ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖಿತಾಳ ನಟನೆಯ ರಮ್ಯ ಕನಸು

Last Updated 6 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ನಿಖಿತಾ ರಮ್ಯಾ ಸತೀಶ್!

ಹೆಸರು ಎಷ್ಟು ಉದ್ದ ಅನಿಸುತ್ತಿದೆಯಲ್ಲವೇ? ಇವರ ಕಾಯವೂ ಅಷ್ಟೇ ನೀಳವಾಗಿದೆ.ಮಿಸ್ ಟೂರಿಸಮ್ ಇಂಟರ್ ನ್ಯಾಷನಲ್ ಇಂಡಿಯಾ -2018ಗೆ ಆಯ್ಕೆಯಾಗಿರುವ ನಿಖಿತಾಗೆ ಕನ್ನಡ ಚಿತ್ರರಂಗದಲ್ಲಿ ನಾಯಕನಟಿಯಾಗಿ ಮಿಂಚಬೇಕು ಎಂಬ ಕನಸಿದೆ. ಆ ಕನಸನ್ನು ಹಂಚಿಕೊಳ್ಳುವ ಸಲುವಾಗಿಯೇ ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು.

ನಿಖಿತಾಳ ಕನಸಿಗೆ ಅವರ ತಂದೆ ಸತೀಶ್ ಮತ್ತು ತಾಯಿ ಲತಾ ಇಬ್ಬರೂ ಬೆನ್ನೆಲುಬಾಗಿ ನಿಂತಿದ್ದಾರೆ. ‘ನಮ್ಮ ಮಗಳು ಕನ್ನಡ ಚಿತ್ರರಂಗಕ್ಕೆ ಬರಬೇಕು ಎಂಬ ಆಸೆ ಇಟ್ಟುಕೊಂಡಿದ್ದಾರೆ. ಚಿಕ್ಕಂದಿನಿಂದಲೂ ಅವಳಿಗೆ ನಾಯಕಿಯಾಗಬೇಕು ಎಂಬ ಆಸೆ ಇತ್ತು. ಮುಂದೆ ಏನಾದರೂ ಸಾಧಿಸಿಯೇ ಸಾಧಿಸುತ್ತಾಳೆ ಎಂಬ ನಂಬಿಕೆ ನಮಗಿದೆ’ ಎನ್ನುತ್ತಾರೆ ಸತೀಶ್ ಮತ್ತು ಲತಾ.

ಮಿಸ್ ಟೂರಿಸಮ್ ಇಂಟರ್ ನ್ಯಾಷನಲ್ ಇಂಡಿಯಾಗೆ ಆಯ್ಕೆಯಾದವರಲ್ಲಿ ನಿಖಿತಾ ಕರ್ನಾಟಕದಲ್ಲಿ, ದಕ್ಷಿಣ ಭಾರತದಲ್ಲಿಯೇ ಮೊದಲಿಗಳು. ಸುಮಾರು ಮುನ್ನೂರು ಸ್ಪರ್ಧಿಗಳಿರುವ ಅಖಾಡದಲ್ಲಿ ಅವರು ಸ್ಪರ್ಧಿಸಿ ಅವರು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 21ಕ್ಕೆ ಈ ಸ್ಪರ್ಧೆಯ ಅಂತಿಮ ಸುತ್ತಿನ ಸ್ಪರ್ಧೆ ಇದೆ. ಆ ಸ್ಪರ್ಧೆಯಲ್ಲಿ ಅರವತ್ತು ದೇಶಗಳಿಂದ ಸ್ಪರ್ಧಿಗಳು ಸ್ಪರ್ಧಿಸಲಿದ್ದಾರೆ. ‘ಇಂಥ ದೊಡ್ಡ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ನನಗೆ ಹೆಮ್ಮೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ನಿಖಿತಾ.

‘ಸ್ಪರ್ಧೆಯಲ್ಲಿ ಗೆಲ್ಲಲು ಸರ್ವಸನ್ನದ್ಧಳಾಗಿದ್ದೇನೆ. ವಾಕ್‌, ಫಿಟ್‌ನೆಸ್‌, ಪ್ರಶ್ನೋತ್ತರ ಎಲ್ಲ ವಿಭಾಗಗಳಲ್ಲಿಯೂ ತಯಾರಿ ನಡೆಸಿದ್ದೇನೆ’ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಾರೆ ನಿಖಿತಾ.

ಶಾಲಾದಿನಗಳಲ್ಲಿಯೇ ನಟನೆಯ ಕಡೆಗೆ ಒಲವು ಬೆಳೆಸಿಕೊಂಡಿದ್ದ ಇವರು, ಕಾಲೇಜಿನ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು.

ಸದ್ಯ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿರುವ ನಿಖಿತಾ, ಕೇರಳದಲ್ಲಿ ಕಳರಿವಿದ್ಯೆಯನ್ನೂ ಕಲಿತಿದ್ದಾರೆ. ಕೇರಳದಲ್ಲಿರುವಾಗ ಎರಡು ಮಲಯಾಳಂ ಸಿನಿಮಾದಲ್ಲಿ ನಟಿಸುವ ಅವಕಾಶವೂ ಬಂದಿತ್ತಂತೆ. ಇನ್ನೊಮ್ಮೆ ಬಾಲಿವುಡ್‌ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿತ್ತು ಎಂದೂ ಅವರು ಹೇಳಿದರು. ‘ನನಗೆ ಕನ್ನಡ ಸಿನಿಮಾದ ಮೂಲಕವೇ ನಟನೆ ಆರಂಭಿಸಬೇಕು ಎಂಬ ಆಸೆ. ಆದ್ದರಿಂದಲೇ ಉಳಿದ ಅವಕಾಶಗಳನ್ನು ನಿರಾಕರಿಸಿದ್ದೇನೆ. ಕನ್ನಡದಲ್ಲಿ ಒಳ್ಳೆಯ ಅವಕಾಶ ಸಿಗುತ್ತದೆ ಎಂಬ ಭರವಸೆಯಿಂದ ಕಾಯುತ್ತಿದ್ದೇನೆ’ ಎನ್ನುವ ಇವರಿಗೆ ಆರತಿ, ರಾಧಿಕಾ ಪಂಡಿತ್‌ ಅವರು ನಿರ್ವಹಿಸಿದಂಥ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಕನಸು ಇದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT