ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಫ್ಲಿಕ್ಸ್‌: ಭಾರತದತ್ತ ದೊಡ್ಡ ನೋಟ!

Last Updated 13 ಡಿಸೆಂಬರ್ 2019, 11:21 IST
ಅಕ್ಷರ ಗಾತ್ರ

ಭಾರತದಲ್ಲಿ ಈಗಾಗಲೇ ಗಟ್ಟಿ ನೆಲೆ ಕಂಡುಕೊಂಡಿರುವ ನೆಟ್‌ಫ್ಲಿಕ್ಸ್‌ ಕಂಪನಿಯು, ಭಾರತದಲ್ಲಿ ಇನ್ನಷ್ಟು ಹೊಸ ಮನರಂಜನಾ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಅವುಗಳನ್ನು ಜಾಗತಿಕ ವೀಕ್ಷಕರಿಗೆ ತಲುಪಿಸುವ ಆಲೋಚನೆ ಹೊಂದಿದೆ. ಈ ವಿಚಾರವನ್ನು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರೀಡ್ ಹೇಸ್ಟಿಂಗ್ಸ್‌ ಅವರೇ ತಿಳಿಸಿದ್ದಾರೆ.

ಭಾರತದಲ್ಲಿನ ನಿಯಮಗಳಲ್ಲಿ ಮತ್ತೆ ಮತ್ತೆ ಬದಲಾವಣೆಗಳು ಆಗುವುದಿಲ್ಲ, ಆಗುವ ಬದಲಾವಣೆಗಳು ಕೂಡ ನಿರೀಕ್ಷಿತ ರೀತಿಯಲ್ಲಿ ಇರುತ್ತವೆ. ಅಷ್ಟೇ ಅಲ್ಲ, ಇಂಟರ್ನೆಟ್ ಮೂಲಕ ಮನರಂಜನಾ ಕಾರ್ಯಕ್ರಮ ಒದಗಿಸುವ ಒಟಿಟಿ ವೇದಿಕೆಗಳಿಗೆ ಇಲ್ಲಿ ಸ್ವಯಂ ನಿಯಂತ್ರಣ ವಿಧಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಇದು ನೆಟ್‌ಫ್ಲಿಕ್ಸ್‌ ಈ ಆಲೋಚನೆಗೆ ಮುಂದಾಗಲು ಕಾರಣ ಎಂದು ಅವರು ಹೇಳಿದ್ದಾರೆ.

‘ಭಾರತದಲ್ಲಿ ಒಳ್ಳೆಯ ಕಥೆಗಳು ಇವೆ. ಇಂತಹ ಕಥೆಗಳನ್ನು ಬಳಸಿಕೊಳ್ಳಲು ಹಾಗೂ ಅವುಗಳನ್ನು ವಿಶ್ವದ ಇತರ ಕಡೆಗಳಲ್ಲಿನ ವೀಕ್ಷಕರಿಗೆ ತಲುಪಿಸಲು ನಾವು ಹಣ ಹೂಡಿಕೆ ಮಾಡುತ್ತಿದ್ದೇವೆ. ಇಂಟರ್ನೆಟ್‌ ಹತ್ತು ಹಲವು ಕೆಲಸಗಳನ್ನು ಮಾಡುತ್ತದೆ. ಭಾರತದಲ್ಲಿ ಸಿದ್ಧವಾಗುವ ಮನರಂಜನಾ ಕಾರ್ಯಕ್ರಮಗಳನ್ನು ವಿಶ್ವದ ಇತರ ಭಾಗಗಳ ವೀಕ್ಷಕರಿಗೆ ತಲುಪಿಸುವುದು ಕೂಡ ಅದು ಮಾಡುವ ಒಂದು ಕೆಲಸ’ ಎಂದು ಹೇಸ್ಟಿಂಗ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಅವರು ಈ ಎಲ್ಲ ಸಂಗತಿಗಳನ್ನು ಹಂಚಿಕೊಂಡಿದ್ದು ನೆಟ್‌ಫ್ಲಿಕ್ಸ್‌ ಕಂಪನಿಯು ಬಾಲಿವುಡ್ ನಟಿ ಹುಮಾ ಖುರೇಶಿ ಅವರ ಜೊತೆ ಆಯೋಜಿಸಿದ್ದ ಚರ್ಚೆಯೊಂದರಲ್ಲಿ. ಭಾರತದಲ್ಲಿ ಒಟ್ಟು ₹ 3,000 ಕೋಟಿ ಹೂಡಿಕೆ ಮಾಡುವ ಆಲೋಚನೆ ನೆಟ್‌ಫ್ಲಿಕ್ಸ್‌ನದ್ದು.

‘ಭಾರತದಲ್ಲಿ ಸಿದ್ಧಪಡಿಸಿದ ವೆಬ್‌ ಸಿರೀಸ್‌ಗಳಾದ ಲೈಲಾ ಮತ್ತು ಸೇಕ್ರೆಡ್‌ ಗೇಮ್ಸ್‌ಅನ್ನು ವಿಶ್ವದ ಎಲ್ಲೆಡೆ ವೀಕ್ಷಿಸಲಾಯಿತು. ಹಾಗೆಯೇ, ಮೈಟಿ ಲಿಟಲ್‌ ಭೀಮ್‌ ಕಾರ್ಯಕ್ರಮವನ್ನು ಕೂಡ ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಭೀಮ್‌ ಕಾರ್ಯಕ್ರಮವನ್ನು ಬ್ರೆಜಿಲ್, ಕೆನಡಾ ದೇಶಗಳ ಜನರೂ ವೀಕ್ಷಿಸಿದ್ದಾರೆ’ ಎಂದರು ಹೇಸ್ಟಿಂಗ್ಸ್‌.

ಭಾರತದಲ್ಲಿ ಇರುವ ಒಟಿಟಿ ಮನರಂಜನಾ ವೇದಿಕೆಗಳ ಪೈಕಿ ನೆಟ್‌ಫ್ಲಿಕ್ಸ್‌ನ ಚಂದಾ ಮೊತ್ತ ತುಸು ದುಬಾರಿ ಎಂಬ ಮಾತು ಇದೆ. ಆದರೆ, ತನ್ನ ನೆಲೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ನೆಟ್‌ಫ್ಲಿಕ್ಸ್‌ ₹ 199ರ ಯೋಜನೆಯೊಂದನ್ನು ಹೊಂದಿದೆ. ಈ ಯೋಜನೆಯ ಅಡಿ ಚಂದಾದಾರ ಆದವರು ಮೊಬೈಲ್‌ ಮೂಲಕ ಮಾತ್ರ ನೆಟ್‌ಫ್ಲಿಕ್ಸ್‌ ಕಾರ್ಯಕ್ರಮ ವೀಕ್ಷಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT