ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈಡರ್‌’ ಆಗಿ ಎಂಟ್ರಿ ಕೊಟ್ಟ ನಟ ನಿಖಿಲ್‌ ಕುಮಾರ್

Last Updated 12 ಸೆಪ್ಟೆಂಬರ್ 2020, 10:42 IST
ಅಕ್ಷರ ಗಾತ್ರ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರ್‌ ಅವರದ್ದು ಸಿನಿಮಾ ಮತ್ತು ರಾಜಕಾರಣದ ಎರಡು ದೋಣಿಗಳ ಮೇಲಿನ ಪಯಣ. ಅವರು ಬೆಳ್ಳಿತೆರೆ ಪ್ರವೇಶಿಸಿದ್ದು ನಾಲ್ಕು ವರ್ಷಗಳ ಹಿಂದೆ. ಅವರು ನಟಿಸಿದ ಚಿತ್ರಗಳ ಸಂಖ್ಯೆಯೂ ನಾಲ್ಕೇ. ನಿಖಿಲ್‌ ನಾಯಕನಾಗಿ ನಟಿಸಿದ ಕೊನೆಯ ಚಿತ್ರ ‘ಸೀತಾರಾಮ ಕಲ್ಯಾಣ’. ‘ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ಅವರು ಅಭಿಮನ್ಯುವಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಲಾಕ್‌ಡೌನ್‌ಗೂ ಮೊದಲೇ ಅವರ ನಟನೆಯ ಹೊಸ ಚಿತ್ರದ ಮುಹೂರ್ತ ನೆರವೇರಿತ್ತು. ಆದರೆ, ಟೈಟಲ್‌ ಅನಾವರಣಗೊಂಡಿರಲಿಲ್ಲ. ಆ ಚಿತ್ರದ ಟೈಟಲ್‌ ಏನು ಎಂಬ ಅಭಿಮಾನಿಗಳ ಪ್ರಶ್ನೆಗೆ ಟ್ವೀಟ್‌ ಮೂಲಕ ಅವರೇ ಉತ್ತರಿಸಿದ್ದಾರೆ. ನಿಖಿಲ್‌ ನಟನೆಯ ಹೊಸ ಚಿತ್ರಕ್ಕೆ ‘ರೈಡರ್’ ಎಂದು ಹೆಸರಿಡಲಾಗಿದೆ.

ಸ್ಪೋರ್ಟ್‌ ಡ್ರಾಮಾ ಇದು. ತೆಲುಗಿನ ವಿಜಯ್‌ ಕುಮಾರ್‌ ಕೊಂಡ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ತೆಲುಗಿನ ‘ಒಕ್ಕಾ ಲೈಲಾ ಕೋಸಂ’ ಮತ್ತು ‘ಗುಂಡೆ ಜಾರಿ ಗಲ್ಲಂಥೈಂಡಾ’ ಸಿನಿಮಾಗಳನ್ನು ನಿರ್ದೇಶಿಸಿದ ಖ್ಯಾತಿ ಅವರದ್ದು. ನಿಖಿಲ್‌ ಭರ್ಜರಿಯಾಗಿ ಓಡುತ್ತಿರುವ ಫಸ್ಟ್‌ಲುಕ್‌ ಮೋಷನ್ ಪೋಸ್ಟರ್‌ ಬಿಡುಗಡೆಯಾಗಿದೆ.

‘ಸೀತಾರಾಮ ಕಲ್ಯಾಣ’ ಮತ್ತು ‘ಮುನಿರತ್ನ ಕುರುಕ್ಷೇತ್ರ’ ಚಿತ್ರಗಳ ಬಳಿಕ ನಿಖಿಲ್ ರಾಜಕಾರಣದತ್ತ ಚಿತ್ತ ಹರಿಸಿದ್ದರು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ಈಗ ‘ರೈಡರ್‌’ ಮೂಲಕ ಮತ್ತೆ ನಟನೆಯತ್ತ ಮರಳಿದ್ದಾರೆ.

ಲಾಕ್‌ಡೌನ್‌ಗೂ ಮೊದಲೇ ಇದರ ಶೂಟಿಂಗ್‌ ಆರಂಭವಾಗಿತ್ತು. ಈಗಾಗಲೇ, ಶೇಕಡ 60ರಷ್ಟು ಶೂಟಿಂಗ್‌ ಪೂರ್ಣಗೊಂಡಿದೆ. ಕೋವಿಡ್‌–19 ಪರಿಣಾಮ ಇದರ ಚಿತ್ರೀಕರಣ ಸ್ಥಗಿತಗೊಂಡಿದೆ. ಇನ್ನು 32 ದಿನಗಳ ಶೂಟಿಂಗ್‌ ಅಷ್ಟೇ ಬಾಕಿಯಿದೆಯಂತೆ. ಶೀಘ್ರವೇ, ಬಾಕಿ ಉಳಿದಿರುವ ಶೂಟಿಂಗ್‌ಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

ಚಿತ್ರದಲ್ಲಿ ನಿಖಲ್‌ ಅವರದ್ದು ಬ್ಯಾಸ್ಕೆಟ್‌ಬಾಲ್‌ ಆಟಗಾರನ ಪಾತ್ರ. ಕಶ್ಮಿರ ಪರದೇಶಿ ಇದರ ನಾಯಕಿ. ನೈಜ ಘಟನೆ ಆಧರಿಸಿದ ಚಿತ್ರ ಇದಾಗಿದೆ. ಕಮರ್ಷಿಯಲ್‌ ಅಂಶಗಳನ್ನು ಇಟ್ಟುಕೊಂಡು ಇದರ ಕಥೆ ಹೆಣೆಯಲಾಗಿದೆಯಂತೆ. ಲಹರಿ ಮ್ಯೂಸಿಕ್‌ ಮತ್ತು ಟಿ ಸಿರೀಸ್‌ ಇದಕ್ಕೆ ಬಂಡವಾಳ ಹೂಡಿವೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಸಂಪದ, ದತ್ತಣ್ಣ, ಅಚ್ಯುತ್‌ಕುಮಾರ್‌, ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌. ಪೇಟೆ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT