ಗೋಡ್ಸೆ ಅಲ್ಲ; ನಾಥೂರಾಮ!

7

ಗೋಡ್ಸೆ ಅಲ್ಲ; ನಾಥೂರಾಮ!

Published:
Updated:

ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್‌ ಗೋಡ್ಸೆ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಅದರಲ್ಲಿಯೂ ‘ಗೋಡ್ಸೆತನ’ ಒಂದು ಪಂಥದ ಹಾಗೆ ಬೆಳೆಯುತ್ತಿರುವ ನಮ್ಮ ಸಮಾಜದಲ್ಲಿ ಗಾಂಧಿತತ್ವದ ಅವಹೇಳನಕ್ಕೂ ನಾಥೂರಾಮ್‌ನನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಈ ನಾಥೂರಾಮ್ ಗಾಂಧಿಯ ಅಭಿಮಾನಿ! ಗುಂಡಿಟ್ಟು ಕೊಂದ ನಾಥೂರಾಮ, ಗಾಂಧಿಯ ಅಭಿಮಾನಿ ಆಗಲು ಹೇಗೆ ಸಾಧ್ಯ ಎಂದು ಹುಬ್ಬೇರಿಸಬೇಡಿ. ಸಿನಿಮಾ ತೆರೆಯ ಮೇಲೆ ಎಲ್ಲವೂ ಸಾಧ್ಯ. 

ಹೌದು, ಕನ್ನಡದಲ್ಲಿ ‘ನಾಥೂರಾಮ್‌’ ಎಂಬ ಹೆಸರಿನ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿದೆ. ರಿಷಭ್‌ ಶೆಟ್ಟಿ ಆ ಚಿತ್ರದ ನಾಯಕ. ಅಂದುಕೊಂಡ ಹಾಗೆ ಇದು ನಾಥೂರಾಮ್‌ ಗೋಡ್ಸೆಯ ಆತ್ಮಕಥೆಯೇನಲ್ಲ. ಗಾಂಧಿ ಕೊಂದ ಘಟನೆಯನ್ನು ಇಟ್ಟುಕೊಂಡು ಕಟ್ಟಿದ ಸಿನಿಮಾವೂ ಅಲ್ಲ. ನಾಥೂರಾಮ ಎಂಬ ಹೆಸರಿನ ಗಾಂಧಿ ಅಭಿಮಾನಿಯ ಕಥೆಯನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನ. ಕಿರುತೆರೆಯ ಹೆಸರಾಂತ ನಿರ್ದೇಶಕ ವಿನು ಬಳಂಜ, 24 ವರ್ಷಗಳ ನಂತರ ಈ ಚಿತ್ರದ ಮೂಲಕ ಹಿರಿತೆರೆ ಮರಳುತ್ತಿದ್ದಾರೆ. ‘ಗಾಂಧಿಜಿಯ ಆತ್ಮಕತೆಯನ್ನು ಓದಿ ಇಷ್ಟಪಟ್ಟ ಹುಡುಗ ನಮ್ಮ ಚಿತ್ರದ ನಾಯಕ ನಾಥೂರಾಮ್‌. ಗಾಂಧಿ ತತ್ವ, ಬದುಕಿನ ಅಭಿಮಾನಿ, ಅನುಯಾಯಿ ಆಗಿರುವ ಹುಡುಗನೊಬ್ಬ ಇಂದಿನ ನಮ್ಮ ಸಮಾಜದಲ್ಲಿ ಎಂಥ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ತೋರಿಸಲು ಹೊರಟಿದ್ದೇವೆ’ ಎನ್ನುವುದು ನಿರ್ದೇಶಕರ ವಿವರಣೆ.

‘ನಾಥೂರಾಮ್‌ ಎಂಬ ವ್ಯಕ್ತಿಯ ಬದುಕು, ಜೀವನ ಶೈಲಿಯ ಸುತ್ತಮುತ್ತ ಹೆಣೆದ ಕಥೆ ಇದು. ರಿಷಭ್‌ ಶೆಟ್ಟಿ ಅವರಿಗೆ ಈ ಚಿತ್ರದಿಂದ ಖಂಡಿತ ಹೊಸ ಇಮೇಜ್‌ ಸಿಕ್ಕುತ್ತದೆ’ ಎಂಬುದು ನಿರ್ದೇಶಕರ ಖಚಿತ ನಂಬಿಕೆ. 

ಶ್ರೀರಂಗಪಟ್ಟಣ, ಮೈಸೂರು, ಕಾರ್ಕಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ 60 ದಿನಗಳ ಕಾಲ ಚಿತ್ರೀಕರಣ ನಡೆಸಲು ತಂಡ ಯೋಜಿಸಿಕೊಂಡಿದೆ. ಅಚ್ಯುತಕುಮಾರ್, ಶಿವಮಣಿ, ಕಿಶೋರ್, ಆದರ್ಶ.ಹೆಚ್.ಎಸ್., ದವಲ್‌ ಗೌಡ ತಾರಾಗಣದಲ್ಲಿದ್ದಾರೆ. ಮಾಸ್ತಿ ಅವರ ಲೇಖನಿಯಿಂದ ಹರಿದ ಹರಿತ ಸಂಭಾಷಣೆಗಳೂ ಈ ಚಿತ್ರದಲ್ಲಿ ಇರಲಿವೆ. ಈ ಚಿತ್ರಕ್ಕೆ ಸಂಭಾಷಣೆ ಬರೆಯುವುದು ಒಂದು ಸವಾಲು ಎಂದು ಅವರಿಗೆ ಅನಿಸಿದೆಯಂತೆ. ಅರವಿಂದ್ ಎಸ್. ಕಶ್ಯಪ್‌ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಅಜನೀಶ್‌ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಎಚ್‌.ಕೆ. ಪ್ರಕಾಶ್ ಈ ಚಿತ್ರದ ನಿರ್ಮಾಪಕ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !