ಭಾನುವಾರ, ನವೆಂಬರ್ 17, 2019
28 °C

‘ಒಡೆಯ’ನ ಖಡಕ್‌ ಲುಕ್‌ನಲ್ಲಿ ದರ್ಶನ್‌

Published:
Updated:
Prajavani

ನಿರ್ದೇಶಕ ಎಂ.ಡಿ. ಶ್ರೀಧರ್‌ ಮತ್ತು ನಟ ದರ್ಶನ್‌ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ‘ಒಡೆಯ’ ಚಿತ್ರ ಚಂದನವನದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ ದಚ್ಚು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ಚಿತ್ರದ ಖಡಕ್‌ ಲುಕ್ ಫೋಟೊ ವೈರಲ್‌ ಆಗಿದೆ. 

ಸಿನಿಮಾ ಬಗ್ಗೆ ಯಾವುದೇ ಮಾಹಿತಿ, ಪೋಸ್ಟರ್‌ ಹಂಚಿಕೊಳ್ಳದೆ ಚಿತ್ರತಂಡ ಸಾಕಷ್ಟು ಕುತೂಹಲ ಕಾಯ್ದುಕೊಂಡಿದೆ. ಮೊದಲ ಬಾರಿಗೆ ಗೌರಿ, ಗಣೇಶನ ಹಬ್ಬದಂದು ದರ್ಶನ್‌ ಅವರೇ ಟ್ವಿಟರ್‌ನಲ್ಲಿ ‘ಒಡೆಯ’ನ  ಪೋಸ್ಟರ್‌ ಹಾಕಿ ಜನರಿಗೆ ಹಬ್ಬಕ್ಕೆ ಶುಭ ಕೋರಿದ್ದರು. ಈಗ ಅವರೇ ಬೊಲೆರೊ ವಾಹನದ ಮೇಲೆ ಕುಳಿತಿರುವ ಫೋಟೊ ಹಂಚಿಕೊಂಡಿದ್ದಾರೆ. ಜೊತೆಗೆ, ಟ್ವಿಟರ್‌ನ ಡಿಪಿಗೂ ಆ ಫೋಟೊ ಹಾಕಿದ್ದಾರೆ. 

ಇದು ತಮಿಳಿನ ‘ವೀರಂ’ ಚಿತ್ರದ ರಿಮೇಕ್. ಸಿನಿಮಾದಲ್ಲಿ ದರ್ಶನ್‌ ಅವರ ಪಾತ್ರದ ಹೆಸರು ಗಜೇಂದ್ರ. ಇದರಲ್ಲಿ ಐವರು ಸಹೋದರರ ಪ್ರೀತಿಯ ಅಣ್ಣನ ಕಥೆ ಹೆಣೆಯಲಾಗಿದೆ. ತಮಿಳಿನಲ್ಲಿ ನಟ ಅಜಿತ್‌ ನಿಭಾಯಿಸಿದ್ದ ಪಾತ್ರಕ್ಕೆ ದರ್ಶನ್‌ ಜೀವ ತುಂಬಿದ್ದಾರಂತೆ.

ಈ ಹಿಂದೆ ನಿರ್ದೇಶಕ ಎಂ.ಡಿ. ಶ್ರೀಧರ್ ಅವರು ದರ್ಶನ್‌ಗಾಗಿ ‘ಪೊರ್ಕಿ’ ಮತ್ತು ‘ಬುಲ್‌ಬುಲ್‌’ ಚಿತ್ರ ನಿರ್ದೇಶಿಸಿದ್ದರು. ಈ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ತೆಗೆದಿದ್ದು ಎಲ್ಲರಿಗೂ ಗೊತ್ತು. ಹಾಗಾಗಿಯೇ, ‘ಒಡೆಯ’ನ ಮೇಲೂ ನಿರೀಕ್ಷೆಗಳು ಗರಿಗೆದರಿವೆ. 

ಸಂದೇಶ್‌ ಪ್ರೊಡಕ್ಷನ್‌ನಡಿ ಎನ್‌. ಸಂದೇಶ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎ.ವಿ. ಕೃಷ್ಣಕುಮಾರ್‌(ಕೆಕೆ) ಅವರ ಛಾಯಾಗ್ರಹಣವಿದೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ತಾರಾಗಣದಲ್ಲಿ ನಿರಂಜನ್‌, ಪಂಕಜ್‌, ಯಶಸ್‌ ಸೂರ್ಯ, ಸಾಧುಕೋಕಿಲ, ಚಿಕ್ಕಣ್, ಅವಿನಾಶ್‌, ರವಿಶಂಕರ್‌ ಇದ್ದಾರೆ.

ಪ್ರತಿಕ್ರಿಯಿಸಿ (+)