ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳಿಂದ ಇಂಧನ ಬೆಲೆ ಕಡಿತ ಸಾಧ್ಯ

ಹೆಚ್ಚುವರಿ ಲಾಭ ಬಿಟ್ಟುಕೊಡಲಿ
Last Updated 28 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ದುಬಾರಿ ಕಚ್ಚಾ ತೈಲದ ಮೇಲಿನ ಹೆಚ್ಚುವರಿ ಲಾಭವನ್ನು ರಾಜ್ಯ ಸರ್ಕಾರಗಳು ಬಿಟ್ಟುಕೊಟ್ಟರೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು  ಪ್ರತಿ  ಲೀಟರ್‌ಗೆ ಕ್ರಮವಾಗಿ ₹ 2.65 ಮತ್ತು ₹ 2ರಷ್ಟು ಅಗ್ಗವಾಗಲಿವೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಸಂಶೋಧನಾ ವರದಿ ತಿಳಿಸಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸದ್ಯದ ಕಚ್ಚಾ ತೈಲ ಬೆಲೆ ಆಧರಿಸಿ ಹೇಳುವುದಾದರೆ, ರಾಜ್ಯ ಸರ್ಕಾರಗಳು 2018–19ನೇ ಹಣಕಾಸು ವರ್ಷದಲ್ಲಿ ₹ 18,728 ಕೋಟಿಗಳಷ್ಟು ಹೆಚ್ಚುವರಿ ಲಾಭ ಗಳಿಸಲಿವೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

ಕಚ್ಚಾ ತೈಲದ ಬೆಲೆಯು ‍ಪ್ರತಿ ಬ್ಯಾರೆಲ್‌ಗೆ 1 ಡಾಲರ್‌ನಷ್ಟು ಹೆಚ್ಚಳಗೊಂಡರೆ ರಾಜ್ಯಗಳ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹ 2,675 ಕೋಟಿ ವರಮಾನ ಹರಿದು ಬರಲಿದೆ.

ಆರ್ಥಿಕ ಸ್ಥಿತಿ ಏರುಪೇರಾಗದು: ಈ ಹೆಚ್ಚುವರಿ ವರಮಾನ ಬಿಟ್ಟು ಕೊಡುವುದರಿಂದ ರಾಜ್ಯಗಳ ಹಣಕಾಸು ಪರಿಸ್ಥಿತಿ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗಲಾರದು.

ಈ ಕಾರಣಕ್ಕೆ ರಾಜ್ಯ ಸರ್ಕಾರಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ ₹ 2.65 ಮತ್ತು ₹ 2ರಷ್ಟು ಕಡಿತಗೊಳಿಸಬಹುದಾಗಿದೆ. ಸದ್ಯದ ಸಂದರ್ಭದಲ್ಲಿ ಇದು ಹೆಚ್ಚು ಸಮಂಜಸವಾದ ನಿರ್ಧಾರವಾಗಿರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ವ್ಯಾಟ್‌ ಸಡಿಲಿಕೆ: ಕೇಂದ್ರ ಸರ್ಕಾರದ ತೆರಿಗೆಯೂ ಒಳಗೊಂಡ ಇಂಧನಗಳ ಬೆಲೆ ಮೇಲೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ವಿಧಿಸುವುದನ್ನು ಕೈಬಿಟ್ಟು ಮೂಲ ಬೆಲೆ ಮೇಲೆ ಮಾತ್ರ ವಿಧಿಸುವುದನ್ನು ಜಾರಿಗೆ ತಂದರೂ ಇಂಧನಗಳ ಮಾರಾಟ ದರ ಕಡಿಮೆಯಾಗಲಿದೆ.

ಇಂತಹ ನೀತಿ ಅಳವಡಿಸಿಕೊಂಡರೆ, ಪೆಟ್ರೋಲ್‌ ದರವು ಪ್ರತಿ ಲೀಟರ್‌ಗೆ ₹ 5.75 ಮತ್ತು ಡೀಸೆಲ್‌ ದರ ₹ 3.75ರಷ್ಟು ಅಗ್ಗವಾಗಲಿದೆ. ಹೀಗೆ ಮಾಡಿದರೆ ರಾಜ್ಯ ಸರ್ಕಾರಗಳು ₹ 34,627 ಕೋಟಿಗಳಷ್ಟು ತೆರಿಗೆ ವರಮಾನವನ್ನು ಬಿಟ್ಟುಕೊಡ ಬೇಕಾಗುತ್ತದೆ.

ಎಕ್ಸೈಸ್‌ ಸುಂಕ: ಕೇಂದ್ರ ಸರ್ಕಾರವು ಎಕ್ಸೈಸ್‌ ಸುಂಕವನ್ನು ₹ 1ರಷ್ಟು ಕಡಿಮೆ ಮಾಡಿದರೆ ಅದರ ವರಮಾನ ನಷ್ಟವು ₹ 10,725 ಕೋಟಿಗಳಿಗೆ ತಲುಪಲಿದೆ. ಸುಂಕವನ್ನು ₹ 2ರಷ್ಟು ಕಡಿಮೆ ಮಾಡಿದರೆ ವರಮಾನ ನಷ್ಟ ಇದರ ದುಪ್ಪಟ್ಟು ಆಗಲಿದೆ. ಇದು ಕೇಂದ್ರದ ವಿತ್ತೀಯ ಕೊರತೆಯನ್ನು ಹೆಚ್ಚಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ನಂತರ  ಜಾರಿಗೆ ಪುನಃ ಜಾರಿಗೆ ತಂದಿರುವ ಪ್ರತಿ ದಿನದ ದರ ಪರಿಷ್ಕರಣೆಯಿಂದ ದೆಹಲಿಯಲ್ಲಿ ಇದುವರೆಗೆ ಪೆಟ್ರೋಲ್‌ ದರ ₹ 3.64 ಮತ್ತು ಡೀಸೆಲ್‌ ಬೆಲೆ ₹ 3.24ರಷ್ಟು ತುಟ್ಟಿಯಾಗಿದೆ.

ಬೆಂಗಳೂರಿನಲ್ಲಿ ಸೋಮವಾರ ಪೆಟ್ರೋಲ್‌ ಬೆಲೆ ₹ 79.55ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT