ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಕ್ಯಾಂಕ’ ಪ್ರಣಯ ಕಥನ

Last Updated 30 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಪ್ರಿಯಾಂಕಾ ಮತ್ತು ನಿಕ್‌ ಜೋನ್ಸ್‌ ಹಸೆಮಣೆ ಏರಲಿದ್ದಾರೆ. ಈ ಕ್ಷಣದಲ್ಲಿ ಅವರ ಪ್ರೇಮಕಥೆ ಆರಂಭವಾದ ಬಗೆಯನ್ನು ‘ವೋಗ್‌’ ಪತ್ರಿಕೆಯ ಸಂದರ್ಶನದಲ್ಲಿ ಹೇಳಿದ್ದಾರೆ.

‘ಕ್ವಾಂಟಿಕೊ ಸರಣಿಯ ಸಂದರ್ಭವದು. ಗ್ರಾಹಂ ರೋಜರ್ಸ್‌ಗೆ ಮೊದಲ ಮೆಸೇಜ್‌ ಕಳಿಸಿದ್ದು. ಪ್ರಿಯಾಂಕಾ ಈಸ್‌ ವಾವ್‌... ಅಂತ. ಅದಾದ ನಂತರ 2016ರ ಸೆಪ್ಟೆಂಬರ್‌ನಲ್ಲಿ ಟ್ವಿಟರ್‌ಗೆ ಇನ್ನೊಂದು ಮೆಸೇಜು ಹರಿಬಿಟ್ಟೆ. ನಾವಿಬ್ಬರೂ ಒಮ್ಮೆ ಭೇಟಿಯಾಗಬೇಕು ಎನ್ನುವುದು ನಮ್ಮಿಬ್ಬರಿಗೂ ಪರಿಚಿತರಾಗಿರುವವರ ಅಭಿಪ್ರಾಯವಾಗಿದೆ ಎಂದು.ಆ ಸಂದೇಶಕ್ಕೆ ಪ್ರಿಯಾಂಕಾ ಒಂದಿಡೀ ದಿನ ಪ್ರತಿಕ್ರಿಯಿಸಿರಲಿಲ್ಲ. ನಂತರ ಎರಡನೆಯ ದಿನ ಮತ್ತೊಂದು ಸಂದೇಶ ಮೂಡಿ ಬಂತು. ನನ್ನ ತಂಡ ಈ ಸಂದೇಶಗಳನ್ನು ನೋಡಬಹುದು. ನನಗೇ ಟೆಕ್ಸ್ಟ್‌ ಮಾಡಬಾರದೇಕೆ? ಎಂದು ಫೋನ್‌ ನಂಬರ್‌ ಕಳುಹಿಸಿದರು’

‘ಇದು ನಮ್ಮ ಪ್ರೀತಿ ಆರಂಭವಾದ ಬಗೆ. ಆ ನಂತರದ್ದು.. ಈ ಸಂಭಾಷಣೆ... ಎಂಬ ಹಾಡಿನಂಥದ್ದು. ಅವರಿಬ್ಬರ ನಡುವೆ ಲೆಕ್ಕವಿಲ್ಲದಷ್ಟು ಮೆಸೇಜುಗಳು ಹರಿದಾಡಿದವು. ಈ ಪದಪ್ರೀತಿಯಲ್ಲಿ, ಭಾಷೆ, ದೂರ, ಸಂಸ್ಕೃತಿ ಎಂಬೆಲ್ಲ ಪದಗಳು ಕೊಚ್ಚಿ ಹೋದವು. ಪರಸ್ಪರ ಅರಿಯುವ, ಲೋಕವನ್ನು ನೋಡುವ ಇಬ್ಬರ ದೃಷ್ಟಿಕೋನಗಳು ಒಂದೇ ಮಾರ್ಗವನ್ನು ಸೃಷ್ಟಿಸಿದ್ದವು. ಇಷ್ಟಾದರೂ ನಾವಿಬ್ಬರೂ ಒಮ್ಮೆಯೂ ಮುಖಾಮುಖಿಯಾಗಿ ಭೇಟಿಯಾಗಿರಲಿಲ್ಲ’

‘ನಂತರ ಅದೇ ವರ್ಷದ ಆಸ್ಕರ್‌ ಪ್ರಶಸ್ತಿ ಸಮಾರಂಭವದು. ನಾನು ನನ್ನ ಡ್ರಿಂಕ್‌ನೊಡನೆ ನಿಂತಿದ್ದೆ. ಪ್ರಿಯಾಂಕಾ ಬರುವುದು ಕಾಣಿಸಿತು.. ನೀಲಿ ವೆಲ್ವೆಟ್‌ ಸೂಟ್‌ನಲ್ಲಿದ್ದ ನನ್ನ ಜೇಬಿನಲ್ಲಿ ಬಿಳಿ ಗುಲಾಬಿಯೊಂದಿತ್ತು. ಪ್ರಿಯಾಂಕ ಬಂದೊಡನೆ, ಮೊಣಕಾಲೂರಿ, ಗುಲಾಬಿ ನೀಡುತ್ತ.. ಇಷ್ಟು ದಿನ ಎಲ್ಲಿದ್ದೆ ಎಂದು ಪ್ರಶ್ನಿಸಿದ್ದೆ... ಆ ಜನ, ಜಂಗುಳಿ ಇದ್ಯಾವುದನ್ನೂ ಪರಿಗಣಿಸಿರಲಿಲ್ಲ. ನಾನು ನಾನು ಮಾತ್ರ ಆಗಿದ್ದೆ. ನನಗಾಗಿಯೇ ಪ್ರಿಯಾಂಕಾ ಹೆಜ್ಜೆ ಹಾಕಿದಳೇನೋ ಎಂದೆನಿಸಿತ್ತು. ಮುಂದಿನ ಕೆಲಕ್ಷಣಗಳಲ್ಲಿ ಪ್ರಿಯಾಂಕಾ ಭಾರತಕ್ಕೆ ಹಾರಲಿದ್ದಳು. ನನ್ನೊಟ್ಟಿಗೆ ಒಂದು ಡ್ರಿಂಕ್‌ ಕುಡಿಯಬಹುದಾ ಎನ್ನುವ ನೋಟ ನನ್ನ ಕಂಗಳಲ್ಲಿ. ನಾನು ಆ್ಯಂಜ್‌ ಕಡೆಗೆ ನೋಡಿದೆ. (ಆ್ಯಂಜ್: ಅಂಜುಳಾ ಆಚಾರಿಯಾ ಪ್ರಿಯಾಂಕಾ ಚೋಪ್ರಾ ಮ್ಯಾನೇಜರ್‌) ಆಗ ಪ್ರಿಯಾಂಕಾ ಐದು ನಿಮಿಷ ಎಂದು ಉಲಿದಳು’

‘ಅದಾದ ನಂತರ ನಾವು 2017ರ ಮೆಟ್‌ ಗಾಲಾನಲ್ಲಿ ಭೇಟಿಯಾಗಿದ್ದು. ಅಲ್ಲಿಂದಲೇ ಪ್ರೀತಿ ಆರಂಭವಾಯಿತು, ಅಲ್ಲಿಂದಲೇ ಪರಿಚಯವಾಯಿತು ಎಂದು ಜಗವೆಂದುಕೊಂಡಿದೆ. ಆದರೆ ನಮ್ಮ ಬಾಂಧವ್ಯ ಆರಂಭವಾಗಿದ್ದು 2016ರ ಮಧ್ಯಭಾಗದಿಂದ. ಈ ಗಾಲಾಕ್ಕೆ ಒಂದು ವಾರ ಮೊದಲು ಸಂಜೆ ಒಮ್ಮೆ ಭೇಟಿಯಾಗಿದ್ದೆವು. ಈ ಭೇಟಿಯ ನಂತರ ಪ್ರಿಯಾಂಕಾ ನನ್ನನ್ನು ತಮ್ಮ ಅಪಾರ್ಟ್‌ಮೆಂಟ್‌ಗೆ ಆಹ್ವಾನಿಸಿದ್ದರು. ಪ್ರಿಯಾಂಕಾ ಹಾಗೂ ಅವರ ಅಮ್ಮ ಮಧು ಚೋಪ್ರಾ ಅವರನ್ನು ಭೇಟಿಯಾದ ನಂತರ ಮೆಟ್‌ಗಾಲಾದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಿದ್ದೆವು’

‘ಇದಾದ ನಂತರ ಪ್ರಿಯಾಂಕಾಳನ್ನು ಲೈವ್‌ ಪರ್ಫಾರ್ಮನ್ಸ್‌ಗೆ ಆಹ್ವಾನಿಸಿದ್ದೆ. ಆ ಸಂಜೆಯ ನಂತರ ಮರುದಿನ ಅಮ್ಮನಿಗೆ ಕರೆ ಮಾಡಿದೆ. ಈ ಬಾಲಿವುಡ್‌ ಪಡಸಾಲೆಯ ದೇಸಿ ಹುಡುಗಿಯನ್ನು ಮದುವೆಯಾಗುವ ಬಗ್ಗೆ ತಿಳಿಸಿದೆ. ಈಗ ಜೋಧ್‌ಪುರದಲ್ಲಿ ಸಪ್ತಪದಿ ತುಳಿಯಲಿದ್ದೇವೆ’

ಇದು ನಿಕ್‌ ಕಥೆ. ನಮ್ಮ ಹುಡುಗಿ ಪ್ರಿಯಾಂಕಾ ಈ ಹುಡುಗನನ್ನು ಮೆಚ್ಚಿದ್ದು ಯಾಕೆ ಎಂಬ ಗುಟ್ಟನ್ನೂ ಹೇಳಿದ್ದಾರೆ.

‘ಲಾಸ್‌ಎಂಜಲೀಸ್‌ನಲ್ಲಿ ಆಗಾಗ ಭೇಟಿಯಾದಾಗ, ನಿಕ್‌ ಒಮ್ಮೆ ‘ನೀನು ವಿಶ್ವವನ್ನು ನೋಡುವ ಬಗೆ ನನಗಿಷ್ಟ. ನಿನ್ನ ಮಹತ್ವಾಕಾಂಕ್ಷೆಯೂ ನನಗಿಷ್ಟ’ ಎಂದುಲಿದಿದ್ದ. ಒಬ್ಬ ಹುಡುಗ ಒಂದು ಹುಡುಗಿಯ ಆಂತರ್ಯವನ್ನು ಹೀಗೆ ಮೆಚ್ಚುವುದೇ ಅಪರೂಪ. ಈ ಹುಡುಗ ಚಿತ್ತಾಪಹರಿಸಿದ್ದು ಹೀಗೆ... ನನ್ನೊಳಗಿನ ಲೋಕವನ್ನು ಪ್ರವೇಶಿಸಿದ್ದು ಹೀಗೆ. ನನಗೆ ಬೇರೆಯವರು ಹೇಳಿದ್ದೆಲ್ಲ ಇದಕ್ಕೆ ವಿರುದ್ಧವಾಗಿಯೇ ಇತ್ತು. ಒಬ್ಬ ಮಹಿಳೆಯನ್ನು ಹೀಗೆ ಗೌರವಿಸುವ, ಪ್ರೀತಿಸುವ ವ್ಯಕ್ತಿಯನ್ನು ನೋಡಿದ್ದು, ನಿಕ್‌ನಲ್ಲಿ. ನನಗೇನಾಗಿದೆ.. ಏನಾಗುತ್ತಿದೆ.. ಅದೊಂದು ವಿಶೇಷ ಅನುಭೂತಿಯಾಗಿತ್ತು. ಪದಗಳಲ್ಲಿ ಹೇಳಲಾಗದು. ಕೆನ್ನೆ ಕೆಂಪೇರುವಂತೆ ಈ ಹುಡುಗ ಮಾಡಿದ್ದ’

‘ನನ್ನ ಹುಟ್ಟು ಹಬ್ಬದ ದಿನ. ನನಗಾಗಿಯೇ ಖರೀದಿಸಿದ್ದ ವಜ್ರದುಂಗುರ ನಿಕ್ ಕೈಯಲ್ಲಿತ್ತು. ಮಧ್ಯರಾತ್ರಿಯ ನಂತರ ಮತ್ತೊಮ್ಮೆ ಈ ಹುಡುಗ ನನ್ನ ಮುಂದೆ ಮಂಡಿಯೂರಿದ್ದ. ಪ್ರಪಂಚದ ಅತಿ ಸುಖಿ ಪುರಷನನ್ನಾಗಿಸು, ನನ್ನ... ಮದುವೆಯಾಗುವೆಯಾ? ಅರ್ತನಾಗಿದ್ದ... ನಾನು ಮೂಕಳಾಗಿದ್ದೆ. ಬರೋಬ್ಬರಿ 45 ಸೆಕೆಂಡುಗಳಷ್ಟು ಕಾಲ.. ಮಂಡಿಯೂರಿದ್ದ.. ನಂತರ ಮತ್ತೊಮ್ಮೆ ಕೇಳಿದ.. ನಿನ್ನ ಒಪ್ಪಿಗೆಯಿದ್ದರೆ ನಿನ್ನ ಬೆರಳುಗಳಿಗೆ ಉಂಗುರ ತೊಡಿಸುವೆ... ಬಿಟ್ಟಕಣ್ಣುಗಳಿಂದ ನಿಕ್‌ನನ್ನೇ ನಿರುಕಿಸುತ್ತಿದ್ದೆ. ಪದಗಳೇ ಇರಲಿಲ್ಲ. ನಿಧಾನವಾಗಿ ಕೈ ಬೆರಳು ಮುಂಚಾಚಿದೆ’.

ಇದೀಗ ಮೂರು ದಿನಗಳ ಮದುವೆಯ ಸಂಭ್ರಮದಲ್ಲಿದೆ ಈ ಜೋಡಿ. ಭಾರತೀಯ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿಯಲಿದ್ದಾರೆ. ನಂತರ ಕ್ರೈಸ್ತ ಪದ್ಧತಿಯ ಮದುವೆಯನ್ನೂ ಆಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT