ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಷಾ: ಬಯಲುಸೀಮೆ ಬೆಡಗಿ

Last Updated 14 ಮಾರ್ಚ್ 2019, 20:02 IST
ಅಕ್ಷರ ಗಾತ್ರ

‘ಕನಸು ನನಸಾಗುತ್ತಿದೆ ಎಂಬ ಖುಷಿ ಇದೆ. ಸ್ವಲ್ಪ ಭಯವೂ ಆಗುತ್ತಿದೆ. ನಮ್ಮದು ಕ್ಯೂಟ್‌ ಲವ್‌ ಸ್ಟೋರಿ. ಜನರು ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ’ ಹೀಗೆ ತಮ್ಮ ಮನಸ್ಸಿನೊಳಗೆ ಒತ್ತರಿಸಿ ಬರುತ್ತಿದ್ದ ಭಾವನೆಗಳನ್ನು ರಿಷಾ ನಿಜಗುಣ ವಿವರಿಸುತ್ತ ಹೋದರು.

ಅಂದಹಾಗೆ ರಿಷಾ ಈ ವಾರ ಬಿಡುಗಡೆ ಕಾಣುತ್ತಿರುವ ‘ಡಿ.ಕೆ. ಬೋಸ್‌’ ಚಿತ್ರದ ನಾಯಕಿ. ಚಿತ್ರ ಬಿಡುಗಡೆಗೂ ಮುನ್ನ ‘ಸಿನಿಮಾ ಪುರವಣಿ’ ಜೊತೆಗೆ ಮಾತಿಗಿಳಿದಿದ್ದರು.

ಇದೇ ಮೊದಲ ಬಾರಿ ರಿಷಾ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ‘ಅಂಜನಿಪುತ್ರ’ ಹಾಗೂ ‘ಟಗರು’ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದಾರೆ. ‘ಡಿ.ಕೆ. ಬೋಸ್‌’ ಸಿನಿಮಾ ದಕ್ಷಿಣ ಕನ್ನಡ ಜಿಲ್ಲೆಯ ನೇಟಿವಿಟಿಯನ್ನು ಹೊಂದಿದೆ. ಕಲಾವಿದರಲ್ಲಿ ಹೆಚ್ಚಿನವರು ಆ ಭಾಗದವರೇ ಆಗಿದ್ದಾರೆ. ಈ ಸಿನಿಮಾ ಇನ್ನಷ್ಟು ಆಪ್ತವಾಗಲು ಅದೂ ಕಾರಣ ಎನ್ನುತ್ತಾರೆ ರಿಷಾ.

‘ನಿರ್ದೇಶಕ ಸಂದೀಪ್‌ ಅವರನ್ನು ಬಿಟ್ಟರೆ ಉಳಿದವರೆಲ್ಲ ಮಂಗಳೂರಿನವರೇ. ತುಳು ಸಿನಿಮಾಗಳಲ್ಲಿ ದೊಡ್ಡ ಹೆಸರು ಮಾಡಿದವರೂ ಇದ್ದಾರೆ. ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಖುಷಿಯೆನಿಸಿತು. 15 ದಿನಗಳ ಕಾಲ ಮಂಗಳೂರು ಹಾಗೂ ಸುತ್ತಮುತ್ತ ಶೂಟಿಂಗ್‌ ಮಾಡಿದ್ದೇವೆ. ನಾನು ಹೊಸಬಳಾಗಿದ್ದರೂ ಅವರ ಜೊತೆ ನಟಿಸಲು ಯಾವುದೇ ಸಮಸ್ಯೆ ಕಾಣಿಸಲಿಲ್ಲ. ಎಲ್ಲರೂ ತುಂಬ ಸಹಕಾರ ಕೊಟ್ಟಿದ್ದಾರೆ’ ಎಂದು ರಿಷಾ ಸ್ಮರಿಸಿಕೊಳ್ಳುತ್ತಾರೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಆಲದಹಳ್ಳಿ ಅವರ ಹುಟ್ಟೂರು. ಬಿ.ಕಾಂ ವರೆಗೆ ಶಿಕ್ಷಣ ಪಡೆದದ್ದು ಹೊಸದುರ್ಗದಲ್ಲಿಯೇ. ‘ಶಿಕ್ಷಣ ಮುಂದುವರಿಸುವ ಆಸಕ್ತಿ ಇಲ್ಲ. ಸಿನಿಮಾದಲ್ಲೇ ಬದುಕು ಕಂಡುಕೊಳ್ಳಬೇಕು ಎಂದು ಇಲ್ಲಿಗೆ ಬಂದಿದ್ದೇನೆ’ ಎನ್ನುತ್ತಾರೆ.

ಅವರ ಅಪ್ಪ ವ್ಯಾಪಾರಿ. ತಾಯಿ ಗೃಹಿಣಿ. ಸಿನಿಮಾ ನಟಿಯಾಗಬೇಕು ಎಂಬ ರಿಷಾ ಅವರ ಆಸೆಯನ್ನು ಈಡೇರಿಸುವ ಸಲುವಾಗಿ ಎರಡು ವರ್ಷಗಳ ಹಿಂದೆ ಇಡೀ ಕುಟುಂಬ ಬೆಂಗಳೂರಿಗೆ ಬಂದಿದೆಯಂತೆ.

‘ನನ್ನ ಕುಟುಂಬದವರ ಸಹಕಾರ ಇಲ್ಲದಿದ್ದರೆ ನಟಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ತಮ್ಮನ ಪ್ರೋತ್ಸಾಹ ತುಂಬಾ ಇದೆ. ಶೂಟಿಂಗ್‌ ಹೋಗುವಾಗಲಾಗಲಿ, ಬೇರೆ ಇನ್ನೇನೇ ಕೆಲಸ ಇದ್ದರೂ ತಮ್ಮ ಜೊತೆಯಾಗುತ್ತಾನೆ’ ಎಂದು ಸಹೋದರನ ಪ್ರೀತಿ– ಪ್ರೋತ್ಸಾಹವನ್ನು ರಿಷಾ ಬಾಯ್ತುಂಬ ನೆನೆಯುತ್ತಾರೆ.

‘ಬೆಂಗಳೂರಿಗೆ ಬಂದಾಗ ಎಲ್ಲರೂ ಅಪರಿಚಿತರೇ. ‘ಗಾಂಧಿನಗರ’ವನ್ನು ಪ್ರವೇಶಿಸುವುದು ಅಷ್ಟು ಸುಲಭವಲ್ಲ ಅಲ್ಲವೇ? ಗೊತ್ತಿದ್ದ ಒಂದಿಷ್ಟು ಜನರನ್ನು ಭೇಟಿಮಾಡಿದೆ. ಅವರು ಒಂದಷ್ಟು ದಾರಿಗಳನ್ನು ತೋರಿಸಿದರು. ನಟನೆ ಕಲಿಯಬೇಕು ಎಂಬ ಉದ್ದೇಶದಿಂದ ‘ಕಲಾತ್ಮಕ’ ಎಂಬ ಕಲಾ ತಂಡವನ್ನು ಸೇರಿಕೊಂಡೆ. ಇವರ ಜೊತೆ ಸೇರಿ ಅಲ್ಲಲ್ಲಿ ನಾಟಕಗಳನ್ನು ಆಡಿದೆವು. ನಾಲ್ಕು ನಾಟಕಗಳಲ್ಲಿ ಅಭಿನಯಿಸಿದೆ. ಸುಮಾರು 10 ಪ್ರದರ್ಶನಗಳನ್ನು ನೀಡಿದ್ದೇವೆ. ಈ ನಡುವೆ ಸಾಗರ್‌ ಎಂಬುವರ ಪರಿಚಯವಾಯಿತು. ಅವರು ಕೆಲವು ನಿರ್ದೇಶಕರನ್ನು ಪರಿಚಯಿಸಿದರು. ಸಣ್ಣ ಪುಟ್ಟ ಅವಕಾಶಗಳು ಲಭಿಸಿದವು ಈಗ ಈ ದೊಡ್ಡ ಅವಕಾಶ ಸಿಕ್ಕಿದೆ...’ ಎಂದು ತಮ್ಮ ಹೋರಾಟದ ಹಾದಿಯನ್ನು ರಿಷಾ ವಿವರಿಸುತ್ತಾ ಹೋದರು.

‘ಕೃಷ್ಣನ ಲವ್‌ ಸ್ಟೋರಿ’ ಸಿನಿಮಾದಲ್ಲಿ ರಾಧಿಕಾ ಪಂಡಿತ್‌ ಮಾಡಿರುವ ಪಾತ್ರ ರಿಷಾಗೆ ತುಂಬ ಇಷ್ಟವಂತೆ. ‘ನೆಗೆಟಿವ್‌ ಹಾಗೂ ಪಾಸಿಟಿವ್‌ ಎರಡೂ ಶೇಡ್‌ಗಳಿರುವ ಪಾತ್ರ ಅದು. ಅವಕಾಶ ಸಿಕ್ಕರೆ ಅಂಥ ಪಾತ್ರವನ್ನು ಮಾಡಬೇಕು ಎಂಬ ಆಸೆ ಇದೆ ಎನ್ನುತ್ತಲೇ ಉದ್ದಿಮೆಯ ದೊಡ್ಡದೊಡ್ಡ ಕಲಾವಿದರ ಜೊತೆ ಕೆಲಸ ಮಾಡಬೇಕು ಎಂಬ ಬಯಕೆಯೂ ಇದೆ ಎಂಬ ಮನದಾಸೆಯನ್ನೂ ವ್ಯಕ್ತಪಡಿಸುತ್ತಾರೆ. ಅನಂತನಾಗ್‌ ಅಂದ್ರೆ ರಿಷಾಗೆ ತುಂಬಾ ಇಷ್ಟವಂತೆ. ‘ಯಾಕೆ’ ಎಂದು ಕೇಳಿದರೆ, ‘ಅವರು ಯಾವುದೇ ಅಬ್ಬರವಿಲ್ಲದೆ ಅತ್ಯಂತ ಸಹಜವಾಗಿ ನಟಿಸುತ್ತಾರೆ. ಅಂಥವರಿಂದ ನಾವು ಕಲಿಯಬೇಕಾದ್ದು ಸಾಕಷ್ಟಿದೆ. ಅನಂತನಾಗ್‌ ಹಾಗೂ ಲಕ್ಷ್ಮಿ ಅವರ ಜೋಡಿಯ ಸಿನಿಮಾ ನೋಡುವುದು ನನ್ನ ಇಷ್ಟದ ಹವ್ಯಾಸ. ಅವರ ಸಿನಿಮಾಗಳ ಹಾಡುಗಳೆಂದರೆ ಪಂಚಪ್ರಾಣ ಎನ್ನುತ್ತಾರೆ.

ರಿಷಾ ಅವರು ಸಮಯವಿದ್ದಾಗಲೆಲ್ಲ ತಮ್ಮಿಷ್ಟದ ಹಾಡುಗಳನ್ನು ಕೇಳುತ್ತಿದ್ದಾರೆ. ಜೊತೆಗೆ ಫ್ರೀಸ್ಟೈಲ್‌ ಹಾಗೂ ಬಾಲಿವುಡ್‌ ಡಾನ್ಸ್‌ ಕಲಿಯುತ್ತಿದ್ದಾರೆ. ಡಿ.ಕೆ. ಬೋಸ್‌ ಸಿನಿಮಾದ ಬಳಿಕ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸಲು ಆಫರ್‌ಗಳು ಬಂದಿವೆಯಂತೆ. ಅದರಲ್ಲಿ ಒಂದು ಸಿನಿಮಾ ಬಹುತೇಕ ಅಂತಿಮಗೊಂಡಿದೆ. ಅದರಲ್ಲೂ ಹೊಸಬರ ತಂಡವೇ ಇದೆಯಂತೆ. ಇನ್ನೊಂದು ಸಿನಿಮಾದ ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT