ಬುಧವಾರ, ಆಗಸ್ಟ್ 21, 2019
22 °C

ಹೀಗಿತ್ತು ನಿಖಿಲ್ ಪಾತ್ರ ಪ್ರವೇಶ

Published:
Updated:
Prajavani

ದರ್ಶನ್, ಅಂಬರೀಷ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಖ್ಯಾತ ನಟರು ಅಭಿನಯಿಸಿರುವ ಅದ್ದೂರಿ ಚಿತ್ರ ‘ಕುರುಕ್ಷೇತ್ರ’ ಆಗಸ್ಟ್‌ 9ರಂದು ಬಿಡುಗಡೆ ಆಗುವುದು ಖಚಿತವಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಇದು ತೆರೆಗೆ ಬರುತ್ತಿದೆ.

ಕನ್ನಡ ಸಿನಿಮಾ ವೀಕ್ಷಕರಿಗೆ ಹಿಂದೆಂದೂ ಸಿಗದಿದ್ದ ಅನುಭವ ಈ ಸಿನಿಮಾದಿಂದ ಸಿಗಲಿದೆ ಎನ್ನುವ ಭರವಸೆಯನ್ನು ನಿರ್ದೇಶಕ ನಾಗಣ್ಣ ನೀಡಿದ್ದಾರೆ. ಚಿತ್ರದಲ್ಲಿ ಅಭಿಮನ್ಯುವಿನ ಪಾತ್ರ ನಿಭಾಯಿಸಿರುವ ನಿಖಿಲ್‌ ಕುಮಾರ್‌ ಅವರು, ಪಾತ್ರಕ್ಕಾಗಿ ತಾವು ಮಾಡಿಕೊಂಡ ಸಿದ್ಧತೆಗಳು ಹಾಗೂ ಪಾತ್ರ ಪ್ರವೇಶದ ಕುರಿತು ಆಡಿರುವ ಮಾತುಗಳು ಇಲ್ಲಿವೆ.

ಹಿಂದಿನ ಎರಡು ಸಿನಿಮಾಗಳಲ್ಲಿ ಸಮಕಾಲೀನ ಪಾತ್ರ ನಿಭಾಯಿಸಿದ್ದಿರಿ. ಅಭಿಮನ್ಯುವಿನ ಪಾತ್ರಕ್ಕೆ ಹೊಂದಿಕೊಳ್ಳುವಾಗ ಸವಾಲು ಏನಿತ್ತು?

ಅಭಿಮನ್ಯು ಪಾತ್ರಕ್ಕೆ ನಾನೇ ಸೂಕ್ತ ಎಂಬುದನ್ನು ನಾಗಣ್ಣ ಮತ್ತು ನಿರ್ಮಾಪಕ ಮುನಿರತ್ನ ಅವರು ತೀರ್ಮಾನಿಸಿ, ನನ್ನನ್ನು ಭೇಟಿ ಮಾಡಿದರು. ಈ ಭೇಟಿ ನಡೆದಿದ್ದು ಜಾಗ್ವಾರ್ ಸಿನಿಮಾ ಕೆಲಸ ಮುಗಿದ ನಂತರ. ಈ ಪಾತ್ರ ಚೆನ್ನಾಗಿದೆ, ನೀನು ಇದನ್ನು ಮಾಡು ಎಂದು ನನ್ನ ತಂದೆಯವರೂ ಹೇಳಿದರು. ಉಳಿದ ಚಿತ್ರಗಳಲ್ಲಿ ಅಭಿನಯಿಸುವ ಬಗೆ ಬೇರೆ, ಪೌರಾಣಿಕ ಪಾತ್ರಗಳನ್ನು ಅಭಿನಯಿಸಬೇಕಾದ ಬಗೆಯೇ ಬೇರೆ.

ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿ ಹನ್ನೆರಡರಿಂದ ಹದಿನೈದು ತಿಂಗಳು ಕಳೆದಿದೆ. ಆದರೆ, ನಾನು ಇಂದು ಡಬ್ಬಿಂಗ್‌ ಕೆಲಸಕ್ಕೆ ಬಂದಿರುವೆ. ಪೌರಾಣಿಕ ಪಾತ್ರ ನಿಭಾಯಿಸುವಾಗ ಅನುಸರಿಸಬೇಕಾದ ಉಚ್ಛಾರ, ಹಾವ–ಭಾವ ನಮ್ಮದಾಗಿಸಿಕೊಳ್ಳುವುದು ಸವಾಲಿನ ಕೆಲಸವೇ ಹೌದು. ಪಾತ್ರ ಪ್ರವೇಶ ಒಂದು ಸವಾಲಿನ ಕೆಲಸ ಆಗಿತ್ತು. ಯಾವುದೇ ಸಿನಿಮಾ ಮಾಡಿದರೂ, ಯಾವುದೇ ಪಾತ್ರಕ್ಕೆ ಪ್ರವೇಶ ಪಡೆದುಕೊಳ್ಳಬೇಕು ಎಂದಾದರೆ ತುಸು ಸವಾಲು ಇದ್ದೇ ಇರುತ್ತದೆ.

ಪಾತ್ರ ಪ್ರವೇಶಕ್ಕೆ ಅನುಕೂಲವಾಗಲಿ ಎಂದು ಮಹಾಭಾರತವನ್ನು ಓದಿದ್ದು ಅಥವಾ ಬೇರೆಯವರಿಂದ ಹೇಳಿಕೊಳ್ಳುವುದು ಮಾಡಿದ್ದಿರಾ?

ಹಾಗೇನೂ ಇಲ್ಲ. ಅಭಿಮನ್ಯುವಿನ ಮನಸ್ಥಿತಿ ಏನಿತ್ತು, ಅವನ ವ್ಯಕ್ತಿತ್ವ ಏನಿತ್ತು ಎಂಬುದನ್ನೆಲ್ಲ ನಾನೇ ಓದಿ ತಿಳಿದುಕೊಂಡಿದ್ದೆ. ಬಹಳ ಆಳವಾಗಿ ಅಧ್ಯಯನ ಮಾಡಿದ್ದೆ ಎಂದು ಹೇಳುವುದಿಲ್ಲ. ಆದರೆ ‍ಪಾತ್ರ ನಿಭಾಯಿಸಲು ಬೇಕಿದ್ದಷ್ಟನ್ನು ತಿಳಿದುಕೊಂಡಿದ್ದೆ. ಚಿತ್ರೀಕರಣದ ಹಿಂದಿನ ದಿನವೇ ಸಂಭಾಷಣೆಗಳನ್ನು ಪಡೆದುಕೊಂಡು ಅಭ್ಯಾಸ ಮಾಡಿಕೊಳ್ಳುತ್ತಿದ್ದೆ. ಪೌರಾಣಿಕ ಪಾತ್ರವಾದ ಕಾರಣ ಉಚ್ಛಾರಣೆಯ ಬಗ್ಗೆ ಬಹಳ ಗಮನ ನೀಡಬೇಕಾಗುತ್ತಿತ್ತು.

Post Comments (+)