ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ಸ್ಟಾರ್‌ ಬಾಲಿವುಡ್‌ಗೆ ಪ್ಯಾಕಪ್‌

Last Updated 4 ಮಾರ್ಚ್ 2019, 19:45 IST
ಅಕ್ಷರ ಗಾತ್ರ

‘ಪೆಟ್ಟಾ’ ಸಿನಿಮಾ ಐವತ್ತು ದಿನಗಳಿಂದ ಯಶಸ್ವಿಯಾಗಿ ಓಡುತ್ತಿರುವುದು ರಜನಿಕಾಂತ್‌ಗೆ ಬಹಳ ಖುಷಿ ಕೊಟ್ಟಿದೆ. ಇದೇ ವೇಳೆ, ಹಲವು ದಿನಗಳಿಂದ ಕೇಳಿಬರುತ್ತಿರುವ ವದಂತಿಯೊಂದು ನಿಜವಾಗುತ್ತಿದೆ. ಬಾಲಿವುಡ್‌ನಲ್ಲಿ ರಜನಿ ಹವಾ ಎಬ್ಬಿಸಲಿದ್ದಾರೆ ಎಂಬ ಸುದ್ದಿಗೆ ‘ಮುಕ್ತಿ’ ಸಿಗುವ ಕಾಲ ಹತ್ತಿರವಾಗಿದೆ.

ಎ.ಆರ್. ಮುರುಗದಾಸ್‌ ನಿರ್ದೇಶನದ, ಇನ್ನೂ ಹೆಸರಿಡದ ಚಿತ್ರದಲ್ಲಿ ರಜನಿಕಾಂತ್‌ ನಾಯಕನಟರಾಗಿ ನಟಿಸಲಿದ್ದಾರೆ. ಈ ಚಿತ್ರದ ಇನ್ನೊಂದು ಆಕರ್ಷಣೆ ಎಂದರೆ, ರಜನಿಗೆ ಇಬ್ಬರು ನಾಯಕನಟಿಯರನ್ನೂ ಮುರುಗದಾಸ್ ಆಯ್ಕೆ ಮಾಡಿದ್ದಾರೆ. ನಯನತಾರಾ ಮತ್ತು ಕೀರ್ತಿ ಸುರೇಶ್‌ ಅವರು ಸೂಪರ್‌ಸ್ಟಾರ್‌ ಜೊತೆ ರೊಮ್ಯಾನ್ಸ್‌ ಮಾಡಲಿದ್ದಾರೆ ಎಂಬುದು ಚಿತ್ರ ತಂಡದ ಮಾಹಿತಿ.

ಒಂದು ಮೂಲದ ಪ್ರಕಾರ, ಮುರುಗದಾಸ್‌ ಅವರ ಫೇವರಿಟ್‌ ಸಂಗೀತ ಸಂಯೋಜಕ ಅನಿರುದ್ಧ್‌ ರವಿಚಂದರ್‌ ಅವರೂ ಈ ಚಿತ್ರಕ್ಕೆ ಜೊತೆಗೂಡಲಿದ್ದಾರೆ. ಅವರು ಈಗಾಗಲೇ ‘ಇಂಡಿಯನ್‌ 2’ ಹಾಗೂ ನಾನಿ ನಾಯಕನಟರಾಗಿರುವ ‘ಜೆರ್ಸಿ’ಗೆ ಕೂಡಾ ಕಾಲ್‌ಶೀಟ್‌ ನೀಡಿದ್ದಾರೆ.

ಕೀರ್ತಿಗೆ ಈ ವರ್ಷವೂ ಅದೃಷ್ಟದಾಯಕ
2018ರಲ್ಲಿ ಕೆಲವು ಹಿಟ್‌ ಚಿತ್ರಗಳನ್ನು ನೀಡಿದ ಕಾಲಿವುಡ್‌ ಸುಂದರಿ ಕೀರ್ತಿ ಸುರೇಶ್‌ ಇದೊಂದು ಅಪೂರ್ವ ಅವಕಾಶವಾಗಲಿದೆ. ‘ಸರ್ಕಾರ್‌’ ನಟಿ ಕೀರ್ತಿ ಬೋನಿ ಕಪೂರ್‌ ನಿರ್ಮಾಣದ ಹಿಂದಿ ಚಿತ್ರವೊಂದಕ್ಕೆ ಈಗಾಗಲೇ ಸಹಿ ಹಾಕಿದ್ದಾರೆ. ಈ ಮಧ್ಯೆ ಮುರುಗದಾಸ್ ಅವರಂತಹ ನಿರ್ದೇಶಕ ಮತ್ತು ರಜನಿಕಾಂತ್‌ ಅವರಂತಹ ಸೂಪರ್‌ಸ್ಟಾರ್‌ ಜೊತೆ ಬಾಲಿವುಡ್‌ನಲ್ಲಿ ಭಾಷ್ಯ ಬರೆಯುವ ಅದೃಷ್ಟ ಅವರದ್ದಾಗಿದೆ. ‘ಬಧಾಯಿ ಹೋ’ ಚಿತ್ರದ ನಿರ್ದೇಶಕ ಅಮಿತ್‌ ಶರ್ಮಾ ಅವರೇ ಕಪೂರ್‌ ಚಿತ್ರಕ್ಕೂ ಆ್ಯಕ್ಷನ್‌ ಕಟ್‌ ಹೇಳಲಿದ್ದಾರಂತೆ.

ಕೀರ್ತಿ ಸುರೇಶ್‌, ಸತತ ನಾಲ್ಕು ಉತ್ತಮ ತಮಿಳು ಚಿತ್ರಗಳಲ್ಲಿ ನಟಿಸಿ ವರ್ಷದ ಬ್ಯುಸಿ ನಟಿ ಎಂದು ಸಾಬೀತು ಮಾಡಿದ್ದಾರೆ. ಮುರುಗದಾಸ್‌ ಅವರದೇ ‘ಸರ್ಕಾರ್‌’ನಲ್ಲಿ ಕೀರ್ತಿ ತಮ್ಮ ಪ್ರತಿಭೆಯ ಮೂಲಕ ನಿರ್ದೇಶಕರ ಮನಗೆದ್ದಿದ್ದ ಕೀರ್ತಿ ಹೊಸ ಚಿತ್ರದಲ್ಲಿಯೂ ತಮ್ಮ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಯನತಾರಾ, ‘ಆಯಿರಾ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಸೂಪರ್‌ಸ್ಟಾರ್‌ ರಜನಿ ಜೊತೆಗೆ ಬಾಲಿವುಡ್‌ನಲ್ಲಿ ತೆರೆಹಂಚಿಕೊಳ್ಳುವ ಅವಕಾಶವನ್ನು ಕೈಬಿಡಲು ಅವರು ಸಿದ್ಧರಿಲ್ಲ. ತಮಿಳಿನ ಹಾರರ್‌ ಸಿನಿಮಾ ‘ಆಯಿರಾ’ ದಲ್ಲಿ ನಯನತಾರಾ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ನಯನತಾರಾ ಕೈತುಂಬಾ ಅವಕಾಶಗಳಿವೆ. ಹೊಸ ಚಿತ್ರಗಳಿಗೆ ಆಫರ್‌ ಕೂಡಾ ಬರುತ್ತಿದೆ. ಒಂದೇ ಕಲ್ಲಿನಲ್ಲಿ ರಜನಿ, ಮುರುಗದಾಸ್‌ ಮತ್ತು ಬಾಲಿವುಡ್‌ ಎಂಬ ಮೂರು ಹಕ್ಕಿಗಳಿಗೆ ಈಡು ಮಾಡುವ ಅವಕಾಶ ಅವರನ್ನು ಥ್ರಿಲ್‌ ಆಗಿಸಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT