ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲೆ ಸೇರಿದ ‘ಹೈಟೆಕ್’ ಭದ್ರತೆ ಪ್ರಸ್ತಾವ!

ನಾಲ್ಕು ಕಟ್ಟಡಗಳ ಭದ್ರತೆ ಬಿಗಿಗೊಳಿಸಲು ವರದಿ ಕೊಟ್ಟಿದ್ದ ಪೊಲೀಸರು
Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್ ಹಾಗೂ ಹೈಕೋರ್ಟ್‌ ಕಟ್ಟಡಗಳ ಭದ್ರತಾ ವ್ಯವಸ್ಥೆಯನ್ನು ಆಧುನೀಕರಣ ಮಾಡಬೇಕು ಎಂದು ಪೊಲೀಸ್ ಅಧಿಕಾರಿಗಳು ಗೃಹ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವ ಮೂರು ವರ್ಷಗಳಿಂದ ದೂಳು ತಿನ್ನುತ್ತಿದೆ.

‘ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಭದ್ರತಾ ಸಲಕರಣೆಗಳನ್ನು ಅಳವಡಿಸಿ ಎಂಟು ವರ್ಷಗಳು ತುಂಬಿವೆ. ಅವುಗಳನ್ನು ತೆಗೆದು ಹಾಕಿ ಆಧುನಿಕ ಉಪಕರಣಗಳನ್ನು ಅಳವಡಿಸಬೇಕಿದೆ. ಜತೆಗೆ ಹೈಕೋರ್ಟ್ ಹಾಗೂ ಬಹುಮಹಡಿ ಕಟ್ಟಡದ ಭದ್ರತೆಯನ್ನೂ ಹೈಟೆಕ್ ಮಾಡಬೇಕಿದೆ’ ಎಂದು 2015ರ ಜನವರಿಯಲ್ಲೇ ಅಧಿಕಾರಿಗಳು ಸರ್ಕಾರಕ್ಕೆ ಹೇಳಿದ್ದರು.

ಪ್ರಸ್ತಾವ ಹೀಗಿತ್ತು: ವಿಧಾನಸೌಧ, ವಿಕಾಸಸೌಧದಲ್ಲಿ ಸದ್ಯ 141 ಸಿ.ಸಿ ಟಿ.ವಿ ಕ್ಯಾಮೆರಾಗಳಿವೆ. ಪ್ರವೇಶ ದ್ವಾರಗಳಲ್ಲಿ 12 ಲೋಹ ಶೋಧಕಗಳು ಹಾಗೂ 50 ಹ್ಯಾಂಡ್ ಹೋಲ್ಡ್ ಶೋಧಕಗಳಿವೆ. ಅವುಗಳಲ್ಲಿ ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈಗಿರುವ ಉಪಕರಣಗಳೆಲ್ಲ 2007ರಲ್ಲಿ ಅಳವಡಿಸಿದವು. ಆ ನಂತರ ಏಳು ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ತಂದಿಟ್ಟಿದ್ದನ್ನು ಬಿಟ್ಟರೆ, ಇನ್ಯಾವ ಸಲಕರಣೆಗಳೂ ಬಂದಿಲ್ಲ.

ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಜನ ಬಂದು ಹೋಗುತ್ತಾರೆ. ಭದ್ರತೆಗೆ ಇರುವ 150 ಪೊಲೀಸರು, ಅಷ್ಟೂ ಜನರ ಮೇಲೆ ನಿಗಾ ಇಡಲು ಸಾಧ್ಯವಿಲ್ಲ. ಹೀಗಾಗಿ, ಆವರಣದ ಸುತ್ತಲೂ 12 ವೀಕ್ಷಣಾ ಗೋಪುರಗಳನ್ನು ನಿರ್ಮಿಸಬೇಕು. ಸುತ್ತಲೂ ಪೆಟ್ರೋಲಿಂಗ್ ಫುಟ್‌ಪಾತ್ ನಿರ್ಮಿಸಬೇಕು. ಸಿಬ್ಬಂದಿ ಶಸ್ತ್ರಾಸ್ತ್ರ ಹಿಡಿದು 24 ತಾಸೂ ಅಲ್ಲಿ ಗಸ್ತು ತಿರುಗುತ್ತಿರಬೇಕು.

ಪ್ರತಿದಿನ ಸುಮಾರು 2,500 ವಾಹನಗಳು ವಿಧಾನಸೌಧದ ಆವರಣಕ್ಕೆ ಬಂದು ಹೋಗುತ್ತಿವೆ. ಅವುಗಳನ್ನೆಲ್ಲ ತಪಾಸಣೆ ನಡೆಸುವುದರಿಂದ ಸಿಬ್ಬಂದಿಯ ಶ್ರಮ ಹೆಚ್ಚಾಗುತ್ತಿದೆ. ಹೀಗಾಗಿ, ಆ ವಾಹನಗಳಿಗೆ ಬಾರ್‌ ಕೋಡ್ ನೀಡಬೇಕು. ಆಗ ವಾಹನ ಬರುತ್ತಿದ್ದಂತೆಯೇ ಗೇಟ್  ತಾನಾಗೇ ತೆರೆದುಕೊಳ್ಳುತ್ತದೆ.

ವ್ಯಕ್ತಿಗಳ ಚಹರೆ ಗುರುತಿಸುವಂಥ (ಫೇಸ್‌ ರೆಕಗ್ನಿಷನ್) ಡಿಜಿಟಲ್ ಕ್ಯಾಮೆರಾ ಅಳವಡಿಸಬೇಕು. ಶಂಕಿತ ಉಗ್ರರು ಹಾಗೂ ಅಪರಾಧ ಹಿನ್ನೆಲೆಯ ವ್ಯಕ್ತಿಗಳ ಭಾವಚಿತ್ರಗಳನ್ನು ನಾವು ಕಂಪ್ಯೂಟರ್‌ಗಳಲ್ಲಿ ಹಾಕಿರುತ್ತೇವೆ. ವಿಧಾನಸೌಧದ ಆವರಣದಲ್ಲಿ ಅಳವಡಿಸಲಾಗುವ ಕ್ಯಾಮೆರಾಗಳು, ಈ ಕಂಪ್ಯೂಟರ್‌ಗಳ ಜತೆ ಸಂಪರ್ಕ ಹೊಂದಿರುತ್ತವೆ. ಅದೇ ಚಹರೆ ಹೋಲುವ ವ್ಯಕ್ತಿ ವಿಧಾನಸೌಧ ಸುತ್ತಮುತ್ತ ಕಾಣಿಸಿಕೊಂಡರೆ, ನಿಯಂತ್ರಣ ಕೊಠಡಿಯಲ್ಲಿರುವ ಅಲಾರಂ ಕೂಗಿಕೊಳ್ಳುತ್ತದೆ. ಅಂದಾಜು ₹ 10 ಕೋಟಿ ವೆಚ್ಚದಲ್ಲಿ ಇಷ್ಟೂ ಭದ್ರತಾ ಕ್ರಮಗಳನ್ನು ಅಳವಡಿಸಬಹುದು ಎಂದು ಹೇಳಲಾಗಿತ್ತು.

ಲೋಕಾಯುಕ್ತ ಸಂಸ್ಥೆಗೆ: ‘ಬಹುಮಹಡಿ ಕಟ್ಟಡದಲ್ಲಿರುವ ಲೋಕಾಯುಕ್ತ ಕಚೇರಿಗೆ ನಾಲ್ಕು ಮೆಟಲ್ ಡಿಟೆಕ್ಟರ್‌, 10 ಹ್ಯಾಂಡ್ ಹೋಲ್ಡ್ ಡಿಟೆಕ್ಟರ್, 35 ಸಿ.ಸಿ ಟಿ.ವಿ ಕ್ಯಾಮೆರಾಗಳು, ಒಂದು ಬ್ಯಾಗೇಜ್ ಸ್ಕ್ಯಾನರ್, ಸ್ಮಾರ್ಟ್‌ ಕಾರ್ಡ್‌ ಆ್ಯಕ್ಸಸ್ ಸೆಂಟರ್ (ಕಚೇರಿ ಸಿಬ್ಬಂದಿ ನೀಡುವ ಕಾರ್ಡ್ ತೋರಿಸಿದರೆ ಮಾತ್ರ ಬಾಗಿಲು ತೆರೆಯುವ) ಉಪಕರಣಗಳನ್ನು ಅಳವಡಿಸಲು ಪ್ರಸ್ತಾವದಲ್ಲಿ ಹೇಳಿದ್ದೆವು’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT