ಭಾನುವಾರ, ಆಗಸ್ಟ್ 25, 2019
28 °C

ಟ್ವೀಟ್‌ ಚರ್ಚೆಯಾಗ್ತಿದೆ ಅಂದ್ರೆ ನಾನು ಬೆಳೆಯುತ್ತಿದ್ದೇನೆ ಎಂದೇ ಅರ್ಥ: ಸುದೀಪ್‌

Published:
Updated:

ಬೆಂಗಳೂರು: ‘ನನ್ನ ಬಗ್ಗೆ ಮಾತಾಡ್ತಿದ್ದಾರೆ ಅಂದ್ರೆ ನಾನು ಬೆಳೆದಿದ್ದೇನೆ ಅಂತಾ..!’ 

–ಇತ್ತೀಚೆಗಷ್ಟೇ ಭಾರಿ ಚರ್ಚೆಗೆ ಗ್ರಾಸವಾಗಿದ್ದ ನಟ ಸುದೀಪ್‌ ಅವರ ಟ್ವೀಟ್‌ ಕುರಿತು ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ ಇದು. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗುರುವಾರ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು.

‘ನನ್ನದೊಂದು ಟ್ವೀಟ್‌ ಇಷ್ಟೊಂದು ಚರ್ಚೆಯಾಗುತ್ತಿದೆ ಎಂದರೆ ನಾನು ಬೆಳೆಯುತ್ತೀದ್ದೇನೆ ಎಂದೇ ಅರ್ಥ. ನಾನು ಬೆಳೆಯೋಕೆ ಇಷ್ಟು ವರ್ಷ ಬೇಕಾಯಿತೇ ಎಂದು ಮತ್ತೊಂದು ಕಡೆ ಅನ್ನಿಸುತ್ತಿದೆ’ ಎಂದರು.

‘ಹೊಸದಾಗಿ ಮದುವೆ ಆಗಿರೋರಿಗೆ ಚಂದ್ರ ಒಂದೊಂದು ರೀತಿ ಕಾಣಿಸುತ್ತಾನೆ. ಹಾಗೆ ನನ್ನ ಟ್ವೀಟನ್ನು ಅವರಿಗೆ ತಿಳಿದಂತೆ ಅರ್ಥೈಸಿಕೊಳ್ಳಬಹುದು. ಅವರರವರ ಭಾವಕ್ಕೆ ತಕ್ಕಂತೆ ಎನ್ನುತ್ತಾರಲ್ಲ ಹಾಗೆ’ ಎಂದು ಹೇಳಿದರು.

ಸ್ವಾತಂತ್ರ್ಯೋತ್ಸವಕ್ಕೆ ಟ್ವಿಟರ್​ನಲ್ಲಿ ಸುದೀಪ್‌ ಶುಭಾಶಯ ಕೋರಿದ್ದಾರೆ. ‘ನಮ್ಮೊಳಗಿನ ಸಂಘರ್ಷದಿಂದ ಮುಕ್ತಿ ಪಡೆಯುವುದೂ ಸ್ವಾತಂತ್ರ್ಯವೇ. ತಪ್ಪು-ಸರಿ ನಡುವಿನ ಸಂಘರ್ಷ, ಆಯ್ಕೆ, ಯೋಚನೆಗಳು.. ಹೀಗೆ ಹಲವು ವಿಚಾರಗಳ ಬಗೆಗಿನ ಸಂಘರ್ಷ. ನಮ್ಮೆಲ್ಲ ಗಡಿಗಳನ್ನು ಮೀರಿ ಒಂದು ಕುಟುಂಬವಾಗುವುದೇ ಸ್ವಾತಂತ್ರ್ಯ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

 

 

‘ನಿಜವಾದ ಗಂಡಸು ಎಂದು ಸಾಬೀತುಪಡಿಸಲು ಮದ್ಯ ಬೇಕಿಲ್ಲ; ಸೂರ್ಯ ಮುಳುಗುವುದು ಬೇಕಾಗಿಲ್ಲ’ ಎಂದು ಕೆಲ ದಿನಗಳ ಹಿಂದೆ ಸುದೀಪ್‌ ಮಾಡಿದ್ದ ಟ್ವೀಟ್‌ ವೈರಲ್‌ ಆಗಿತ್ತು. ಯಾರನ್ನು ಕುರಿತು ಕಿಚ್ಚ ಈ ಟ್ವೀಟ್‌ ಮಾಡಿದ್ದಾರೆ ಎಂಬ ಬಗ್ಗೆಯೂ ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆ ನಡೆದಿತ್ತು. 

 

‘ನನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಲು ನಾನು ರಣಾಂಗಣದಲ್ಲಿ ಹೋರಾಟಕ್ಕೆ ಇಳಿಯುವುದಿಲ್ಲ. ಎದುರಾಳಿ ಯುದ್ಧ ಮಾಡಲು ಎಷ್ಟು ಅರ್ಹನಾಗಿದ್ದಾನೆ ಎನ್ನುವುದರ ಮೇಲೆ ಹೋರಾಟಕ್ಕೆ ಇಳಿಯುತ್ತೇನೆ’ ಎಂದೂ ಅವರು ಬರೆದುಕೊಂಡಿದ್ದರು.

ನಟ ಸುದೀಪ್‌ ನಟನೆಯ ಕೃಷ್ಣ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಪೈಲ್ವಾನ್’ ಐದು ಭಾಷೆಗಳಲ್ಲಿ ಸೆಪ್ಟೆಂಬರ್‌ 12ರಂದು ಏಕಕಾಲಕ್ಕೆ ತೆರೆ ಕಾಣುತ್ತಿದೆ. 

Post Comments (+)