ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್ ನಿಗೂಢ ಸಾವಿಗೆ ಒಂದು ವರ್ಷ, ಅಭಿಮಾನಿಗಳಿಂದ ನ್ಯಾಯ ಬೇಕು ಎಂಬ ಅಭಿಯಾನ

ಸುಶಾಂತ್‌ ಸಾವಿಗೆ ನ್ಯಾಯ ಸಿಗುವುದು ಯಾವಾಗ?
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಸಾವು ಸಂಭವಿಸಿ ನಾಳೆಗೆ (ಜೂನ್ 14) ಒಂದು ವರ್ಷವಾಗಲಿದೆ.

ಒಬ್ಬ ಪ್ರತಿಭಾವಂತ ನಟನಾಗಿ ಬೆಳೆಯುತ್ತಿದ್ದ ಸುಶಾಂತ್ ಸಾವು ಆತ್ಮಹತ್ಯೆಯೋ ಕೊಲೆಯೋ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ಸಿಬಿಐ, ಇಡಿ, ಎನ್‌ಸಿಬಿ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿವೆಯಾದರೂ ಸತ್ಯ ಬಹಿರಂಗಗೊಂಡಿಲ್ಲ.

ಈ ಹಿನ್ನೆಲೆಯಲ್ಲಿ ಇಂದು ನೆಟ್ಟಿಗರು ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸುಶಾಂತ್‌ಗೆ ನ್ಯಾಯ ಸಿಗಬೇಕು ಎಂದು ಜಸ್ಟಿಸ್ ಫಾರ್ ಸುಶಾಂತ್ ಸಿಂಗ್ ಎಂಬ ಅಭಿಯಾನ ಆರಂಭಿಸಿದ್ದಾರೆ. ಟ್ವಿಟರ್‌ನಲ್ಲಿ#SushantSinghRajput ಹ್ಯಾಶ್‌ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಸಿಬಿಐ ಸುಶಾಂತ್ ಹತ್ಯೆ ಸಂಚನ್ನು ಬಯಲಿಗೆಳೆಯವುದು ಯಾವಾಗ? ಎಂದು ಕೆಲವರು ಪ್ರಶ್ನಿಸಿದರೆ, ‘ಸುಶಾಂತ್‌ಗೆ ನ್ಯಾಯ ಸಿಗುವ ಭರವಸೆ ಇದೆ. ಅವರು ಯಾವುದೋ ಸಂಚಿಗೆ ಬಲಿಯಾಗಿದ್ದಾರೆ. ಅವರಿಗೆ ಖಂಡಿತವಾಗಿಯೂ ನ್ಯಾಯ ಸಿಗಬೇಕು‘ ಎಂದು ಟ್ವೀಟ್‌ಗಳನ್ನು ಮಾಡಿದ್ದಾರೆ.

ಸುಶಾಂತ್ ಸಾವು ಸಂಭವಿಸಿದ ಬಳಿಕ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇದೊಂದು ಆತ್ಮಹತ್ಯೆ ಎಂದು ಹೇಳಿದ್ದರು. ಆದರೆ, ಸುಶಾಂತ್ ಅವರ ತಂದೆ ಇದೊಂದು ಕೊಲೆ ಇದನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

ಮನವಿ ಪರಿಗಣಿಸಿದ್ದ ಸುಪ್ರೀಂ, ಆಗಸ್ಟ್‌ 19 ರಂದು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ತನಿಖೆ ನಂತರ ಪ್ರಕರಣದಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಹೆಸರು ಕೇಳಿ ಬಂದಿದ್ದರಿಂದ ಅವರನ್ನು ಬಂಧಿಸಲಾಗಿತ್ತು. ಅಲ್ಲದೇ ಡ್ರಗ್ಸ್‌ನಿಂದ ಸುಶಾಂತ್ ಸಾವು ಸಂಭವಿಸಿದೆ ಎಂಬ ಮಾತು ಕೇಳಿ ಬಂದಿದ್ದರಿಂದ ಎನ್‌ಸಿಬಿ ಕೂಡ ಪ್ರಕರಣ ದಾಖಲಿಸಿಕೊಂಡು ರಿಯಾ ಸೇರಿದಂತೆ ಇನ್ನಿತರ ಐವರನ್ನು ವಿಚಾರಣೆ ನಡೆಸಿತ್ತು.

ಬಾಲಿವುಡ್ ಮಂದಿಯಿಂದ ಹಣಕಾಸಿನ ವಿಚಾರವಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿದ್ದರಿಂದ ಜಾರಿ ನಿರ್ದೇಶನಾಲಯವು ಕೂಡ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಆದರೆ ಇನ್ನೂ ಕೂಡ ಯಾವುದೇ ತನಿಖಾ ಸಂಸ್ಥೆಗಳಿಂದ ಅಂತಿಮ ವರದಿ ಬಂದಿಲ್ಲ. ಸಿಬಿಐ ರಿಯಾ ಚಕ್ರವರ್ತಿ ಹೆಸರು ಉಲ್ಲೇಖಿಸಿ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಆದರೆ, ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ಸಿಬಿಐ ಕೂಡ ಇದು ಕೊಲೆಯೋ ಆತ್ಮಹತ್ಯೆಯೋ ಎಂಬುದನ್ನು ಹೇಳಿಲ್ಲ. ಈ ಹಿನ್ನೆಲೆಯಲ್ಲಿ ರಿಯಾಗೆ ಕೋರ್ಟ್‌ನಿಂದ ಜಾಮೀನು ದೊರಕಿದೆ.

ಸುಶಾಂತ್ ಬಾಲಿವುಡ್‌ನಲ್ಲಿ ಬೆಳೆಯುತ್ತಿದ್ದ ಒಬ್ಬ ಪ್ರತಿಭಾವಂತ ನಟರಾಗಿದ್ದರು, ಅವರು ಎಂ.ಎಸ್.ಧೋನಿ, ಕೇದಾರನಾಥ, ಚಿಂಚೋರೆ ಸೇರಿದಂತೆ ಅನೇಕ ಸೂಪರ್‌ಹಿಟ್‌ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರ ಅಭಿಮಾನಿಗಳು ಇನ್ನೂ ಕೂಡ ಸುಶಾಂತ್‌ ಸಾವಿಗೆ ನ್ಯಾಯ ಸಿಗುವುದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT