ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮಗೆ ನಾವೇ..’ ಚಿತ್ರ ಧರಂಶಾಲಾ ಸಿನಿಮೋತ್ಸವಕ್ಕೆ

Last Updated 17 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಈ ಕಿರುಚಿತ್ರವನ್ನು ಸುಂದರ ಸ್ಥಳ ಅಥವಾ ಲೋಕೇಷನ್‌ನಲ್ಲಿ ಚಿತ್ರೀಕರಣ ಮಾಡಿಲ್ಲ. ನಟರೂ ಅಷ್ಟೇ, ಸಣ್ಣ ಹಳ್ಳಿಯ ಜನರೇ ಪಾತ್ರಧಾರಿಗಳು. ಆ ಹಳ್ಳಿಯಲ್ಲಿಯೇ ಇಡೀ ಕಿರುಚಿತ್ರದ ಚಿತ್ರೀಕರಣ ನಡೆಸಿದ್ದು, ಹಳ್ಳಿ ಸೊಬಗನ್ನು ಸ್ವಾಭಾವಿಕವಾಗಿ ಸೆರೆಹಿಡಿಯಲಾಗಿದೆ. ಈ ಕಿರುಚಿತ್ರವು ಈಗ ಪ್ರತಿಷ್ಠಿತಧರಂಶಾಲಾ ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ.

‘ನಮಗೆ ನಾವೇ ಗೋಡೆಗೆ ಮಣ್ಣು’ ಕಿರುಚಿತ್ರವು ಉತ್ತರಕನ್ನಡದ ಒಂದು ಹಳ್ಳಿಯಲ್ಲಿ ನಡೆಯುವ ಕತೆಯನ್ನು ಹೊಂದಿದೆ. ಆಕಳು ಕಳೆದುಕೊಂಡ ಮುದುಕನ ಹುಡುಕಾಟದೊಂದಿಗೆ ಪ್ರೇಕ್ಷಕರ ಅನುಭವಗಳೂ ತೆರೆದುಕೊಳ್ಳುತ್ತಾ ಹೋಗುವುದು ಕಿರುಚಿತ್ರದ ವಿಶೇಷ. ಗ್ರಾಮೀಣ ಭಾಗದ ಕತೆ, ಹಳ್ಳಿ ಪರಿಸರ, ಆ ಪರಿಸರದೊಳಗಿನ ಪಾತ್ರಗಳನ್ನೇ ಇಟ್ಟುಕೊಂಡು ಈ ಚಿತ್ರವನ್ನು ನೈಜವೆಂಬಂತೆ ಕಟ್ಟಿದ್ದಾರೆ ಚಿತ್ರ ನಿರ್ದೇಶಕ ನಟೇಶ ಹೆಗಡೆ. ಧರಂಶಾಲಾ ಸಿನಿಮೋತ್ಸವವು ನವೆಂಬರ್‌ 1ರಿಂದ 4ರವರೆಗೆ ನಡೆಯಲಿದ್ದು, ಕಿರುಚಿತ್ರ ವಿಭಾಗದಲ್ಲಿ ಈ ಚಿತ್ರ ಪ್ರಸಾರವಾಗಲಿದೆ.

ಮತ್ತೊಂದು ವಿಶೇಷತೆಯೆಂದರೆ ಈ ಕಿರುಚಿತ್ರವು ಪೂರ್ತಿ ಹವ್ಯಕ ಭಾಷೆಯಲ್ಲಿದೆ. ನಟೇಶ್‌ ಅವರ ಊರಾದ ಉತ್ತರಕನ್ನಡದ ಯಲ್ಲಾಪುರದ ಕೊಟ್ಟಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ ಚಿತ್ರೀಕರಣ ಮಾಡಲಾಗಿದೆ.ಅಲ್ಲಿಯ ಜನರೇ ಚಿತ್ರದ ಪಾತ್ರಧಾರಿಗಳು. 5–6 ಮನೆಗಳಿರುವ ಈ ಹಳ್ಳಿಯ ಮುದುಕನೊಬ್ಬನ ಮನೆಯ ಆಕಳು ಕಾಣೆಯಾಗುತ್ತದೆ. ಆತನ ಮಗ ಕುಡುಕ, ಆತನಿಗೆ ಮನೆ ವ್ಯವಹಾರದಲ್ಲಿ ಯಾವುದೇ ಆಸಕ್ತಿಯಿಲ್ಲ. ವೃದ್ಧ ಆಕಳು ಹುಡುಕುತ್ತಾ ಹೊರಡುತ್ತಾನೆ. ಅವನ ಹುಡುಕಾಟದೊಂದಿಗೆ ಪ್ರೇಕ್ಷಕರ ಅನುಭವಗಳೂ ಬಿಚ್ಚಿಕೊಳ್ಳುತ್ತಾ, ಒಂದಕ್ಕೊಂದು ಕೊಂಡಿಯಾಗುತ್ತಾ ಹೋಗುತ್ತದೆ ಎಂದು ಕಿರುಚಿತ್ರದ ಬಗ್ಗೆ ಹೇಳುತ್ತಾರೆ ನಟೇಶ ಹೆಗಡೆ.ಯಾವುದೇ ಬಜೆಟ್‌ ಇಲ್ಲದೇ, ಸಾಮಾನ್ಯ ‘ಐಡಿ ಮಾರ್ಕ್ಸ್‌ 3 ಕ್ಯಾಮೆರಾ’ದಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ.ಸಿನಿಮಾಟೋಗ್ರಫಿ, ಸಂಗೀತ ಎಲ್ಲವನ್ನೂ ಸ್ನೇಹಿತರೇ ಕಡಿಮೆ ಖರ್ಚಿನಲ್ಲಿ ಮಾಡಿದ್ದಾರೆ.

‘ಹವ್ಯಕ ಭಾಷೆಯ ಸೊಗಡು ಬಹುಜನರಿಗೆ ಪರಿಚಯವಿಲ್ಲ. ಹಾಗೇ ಈ ಭಾಷೆಯಲ್ಲಿ ಕಿರುಚಿತ್ರ ಅಥವಾ ಸಿನಿಮಾಗಳು ಬಂದಿರುವುದು ಕಡಿಮೆಯೇ. ಸಿನಿಮಾದಲ್ಲಿ ನನ್ನ ಸಂಸ್ಕೃತಿ, ಭಾಷೆ, ನನ್ನೂರನ್ನು ನಾನು ತೋರಿಸಬೇಕಾಗಿತ್ತು. ‘ನಮಗೆ ನಾವೇ ಗೋಡೆಗೆ ಮಣ್ಣು’ ಎಂಬುದು ಉತ್ತರ ಕನ್ನಡದ ಕಡೆ ಬಳಸುವ ಜನಪ್ರಿಯ ಗಾದೆ ಮಾತು. ನಾನು ಹುಟ್ಟಿದಾಗಿನಿಂದ ಈ ಗಾದೆಯನ್ನು ಕೇಳಿಕೊಂಡೇ ಬೆಳೆದವನು. ಹಾಗಾಗಿ ಕತೆ ಹಾಗೂ ಗಾದೆಯನ್ನು ಒಂದಕ್ಕೊಂದು ಬೆಸೆದೆ’ ಎಂದು ಕತೆ ರೂಪುಗೊಂಡ ಬಗ್ಗೆ ಅವರು ಹೇಳುತ್ತಾರೆ.

‘ಸಿನಿಮಾ ಮೂಲಕ ಕತೆ ಹೇಳುವುದು ನನ್ನ ಉದ್ದೇಶ ಅಲ್ಲ. ಅದರ ಹೊರತಾಗಿ ಆ ಸಿನಿಮಾ ಪ್ರೇಕ್ಷಕರ ಅನುಭವದ ಜೊತೆ ಒಂದಾಗಿ ಅವರೂ ಅದರ ಭಾಗವಾಗುತ್ತಾ ಹೋಗಬೇಕು’ ಎಂದು ಹೇಳುವ ನಟೇಶ ಅವರು ಈ ಹಿಂದೆ ವಿಭಿನ್ನ ಕತೆಯ ಹೊಂದಿರುವ ಕುರ್ಲಿ ಎಂಬ ಕಿರುಚಿತ್ರವನ್ನೂ ನಿರ್ದೇಶಿಸಿದ್ದಾರೆ.ಈ ಕಿರುಚಿತ್ರದಲ್ಲಿ ಸಮಾಜದಲ್ಲಿ ಬದುಕಿನ ಭಾಗವಾಗಿರುವ ಹಲವು ಸಂಗತಿಗಳಾದ ತಲೆಮಾರುಗಳ ನಡುವಿನ ಸಂಘರ್ಷ, ಜಾತಿ ತಾರತಮ್ಯ ಬಗ್ಗೆ ಬೆಳಕು ಚೆಲ್ಲಿದ್ದರು. ಆ ಸಿನಿಮಾವನ್ನೂ ಗ್ರಾಮೀಣ ಭಾಗದಲ್ಲಿಯೇ ಚಿತ್ರೀಕರಿಸಲಾಗಿತ್ತು.

ವರ್ಲ್ಡ್‌ ಸಿನಿಮಾಗಳು, ಮರಾಠಿ, ಮಲಯಾಳಂ, ಬಂಗಾಳಿ ಹಾಗೂ ಇತರ ಭಾಷೆಗಳ ಸಿನಿಮಾಗಳನ್ನು ನೋಡುತ್ತಾ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು ನಟೇಶ. ‘ಸಿನಿಮಾದ ಮೂಲಕ ಕತೆ ಹೇಳುವುದು ನನ್ನ ಉದ್ದೇಶ ಅಲ್ಲ’ ಎಂದು ಸ್ಪಷ್ಟವಾಗಿ ಹೇಳುವ ಅವರಿಗೆನಿರ್ದೇಶಕ ರಿತ್ವಿಕ್‌ ಘಟಕ್‌ ಅವರ ಸಿನಿಮಾಗಳೇ ಕಿರುಚಿತ್ರ ಹಾಗೂ ಸಿನಿಮಾ ಮಾಡಲು ಪ್ರೇರಣೆಯಂತೆ.

ತಾನು ನಿರ್ದೇಶಿಸಿದ ಕಿರುಚಿತ್ರಧರಂಶಾಲಾ ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವುದು ಅವರ ಸಿನಿಮಾ ಉತ್ಸಾಹವನ್ನು ಹೆಚ್ಚು ಮಾಡಿದೆ. ‘ಅಲ್ಲಿ ದೇಶದ, ವಿಶ್ವದ ಕೆಲ ಪ್ರಮುಖ ನಿರ್ದೇಶಕರು ಬರುತ್ತಾರೆ. ಸಮಾನ ಮನಸ್ಕರೊಂದಿಗೆ ಸಿನಿಮಾ ಬಗ್ಗೆ ಮಾತುಕತೆ, ಒಡನಾಟ, ಉತ್ತಮ ಸಿನಿಮಾಗಳ ವೀಕ್ಷಣೆಗಳಿಂದ ಹೊಸ ಬೆಳವಣಿಗೆ, ಹೊಸ ಸಾಧ್ಯತೆ ಸಾಧ್ಯವಾಗಬಹುದು’ ಎಂದು ನಟೇಶ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಟೇಶ ಅವರು ಸದ್ಯದಲ್ಲೇ ಪೂರ್ಣಪ್ರಮಾಣದ ಸಿನಿಮಾವನ್ನೂ
ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT