‘ಹೋಂವರ್ಕ್‌’ನಲ್ಲೇ ಸಿನಿಮಾ ಕಟ್ಟುವ ಕಸುಬುದಾರ

ಭಾನುವಾರ, ಏಪ್ರಿಲ್ 21, 2019
25 °C

‘ಹೋಂವರ್ಕ್‌’ನಲ್ಲೇ ಸಿನಿಮಾ ಕಟ್ಟುವ ಕಸುಬುದಾರ

Published:
Updated:
Prajavani

ಜೀವನಕತೆ ಆಧರಿಸಿ ಸಿನಿಮಾಗಳು ಅನೇಕ ಕಾರಣಗಳಿಗೆ ಸಪ್ಪೆ ಎನಿಸುವುದಿದೆ. ಆದರೆ ಒಮಂಗ್‌ ಕುಮಾರ್‌ ನಿರ್ದೇಶನದ ಬಯೋಪಿಕ್‌ಗಳನ್ನು ಪ್ರೇಕ್ಷಕರು ಆಸ್ಥೆಯಿಂದ ನೋಡುತ್ತಾರೆ. ತಮ್ಮ ಚಿತ್ರದ ಪಾತ್ರಗಳಿಗೆ ನಟರನ್ನು ಆಯ್ಕೆ ಮಾಡಿದ ತಕ್ಷಣ ಅವರಿಗೆ ಒಂದಿಷ್ಟು ಹೋಂ ವರ್ಕ್‌ ಕೊಟ್ಟು ತಾನೂ ಹೋಂ ವರ್ಕ್‌ನಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ‘ಒಮಂಗ್‌ ಪ್ಯಾಶನ್‌’ ಚಿತ್ರದ ಗೆಲುವಿನ ಮೂಲಮಂತ್ರ

***

1990ರ ದಶಕದ ಮೊದಲ ಭಾಗದಲ್ಲಿ ಝೀ ಟಿ.ವಿಯಲ್ಲಿ ‘ಏಕ್‌ ಮಿನಟ್’ ಎಂಬ ಷೋ ಪ್ರಸಾರವಾಗುತ್ತಿತ್ತು. ಅದು ಜನಮನವನ್ನು ಹಿಡಿಯುವಲ್ಲಿ ಕೆಲಸ ಮಾಡಿದ್ದ ಮಿದುಳು ಒಮಂಗ್ ಕುಮಾರ್ ಅವರದ್ದು.

ಮುಂಬೈನಲ್ಲಿ ಹುಟ್ಟಿ, ಬೆಳೆದ ಅವರಿಗೆ ಸಿನಿಮಾ ಕುರಿತು ಔಪಚಾರಿಕವಾಗಿ ಅಧ್ಯಯನ ಮಾಡಲು ಆಗಲಿಲ್ಲ. ಹಾಗಂತ ಕನಸು ಕಮರಲು ಬಿಡಲಿಲ್ಲ. 

ಮೊದಲು ಒಮಂಗ್‌ ಕ್ಯಾಮೆರಾ ಹಿಂದೆ ನಿಂತು, ಒಂದು ಕಣ್ಣನ್ನು ಮುಚ್ಚಿ ಕೆಲವು ತಂತ್ರಗಳನ್ನು ಕಲಿಯುತ್ತಾ ಹೋದರು. ಕ್ಯಾಮೆರಾ ಸಹಾಯಕನಾಗಿಯೇ ಉಳಿದರೆ ಉಳಿಗಾಲವಿಲ್ಲ ಎನ್ನುವುದು ಬೇಗ ಗೊತ್ತಾಯಿತು. ನಿರ್ಮಾಣ ವಿನ್ಯಾಸ, ಕಲಾ ನಿರ್ದೇಶನದ ಸೂಕ್ಷ್ಮಗಳನ್ನು ಕಲಿತದ್ದೇ ಹಾಗೆ ಕ್ಯಾಮೆರಾ ಹಿಂದೆ ನಿಂತು. ಅದನ್ನು ದುಡಿಸಿಕೊಳ್ಳಲಾರಂಭಿಸಿದರು. ಟಿ.ವಿ ನಿರೂಪಣೆ, ಕಾರ್ಯಕ್ರಮ ನಿರ್ವಹಣೆ, ಕಿರುತೆರೆಯಲ್ಲೇ ಮಾಡೆಲ್‌ ಆಗುವುದು... ಹೀಗೆ ಹಲವು ಪ್ರತಿಭೆಗಳನ್ನು ತುಳುಕಿಸಿದ ಅವರೊಳಗೆ ಸದಾ ನಿರ್ದೇಶಕನೊಬ್ಬ ಜಾಗೃತನಾಗಿದ್ದ. ಸಂಜಯ್‌ಲೀಲಾ ಬನ್ಸಾಲಿ ಸಿನಿಮಾಗೆ ಬಳಸುವ ಬಣ್ಣಗಳು, ಸೆಟ್‌ಗಳನ್ನು ಮೆಚ್ಚಿಕೊಂಡಿದ್ದ ಒಮಂಗ್ ಆ ನಿರ್ದೇಶಕರ ಗರಡಿಗೇ ಹೋದದ್ದು ಆಕಸ್ಮಿಕವೇನಲ್ಲ. ಅದಕ್ಕೂ ಒಂದಿಷ್ಟು ಸೈಕಲ್‌ ಹೊಡೆದರು.

‘ದಿಲ್‌ ಹೈ ತುಮ್ಹಾರಾ’ ಹಿಂದಿ ಸಿನಿಮಾ ಮೂಲಕ 2002ರಲ್ಲೇ ಕಲಾ ನಿರ್ದೇಶಕರಾದ ಅವರು, ‘ಚಮೇಲಿ’, ‘ಫಿದಾ’ ಸಿನಿಮಾಗಳಲ್ಲೂ ಆ ಕೆಲಸದ ರುಜು ಹಾಕಿದರು. ಅವುಗಳಲ್ಲಿನ ಅವರ ವೃತ್ತಿಪರತೆಗೆ ಸಿಕ್ಕ ಮನ್ನಣೆಯೇ ‘ಬ್ಲ್ಯಾಕ್’. ಸಂಜಯ್‌ಲೀಲಾ ಬನ್ಸಾಲಿ ಕನಸಿನ ಆ ಸಿನಿಮಾದ ನೆರಳು–ಬೆಳಕು, ಬಣ್ಣದ ಸಂಯೋಜನೆಯಲ್ಲಿ ಒಮಂಗ್‌ ಕಾಣ್ಕೆಯನ್ನು ಮರೆಯಲಾಗದು.

ಹನ್ನೆರಡು ವರ್ಷ ಕಲಾ ನಿರ್ದೇಶನ, ನಿರ್ಮಾಣ ವಿನ್ಯಾಸ ಎಂದುಕೊಂಡೇ ದುಡಿಯುತ್ತಾ ಬಂದ ಒಮಂಗ್‌, ನಿರ್ದೇಶನಕ್ಕೆ ಇಳಿದದ್ದು ‘ಮೇರಿ ಕೋಮ್’ ಚಿತ್ರದಿಂದ. ಆಗಿನಿಂದಲೂ ಅವರಿಗೆ ಬಯೋಪಿಕ್‌ ಮೋಹ.

ಪ್ರಿಯಾಂಕಾ ಚೋಪ್ರಾ ದೇಹವನ್ನು ಹುರಿಗಟ್ಟಿಸಿಕೊಂಡು ಅಭಿನಯಿಸಿದ ಮೇರಿ ಕೋಮ್ ಶ್ರೇಷ್ಠ ಮನರಂಜನಾತ್ಮಕ ಚಿತ್ರ ಎಂಬ ರಾಷ್ಟ್ರಪ್ರಶಸ್ತಿಯನ್ನೂ ಪಡೆಯಿತು. ಅದರ ಯಶಸ್ಸೇ ಒಮಂಗ್‌ ಪಾಲಿಗೆ ಚಿಮ್ಮು ಹಲಗೆ. ಆಮೇಲೆ ‘ಸೊರಬ್ಜಿತ್’ ಹಿಂದಿ ಸಿನಿಮಾ ನಿರ್ದೇಶಿಸಿ, ವ್ಯಕ್ತಿ ಬದುಕು ಆಧರಿಸಿದ ಸಿನಿಮಾ ಪಯಣವನ್ನು ಮುಂದುವರಿಸಿದರು. ರಣದೀಪ್‌ ಹೂಡಾ, ಐಶ್ವರ್ಯಾ ರೈ ಅಭಿನಯದ ಆ ಸಿನಿಮಾ ನಿರೀಕ್ಷಿಸಿದಷ್ಟು ಯಶಸ್ವಿಯಾಗದೇ ಹೋದರೂ ಉತ್ತಮ ವಿಮರ್ಶೆಗಳಿಗೆ ಪಕ್ಕಾಯಿತು. ಸಂಜಯ್ ದತ್ ಅಭಿನಯದ ‘ಭೂಮಿ’ ಚಿತ್ರಕ್ಕೆ ಆ್ಯಕ್ಷನ್‌, ಕಟ್‌ ಹೇಳಲು ಅಷ್ಟು ಸಾಕಾಯಿತು.

ಬಯೋಪಿಕ್‌ಗಳನ್ನು ಮಾಡಲು ಒಮಂಗ್ ಕುಮಾರ್ ಮಾಡಿಕೊಳ್ಳುತ್ತಿದ್ದ ಹೋಂವರ್ಕ್‌ ಬಾಲಿವುಡ್‌ನ ಅನೇಕರ ಬಾಯಲ್ಲಿ ಹರಿದಾಡುತ್ತಿತ್ತು. ‘ಸೊರಬ್ಜಿತ್’ ಪಾತ್ರಕ್ಕೆ ಐಶ್ವರ್ಯಾ ರೈ ಆಯ್ಕೆಯಾದಾಗ ಅನೇಕ ಟೀಕೆಗಳು ಎದುರಾಗಿದ್ದವು. ಅವನ್ನು ಹೋಗಲಾಡಿಸಲೆಂದೇ ಒಮಂಗ್ ಸಾಕಷ್ಟು ಹೋಂವರ್ಕ್ ಮಾಡಿದ್ದೇ ಅಲ್ಲದೆ ಐಶ್ವರ್ಯಾ ಅವರನ್ನೂ ಮಾನಸಿಕವಾಗಿ ಪಾತ್ರಕ್ಕೆ ಸಿದ್ಧಪಡಿಸಿದ್ದರು. ಮೇರಿ ಕೋಮ್ ಪಾತ್ರಕ್ಕೆ ಪ್ರಿಯಾಂಕಾ ಅವರನ್ನು ಅಣಿಗೊಳಿಸಿದ್ದ ಪ್ರಕ್ರಿಯೆಯಂತೂ ಪುಸ್ತಕ ಬರೆಯುವಷ್ಟು ವಿವರಗಳನ್ನು ಒಳಗೊಂಡಿದೆ.

ಪಿಎಂ ನರೇಂದ್ರ ಮೋದಿ...

ಇಂಥ ಹಿನ್ನೆಲೆಯೇ ಅವರು ‘ಪಿಎಂ ನರೇಂದ್ರ ಮೋದಿ’ ಸಿನಿಮಾ ನಿರ್ದೇಶಿಸಲು ಪ್ರೇರಣೆಯಾಗಿರಲಿಕ್ಕೂ ಸಾಕು. ಮೋದಿ ಅವರಂಥ ಜನಪ್ರಿಯ ವ್ಯಕ್ತಿತ್ವವನ್ನು ತೆರೆಮೇಲೆ ತರಲೂ ಅವರು ಸಾಕಷ್ಟು ಹೋಂವರ್ಕ್‌ ಮಾಡಿದ್ದಾರೆ.

ಮಗ ವಿವೇಕ್‌ ಒಬೆರಾಯ್‌ ಪ್ರಧಾನಿ ಪಾತ್ರದಲ್ಲಿ ಅಭಿನಯಿಸಿದ್ದನ್ನು ಬೆರಗುಗಣ್ಣಿನಿಂದ ನೋಡಿರುವ ಸುರೇಶ್ ಒಬೆರಾಯ್‌ ಸಿನಿಮಾ ನಿರ್ಮಾಣದ ಪಾಲುದಾರರೂ ಹೌದು. ಒಮಂಗ್ ಈ ಸಿನಿಮಾದಿಂದ ತಮ್ಮ ವೃತ್ತಿಬದುಕು ಯಾವ ರೀತಿಯ ತಿರುವು ಪಡೆದೀತೋ ಎಂಬ ಕುತೂಹಲವನ್ನು ಕಣ್ತುಂಬಿಕೊಂಡು ಕಾಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !