ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಲೈಫ್‌ನಲ್ಲಿ ನೋ ಆ್ಯಕ್ಟಿಂಗ್‌ ಎಂದ ಅಕ್ಷರಾ ಗೌಡ

Last Updated 10 ಜನವರಿ 2019, 20:00 IST
ಅಕ್ಷರ ಗಾತ್ರ

‘ಪಂಚತಂತ್ರ’ದ ಪಡ್ಡೆ ಹುಡುಗರ ಮಧ್ಯದಲ್ಲಿ ಬಿಂದಾಸ್‌ ಆಗಿ ಚ್ಯೂಯಿಂಗ್‌ ಗಮ್ ಅಗಿಯುತ್ತ ಓಡಾಡುತ್ತಿದ್ದ ಹುಡುಗಿ ಅಕ್ಷರಾ ಗೌಡ. ನಿರ್ದೇಶಕ ಯೋಗರಾಜ ಭಟ್ಟರ ಬಾಯಲ್ಲಿ ‘ಗೌಡ್ರೇ...’ ಎಂದು ಕರೆಸಿಕೊಳ್ಳುವಾಗೆಲ್ಲ ಹೃಸ್ವ ಸ್ಥಿತಿಯಲ್ಲಿದ್ದ ಅಕ್ಷರಾ ಕಣ್ಣುಗಳು ದೀರ್ಘವಾಗುತ್ತಿದ್ದವು.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಅಕ್ಷರಾ, ಎಂಜಿನಿಯರಿಂಗ್ ಓದಿದವರು. ಆಗಲೇ ಮಾಡೆಲಿಂಗ್ ಮೋಹದಲ್ಲಿ ಮುಳುಗಿ ಸಿನಿಮಾರಂಗದಲ್ಲಿ ಎದ್ದವರು. ‘ಎಂಜಿನಿಯರಿಂಗ್ ಓದಿ, ಕೈತುಂಬ ಸಂಬಳ ಬರುವ ನೌಕರಿ ಹಿಡಿದು ಆರಾಮಾಗಿರುವುದು ಬಿಟ್ಟು ನಟಿಸುವ ರಿಸ್ಕ್ ತೆಗೆದುಕೊಂಡಿದ್ದ್ಯಾಕೆ?’ ಎಂದು ಕಾಲೆಳೆಯಲು ಯತ್ನಿಸಿದರೆ, ‘ಹಾಗ್ಯಾಕಂತೀರಿ? ನನ್ನೊಟ್ಟಿಗೆ ಎಂಜಿನಿಯರ್ ಓದಿ ಕೆಲಸದಲ್ಲಿರುವ ನನ್ನೆಲ್ಲ ಸ್ನೇಹಿತರಿಗಿಂತ ಹೆಚ್ಚು ಸಂಪಾದನೆ ಮಾಡ್ತಿದ್ದೀನಿ ನಾನು!’ ಎಂದು ನಗುತ್ತಾರೆ ಅಕ್ಷರಾ.

ರಜಾ ದಿನಗಳಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಅವರು ಕೆಲವು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ‘ನನ್ನ ಸ್ನೇಹಿತರು, ಸಂಬಂಧಿಗಳಿಗೆ ತಮಿಳು ಬರುವುದಿಲ್ಲ. ಆ ಸಿನಿಮಾಗಳಲ್ಲಿ ನನ್ನ ಪಾತ್ರವನ್ನು ಅವರು ನೋಡುವುದಿಲ್ಲ. ಆದರೆ ಕನ್ನಡ ಹಾಗಲ್ಲವಲ್ಲ. ಇದು ನನ್ನ ಭಾಷೆ. ಇಲ್ಲಿ ನಾನು ಏನೇ ಮಾಡಿದರೂ ಎಲ್ಲರೂ ಗುರ್ತಿಸುತ್ತಾರೆ. ಹಾಗಾಗಿ ಒಂದು ಒಳ್ಳೆಯ ಸಿನಿಮಾ, ಪಾತ್ರದ ಮೂಲಕವೇ ಕನ್ನಡ ಚಿತ್ರರಂಗವನ್ನು ಪ್ರವೇಶಿಸಬೇಕು ಎಂದು ಕಾಯುತ್ತಿದ್ದೆ’ ಎನ್ನುತ್ತಾರೆ ಅವರು.

ಅವರ ಕಾಯುವಿಕೆ ಈಗ ಯೋಗರಾಜ ಭಟ್ಟರ ‘ಪಂಚತಂತ್ರ’ ಸಿನಿಮಾ ಮೂಲಕ ಸಫಲವಾಗುತ್ತಿದೆ. ಈ ಚಿತ್ರದಲ್ಲಿ ಯಾವುದಕ್ಕೂ ಜಗ್ಗದ, ಯಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದ ಸಮಚಿತ್ತದ ಹುಡುಗಿಯ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ‘ಈ ಸಿನಿಮಾದ ಬೇರೆ ಪಾತ್ರಗಳಿಗೆ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಈ ಪಾತ್ರಕ್ಕೆ ನಿನ್ನನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ. ನೀನೇ ನಟಿಸಬೇಕು’ ಎಂದು ಭಟ್ಟರು ಹೇಳಿದ್ದನ್ನು ತುಂಬ ಹೆಮ್ಮೆಯಿಂದ ಅವರು ನೆನಪಿಸಿಕೊಳ್ಳುತ್ತಾರೆ. ‘ಆ ಮಾತು ನನಗೆ ಸಿಕ್ಕ ಬಹುದೊಡ್ಡ ಗೌರವ’ ಎನ್ನುತ್ತಾರೆ.

‘ಪಂಚತಂತ್ರ’ ಸಿನಿಮಾದಲ್ಲಿ ನಟಿಸಬೇಕು ಎಂದು ನಿಮಗೆ ಅನಿಸಲು ಕಾರಣಗಳೇನು?’ ಎಂದು ಕೇಳಿದರೆ ‘ಹಲವು ಕಾರಣಗಳೇನೂ ಇಲ್ಲ. ಇರುವ ಕಾರಣಗಳಲ್ಲಿ ಇದು ಮುಖ್ಯವಾದದ್ದು, ಇದು ಅಮುಖ್ಯವಾದದ್ದು ಅಂತಲೂ ಏನೂ ಇಲ್ಲ.

ಇರುವ ಕಾರಣ ಒಂದೇ ಒಂದು. ಅದು ಯೋಗರಾಜ್‌ ಭಟ್‌. ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎನ್ನುವುದಕ್ಕಿಂತ ಬೇರೆ ಕಾರಣಗಳು ಬೇಕಿರಲಿಲ್ಲ’ ಎಂದು ಖಂಡತುಂಡವಾಗಿ ಮಾತನಾಡುವ ಇವರು, ಭಟ್ಟರಿಂದಕಲಿತ ಹಲವು ಪಾಠಗಳ ಕುರಿತೂ ಮಾತನಾಡುತ್ತಾರೆ.

‘ಸಾಮಾನ್ಯವಾಗಿ ಸಿನಿಮಾರಂಗದವರು ಎಂದರೆ ಅವರ ಬಾಹ್ಯ ಇಮೇಜ್ ಬೇರೆ, ನಿಜವಾದ ಸ್ವಭಾವ ಬೇರೆ ಇರುತ್ತದೆ. ನಾನು ಯೋಗರಾಜ ಭಟ್ಟರ ಕೆಲವು ಸಿನಿಮಾಗಳನ್ನು ನೋಡಿದ್ದೇನೆ. ಅವರ ಹಾಡುಗಳು ಎಂದರೆ ನನಗೆ ತುಂಬ ಇಷ್ಟ. ಅವುಗಳ ಮೂಲಕ ಅವರ ಬಗ್ಗೆ ಗೌರವ ಬೆಳೆಸಿಕೊಂಡಿದ್ದೆ. ಅವರ ಜತೆ ಕೆಲಸ ಮಾಡಿದ ಮೇಲೆ ಆ ಗೌರವ ಇನ್ನಷ್ಟು ಹೆಚ್ಚಾಯ್ತು. ಸೆಟ್‌ನಲ್ಲಿ ಎಷ್ಟೋ ಜನರಿಗೆ ಒಂದು ದೃಶ್ಯಕ್ಕೆ ಇಪ್ಪತ್ತು ಟೇಕ್ ತೆಗೆದುಕೊಳ್ತಿದ್ರು. ಆದರೆ ಒಂಚೂರೂ ಬೇಜಾರು, ಸಿಟ್ಟು ಮಾಡಿಕೊಳ್ಳದೆ ಉತ್ಸಾಹ ತುಂಬಿ ಕೆಲಸ ಮಾಡುತ್ತಿದ್ದರು. ಸೆಟ್‌ನಲ್ಲಿ ಅಂಥ ಒಬ್ಬ ನಾಯಕ ಇದ್ದಾಗ ಯಾವುದೂ ಶ್ರಮ ಎನಿಸುವುದಿಲ್ಲ’ ಎಂದು ಅವರು ಮನಃಪೂರ್ತಿ ಪ್ರಶಂಸಿಸುತ್ತಾರೆ.

ನಟಿಯ ಬದುಕನ್ನು ಆಯ್ದುಕೊಂಡಾಗ್ಯೂ ಅಕ್ಷರಾ ಅವರು ತಮ್ಮ ವೃತ್ತಿಜೀವನ ಹೀಗೆಯೇ ಇರಬೇಕು ಎಂದು ನೀಲನಕ್ಷೆಯನ್ನೇನೂ ಬಿಡಿಸಿಕೊಂಡು ಕೂತಿಲ್ಲ. ‘ಏನು ಬರುತ್ತದೆಯೋ, ಹೇಗೆ ಬರುತ್ತದೆಯೋಅದನ್ನು ಹಾಗ್ಹಾಗೆ ಸ್ವೀಕರಿಸಿ ನನ್ನ ಕೈಲಾದ ಮಟ್ಟಿಗೆ ನಿರ್ವಹಿಸುತ್ತಾ ಹೋಗುತ್ತೇನೆ’ ಎನ್ನುವುದು ಅವರ ಪಾಲಿಸಿ. ಹೊಟ್ಟೆಪಾಡಿಗಾಗಿ ನಟನೆಯನ್ನು ಆಯ್ದುಕೊಂಡವರಲ್ಲ ಅವರು. ಮನಸ್ಸಿನ ಖುಷಿಯಾಗಿ ಬಣ್ಣಹಚ್ಚುವವರು. ಹೀಗೆಂದು ಅವರೇ ಹೇಳಿಕೊಳ್ಳುತ್ತಾರೆ.

‘ನಮಗೆ ಹಣ ಕೊಡುವುದೇ ಒಂದು ಕಲ್ಪನೆಯ ಪಾತ್ರಕ್ಕೆ ಜೀವ ತುಂಬುವುದಕ್ಕೆ. ನಾನಲ್ಲದ್ದನ್ನು ಅಭಿನಯಿಸಿ ತೋರಿಸುವುದಕ್ಕೆ. ನಾನು ಹಣ ಪಡೆದು ನಟಿಸುತ್ತೇನೆ. ಆದರೆ ಕೋಟಿ ಕೊಟ್ಟರೂ ನಿಜಜೀವನದಲ್ಲಿ ನಟಿಸಲಾರೆ. ಇಬ್ಬರ ಜತೆಗೂ, ಇಪ್ಪತ್ತು ಜನರ ಜತೆಗೂ ಎರಡು ಸಾವಿರ ಜನರ ಜತೆಗೂ ನಾನು ಇರುವ ಹಾಗೆಯೇ ಇರುತ್ತೇನೆ’ ಎನ್ನುವುದು ಅವರ ಖಡಕ್ ಮಾತು.

ಸದ್ಯಕ್ಕೆ ‘ಪಂಚತಂತ್ರ’ ಸಿನಿಮಾ ಬಿಡುಗಡೆಯನ್ನು ಅವರು ಎದುರುನೋಡುತ್ತಿದ್ದಾರೆ. ಆ ಸಿನಿಮಾದಲ್ಲಿ ನಟಿಸಿದ ಪಾತ್ರ ತನಗೆ ಕನ್ನಡದಲ್ಲಿ ಇನ್ನಷ್ಟು ಅವಕಾಶಗಳನ್ನು ಚಿಗುರಿಸಬಲ್ಲದು ಎಂಬ ನಂಬಿಕೆಯೂ ಅವರಿಗಿದೆ. ಬರುವ ಅವಕಾಶಗಳ ಮೇಲೆ ನಟನಾಬದುಕು ಯಾವ ದಿಕ್ಕಿಗೆ ತಿರುಗಿಕೊಳ್ಳುತ್ತದೆ ನೋಡಬೇಕು ಎಂಬ ಕುತೂಹಲದಿಂದ ಅವರು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT