ಶುಕ್ರವಾರ, ಅಕ್ಟೋಬರ್ 18, 2019
20 °C

ಮೀನಾ ಬಜಾರಿನ ಮೇಲೆ ಎಲ್ಲರ ಕಣ್ಣು

Published:
Updated:

ಪಡ್ಡೆ ಹುಡುಗರು, ಕಾಲೇಜು ಪೋರರು, ಐ.ಟಿ ಉದ್ಯಮದವರು ಹಾಗೂ ಕುಟುಂಬ ಪ್ರೇಕ್ಷಕರ ಮೇಲೂ ಗಮನ ಕೇಂದ್ರೀಕರಿಸಿ ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಿಸಿರುವ ‘WWW.ಮೀನಾ ಬಜಾರ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

ಕ್ರೈಮ್, ಲವ್, ಸೆಂಟಿಮೆಂಟ್ ಹೀಗೆ ಎಲ್ಲಾ ಬಗೆಯ ಕಮರ್ಷಿಯಲ್ ಅಂಶಗಳು ಈ ಚಿತ್ರದಲ್ಲಿ ಮಿಳಿತಗೊಂಡಿವೆಯಂತೆ. ಈ ಚಿತ್ರದ ಕನ್ನಡ ಅವತರಣಿಕೆಗೆ ಚಲನಚಿತ್ರ ಪ್ರಮಾಣೀಕೃತ ಮಂಡಳಿ ‘ಎ’ ಪ್ರಮಾಣ ಪತ್ರ ನೀಡಿದ್ದರೆ, ತೆಲುಗು ಅವತರಣಿಕೆಗೆ ‘ಯು/ಎ’ ಪ್ರಮಾಣ ಪತ್ರ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಸಾಫ್ಟ್‌ವೇರ್‌  ಕ್ಷೇತ್ರದ ಮೂವರು ಉದ್ಯೋಗಿಗಳು ಚಿತ್ರದ ಟೀಸರ್ ಬಿಡುಗಡೆ ಮಾಡಿದರೆ, ಬೆಂಗಳೂರಿನ ವಿಜಯ ಕಾಲೇಜಿನ ವಿದ್ಯಾರ್ಥಿಗಳು ಪೋಸ್ಟರ್‌ ಬಿಡುಗಡೆ ಮಾಡಿದರು. ‘ಇದು ಸರಿಯಾದ ಸಮಯ ಮತ್ತು ಸಮಯಕ್ಕೆ ಸರಿಯಾದ ಸಿನಿಮಾ WWW.ಮೀನಾ ಬಜಾರ್’ ಎಂದು ಮಾತು ಆರಂಭಿಸಿದ ನಿರ್ದೇಶಕ ರಾಣಾ ಸುನೀಲ್ ಕುಮಾರ್ ಸಿಂಗ್, ಈ ಸಿನಿಮಾದ ಶೀರ್ಷಿಕೆ ಹೇಳುವಾಗ ಕೊನೆಯಲ್ಲಿ ಡಾಟ್‌ ಕಾಮ್‌ ಎನ್ನುತ್ತಾರೆ. ಇದು ಡಾಟ್‌ ಕಾಮಾ, ಕಾಮ ಅಂದರೆ ಸೆಕ್ಸ್‌ ಇರಬಹುದು, ಬಯಕೆಯೂ ಆಗಿರಬಹುದು ಅಥವಾ ಮುಂದುವರಿದ ಭಾಗವಾದರೂ ಆಗಬಹುದು. ಈ ಶೀರ್ಷಿಕೆ ಸುಖಸುಮ್ಮನೆ ಹುಟ್ಟಿದ್ದಲ್ಲ. ಸಿನಿಮಾ ಕಥೆಯ ಅರ್ಥಗರ್ಭಿತಕ್ಕೆ ಅನುಗುಣವಾದದ್ದು’ ಎಂದರು.

‘ಸರಿಯಾದ ಸಮಯ ಎಂದರೆ ಇಂದಿನ ಸಿನಿಮಾ ಪ್ರೇಕ್ಷಕ ಹೊಸತನ್ನು ಹುಡುಕುತ್ತಿದ್ದಾನೆ ಮತ್ತು ನಿರ್ದೇಶಕ ಪ್ರೇಕ್ಷಕನ ಹುಡುಕಾಟಕ್ಕೆ ಸ್ಪಂದಿಸುತ್ತಿದ್ದಾನೆ ಎಂದರ್ಥ. ಇದು ಪರಿಪೂರ್ಣ ನಿರ್ದೇಶಕನ ಸಿನಿಮಾ. ಇಲ್ಲಿ ಪಾತ್ರಗಳು ಮತ್ತು ಸನ್ನಿವೇಶಗಳೇ ಹೀರೊ. ಅಷ್ಟೇ ಅಲ್ಲ, ಸ್ವತಃ ನಿರ್ದೇಶಕನೇ ಪ್ರೇಕ್ಷಕನ ಭಾಗವಾಗಿದ್ದು, ಹೊಸ ಆಯಾಮಗಳಿಗೆ ತೆರೆದುಕೊಳ್ಳುತ್ತಾನೆ’ ಎನ್ನುವ ಮಾತು ಸೇರಿಸಿದರು ಅವರು. 

ರಾಣಾ ಸುನೀಲ್ ಕುಮಾರ್ ಸಿಂಗ್ ಈ ಹಿಂದೆ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಅನುಭವಿ. ಮೀನಾ ಬಜಾರ್ ಮೂಲಕ ಸಿನಿಮಾ ನಿರ್ದೇಶಕನ ಕ್ಯಾಪ್‌ ಧರಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಇದೊಂದು ವಿಭಿನ್ನ ಜಾನರ್‌ ಸಿನಿಮಾ’ ಎನ್ನುವ ಅವರು, ಚಿತ್ರದ ಕಥೆಯ ಗುಟ್ಟು ಬಿಟ್ಟುಕೊಡಲಿಲ್ಲ.

ವೈಭವಿ ಜೋಷಿ, ಶ್ರೀಜಿತಾ ಘೋಷ್, ಆಲಿಷಾ ಆ್ಯಂಡ್ರೇಡ್‌ ನಾಯಕಿಯರಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರವಿಂದ್ ರಾವ್, ಜೀವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಗ್‌ ಸಿನಿಮಾಸ್‌ ಬ್ಯಾನರ್‌ನಡಿ ಸುನೀಲ್ ಕುಮಾರ್ ಸಿಂಗ್ ಸಹೋದರ ನಾಗೇಂದ್ರ ಸಿಂಗ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಮ್ಯಾಥಿವ್‌, ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. 

Post Comments (+)