ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ 10 ವಾರ OTTಗೆ ಹೊಸ ಸಿನಿಮಾಗಳು ಬೇಡ: ತೆಲುಗು ಚಿತ್ರ ನಿರ್ಮಾಪಕರ ನಿರ್ಧಾರ

Last Updated 18 ಜುಲೈ 2022, 10:20 IST
ಅಕ್ಷರ ಗಾತ್ರ

ಹೈದರಾಬಾದ್‌: ಕನಿಷ್ಠ 10 ವಾರಗಳವರೆಗೆ ಯಾವುದೇ ಹೊಸ ಸಿನಿಮಾವನ್ನು ಒಟಿಟಿ ವೇದಿಗಳಿಗೆ ಬಿಡುಗಡೆ ಮಾಡದಿರಲು ತೆಲುಗು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪಿಟಿಐ ವರದಿ ಮಾಡಿದೆ.

ಕೋವಿಡ್ ನಂತರದ ಪರಿಸ್ಥಿತಿ ತಂದಿಟ್ಟಿರುವ ಸಂದಿಗ್ಧತೆಗಳು ಹಾಗೂ ನಟ, ನಟಿಯರ, ತಂತ್ರಜ್ಞರ ಸಂಭಾವನೆಗಳು, ಉತ್ಪಾದನಾ ವೆಚ್ಚಗಳು ಗಣನೀಯವಾಗಿ ಏರಿರುವುದರಿಂದ ಕೇವಲ ಒಟಿಟಿ ಒಂದೇ ನಂಬಿ ಸಿನಿಮಾಗಳನ್ನು ಮಾಡಲಾಗುವುದಿಲ್ಲ ಎಂಬ ಒಮ್ಮತಾಭಿಪ್ರಾಯಕ್ಕೆ ತೆಲಗು ಚಿತ್ರ ನಿರ್ಮಾಪಕರು ಬಂದಿದ್ದಾರೆ.

ಕೋವಿಡ್‌–19ನಿಂದಾಗಿ ಚಿತ್ರಮಂದಿರಗಳ ಆದಾಯ ಕುಸಿದಿದ್ದು, ಉತ್ಪಾದನಾ ವೆಚ್ಚಗಳು ಹಲವು ಪಟ್ಟು ಹೆಚ್ಚಾಗಿವೆ. ಇದನ್ನು ಪರಿಗಣಿಸಿ ತೆಲುಗು ಸಿನಿಮಾ ನಿರ್ಮಾಪಕರು ಚಿತ್ರೋದ್ಯಮಕ್ಕೆ ಪುನಶ್ಚೇತನ ನೀಡುವ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಆಗಸ್ಟ್‌ 1ರಿಂದ ಎಲ್ಲಾ ಸಿನಿಮಾಗಳ ಚಿತ್ರೀಕರಣ ಸ್ಥಗಿತಗೊಳಿಸುವ ಕುರಿತು ಆಲೋಚನೆ ನಡೆಯುತ್ತಿದೆ.

ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಯಾವುದೇ ಹೊಸ ಸಿನಿಮಾವನ್ನು 10 ವಾರಗಳ ವರೆಗೆ ಒಟಿಟಿ ವೇದಿಕೆಗಳಿಗೆ ಬಿಡುಗಡೆ ಮಾಡದಿರುವ ಮಹತ್ವದ ನಿರ್ಧಾರವನ್ನು ನಿರ್ಮಾಪಕರು ತೆಗೆದುಕೊಂಡಿದ್ದಾರೆ.

ಸಾಕಷ್ಟು ತೆಲುಗು ನಿರ್ಮಾಪಕರು ಕಳೆದೆರಡು ದಿನಗಳಿಂದ ಹೈದರಾಬಾದ್‌ನಲ್ಲಿ ಸಭೆ ನಡೆಸುತ್ತಿದ್ದಾರೆ. ಉದ್ಯಮ ಉಳಿವಿಗೆ ನೆರವಾಗುವ ವಿಚಾರಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾತುಕತೆ ನಡೆಸಿ, ತೀರ್ಮಾನ ಕೈಗೊಂಡಿದ್ದಾರೆ.

ಆಗಸ್ಟ್ 1ರಿಂದ ಸಿನಿಮಾಗಳ ಚಿತ್ರೀಕರಣ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳುವಂತೆತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಗೆ ತಿಳಿಸಲಾಗಿದೆ ಎಂದು ಖ್ಯಾತ ನಿರ್ಮಾಪಕರೊಬ್ಬರು ಮಾಹಿತಿ ನೀಡಿದ್ದಾರೆ.

'ಆರ್‌ಆರ್‌ಆರ್‌, ಕೆಜಿಎಫ್‌–2 ಹಾಗೂ ಇನ್ನೂ ಒಂದೆರಡು ಸಿನಿಮಾಗಳನ್ನು ಹೊರತುಪಡಿಸಿ ಚಿತ್ರಮಂದಿರಗಳ ಆದಾಯ ಶೇ 20 ರಷ್ಟು ಕುಸಿದಿದೆ. ಈಗಾಗಲೇ ಕೋವಿಡ್‌ನಿಂದ ತತ್ತರಿಸಿರುವ ಉದ್ಯಮಕ್ಕೆ ಇದು ಬಲವಾದ ಪೆಟ್ಟು ನೀಡಿದೆ. ಇಂತಹ ಸನ್ನಿವೇಶದಲ್ಲಿ ಉದ್ಯಮದ ಉಳಿವಿನ ಬಗ್ಗೆ ಪ್ರತಿಯೊಬ್ಬರೂ ಯೋಚಿಸುತ್ತಿದ್ದಾರೆ. ಇಡೀ ಉದ್ಯಮದ ಉಳಿವನ್ನು ಖಾತ್ರಿಪಡಿಸುವ ಪುನರ್‌ರಚನಾ (ಪುನಶ್ಚೇತನ) ಮಾರ್ಗಗಳನ್ನು ರೂಪಿಸಲು ನಿರ್ಮಾಪಕರು ಒಂದಾಗಿದ್ದಾರೆ' ಎಂದು ಅವರು ಹೇಳಿದ್ದಾರೆ.

ಇದೀಗ, ದೊಡ್ಡ ನಟರ ಸಿನಿಮಾಗಳೂ ಮೂರೇ ವಾರಗಳಲ್ಲಿ ಒಟಿಟಿಗೆ ಬರುತ್ತಿವೆ. ಇದು ಚಿತ್ರಮಂದಿರಗಳ ಆದಾಯ ಕುಸಿಯಲು ಪ್ರಮುಖ ಕಾರಣವಾಗಿದೆ. ಇಂತಹ ಮಾರುಕಟ್ಟೆಯಲ್ಲಿ ಸಣ್ಣ ಬಜೆಟ್‌ ಸಿನಿಮಾಗಳಿಗೆ ಉಳಿಗಾಲವಿಲ್ಲ. ಮುಂಬರುವ ದಿನಗಳಲ್ಲಿ ಮತ್ತಷ್ಟು ಚರ್ಚೆ ನಡೆಸಿ ಮುಂದಿನ ಹಾದಿಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುತ್ತೇವೆಎಂದು ಮತ್ತೊಬ್ಬ ನಿರ್ಮಾಪಕರು ತಿಳಿಸಿದ್ದಾರೆ.

ಸಂಭಾವನೆ ಮೊತ್ತವನ್ನು ಕಡಿಮೆ ಮಾಡಿಕೊಳ್ಳುವ ಕುರಿತುಸ್ಟಾರ್‌ ನಟರು, ನಿರ್ದೇಶಕರ ಮನವೊಲಿಸುವ ಬಗ್ಗೆ ಚರ್ಚೆಯಾಗಿದೆ. ಇದೇ ವಿಚಾರವಾಗಿ ತಂತ್ರಜ್ಞರೊಂದಿಗೆ ಮಾತುಕತೆ ನಡೆಸುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಈ ವಿಚಾರಗಳು ಇತ್ಯರ್ಥವಾಗುವವರೆಗೆ ಚಿತ್ರೀಕರಣ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಕೆಲವು ಮಾದ್ಯಮಗಳು ವರದಿ ಮಾಡಿವೆ.

ಅದೇರೀತಿ, ಚಿತ್ರೀಕರಣ ಸ್ಥಗಿತಗೊಳಿಸುವುದರಿಂದ ಮತ್ತಷ್ಟು ಸಮಸ್ಯೆಗಳು ತಲೆದೋರಬಹುದು ಎಂದು ಕೆಲವು ನಿರ್ಮಾಪಕರು ಆತಂಕ ವ್ಯಕ್ತಪಡಿಸಿರುವುದಾಗಿಯೂ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT