ಅಭಿವ್ಯಕ್ತಿ ಸ್ವಾತಂತ್ರ್ಯದ ಕಂಟಕಕ್ಕೆ ಸಿನಿಸ್ಪಂದನ

7

ಅಭಿವ್ಯಕ್ತಿ ಸ್ವಾತಂತ್ರ್ಯದ ಕಂಟಕಕ್ಕೆ ಸಿನಿಸ್ಪಂದನ

Published:
Updated:

ಬಂಡಾಯ ಸಾಹಿತ್ಯದ ಮುಂಚೂಣಿ ಲೇಖಕರಾದ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ಸಾಹಿತ್ಯದಷ್ಟೇ ಸಿನಿಮಾವನ್ನೂ ಬಳಸಿಕೊಂಡವರು. ಅವರು ಇತ್ತೀಚೆಗೆ ನಿರ್ದೇಶಿಸಿದ್ದ ‘ಮೂಕ ನಾಯಕ’ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿತ್ತು. ಇದೀಗ ಬರಗೂರು ಇನ್ನೊಂದು ಸಿನಿಮಾ ಕೈಗೆತ್ತಿಕೊಂಡು ಸದ್ದಿಲ್ಲದೆ ಚಿತ್ರೀಕರಣವನ್ನೂ ಮುಗಿಸಿದ್ದಾರೆ.

ಬರಗೂರರ ಹೊಸ ಸಿನಿಮಾದ ಹೆಸರು ‘ಬಯಲಾಟದ ಭೀಮಣ್ಣ’. ಇಪ್ಪತ್ತು ವರ್ಷಗಳ ಹಿಂದೆ ಅವರೇ ಬರೆದಿದ್ದ ನೀಳ್ಗತೆಯೊಂದನ್ನು ಈಗ ಸಿನಿಮಾ ಮಾಧ್ಯಮಕ್ಕೆ ಅಳವಡಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಬರೆದ ಕಥೆಯನ್ನು ಈಗ ಸಿನಿಮಾ ಮಾಡಬೇಕು ಎಂದು ಅನಿಸಿದ್ಯಾಕೆ? ಈ ಪ್ರಶ್ನೆಗೆ ಕಥೆಯಲ್ಲಿಯೇ ಉತ್ತರವಿದೆ ಎನ್ನುತ್ತಾರೆ ಅವರು.

‘ದಕ್ಷಿಣ ಕನ್ನಡದಲ್ಲಿ ಯಕ್ಷಗಾನ ಹೇಗೋ, ಹಾಗೆ ಬಯಲುಸೀಮೆಯಲ್ಲಿ ಇರುವಂಥ ಕಲೆ ಬಯಲಾಟ. ನಾನು ಚಿಕ್ಕಂದಿನಿಂದ ಬಯಲಾಟವನ್ನು ನೋಡುತ್ತ ಬಂದವನು. ಅದರಲ್ಲಿ ಪಾತ್ರವನ್ನೂ ಮಾಡಿದ್ದೆ ಒಮ್ಮೆ. ಇಂಥ ಬಯಲಾಟದ ಕಲಾವಿದನ ಬದುಕು ಮತ್ತು ಅವನ ಅಭಿವ್ಯಕ್ತಿಗೆ ಅಡ್ಡಬರುವ ಸಂಗತಿಗಳನ್ನು ಇಟ್ಟುಕೊಂಡು ಒಂದು ಕಥೆ ಬರೆದಿದ್ದೆ’ ಎಂದು ಕಥನದ ಹಿನ್ನೆಲೆಯನ್ನು ವಿವರಿಸುವ ಅವರು ಆ ಕಥೆ ಇಂದು ಹೇಗೆ ಸಮಕಾಲೀನ ಆಗುತ್ತದೆ ಎನ್ನುವುದನ್ನೂ ವಿವರಿಸುತ್ತಾರೆ.

ಬಯಲಾಟದ ಕಲಾವಿದನ ಬದುಕನ್ನು ಕುರಿತ ಸಿನಿಮಾ ಮಾಡಬೇಕು ಎಂಬುದು ಒಂದು ಉದ್ದೇಶ. ಆದರೆ ಈ ಕಥೆಯಲ್ಲಿ ಇನ್ನೊಂದು ಅಂಶವೂ ಇದೆ. ಕಥೆಯ ಸಾರಾಂಶ ಹೀಗಿದೆ: ‘ರಾಮು ಅಂತ ಹಳ್ಳಿಯ ಯುವಕ ಇರುತ್ತಾನೆ. ಅದೇ ಹಳ್ಳಿಯಲ್ಲಿ ಬಯಲಾಟ ಆಡುವ ಒಬ್ಬ ಕಲಾವಿದನೂ ಇರುತ್ತಾನೆ. ನಮ್ಮ ಹಳ್ಳಿಗಳಲ್ಲಿ ಬಯಲಾಟ ಮಾಡುವವರು ಬಹುತೇಕ ಅನಕ್ಷರಸ್ಥರು. ಸಾಮಾಜಿಕ ನಾಟಕ ಮಾಡುವಂಥವರು ವಿದ್ಯಾವಂತರು. ಬಯಲಾಟದ ಕಲಾವಿದನಿಗೆ ವಿದ್ಯಾವಂತ ರಾಮು ಬರೆದ ಸಾಮಾಜಿಕ ನಾಟಕದಲ್ಲಿ ಅಭಿನಯಿಸಬೇಕು ಎಂಬ ಆಸೆ. ಆದರೆ ಆ ನಾಟಕದಲ್ಲಿ ಆ ಊರಿನ ಯಜಮಾನನನ್ನೇ ಹೋಲುವಂಥ ಒಂದು ಪಾತ್ರ ಇರುತ್ತದೆ. ಅದು ಗೊತ್ತಾಗಿ ಆ ಊರಿನ ಯಜಮಾನ ನಾಟಕದಲ್ಲಿನ ತನ್ನ ಕುರಿತಾದ ದೃಶ್ಯಗಳನ್ನು ಕಿತ್ತು ಹಾಕಬೇಕು, ಇಲ್ಲದಿದ್ದರೆ ನಾಟಕ ಆಡಲು ಅವಕಾಶ ಕೊಡುವುದಿಲ್ಲ ಎಂದು ಹೇಳುತ್ತಾನೆ. ಕಲಾವಿದನಿಗೆ ನಿರಾಶೆಯಾಗಿ ಮತ್ತೆ ಬಯಲಾಟವನ್ನೇ ಆಡಲು ಶುರುಮಾಡುತ್ತಾನೆ’. 

ಬಯಲಾಟದ ಕಲಾವಿದನ ಆಸೆ ಆಕಾಂಕ್ಷೆಗಳನ್ನು ಹೇಳುತ್ತಲೇ ಇಂದು ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಉಂಟಾಗುತ್ತಿರುವ ಧಕ್ಕೆಯ ಸಂಗತಿಯನ್ನೂ ಹೇಳುವ ಇರಾದೆ ನಿರ್ದೇಶಕರಿಗಿದೆ. ಹೀಗೆ ಸಮಕಾಲೀನ ವಿದ್ಯಮಾನವೊಂದರ ಕುರಿತು ಸ್ಪಂದನ ನೀಡುವುದು ಸಾಧ್ಯ ಎನ್ನುವುದೇ ಈ ಕಥೆಯನ್ನು ಸಿನಿಮಾ ಮಾಡುತ್ತಿರುವುದಕ್ಕೆ ಮುಖ್ಯ ಕಾರಣ. ಇಂದು ಸೃಜನಶೀಲ ಸ್ವಾತಂತ್ರ್ಯಕ್ಕೆ ಇರುವ ಸವಾಲುಗಳ ಕುರಿತು ಹೇಳುವುದಕ್ಕಾಗಿ ಮೂಲಕಥೆಯಲ್ಲಿ ಕೊಂಚ ಬದಲಾವಣೆಯನ್ನೂ ಅವರು ಮಾಡಿಕೊಂಡಿದ್ದಾರೆ. ‘ಇದು ಹಳ್ಳಿಯಲ್ಲಿ ನಡೆಯುವ ಕಥೆಯಾಗಿದ್ದರೂ, ಅದನ್ನು ಒಂದು ರೂಪಕವಾಗಿ ಇಡೀ ದೇಶಕ್ಕೇ ಅನ್ವಯಿಸಬಹುದು’ ಎನ್ನುತ್ತಾರೆ.

ಹಳ್ಳಿ ಯುವಕನ ಪಾತ್ರವನ್ನು ರಂಜಿತ್ ಎಂಬ ಹೊಸ ಹುಡುಗ ನಿರ್ವಹಿಸಿದ್ದಾರೆ. ಬಯಲಾಟದ ಕಲಾವಿದನಾಗಿ ಸುಂದರ್‌ರಾಜ್ ಕಾಣಿಸಿಕೊಂಡಿದ್ದಾರೆ. ‘ಮೂಕ ನಾಯಕ’ ಚಿತ್ರದಲ್ಲಿ ನಟಿಸಿದ್ದ ರೇಖಾ ಕೂಡ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಹನುಮಂತೇಗೌಡ, ಪ್ರಮೀಳಾ ಜೋಷಾಯ್, ರಾಧಾ ರಾಮಚಂದ್ರ, ರಕ್ಷಿತಾ, ವತ್ಸಲಾ, ಅಂಬರೀಶ್ ಸಾರಂಗಿ, ಶಿವಲಿಂಗ ಪ್ರಸಾದ್ ತಾರಾಗಣದಲ್ಲಿದ್ದಾರೆ.

ರಾಜೇಶ್ವರಿ ಪ್ರೊಡಕ್ಷನ್ ಅಡಿಯಲ್ಲಿ ಕೃಷ್ಣವೇಣಿ ಮತ್ತು ಧನಲಕ್ಷ್ಮಿ ಈ ಚಿತ್ರಕ್ಕ ಹಣ ಹೂಡಿದ್ದಾರೆ.

ರಾವಗೋಡ್ಲು ಎಂಬ ಹಳ್ಳಿಯಲ್ಲಿ ಈ ಚಿತ್ರದ ಬಹುಭಾಗವನ್ನು ಚಿತ್ರೀಕರಿಸಲಾಗಿದೆ. ಬಯಲಾಟದ ದೃಶ್ಯಾವಳಿಗಳನ್ನು ಮಧುಗಿರಿ ಸಮೀಪದ ಚಿಕ್ಕಮಾಲೂರು ಎಂಬ ಹಳ್ಳಿಯಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.

ಹಾಡುಗಳಲ್ಲಿ ಹೊಸ ಪ್ರಯೋಗ
ಬಯಲಾಟದ ಭೀಮಣ್ಣ ಚಿತ್ರದಲ್ಲಿನ ನಾಲ್ಕು ಹಾಡುಗಳಿಗೆ ಶಮಿತಾ ಮಲ್ನಾಡ್ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಂಬಂಧಿಸಿದಂತೆ ಇನ್ನೊಂದು ವಿಶೇಷ ಪ್ರಯೋಗವನ್ನೂ ಬರಗೂರು ಮಾಡಿದ್ದಾರೆ. ಚಿತ್ರದ ನಾಲ್ಕು ಹಾಡುಗಳನ್ನೂ ಗಾಯಕರಾಗಿ ಗುರ್ತಿಸಿಕೊಂಡಿರದವರಿಂದಲೇ ಹಾಡಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ತನ್ನ ಹಾಡಿನ ಮೂಲಕ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾದ ಕುರಿ ಕಾಯುವ ಹುಡುಗ ಹನುಮಂತಪ್ಪ ಈ ಚಿತ್ರದ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನೊಂದು ಹಾಡನ್ನು ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಹಾಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನೊಂದು ಹಾಡನ್ನು ಹಾಡಿದ್ದಾರೆ. ಹಾಗೆಯೇ ಬಯಲಾಟದ ನಾಟಕದ ಹಾಡೊಂದನ್ನು ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಈ ಹಾಡನ್ನು ಹಿರಿಯ ನಟ ಸುಂದರ್‌ರಾಜ್ ಹಾಡಿದ್ದಾರೆ.


ಬರಗೂರ ರಾಮಚಂದ್ರಪ್ಪ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !