ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಲಾಗದ ಮಾತುಗಳಿಗೆ ಸಿನಿಮಾ ಚೌಕಟ್ಟು

naticharami
Last Updated 26 ಡಿಸೆಂಬರ್ 2018, 10:59 IST
ಅಕ್ಷರ ಗಾತ್ರ

‘ಅಕ್ಷರರೂಪದಲ್ಲಿ ಶುರುವಾದ ಒಂದು ಕನಸು ನಾತಿಚರಾಮಿ. ಈಗ ಸಿನಿಮಾ ರೂಪದಲ್ಲಿ ಪೂರ್ಣಗೊಂಡಿದೆ. ಆರಂಭದಲ್ಲಿ ಈ ಕಥೆಯನ್ನು ಸಿದ್ಧಮಾಡಿಕೊಂಡು ಹಲವು ನಿರ್ಮಾಪಕರನ್ನು ಸಂಪರ್ಕಿಸಿದೆವು. ಆದರೆ ಈ ಕಥೆಯ ಮೇಲೆ ನಂಬಿಕೆ ಇಟ್ಟು ಯಾರೂ ಮುಂದೆ ಬರಲಿಲ್ಲ. ಅಲ್ಲದೆ ಇದು ಬಹುಸೂಕ್ಷ್ಮ ಕಥಾ ಎಳೆ ಇರುವ ಸಿನಿಮಾ. ಹೀಗಾಗಿ ಹಣ ಹೂಡಲು ಹಿಂಜರಿದರು. ಆದರೆ ರಮೇಶ್‌ ರೆಡ್ಡಿ ಹಣ ಹೂಡಿದ್ದರಿಂದ ಈ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.’ ಹೀಗೆನ್ನುವಾಗ ಒಡಲೊಳಿಟ್ಟು ಸಲುಹಿದ ಜೀವವೊಂದನ್ನು ಜಗದ ಎದುರು ಬಿಡಿಸಿಡುವ ಧನ್ಯತೆ ಮತ್ತು ಕೊಂಚ ಅಂಜಿಕೆ ಎರಡೂ ನಿರ್ದೇಶಕ ಮಂಸೋರೆ ಮಾತಿನಲ್ಲಿ ಎದ್ದು ಕಾಣುತ್ತಿತ್ತು.

ಮಂಸೋರೆ ನಿರ್ದೇಶನದ ‘ನಾತಿಚರಾಮಿ’ ಸಿನಿಮಾ ಡಿಸೆಂಬರ್‌ 28ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ಹಂಚಿಕೊಳ್ಳಲಿಕ್ಕಾಗಿಯೇ ಅವರು ಸುದ್ದಿಗೋಷ್ಠಿ ಕರೆದಿದ್ದರು. ಕರ್ನಾಟಕದಲ್ಲಿಯಷ್ಟೇ ಅಲ್ಲದೆ ಮುಂಬೈ, ಚೆನ್ನೈಗಳಲ್ಲಿಯೂ ಅವರು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಚಿತ್ರ ಮಾಮಿ ಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿತ್ತು.

ಸಂಚಾರಿ ವಿಜಯ್‌ ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ‘ನಾವು ಎಷ್ಟೇ ಸ್ವತಂತ್ರರಾಗಿರಬಹುದು. ಯಾವ ವಿಷಯಗಳನ್ನು ಎಲ್ಲಿ ಹೇಗೆ ಬೇಕಾದರೂ ಮಾತಾಡಲು ಸ್ವಾತಂತ್ರ್ಯ ನಮಗಿರಬಹುದು. ಆದರೆ ಕೆಲವು ಸೂಕ್ಷ್ಮ ವಿಚಾರಗಳನ್ನು ಮಾತನಾಡುವುದಕ್ಕೆ ಕಷ್ಟಪಡುತ್ತೇವೆ. ಉದಾಹರಣೆಗೆ ಸೆಕ್ಸ್‌. ಒಬ್ಬ ಮನುಷ್ಯನಿಗೆ ನಿದ್ದೆ ಎಷ್ಟು ಮುಖ್ಯವೋ, ಕಾಮವೂ ಅಷ್ಟೇ ಮುಖ್ಯ. ಆದರೆ ಇದರ ಕುರಿತು ಮಾತಾಡುವುದು ಸುಲಭವಲ್ಲ. ಇಂಥ ವಿಷಯದ ಕುರಿತು ಸಿನಿಮಾ ಮಾಡುವುದಂತೂ ಇನ್ನೂ ಕಷ್ಟ. ಆದರೆ ‘ನಾತಿಚರಾಮಿ’ ಸಿನಿಮಾ ನೋಡಿದರೆ ಇಡೀ ಸಿನಿಮಾದಲ್ಲಿ ಎಲ್ಲೂ ಒಂದೇ ಒಂದು ಆಶ್ಲೀಲ ಅನಿಸುವಂಥ ದೃಶ್ಯ ಇಲ್ಲ. ಆದರೆ ದಾಟಿಸಬೇಕಾಗಿರುವ ವಿಷಯವನ್ನು ನಿರ್ದೇಶಕರು ತುಂಬ ಪರಿಣಾಮಕಾರಿಯಾಗಿ ದಾಟಿಸಿದ್ದಾರೆ. ಹಾಗಾಗಿ ನಾತಿಚರಾಮಿ ಬಹುಸೂಕ್ಷ್ಮ ವಿಷಯವನ್ನು ಬಹಳ ಸರಳವಾಗಿ ಜನರಿಗೆ ತಲುಪಿಸುವ ಪ್ರಯತ್ನ ಮಾಡುವ ಸಿನಿಮಾ. ಇಂಥ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ನನಗೆ ಖುಷಿ ಕೊಟ್ಟ ಸಂಗತಿ’ ಎಂದು ವಿವರಿಸಿದರು ಸಂಚಾರಿ ವಿಜಯ್‌.

‘ನಾತಿಚರಾಮಿ’ ಚಿತ್ರ ಗೌರಿ ಎಂಬ ಪಾತ್ರದ ಸುತ್ತಲೂ ಹೆಣೆದ ಸಿನಿಮಾ. ಈ ಪಾತ್ರವನ್ನು ಶ್ರುತಿ ಹರಿಹರನ್ ನಿರ್ವಹಿಸಿದ್ದಾರೆ. ‘ಗೌರಿ ಬರೀ ಒಂದು ಹೆಣ್ಣಿನ ಪಾತ್ರ ಅಲ್ಲ. ಅವರು ಮನೆಯಲ್ಲಿದ್ದಾಗ ಒಂದಿಷ್ಟು ಹೆಣ್ಣುಗಳನ್ನು ಪ್ರತಿನಿಧಿಸಿದರೆ, ಮನೆಯಿಂದ ಆಫೀಸಿಗೆ ಹೋಗುವ ಮಧ್ಯದಲ್ಲಿ ಇನ್ನೊಂದಿಷ್ಟು ಮಹಿಳೆಯರನ್ನು ಬಿಂಬಿಸುತ್ತಾರೆ. ಆಫೀಸಿಲ್ಲಿ ಮತ್ತೊಂದು ಬಗೆಯ ಮಹಿಳಾವರ್ಗವನ್ನು ಪ್ರತಿನಿಧಿಸುತ್ತಾರೆ. ಅವಳು ತನ್ನ ಕೋಣೆಯಲ್ಲಿ ಕೂತುಕೊಂಡರೆ ಅದು ಮತ್ತೊಂದು ಬಗೆಯ ಮಹಿಳೆಯರನ್ನು ಕನೆಕ್ಟ್‌ ಮಾಡುತ್ತಾರೆ. ಹೀಗೆ ಹಲವು ಆಯಾಮಗಳಿರುವ ಪಾತ್ರ ಅದು’ ಎಂದು ಪಾತ್ರದ ಪರಿಚಯ ಮಾಡಿಕೊಡುತ್ತಾರೆ ಮಂಸೋರೆ.

‘ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಒಂದು ಮಹತ್ವಾಕಾಂಕ್ಷೆ ಇರುವ ಹೆಣ್ಣಿನ ಪಾಲಿಗೆ ಮದುವೆ ಎನ್ನುವ ಒಂದು ವ್ಯವಸ್ಥೆಯ ನಿಜವಾದ ಅರ್ಥವೇನು ಎಂಬ ಪ್ರಶ್ನೆಯನ್ನು ಕೇಳುವ ಸಿನಿಮಾ ಇದು. ಮದುವೆಗೂ ಮತ್ತು ದೈಹಿಕ ಸಂಬಂಧಕ್ಕೂ ಇರುವ ನಿಜವಾದ ಸಂಬಂಧ ಏನು? ಸೆಕ್ಸ್‌ ಮತ್ತು ಮ್ಯಾರೇಜ್‌ ಇವುಗಳ ನಡುವಿನ ಸಂಬಂಧ ಏನು ಎಂಬುದರ ಕುರಿತೂ ಈ ಸಿನಿಮಾ ಮಾತಾಡು ತ್ತದೆ. ಮದುವೆ ಎನ್ನುವುದು ಲೈಂಗಿಕ ಸಂಬಂಧ ಹೊಂದುವುದಕ್ಕೆ ಪಡೆದುಕೊಳ್ಳುವ ಪರವಾನಿಗಿ ಪತ್ರವೇ? ಹಾಗಾದರೆ ವಿವಾಹೇತರ ಲೈಂಗಿಕ ಸಂಬಂಧಗಳ ಅರ್ಥ ಏನು? ಇಂಥ ಹಲವು ಪ್ರಶ್ನೆಗಳನ್ನು ತುಂಬ ಸೂಕ್ಷ್ಮವಾಗಿ drama summary ಕೇಳುವ ಸಿನಿಮಾ ನಾತಿಚರಾಮಿ’ ಎನ್ನುವುದು ಶ್ರುತಿ ಹರಿಹರನ್‌ ಮಾತು.

‘ನಮಗೆಲ್ಲರಿಗೂ ತಿಳಿದಿರುವ ಸಂಗತಿಗಳೇ ಈ ಸಿನಿಮಾದಲ್ಲಿಯೂ ಇವೆ. ಆದರೆ ನಾವ್ಯಾರೂ ಈ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ. ಹಾಗೆ ಮಾತಾಡಿರುವುದರಿಂದಲೇ ಈ ಸಿನಿಮಾ ನಮ್ಮ ಕಾಲದ ಮಹತ್ವದ ಸಿನಿಮಾ ಆಗುತ್ತದೆ’ ಎಂಬುದು ಅವರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT