ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಕಲ್ಲ: ಸಂಭ್ರಮದ ಅಡ್ಡಪಲ್ಲಕ್ಕಿ ಮಹೋತ್ಸವ

ವಿಜಯಮಹಾಂತ ಶಿವಯೋಗಿಗಳ 107ನೇ ಪುಣ್ಯಸ್ಮರಣೋತ್ಸವ
Last Updated 24 ಮಾರ್ಚ್ 2018, 12:05 IST
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನ ಕರಡಕಲ್ಲ ಗ್ರಾಮದಲ್ಲಿ ಚಿತ್ತರಗಿ ಇಳಕಲ್ಲ ಸಂಸ್ಥಾನದ ವಿಜಯಮಹಾಂತ ಶಿವಯೋಗಿಗಳ 107ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಶುಕ್ರವಾರ ಅಡ್ಡಪಲ್ಲಕ್ಕಿ ಮತ್ತು ಬಸವೇಶ್ವರ ಭಾವಚಿತ್ರದ ಮೆರವಣಿಗೆ ಸಡಗರ, ಸಂಭ್ರಮದಿಂದ ಜರುಗಿತು.

ಪ್ರವಚನಕಾರ ಈಶ್ವರ ಮಂಟೂರು ಸಾರಥ್ಯದಲ್ಲಿ ಒಂದು ತಿಂಗಳು ವಿಜಯ ಮಹಾಂತ ಶಿವಯೋಗಿಗಳ ಜೀವನ ದರ್ಶನ, ಆಧ್ಯಾತ್ಮಿಕ ಪ್ರವಚನದ ಮಂಗಲೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಕೊನೆಯ ದಿನವಾದ ಇಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ, ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಅಡ್ಡಪಲ್ಲಕ್ಕಿಗೆ ವೈವಿಧ್ಯಮಯ ಹೂಗಳಿಂದ, ತಳಿರು ತೋರಣಗಳಿಂದ, ಬೆಳ್ಳಿ ಸಾಮಗ್ರಿಗಳಿಂದ ಅಲಂಕಾರ ಮಾಡಿ ಪಲ್ಲಕ್ಕಿಯಲ್ಲಿ ಶ್ರೀಗಳ ಭಾವಚಿತ್ರ ಪ್ರತಿಷ್ಠಾಪಿಸಲಾಯಿತು. ತೆರೆದ ಅಲಂಕೃತ ವಾಹನದಲ್ಲಿ ವಿಶ್ವಜ್ಯೋತಿ ಬಸವೇಶ್ವರರ ಭಾವಚಿತ್ರ ಪ್ರತಿಷ್ಠಾಪಿಸುತ್ತಿದ್ದಂತೆ ಶಿರೂರಿನ ಬಸವಲಿಂಗ ಸ್ವಾಮೀಜಿ, ಲಿಂಗಸುಗೂರಿನ ಸಿದ್ದಲಿಂಗ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.

ಭಕ್ತರು ಮನೆ ಮುಂದೆ ಪಲ್ಲಕ್ಕಿಗೆ ಪೂಜೆ ಸಲ್ಲಿಸುವ ದೃಶ್ಯ ಕಂಡುಬಂತು. ಮಹಿಳೆಯರು ಕಳಸ, ಕನ್ನಡಿ, ಕುಂಭ ಸಮೇತ ಪಾಲ್ಗೊಂಡಿದ್ದರು.

ದಾವಣಗೆರೆಯ ಬಸವ ಕಲಾ ಲೋಕ ತಂಡದವರಿಂದ ಭಜನೆ ಮತ್ತು ನಂದಿಕೋಲು ನೃತ್ಯ ಗ್ರಾಮಸ್ಥರನ್ನು ಭಕ್ತಿ ಸಾಗರದಲ್ಲಿ ತೇಲಾಡುವಂತೆ ಮಾಡಿತ್ತು.

ನಿಲೋಗಲ್‌ದ ಕಣಿಹಲಗೆ ಮೇಳೆ, ಸುತ್ತಮುತ್ತ ಗ್ರಾಮಗಳ 50ಕ್ಕೂ ಹೆಚ್ಚು ಡೊಳ್ಳುಗಳು ಮೆರವಣಿಗೆಗೆ ಮೆರಗು ನೀಡಿದ್ದವು. ಪ್ರಮುಖ ಬೀದಿಗಳಲ್ಲಿ ಸಾಗಿ ಬಂದ ಪಲ್ಲಕ್ಕಿ ಉತ್ಸವ ಸಂಜೆ ವೇಳೆಗೆ ಶ್ರೀಮಠಕ್ಕೆ ಬಂದು ತಲುಪಿತು.

ಈಶ್ವರ ಮಂಟೂರು, ಮುಖಂಡರಾದ ಭೂಪನಗೌಡ ಕರಡಕಲ್ಲ, ಗಿರಿಮಲ್ಲನಗೌಡ ಪಾಟೀಲ, ಸಿದ್ದನಗೌಡ, ನಾಗಯ್ಯ ಸೊಪ್ಪಿಮಠ, ಬಸನಗೌಡ, ಶರಣಗೌಡ, ಶಿವಾನಂದ, ಶರಣಪ್ಪ ಸುಂಕದ, ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT