ಶುಕ್ರವಾರ, ನವೆಂಬರ್ 22, 2019
19 °C

‘ಮುತ್ತುಕುಮಾರ’ನ ಸಾವಯವ ಪ್ರೀತಿ!

Published:
Updated:

‘ಹಸಿರು ಕ್ರಾಂತಿ’ಯ ಜೊತೆಗೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಕೃಷಿ ಭೂಮಿ ಸೇರಿ ದಶಕಗಳೇ ಉರುಳಿವೆ. ಇದರ ಅನಾಹುತದಿಂದ ಎಚ್ಚೆತ್ತುಕೊಂಡಿರುವ ಕೆಲವು ಅನ್ನದಾತರು ಸಾವಯವ ಕೃಷಿಯತ್ತ ಹೊರಳಿದ್ದಾರೆ. ಈಗ ಸಾವಯವ ಕೃಷಿಕನ ಕಥೆಯೂ ತೆರೆಯ ಮೇಲೆ ಬರಲು ಸಿದ್ಧವಾಗಿದೆ. ಅಂದಹಾಗೆ ಈ ಚಿತ್ರದ ಹೆಸರು ‘ಮುತ್ತುಕುಮಾರ’.

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ನಿರ್ದೇಶಕ ರವಿ ಸಾಗರ್ ಅವರು ನಟ ರಾಜ್‌ಕುಮಾರ್‌ ಅವರ ಅಭಿಮಾನಿ. ಅದಕ್ಕಾಗಿಯೇ ಈ ಚಿತ್ರಕ್ಕೆ ‘ಮುತ್ತುಕುಮಾರ’ ಎಂದು ಹೆಸರಿಟ್ಟಿದ್ದಾರಂತೆ. ‘ಇದು ಹಳ್ಳಿಯಲ್ಲಿ ನಡೆಯುವ ಪ್ರೇಮ ಕಥೆ. ನಾಯಕ ಮತ್ತು ನಾಯಕಿ ಇಬ್ಬರೂ ಒಂದೇ ಶಾಲೆಯಲ್ಲಿ ಓದುತ್ತಿರುತ್ತಾರೆ. ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿರುತ್ತದೆ. ಚಿತ್ರದಲ್ಲಿ ಲವ್‌, ತಾಯಿ–ಮಗ, ತಂದೆ–ಮಗನ ಸೆಂಟಿಮೆಂಟ್‌ ಕೂಡ ಇದೆ’ ಎಂದು ವಿವರಿಸಿದರು.

ನಾಯಕಿ ಮಹಾಲಕ್ಷ್ಮಿಗೆ ತನ್ನ ಹುಟ್ಟೂರಲ್ಲಿ ಸಾವಯವ ಕೃಷಿ ಮಾಡಬೇಕೆಂಬ ಆಸೆ. ಅವಳ ಕನಸು ಈಡೇರಿಸಲು ಅಪ್ಪ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸುತ್ತಾನೆ. ಅವಳು ಬರುವವರೆಗೂ ನಾಯಕನಿಗೆ ಹಳ್ಳಿಯಲ್ಲಿ ಸಾವಯವ ಕೃಷಿ ಮಾಡುವುದೇ ಕಾಯಕ. ಕೊನೆಗೆ, ಇಬ್ಬರೂ ಒಂದಾಗುತ್ತಾರೆಯೇ ಎಂಬುದೇ ಚಿತ್ರದ ಕಥಾಹಂದರ. ಈ ಹಿಂದೆ ‘ಸೈಕೋ’ ಮತ್ತು ‘ಕೈದಿ’ ಚಿತ್ರದಲ್ಲಿ ನಟಿಸಿದ್ದ ಧನುಶ್‌ ಈ ಚಿತ್ರದ ನಾಯಕ. ‘ಹಳ್ಳಿ ಸೊಗಡಿನ ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಇದರ ಮೂಲಕ ಆ ಕನಸು ಈಡೇರಿದೆ. ಒಳ್ಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಸಂತಸ ಹಂಚಿಕೊಂಡರು. 

ನಟಿ ಸಂಚಿತಾ ಪಡುಕೋಣೆ ಈ ಚಿತ್ರದ ನಾಯಕಿ. ‘ಸತ್ಯಹರಿಶ್ಚಂದ್ರ ಚಿತ್ರದ ಬಳಿಕ ಮತ್ತೊಂದು ಒಳ್ಳೆಯ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದರಲ್ಲಿ ನನ್ನ ಲುಕ್‌ ಸಂಪೂರ್ಣ ಬದಲಾಗಿದೆ’ ಎಂದು ಹೇಳಿಕೊಂಡರು. ನಟಿ ಸಂಜನಾ ಗರ್ಲಾನಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನನ್ನದು ಅತಿಥಿ ಪಾತ್ರವಾದರೂ ಅರ್ಥಪೂರ್ಣವಾಗಿದೆ’ ಎಂದಷ್ಟೇ ಹೇಳಿದರು. ಚಿತ್ರದಲ್ಲಿ ಐದು ಹಾಡುಗಳಿದ್ದು, ಕಿರಣ್‌ ಶಂಕರ್‌ ಸಂಗೀತ ಸಂಯೋಜಿಸಿದ್ದಾರೆ. ಟಿ.ವಿ. ಶ್ರೀನಿವಾಸ್‌ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಮಹೇಶ್‌ ತಲಕಾಡು ಅವರದು. ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್‌ ಮತ್ತು ನಿರ್ದೇಶಕ ನಂದ ಕಿಶೋರ್‌ ಚಿತ್ರತಂಡಕ್ಕೆ ಶುಭ ಕೋರಿದರು.

ಇದನ್ನೂ ಓದಿ: ಸಂಜನಾ 35 ಮುತ್ತುಗಳ ಆರೋಪ; ಮಿ.ಕ್ಲೀನ್‌ ಅಂತ ಪ್ರೂವ್ ಮಾಡುವೆ– ರವಿಶ್ರೀವತ್ಸ

ಪ್ರತಿಕ್ರಿಯಿಸಿ (+)