ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನ್ನ ಸನಿಹಕೆ: ರಾಜ್‌ ಕುಟುಂಬದ ಕುಡಿ ಧನ್ಯಾ ರಾಮ್‌ಕುಮಾರ್‌ ನಟಿಸಿರುವ ಚಿತ್ರ

Last Updated 24 ಫೆಬ್ರುವರಿ 2020, 11:32 IST
ಅಕ್ಷರ ಗಾತ್ರ

ಡಾ.ರಾಜ್‌ ಕುಟುಂಬದ ಕುಡಿ ಧನ್ಯಾ ರಾಮ್‌ಕುಮಾರ್‌ ಮತ್ತು ಸೂರಜ್‌ಗೌಡ ನಟನೆಯ ‘ನಿನ್ನ ಸನಿಹಕೆ’ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ ಮುಗಿದಿದ್ದು, ಏಪ್ರಿಲ್‌ ಕೊನೆ ವಾರದಲ್ಲಿ ತೆರೆಗೆ ತರುವ ಸಿದ್ಧತೆಯಲ್ಲಿದೆ ಚಿತ್ರತಂಡ.

ನಾಯಕಿಯಾಗಿ ನಟಿಸಿರುವ ಧನ್ಯಾಗೆ ಇದು ಚೊಚ್ಚಲ ಸಿನಿಮಾ. ಚಿತ್ರದ ನಾಯಕ ಸೂರಜ್‌ಗೌಡಗೆ ಐದು ಸಿನಿಮಾಗಳಲ್ಲಿ ನಟಿಸಿದ್ದರೂ ಮೊದಲ ಬಾರಿಗೆ ನಿರ್ದೇಶಕನ ಟೊಪ್ಪಿ ಧರಿಸಿರುವ ಸಂಭ್ರಮ.‌

ಈ ಚಿತ್ರವನ್ನು ನಿರ್ದೇಶಿಸಬೇಕಿದ್ದಸುಮನ್‌ ಜಾದೂಗರ್‌ ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ನಿರ್ದೇಶನದ ಹೊಣೆ ಸೂರಜ್‌ ಹೆಗಲೇರಿದೆ. ಕಥೆ ಮತ್ತು ಚಿತ್ರಕಥೆಯನ್ನು ಸೂರಜ್‌ ಅವರೇ ಹೆಣೆದಿದ್ದರಿಂದ ನಿರ್ದೇಶನದ ಹೊಣೆಗಾರಿಕೆ ಅವರಿಗೆ ಹೊರೆಯಾಗಲಿಲ್ಲವಂತೆ.

‘ನಾನೇ ನಿರ್ದೇಶನ ಮಾಡಿದ್ದರೂ ಇಷ್ಟೊಂದು ಚೆಂದವಾಗಿ ಸಿನಿಮಾ ಮೂಡಿಬರುತ್ತಿತ್ತೋ ಇಲ್ಲವೋ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ’ ಎಂದು ಈ ಚಿತ್ರಕ್ಕೆ ಸಮನ್ವಯಕಾರರಾಗಿರುವ ಸುಮನ್‌ ಜಾದೂಗರ್‌, ಸೂರಜ್‌ ಗೌಡರ ಕೌಶಲಕ್ಕೆಮೆಚ್ಚುಗೆಯ ಮುದ್ರೆಯನ್ನುಸುದ್ದಿಗೋಷ್ಠಿಯಲ್ಲಿ ಒತ್ತಿದರು. ಇದೇ ವೇಳೆ ಚಿತ್ರದ ಕ್ಲಾಸಿಕ್‌ ಮೇಕಿಂಗ್‌ ವಿಡಿಯೊ ಬಿಡುಗಡೆ ಮಾಡಲಾಯಿತು.

‘ಐದು ಸಿನಿಮಾಗಳಲ್ಲಿ ಕೆಲಸ ಮಾಡಿದಾಗ ನಟನೆ ಕಲಿತೆ ಎನ್ನುವುದಕ್ಕಿಂತ ಸಿನಿಮಾ ಕಲಿತೆ. ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಆದಂತೆಈ ಸಿನಿಮಾದಲ್ಲಿ ನಾನು ಆಕಸ್ಮಿಕವಾಗಿ ನಿರ್ದೇಶಕನೂ ಆದೆ. ಸುಮನ್‌ ಜಾದೂಗರ್‌ ದೊಡ್ಡ ತ್ಯಾಗ ಮಾಡಿದ್ದಾರೆ. ನಾನಾಗಿದ್ದರೂ ಆ ರೀತಿ ಮಾಡುತ್ತಿರಲಿಲ್ಲ. ಇದು ಅವರ ದೊಡ್ಡಗುಣ. ಇಡೀ ತಂಡದ ಶ್ರಮದಿಂದ ಸಿನಿಮಾ ಗುಣಮಟ್ಟದಿಂದ ಮೂಡಿಬಂದಿದೆ. ನಟಿ ಧನ್ಯಾ ರಾಮ್‌ಕುಮಾರ್‌ ಸಂದರ್ಭಕ್ಕೆ ಹೊಂದಿಕೊಂಡು ನಟಿಸಬಲ್ಲರು. ಭವಿಷ್ಯದಲ್ಲಿ ಚಿತ್ರರಂಗಕ್ಕೆ ಅವರು ಆಸ್ತಿಯಾಗಬಲ್ಲರು’ ಎಂದು ಸೂರಜ್‌ ಪ್ರಶಂಸಿಸಿದರು.

‘ಇದುರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ನವರಸಗಳು ಇವೆ. ರಿಯಲಿಸ್ಟಿಕ್ ಸಿನಿಮಾ ಇದು. ಎರಡು ಫೈಟ್‌ಗಳೂ ಇವೆ. ರವಿವರ್ಮ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ರಘು ದೀಕ್ಷಿತ್‌ ಅವರ ಸಂಗೀತ ಸಂಯೋಜನೆ ಮತ್ತು ವಾಸುಕಿ ವೈಭವ್‌ ಅವರ ಸಾಹಿತ್ಯವಿದೆ. ಈ ಸಿನಿಮಾ ಮ್ಯೂಸಿಕಲ್ ಹಿಟ್ ಕೂಡ ಆಗಲಿದೆ. ಮುಂದೆಯೂ ಕೂಡ ನಾನು ನಿರ್ದೇಶನ ಮಾಡಲಿದ್ದೇನೆ’ ಎಂಬ ವಿಶ್ವಾಸದ ಮಾತು ಸೇರಿಸಿದರು.

‘ಈ ಚಿತ್ರ ನನ್ನ ಚಿತ್ರಬದುಕಿನಲ್ಲಿ ಅತ್ಯುತ್ತಮ ಅನುಭವ ಕೊಟ್ಟ ಸಿನಿಮಾ ಆಗಲಿದೆ. ನಾನು ಒಂದು ವರ್ಷ ಕಾಲ ಸಿನಿಮಾ ಬಗ್ಗೆ ಅಧ್ಯಯನ ಮಾಡಿ ಈ ರಂಗಕ್ಕೆ ಕಾಲಿಟ್ಟೆ. ಆದರೆ, ಆರಂಭದಲ್ಲಿ ನನಗೂ ಸಾಕಷ್ಟು ಅಂಜಿಕೆ ಇತ್ತು. ನನ್ನೆಲ್ಲ ಅಂಜಿಕೆ, ಭಯವನ್ನು ಚಿತ್ರತಂಡ ನಿವಾರಿಸಿ, ನನ್ನಿಂದ ಪಾತ್ರಕ್ಕೆ ಏನು ಬೇಕಿತ್ತೊ ಅದನ್ನು ಹೊರಗೆ ತೆಗೆದಿದೆ. ಇಡೀ ತಂಡವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ನನ್ನ ಜೀವನದಲ್ಲಿ ಇದೊಂದುಬೆಸ್ಟ್ ಎಕ್ಸ್‌ಪೀರಿಯನ್ಸ್. ಇದುವರೆಗೆ ನೀವು ನೋಡದಂತಹ ಲವ್ ಸ್ಟೋರಿಯನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ನನ್ ಪಾತ್ರಕ್ಕೆ ನಾನೇ ಕಂಠದಾನ ಮಾಡಿದ್ದೇನೆ’ ನಟಿ ಎಂದು ಧನ್ಯಾ ರಾಮ್‌ಕುಮಾರ್‌ ಹೇಳಿದರು.

ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿರುವ ರಘು ದೀಕ್ಷಿತ್, ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿವೆ. ‘ಮಳೆ ಮಳೆ’ ಹಾಡು ತುಂಬಾ ಚೆನ್ನಾಗಿ ಬಂದಿದೆ. ಉಳಿದ ಹಾಡುಗಳ ರೆಕಾರ್ಡಿಂಗ್‌ ನಡೆಯಬೇಕಿದೆ. ಇದರಲ್ಲಿ ಶಾಸ್ತ್ರೀಯ ಸಂಗೀತ ಮಿಕ್ಸ್‌ ಮಾಡುವ ಅವಕಾಶ ಸಿಕ್ಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT