ಕಂಗೆಟ್ಟ ನೇಹಾಗೆ ಖಿನ್ನತೆ

7

ಕಂಗೆಟ್ಟ ನೇಹಾಗೆ ಖಿನ್ನತೆ

Published:
Updated:
Prajavani

ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯಕಿ, ಹಿಂದಿ ರಿಯಾಲಿಟಿ ಶೋಗಳ ಚಿರಪರಿಚಿತ ಮುಖ ನೇಹಾ ಕಕ್ಕರ್‌ ಹೆಸರು ಕೆಲದಿನಗಳಿಂದ ಟ್ರೆಂಡಿಂಗ್ ಆಗುತ್ತಿದೆ. ಇದಕ್ಕೆ ಕಾರಣ ಇನ್‌ಸ್ಟಾಗ್ರಾಂನಲ್ಲಿ ಅವರು ಮುಕ್ತವಾಗಿ ಬರೆದುಕೊಂಡಿರುವ ಒಂದು ಪೋಸ್ಟ್. ತಮ್ಮ ಖಿನ್ನತೆ ಮತ್ತು ಅದಕ್ಕೆ ಕಾರಣಗಳನ್ನು ನೇಹಾ ಬಿಚ್ಚಿಟ್ಟಿದ್ದಾರೆ.

2006ರಲ್ಲಿ ಇಂಡಿಯನ್‌ ಐಡಲ್‌ ಸೀಸನ್‌2 ರಲ್ಲಿ ಸ್ಪರ್ಧಿಯಾಗಿ ಸಂಗೀತ ಕ್ಷೇತ್ರಕ್ಕೆ ಪರಿಚಯಗೊಂಡವರು ನೇಹಾ. ಹಿಂದಿಯ ಸರೆಗಮಪ ಲಿಟ್ಲ್‌ ಚಾಂಪ್ಸ್‌ಗೆ ಕೂಡಾ ಅವರು ತೀರ್ಪುಗಾರರಾಗಿದ್ದರು. 2018ರಲ್ಲಿ ಮತ್ತೆ ಇಂಡಿಯನ್‌ ಐಡಲ್‌ ತೀರ್ಪುಗಾರ್ತಿಯಾದ ನೇಹಾ ಅದೇ ಸೆಟ್‌ನಲ್ಲಿ ಕೆಲ ತಿಂಗಳ ಹಿಂದೆ ನೇಹಾ ಚಪ್ಪಾಳೆಯ ಸುರಿಮಳೆ ಗಿಟ್ಟಿಸಿಕೊಂಡಿದ್ದರು. ಅದಕ್ಕೆ ಕಾರಣ ರೊಮ್ಯಾಂಟಿಕ್‌ ಆಗಿತ್ತು. ತನ್ನ ಸ್ನೇಹಿತ, ನಟ ಹಿಮಾಂಶು ಕೊಹ್ಲಿ ಜೊತೆಗಿನ ತಮ್ಮ ಪ್ರೇಮಸಂಬಂಧವನ್ನು ಅಂದು ನೇಹಾ ಪ್ರಕಟಿಸಿದ್ದರು. ವಾಸ್ತವವಾಗಿ, ಅದೇ ಸೆಟ್‌ನಲ್ಲಿ ನೇಹಾ ಅವರನ್ನು ಕಂಡಿದ್ದ ಹಿಮಾಂಶುಗೆ ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿತ್ತು. ಅಲ್ಲಿಗೆ ಈ ಜೋಡಿಯ ಬಗೆಗಿನ ಗಾಸಿಪ್‌ಗಳಿಗೆ ಬ್ರೇಕ್ ಬಿದ್ದಿತ್ತು.

ಹಮ್‌ ಸಫರ್‌ ವಿಡಿಯೊ

ನೇಹಾ–ಹಿಮಾಂಶು ಜೊತೆಯಾಗಿ ಹಾಡಿದ ‘ಹಮ್‌ ಸಫರ್‌’ ಎಂಬ ವಿಡಿಯೊ ಆಲ್ಬಂ ಯೂಟ್ಯೂಬ್‌ನಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿತ್ತು.

ಕೇವಲ ಮೂರ್ನಾಲ್ಕು ತಿಂಗಳ ಹಿಂದಿನ ಸುದ್ದಿಯಿದು. ಈಗ ಇಬ್ಬರೂ ದೂರವಾಗಿದ್ದಾರೆ. ಅಷ್ಟು ಸಾಲದು ಎಂಬಂತೆ ನೇಹಾ ವಿರುದ್ಧ ಟೀಕಾಪ್ರಹಾರ ಅವರನ್ನು ಮಾನಸಿಕವಾಗಿ ಜರ್ಜರಿತಗೊಳಿಸಿದೆ. ನೇಹಾ ಖಿನ್ನತೆಯಿಂದ ಬಳಲುತ್ತಿದ್ದಾರೆ. ಇದನ್ನು ಖುದ್ದಾಗಿ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನೆಗೆಟಿವ್‌ ಜನರಿಗೆ...

‘ನನ್ನನ್ನು ಅದೆಷ್ಟು ನಿಂದಿಸಿದಿರಿ! ನಿಮ್ಮ ಪ್ರಯತ್ನಕ್ಕೆ ಜಯ ಸಿಕ್ಕಿದೆ. ಹೌದು... ನಾನು ಖಿನ್ನತೆಗೊಳಗಾಗಿದ್ದೇನೆ... ಹ್ಯಾಟ್ಸಾಫ್‌ ನಿಮಗೆ’

‘ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ. ಜಗತ್ತಿನಲ್ಲಿರುವ, ಋಣಾತ್ಮಕವಾಗಿ ಚಿಂತಿಸುವ ಎಲ್ಲಾ ಜನರಿಗೂ ಧನ್ಯವಾದಗಳು. ನನ್ನ ಬದುಕಿನಲ್ಲಿ ಕೆಟ್ಟ ದಿನಗಳನ್ನು ಕಾಣುವಂತೆ ಮಾಡುವಲ್ಲಿ ನೀವೆಲ್ಲರೂ ಯಶಸ್ವಿಯಾಗಿದ್ದೀರಿ. ಅಭಿನಂದನೆಗಳು. ನೀವು ಗೆದ್ದಿದ್ದೀರಿ. ಅದೇ ರೀತಿ ನನ್ನ ಕೆಲಸವನ್ನು ಮೆಚ್ಚಿಕೊಂಡವರಿಗೂ ವಂದನೆಗಳು’ ಎಂದು, 30ರ ಹರೆಯದ ನೇಹಾ ನೊಂದು ಹೇಳಿಕೊಂಡಿದ್ದಾರೆ. 

‘ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡದ ಪ್ರತಿಯೊಬ್ಬರಿಗೂ ಈ ಮಾತು ಅನ್ವಯಿಸುತ್ತದೆ, ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡದವರಿಗೂ ನಾನು ಕೃತಜ್ಞಳಾಗಿದ್ದೇನೆ. ನನ್ನ ಬಗ್ಗೆಯಾಗಲಿ ನನ್ನ ಕೆಲಸದ ಬಗ್ಗೆಯಾಗಲಿ ಏನೂ ತಿಳಿದುಕೊಳ್ಳದೆ ಮಾತನಾಡಿ ನನ್ನನ್ನು ಸಂಕಷ್ಟಕ್ಕೆ ತಳ್ಳಿದ ಜನರೇ ಕೇಳಿ... ದಯವಿಟ್ಟು ನನ್ನ ಪಾಡಿಗೆ ಸಂತೋಷವಾಗಿ ಬದುಕಲು ಬಿಡಿ ಎಂದು ಬೇಡಿಕೊಳ್ಳುತ್ತೇನೆ. ನನ್ನ ಖಾಸಗಿ ಬದುಕಿನಲ್ಲಿ ಯಾರೂ ಮಧ್ಯಪ್ರವೇಶಿಸಬೇಡಿ. ನಿಮ್ಮ ಪಾಡಿಗೆ ತೀರ್ಪು ಕೊಡಬೇಡಿ’ ಎಂದು ನೇಹಾ ಅಂತರಾಳದ ನೋವನ್ನು ತೋಡಿಕೊಂಡಿದ್ದಾರೆ.

ಬಾಲಿವುಡ್‌ನಲ್ಲಿ ತಮ್ಮ ಸುಮಧುರ ಕಂಠದ ಮೂಲಕ ಬಹುಬೇಗನೆ ಪ್ರಸಿದ್ಧಿ ಪಡೆದವರು ನೇಹಾ. ರಣವೀರ್‌ ಸಿಂಗ್‌– ಸಾರಾ ಅಲಿ ಖಾನ್‌ ನಟನೆಯ ‘ಸಿಂಬಾ’ ಚಿತ್ರದಲ್ಲಿ ನೇಹಾ ಹಾಡಿದ ‘ಆಂಖ್ ಮಾರೆ’ ಹಾಡು ಹಿಟ್‌ ಆಗಿದೆ.

 ‘ಈ ಯಶಸ್ಸಿನಿಂದ ಕನಸಿನ ಲೋಕದಲ್ಲಿರುವಂತೆ ಭಾಸವಾಗುತ್ತಿದೆ. ನನ್ನನ್ನು ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯಕಿಯಾಗಿ ಬೆಳೆಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ನೇಹಾ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !