ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಮತ್ತು ಕೀರ್ತಿ ಕಲ್ಕೆರೆ ನಟನೆಯ ‘ಓ ಮೈ ಲವ್’ ಚಿತ್ರದಮೂರನೇ ಹಂತದ ಚಿತ್ರೀಕರಣವನ್ನು ಇದೇ ವಾರದಲ್ಲಿ ಪ್ರಾರಂಭಿಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರು, ಕೆಂಗೇರಿ ಉಪನಗರ ಸುತ್ತಮುತ್ತ ಮಗಧೀರ ವಿಲನ್ ದೇವಗಿಲ್ ಹಾಗೂ ಅಕ್ಷಿತ್ ಶಶಿಕುಮಾರ್ ನಡುವಿನ ಚೇಸಿಂಗ್ ದೃಶ್ಯದ ಚಿತ್ರೀಕರಣ ಈ ಹಂತದಲ್ಲಿ ನಡೆಯಲಿದೆ. ಈಗಾಗಲೇ ಚಿತ್ರದ ಶೇ.60ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಪ್ರೇಮಕಥೆಯೇ ಚಿತ್ರದ ಕಥಾಹಂದರವಾಗಿದ್ದರೂ, ಸಾಹಸ ದೃಶ್ಯಗಳಿಗೆ ಒತ್ತುಕೊಟ್ಟ ನಿರ್ದೇಶಕ ಸ್ಮೈಲ್ ಶ್ರೀನು ಅವರು ಚಿತ್ರಕಥೆ ಮಾಡಿಕೊಂಡಿದ್ದಾರೆ. ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚಿತ್ರವು ತೆರೆಗೆ ಬರುತ್ತಿದೆ.
ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ರಿಯಲ್ ಸತೀಶ್ ಸಾಹಸ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿ. ಮುರಳಿ ನೃತ್ಯ ನಿರ್ದೇಶನವಿದೆ. ಹಿರಿಯ ನಿರ್ದೇಶಕ ಎಸ್.ನಾರಾಯಣ್ ಸೇರಿದಂತೆ ದೀಪಿಕಾ ಆರಾಧ್ಯ, ಪೃಥ್ವಿರಾಜ್, ಎಸ್. ನಾರಾಯಣ್, ಸಾಧು ಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ , ಶಿಲ್ಪಾ, ರವಿ ರಾಮ್ ಕುಮಾರ್ ತಾರಾ ಬಳಗದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.