‘ಸರಿಯಾದ ಸಮಯಕ್ಕೆ ಎಂಟ್ರಿಯಾಗಿದ್ದೇನೆ’

7

‘ಸರಿಯಾದ ಸಮಯಕ್ಕೆ ಎಂಟ್ರಿಯಾಗಿದ್ದೇನೆ’

Published:
Updated:
Prajavani

ಕೇರಳದಿಂದ ಬಂದು ಕನ್ನಡದಲ್ಲಿ ಹೆಸರು ಮಾಡುತ್ತಿರುವ ಪ್ರತಿಭಾವಂತ ಹುಡುಗ ನಾಬಿನ್‌ ಪೌಲ್‌.

ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿದ ನಾಬಿನ್‌ಗೆ ಮೊದಲು ಸಂಗೀತ ದೀಕ್ಷೆ ಸಿಕ್ಕಿದ್ದು ಚರ್ಚ್‌ನಲ್ಲಿ. ಅಲ್ಲಿನ ಸಂಗೀತ ಗೋಷ್ಠಿಗಳನ್ನು ಮೈಮರೆತು ಆಲಿಸುತ್ತಿದ್ದ ಅವರು ಕಾಲಾನಂತರ ಆಯ್ದುಕೊಂಡಿದ್ದೂ ಸಂಗೀತ ಬದುಕನ್ನೇ.

ಅವರ ಸಂಗೀತವೃತ್ತಿ ಆರಂಭವಾಗಿದ್ದು ರೇಡಿಯೊ ಜಿಂಗಲ್‌ಗಳ ಮೂಲಕ. ಇದುವರೆಗೆ ಅವರು ಹಲವು ರೇಡಿಯೊಗಳಿಗೆ ಸುಮಾರು ಒಂದೂವರೆ ಸಾವಿರ ಜಿಂಗಲ್‌ಗಳನ್ನು ಸಂಯೋಜನೆ ಮಾಡಿದ್ದಾರೆ. ಈ ಅನುಭವದ ಚುಂಗು ಹಿಡಿದೇ ತಮಿಳು, ತೆಲುಗು, ಮಲಯಾಳಂ ಸಿನಿಮಾ ಸಂಗೀತ ನಿರ್ದೇಶಕರ ಜತೆಗೂ ಸಹಾಯಕನಾಗಿ ಕೆಲಸ ಗಿಟ್ಟಿಸಿಕೊಂಡರು. ಮೊದಲ ಬಾರಿಗೆ ಸ್ವತಂತ್ರ ಸಂಗೀತ ನಿರ್ದೇಶನದ ಅವಕಾಶ ಸಿಕ್ಕಿದ್ದು ಕನ್ನಡದ ‘ಟೈಟ್ಲು ಬೇಕಾ?’ ಎಂಬ ಸಿನಿಮಾ ಮೂಲಕ. ಅವರಿಗೆ ಹೆಸರು ತಂದುಕೊಟ್ಟಿದ್ದು ಡಿ. ಸತ್ಯಪ್ರಕಾಶ್ ನಿರ್ದೇಶನದ ‘ರಾಮಾ ರಾಮಾ ರೇ..’ ಚಿತ್ರಕ್ಕೆ ಮಾಡಿದ ಹಿನ್ನೆಲೆ ಸಂಗೀತ. ಈ ಸಿನಿಮಾದ ಕೆಲಸಕ್ಕಾಗಿ ಪ್ರಶಸ್ತಿಯೂ ಹಿರಿಮೆಯೂ ಅವರ ಮಡಿಲು ಸೇರಿತು.

ನಂತರ ಶುದ್ಧಿ, ಚೂರಿಕಟ್ಟೆ, ಒಂದಲ್ಲಾ ಎರಡಲ್ಲಾ ಹೀಗೆ ಹಲವು ಸಿನಿಮಾಗಳಿಗೆ ಧ್ವನಿವಿನ್ಯಾಸ ಮಾಡಿದ್ದಾರೆ. ಈಗ ಬಿಡುಗಡೆಗೆ ಸಜ್ಜಾಗಿರುವ ‘ಅನುಕ್ತ’ ಸಿನಿಮಾ ಹಿನ್ನೆಲೆ ಸಂಗೀತದ ಜತೆಗೆ ಹಾಡುಗಳ ಸಂಗೀತ ಸಂಯೋಜನೆಯನ್ನೂ ಅವರೇ ಮಾಡಿದ್ದಾರೆ. ಚಾರ್ಲಿ, ಕಥಾಸಂಗಮ, ಹೌರಾ ಬ್ರಿಡ್ಜ್‌ ಹೀಗೆ ಅವರು ಕೆಲಸ ಮಾಡುತ್ತಿರುವ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

‘ಸಿನಿಮಾ ಸಂಗೀತದಲ್ಲಿ ಒರಿಜಿನಾಲಿಟಿಗೆ ಹೆಚ್ಚು ಒತ್ತು ಕೊಡಬೇಕು’ ಎನ್ನುವ ನಾಬಿನ್‌, ನಿರ್ದೇಶಕರು ಕೊಡುವ ರೆಫರೆನ್ಸುಗಳಿಂದ ಆದಷ್ಟೂ ದೂರ ಇರುತ್ತಾರೆ. ‘ರೆಫರೆನ್ಸ್‌ ಇಟ್ಟುಕೊಂಡು ಸಂಗೀತ ಕಟ್ಟಿದರೆ ನನ್ನತನ ಎಲ್ಲಿರುತ್ತದೆ? ನಾನು ಮಾಡುವ ಸಂಗೀತ ನನ್ನದೇ ಆಗಿರಬೇಕು. ನನ್ನ ಶೈಲಿಯಲ್ಲಿಯೇ ಇರಬೇಕು. ಕಥೆಯ ಥೀಮ್‌ ಇಟ್ಟುಕೊಂಡು ಕೆಲಸ ಮಾಡಬೇಕು ಎನ್ನುವುದು ನನ್ನ ನಿಲುವು’ ಎನ್ನುತ್ತಾರೆ.

‘ಒಂದು ಸಿನಿಮಾಗೆ ಹಿನ್ನೆಲೆ ಸಂಗೀತ ಎನ್ನುವುದು ತುಂಬ ಮುಖ್ಯ. ಕಾಮಿಡಿ ಆಗಲಿ ಭಾವುಕ ಸನ್ನಿವೇಶ ಆಗಲಿ, ಮನಕ್ಕೆ ಮುಟ್ಟುವುದು, ಕಳೆಗಟ್ಟುವುದು ಸಂಗೀತದ ಮೂಲಕವೇ’ ಎನ್ನುವುದು ಅವರ ವಿವರಣೆ. ಯಾವುದೇ ಸಿನಿಮಾ ಒಪ್ಪಿಕೊಂಡರೂ ಆ ಚಿತ್ರದ ಕಥೆ ಕೇಳಿ, ಪ್ರತಿ ಪಾತ್ರಗಳನ್ನೂ ಅವುಗಳ ವರ್ತನೆಯನ್ನೂ ಸನ್ನಿವೇಶದ ಅಂತರ್‌ಧ್ವನಿಯನ್ನೂ ಅಧ್ಯಯನ ಮಾಡಿದ ನಂತರವೇ ಅವರು ಸಂಯೋಜನೆಗೆ ಇಳಿಯುತ್ತಾರೆ. ‘ಹಿನ್ನೆಲೆ ಸಂಗೀತದ ಜತೆಗೆ ಧ್ವನಿವಿನ್ಯಾಸವೂ ಚಿತ್ರಕ್ಕೆ ಅಷ್ಟೇ ಮುಖ್ಯ’ ಎಂಬುದು ಅವರ ಅನುಭವದ ಮಾತು.

‘ಈಗೀಗ ಕನ್ನಡದಲ್ಲಿ ಹೊಸ ತಲೆಮಾರಿನವರು ಸಿನಿಮಾ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅವರಿಗೆ ಧ್ವನಿವಿನ್ಯಾಸದ ಮಹತ್ವ ಗೊತ್ತು. ಆದರೆ ಒಂದು ಸಿನಿಮಾಕ್ಕೆ ಗುಣಮಟ್ಟದ ಧ್ವನಿ ವಿನ್ಯಾಸ ಮಾಡಬೇಕು ಎಂದರೆ ತಗಲುವ ವೆಚ್ಚವೂ ಹೆಚ್ಚಾಗುತ್ತದೆ. ಬಜೆಟ್‌ನ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸುಮ್ಮನಿರಬೇಕಾಗುತ್ತದೆ. ಆದರೆ ಈಗೀಗ ಅದನ್ನು ಭರಿಸಿಕೊಂಡು ಗುಣಮಟ್ಟದ ಧ್ವನಿ ವಿನ್ಯಾಸ ಮಾಡುವವರೂ ಹೆಚ್ಚುತ್ತಿದ್ದಾರೆ’ ಎಂಬ ಆಶಾವಾದವೂ ಅವರಲ್ಲಿದೆ.‌

ಸದ್ಯ ಕನ್ನಡ ಚಿತ್ರರಂಗದ ಪರಿಸ್ಥಿತಿಯ ಕುರಿತು ತುಂಬ ಉತ್ಸಾಹದಿಂದ ಮಾತನಾಡುತ್ತಾರೆ ನಾಬಿನ್‌. ‘ಕನ್ನಡದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಹೊಸತನದ ಅಲೆಯೊಂದು ಕಾಣಿಸಿದೆ. ಖಂಡಿತವಾಗಿಯೂ ಇನ್ನು ಎರಡು ಮೂರು ವರ್ಷಗಳಲ್ಲಿ ಕನ್ನಡ ಚಿತ್ರರಂಗ, ಭಾರತದ ಪ್ರಮುಖ ಚಿತ್ರರಂಗವಾಗಿ ಬೆಳೆಯುವುದರಲ್ಲಿ ಸಂಶಯ ಇಲ್ಲ. ಇಂಥ ಪರಿವರ್ತನೆಯ ಕಾಲದಲ್ಲಿಯೇ ನಾನು ಎಂಟ್ರಿ ಕೊಟ್ಟಿದ್ದರ ಬಗ್ಗೆ ನನಗೆ ಖುಷಿ ಇದೆ. ನಾನೂ ಬದಲಾವಣೆಯ ಭಾಗವಾಗಿ ಇದ್ದೇನೆ ಎಂಬ ಹೆಮ್ಮೆಯಿದೆ’ ಎಂದು ಹೇಳಿಕೊಳ್ಳುವ ನಾಬಿನ್‌ ಅವರಿಗೆ ಕನ್ನಡ ಚಿತ್ರರಂಗದಲ್ಲಿಯೇ ಬೇರೂರಿ ಪ್ರಯೋಗಗಳ ಇಟ್ಟಿಗೆ ಮೇಲೆ ಕನಸಿನ ಮಹಲು ಕಟ್ಟುವ ಆಸೆಯಿದೆ.

(ಕೃಪೆ: ಸುಧಾ, ಫೆ.7ರ ಸಂಚಿಕೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !