ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಂಟರ್‌’ ಆದ ನಿರಂಜನ್‌ ಸುಧೀಂದ್ರ

ಅಣ್ಣನ ಮಗನ ಸಿನಿಮಾಗೆ ರಿಯಲ್‌ ಸ್ಟಾರ್‌ ಉಪೇಂದ್ರ ಕ್ಲ್ಯಾಪ್‌
Last Updated 21 ಫೆಬ್ರುವರಿ 2022, 10:41 IST
ಅಕ್ಷರ ಗಾತ್ರ

ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ನಾಗಶೇಖರ್‌ ನಿರ್ದೇಶನದ, ನಿರಂಜನ್‌ ಅಭಿನಯದ ‘ಕ್ಯೂ’ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿತ್ತು. ಇದರ ಬೆನ್ನಲ್ಲೇ ಅವರು ನಟಿಸಿರುವ ಹೊಸ ಚಿತ್ರ ‘ಹಂಟರ್‌’ ಚಿತ್ರದ ಮುಹೂರ್ತ ನಡೆದಿದೆ.

ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಮುಖ್ಯಅತಿಥಿಗಳಾಗಿ ಚಾಲನೆ ನೀಡಿದರು. ಇದೇ ವೇಳೆ ಚಿತ್ರದ ಫಸ್ಟ್‌ ಲುಕ್ ಟೀಸರ್ ಅನ್ನು ಉಪೇಂದ್ರ ಬಿಡುಗಡೆ ಮಾಡಿದರು. ‘ನಿರಂಜನ್ ಚಿಕ್ಕ ವಯಸ್ಸಿನಲ್ಲೇ ನಟ. ನನ್ನ ‘A’ ಚಿತ್ರದಲ್ಲಿ ಒಂದು ಮಗು ಮಲಗಿರುವ ದೃಶ್ಯವಿದೆ. ಆ ಮಗು ನಮ್ಮ ನಿರಂಜನ್. ಆನಂತರ ನಾಟಕ, ಸಿನಿಮಾ ಇದರ ಮೇಲೆ ಅವನ ಆಸಕ್ತಿ ಬೆಳೆಯಿತು’ ಎಂದರು ಉಪೇಂದ್ರ.

‘ಇದು ನಮ್ಮ ಸಂಸ್ಥೆಯ ಮೂರನೇ ಚಿತ್ರ. ‘ಪರಿ’ ಹಾಗೂ ‘ಸೀಜರ್’ ಹಿಂದಿನ ಚಿತ್ರಗಳು. ‘ಸೀಜರ್’ ಚಿತ್ರ ನಿರ್ದೇಶನ ಮಾಡಿದ್ದ ವಿನಯ್ ಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಿರಂಜನ್ ಅವರಿಗೆ ನಾಯಕನಿಗಿರಬೇಕಾದ ಎಲ್ಲಾ ಗುಣಗಳಿವೆ. ಮುಂದೊಂದು ದಿನ ಅವರು ಬಾಲಿವುಡ್‌ನಲ್ಲೂ ಮಿಂಚಲಿದ್ದಾರೆ’ ಎಂದು ನಿರ್ಮಾಪಕ ತ್ರಿವಿಕ್ರಮ ಸಾಪಲ್ಯ ಹೇಳಿದರು.

‘ಕೇರಳದ ಸೌಮ್ಯ ಮೆನನ್ ಈ ಚಿತ್ರದ ನಾಯಕಿ. ಆಕೆಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಪ್ರಕಾಶ್ ರಾಜ್, ನಾಜರ್, ಸುಮನ್, ಸಾಧುಲೋಕಿಲ ಮುಂತಾದ ಹೆಸರಾಂತ ಕಲಾವಿದರು ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಂದನ್ ಶೆಟ್ಟಿ ಈ ಚಿತ್ರದ ಸಂಗೀತ ನಿರ್ದೇಶಕ. ಮಹೇಶ್ ಛಾಯಾಗ್ರಹಣ, ಕೆ.ಜಿ.ಎಫ್. ಖ್ಯಾತಿಯ ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ’ ಎಂದು ನಿರ್ದೇಶಕ ವಿನಯ್ ಕೃಷ್ಣ ತಂಡದ ಪರಿಚಯ ಮಾಡಿದರು.

‘ನಾನು ಇಲ್ಲಿಯವರೆಗೆ ನಾಯಕನಾಗಿ ನಟಿಸಿರುವ ಯಾವುದೇ ಚಿತ್ರ ತೆರೆಕಂಡಿಲ್ಲ. ಆದರೂ ನನ್ನ ಮೇಲೆ ನಂಬಿಕೆಯಿಟ್ಟು ಅವಕಾಶ ನೀಡಿರುವ‌ ನಿರ್ಮಾಪಕ ತ್ರಿವಿಕ್ರಮ ಅವರಿಗೆ ನಾನು ಆಭಾರಿ. ಈ ಚಿತ್ರದಲ್ಲಿ ಮಾಸ್ ಲುಕ್‌ನಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಚಿತ್ರೀಕರಣ ಪೂರ್ಣಗೊಳ್ಳಲಿದೆ’ ಎಂದರು ನಿರಂಜನ್ ಸುಧೀಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT