾನು ಹಿಂದೆ ಈ ಮಾದರಿಯ ಮ್ಯೂಸಿಕ್‌ ಮಾಡಿಲ್ಲ. ನನ್ನ ಬಣ್ಣ ಸೇರಿಸಲು ಪ್ರಯತ್ನಿಸಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT