‘ಪ್ರಭಾಸ್ 21‘ ಸಿನಿಮಾಗೆ ನಿವೇತಾ ಎರಡನೇ ನಾಯಕಿ?

‘ಬಾಹುಬಲಿ’ ಚಿತ್ರ ಖ್ಯಾತಿಯ ತೆಲುಗು ನಟ ಪ್ರಭಾಸ್ ನಟನೆಯ ‘ಪ್ರಭಾಸ್21’ ಚಿತ್ರದಲ್ಲಿ ‘ದರ್ಬಾರ್’ ಖ್ಯಾತಿಯ ಬೆಡಗಿ ನಿವೇತಾ ಥಾಮಸ್ ಎರಡನೇ ನಾಯಕಿಯಾಗಿ ನಟಿಸಲಿದ್ದಾರಂತೆ.
‘ಮಹಾನಟಿ’ ಚಿತ್ರ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶಿಸಲಿರುವ ಈ ಚಿತ್ರ ಪ್ರಭಾಸ್‌ಗೆ 21ನೇಯ ಚಿತ್ರ. ಸದ್ಯ ಇನ್ನೂ ಟೈಟಲ್ ಅಂತಿಮಗೊಂಡಿಲ್ಲ. ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸುವ ಗುರಿಯೊಂದಿಗೆ ನಿರ್ಮಾಣ ಮಾಡಲಾಗುತ್ತಿರುವ ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ದೀಪಿಕಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ.
‘ಪ್ರಭಾಸ್21’ ರಲ್ಲಿ ಎರಡನೇ ನಾಯಕಿಯ ಪಾತ್ರ ಇರುವ ಬಗ್ಗೆ ಸುಳಿವು ನೀಡಿರುವ ನಿರ್ದೇಶಕ ನಾಗ್ ಅಶ್ವಿನ್, ಈ ಪಾತ್ರಕ್ಕೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ನಟಿ ನಿವೇತಾ ಥಾಮಸ್ ಅವರನ್ನು ಪರಿಗಣಿಸಿದ್ದು, ಈ ಪಾತ್ರ ನಿಭಾಯಿಸಲು ನಿವೇತಾ ಥಾಮಸ್ ನಿರೀಕ್ಷಿಸುವಷ್ಟು ಸಂಭಾವನೆ ಭರಿಸಲು ಸಿದ್ಧವಿರುವಂತೆ ನಿರ್ಮಾಪಕರಿಗೂ ಹೇಳಿದ್ದಾರಂತೆ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಕೇಳಿಬರುತ್ತಿವೆ. ‘ಪ್ರಭಾಸ್21’ರಲ್ಲಿ ಎರಡನೇ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿರುವ ಬಗ್ಗೆ ನಿವೇತಾ ಥಾಮಸ್ ಆಗಲಿ ಅಥವಾ ಚಿತ್ರತಂಡದಿಂದಾಗಿ ಈ ವರೆಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ನಿವೇತಾ ಥಾಮಸ್, ಮಲಯಾಳ, ತೆಲುಗು ಹಾಗೂ ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಸೂಪರ್ ಸ್ಟಾರ್’ ರಜನಿಕಾಂತ್ ನಟನೆಯ ‘ದರ್ಬಾರ್‘ ಚಿತ್ರದಲ್ಲಿ ತಲೈವನ ಪುತ್ರಿ ಪಾತ್ರದಲ್ಲಿ ಮತ್ತು ‘ಪಾಪನಾಶಂ’ ಚಿತ್ರದಲ್ಲಿ ಕಮಲ್‌ಹಾಸನ್ ಮಗಳಾಗಿ ನಿವೇತಾ ಅವರ ಮನೋಜ್ಞ ಅಭಿನಯವನ್ನು ಸಿನಿಪ್ರಿಯರು ಇಂದಿಗೂ ಮರೆತಿರಲಾರರು. ನಾನಿ ನಟನೆಯ ‘ವಿ’ ಚಿತ್ರದಲ್ಲಿ ನಿವೇತಾ ನಟಿಸಿದ್ದು, ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಇನ್ನು ಬಿಗ್ ಬಜೆಟ್‌ನ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರುವ ಪ್ರಭಾಸ್ ಸದ್ಯ ರಾಧಾ ಕೃಷ್ಣಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಕನ್ನಡದ ನಟಿ ಪೂಜಾ ಹೆಗಡೆ ಅಭಿನಯಿಸುತ್ತಿದ್ದಾರೆ.
ಇದಲ್ಲದೆ, ಪ್ರಭಾಸ್ ಅವರು ಭೂಷಣ್ ಕುಮಾರ್ ನಿರ್ಮಾಣ ಮತ್ತು ಓಂ ರೌತ್ ನಿರ್ದೇಶನದ ಪೌರಾಣಿಕ ಕಥಾ ಹಂದರದ ‘ಆದಿಪುರಷ್’ ಚಿತ್ರದಲ್ಲಿ ನಟಿಸಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.