ಸೂಪರ್ ಸ್ಟಾರ್‌ ಜತೆ ನಿವೇತಾ

ಸೋಮವಾರ, ಏಪ್ರಿಲ್ 22, 2019
33 °C

ಸೂಪರ್ ಸ್ಟಾರ್‌ ಜತೆ ನಿವೇತಾ

Published:
Updated:
Prajavani

ನಿವೇತಾ ಥಾಮಸ್‌ ತವರು ಕೇರಳದಲ್ಲಿ ಮುದ್ದಿನ ‘ನಿವೇದಾ’. ತಮಿಳಿಗರು ಇಂದಿಗೂ ಮರೆಯದ ಬಾಲ ನಟಿ. ‘ಮೈ ಡಿಯರ್‌ ಭೂತಂ’ ಎಂಬ ಧಾರಾವಾಹಿಯಲ್ಲಿ ನಟಿಸುವಾಗ ನಿವೇತಾ ಇನ್ನೂ ಒಂಬತ್ತರ ಬಾಲೆ. ಆದರೆ ನಟನೆಯಲ್ಲಿನ ಪ್ರೌಢತೆ ಅನುಭವಿ ನಟಿಯಂತಿತ್ತು. ಇದೇ ಕಾರಣಕ್ಕೆ ನಿವೇತಾ ತಮಿಳು ಕಿರುತೆರೆಯಲ್ಲಿ ಅಲ್ಪಾವಧಿಯಲ್ಲೇ ಬಹುಬೇಡಿಕೆಯ ನಟಿಯಾಗಿಬಿಟ್ಟರು. 

ನಿವೇತಾಗೆ ಈಗ 24. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದ ನಿರ್ದೇಶಕರು ಕಾಲ್‌ಶೀಟ್‌ ಹಿಡಿದು ಕಾಯುವಷ್ಟು ಈಗ ಬ್ಯುಸಿ ನಟಿ. ತೆಲುಗಿನ ಸೂಪರ್ ಹಿಟ್‌ ಚಿತ್ರಗಳಾದ ‘ಜಂಟಲ್‌ಮ್ಯಾನ್‌’ನ ಕ್ಯಾಥರಿನ್‌ (2016) ಮತ್ತು ‘ನಿನ್ನು ಕೋರಿ’ಯಲ್ಲಿ ಪಲ್ಲವಿ (2017) ಪಾತ್ರದ ನಟನೆಯಿಂದಾಗಿ ಕಾಲಿವುಡ್‌ನಲ್ಲಿ ಅವಕಾಶಗಳು ಹುಡುಕಿ ಬರುವಂತಾಯಿತು. 

ನಿವೇತಾ ಈಗ ಸುದ್ದಿಯಾಗಿರುವುದು, ತಮಿಳಿನ ನಿರ್ದೇಶಕ ಎ.ಆರ್.ಮುರುಗದಾಸ್ ಅವರ ಹೊಸ ಚಿತ್ರದಲ್ಲಿ ಪಾತ್ರ ಗಿಟ್ಟಿಸಿಕೊಂಡಿರುವ ಕಾರಣಕ್ಕೆ. ತಮಿಳಿನ ಸೂಪರ್‌ ಸ್ಟಾರ್‌ ರಜನಿಕಾಂತ್‌ ನಾಯಕನಟರಾಗಿರುವ ಈ ಚಿತ್ರದಲ್ಲಿ ನಿವೇತಾ ರಜನಿ ಮಗಳಾಗಿ ನಟಿಸಲಿದ್ದಾರೆ.

2008ರಲ್ಲಿ ಮಲಯಾಳಂನ ‘ವೀರುಡೆ ಒರು ಭಾರ್ಯ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ನಿವೇತಾ. ಮೊದಲ ಚಿತ್ರಕ್ಕೇ ಅತ್ಯುತ್ತಮ ಬಾಲ ನಟಿ ಎಂದು ರಾಜ್ಯ ಪ್ರಶಸ್ತಿ ಬಾಚಿಕೊಂಡವರು. ಅದೇ ವರ್ಷ ತಮಿಳಿನ ‘ಕುರುವಿ’ಗಾಗಿ ಬಣ್ಣ ಹಚ್ಚಿದರು. ಅದಾದ ಬಳಿಕ ಡಜನ್‌ಗಟ್ಟಲೆ ಚಿತ್ರಗಳಲ್ಲಿ ಮಿಂಚಿದವರು ಈ ಚೆಲುವೆ. ಬಾಲನಟಿಯಾಗಿ ತೆರೆಗೆ ಕಾಲಿಡುವಾಗ ಇದ್ದಷ್ಟೇ ಕಳಕಳಿ ಮತ್ತು ಬದ್ಧತೆಯಿಂದ ನಟಿಸುತ್ತಿರುವುದು ನಿವೇತಾ ವೈಶಿಷ್ಟ್ಯ. ಹಾಗಾಗಿ, ಮುದ್ದು ಮುದ್ದು ಮಾತಿನ ಬಾಲಕಿಯಷ್ಟೇ ಆಸ್ಥೆಯಿಂದ ಪ್ರೇಕ್ಷಕರು ಇಂದಿಗೂ ಈ ಪ್ರತಿಭೆಯನ್ನು ಪೋಷಿಸುತ್ತಿದ್ದಾರೆ.

ನಿವೇತಾ ಥಾಮಸ್‌ ತಮಿಳಿನಲ್ಲಿ ನಟಿಸಿರುವ ಇತ್ತೀಚಿನ ಚಿತ್ರವೆಂದರೆ ‘ಪಾಪನಾಶಂ’. ಅದರಲ್ಲಿ ಕಮಲ್‌ಹಾಸನ್‌ ಮಗಳಾಗಿ ಅವರು ನಟಿಸಿದ್ದರು. ಸೂಪರ್ ಸ್ಟಾರ್‌ಗಳ ಜೊತೆ ನಟಿಸಿದರೂ ಬಿಗುಮಾನಕ್ಕೆ ನಿವೇತಾ ವ್ಯಕ್ತಿತ್ವದಲ್ಲಿ ಜಾಗ ಸಿಕ್ಕಿಲ್ಲ. ಅಭಿನಯದಲ್ಲಿನ ಪ್ರೌಢಿಮೆ ಹಾಗೂ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ಚಾಕಚಕ್ಯತೆಯಿಂದಾಗಿ ಅದೃಷ್ಟ ಕಾಲು ಮುರಿದುಕೊಂಡು ಅವರ ಕಾಲ ಬಳಿ ಬಿದ್ದಿದೆ!

ಎ.ಆರ್.ಮುರುಗದಾಸ್ ಅವರ ಹೊಸ ಚಿತ್ರ ‘ತಲೈವರ್‌ 167’ ಚಿತ್ರೀಕರಣ ಆರಂಭವಾಗಿದೆ. ರಜನಿ ಅವರದು ಪೊಲೀಸ್‌ ಅಧಿಕಾರಿಯ ಪಾತ್ರ. ಲೈಕಾ ಪ್ರೊಡಕ್ಷನ್ಸ್‌ ನಿರ್ಮಿಸಲಿರುವ ಈ ಚಿತ್ರದಲ್ಲಿ ರಜನಿಕಾಂತ್‌ ಜೋಡಿಯಾಗಿ ನಯನತಾರಾ ನಟಿಸಲಿದ್ದಾರೆ. ‘ಚಂದ್ರಮುಖಿ’ ಮತ್ತು ‘ಕುಚೇಲನ್‌’ ಮೂಲಕ ಇವರಿಬ್ಬರೂ ಯಶಸ್ವಿ ಜೋಡಿ ಎನಿಸಿಕೊಂಡಿದ್ದಾರೆ. ‘ಶಿವಾಜಿ’ಯಲ್ಲಿಯೂ ನಯನತಾರಾ ಒಂದು ಹಾಡಿಗೆ ಹೆಜ್ಜೆ ಹಾಕಿದ್ದರು. ಹಾಗಾಗಿ ‘ತಲೈವರ್‌ 167’ ಮೂಲಕ ಮೂರನೇ ಬಾರಿಗೆ ತೆರೆಹಂಚಿಕೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !