‘ಹಾಡಲು ಒಂದು ರಾಗ ಬೇಕು’

5
ಒಂದಲ್ಲಾ ಎರಡಲ್ಲಾ ಚಿತ್ರದ ಹಾಡು ಬಿಡುಗಡೆ

‘ಹಾಡಲು ಒಂದು ರಾಗ ಬೇಕು’

Published:
Updated:

ಡಿ. ಸತ್ಯಪ್ರಕಾಶ್ ನಿರ್ದೇಶನದ ‘ಒಂದಲ್ಲಾ ಎರಡಲ್ಲಾ...’ ಚಿತ್ರದ ಕುರಿತು ಕುತೂಹಲ ನಿಧಾನಕ್ಕೆ ಗರಿಗೆದರುತ್ತಿದೆ. ಈಚೆಗೆ ಚಿತ್ರದ ಮೊದಲ ಹಾಡಾದ ‘ಹಾಡಲು ಒಂದು ರಾಗ ಬೇಕು’ ಗೀತೆ ಆನಂದ್ ಆಡಿಯೊ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಟ್ರೇಲರ್‌ ಮೂಲಕ ಗಮನ ಸೆಳೆದಿರುವ ‘ಒಂದಲ್ಲಾ ಎರಡಲ್ಲಾ...’ ಈಗ ಭಾವೈಕ್ಯ ಸಾರುವ ಹಾಡಿನ ಮೂಲಕ ಜನರ ಮನಮುಟ್ಟಲು ಪ್ರಯತ್ನಿಸುತ್ತಿದೆ.

‘ಹಾಡಲು ಒಂದು ರಾಗ ಬೇಕು, ಬಾಳಲು ಒಂದಾಗಬೇಕು’ ಎಂದು ಪ್ರಾರಂಭವಾಗುವ ಈ ಹಾಡು ಚಿತ್ರದ ಪ್ರಾರಂಭದಲ್ಲಿ ಟೈಟಲ್ ಕಾರ್ಡುಗಳ ಜೊತೆ ಹಿನ್ನೆಲೆಯಲ್ಲಿ ಬರಲಿದೆ. ಈ ಹಾಡು ಇಡೀ ಚಿತ್ರದ ಆಶಯವನ್ನು ಪ್ರತಿಧ್ವನಿಸುತ್ತದೆ. ವಾಸುಕಿ ವೈಭವ್ ಮತ್ತು ನಾಬಿನ್ ಪಾಲ್ ಅವರ ಸಂಗೀತ ಸಂಯೋಜನೆಯ ಈ ಹಾಡನ್ನು ಸುನಿಧಿ ಮತ್ತು ಅದಿತಿ ಹಾಡಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಸತ್ಯಪ್ರಕಾಶ್‌. ಈ ಹಾಡಿನ ಸಾಹಿತ್ಯವನ್ನು ಅವರೇ ಬರೆದಿದ್ದಾರೆ.

‘ಆಧುನಿಕತೆ, ವೈಜ್ಞಾನಿಕತೆಯಿಂದ ಬದುಕನ್ನು ಸರಳಗೊಳಿಸಿಕೊಳ್ಳುವ ಬದಲು ಇಂದು ಮಾನವ ಮತ್ತಷ್ಟು ಲೋಭಿಯಾಗಿ ಎಲ್ಲವೂ ಬೇಕು ಎನ್ನುವ ಹಪಹಪಿಯಲ್ಲಿ ಜೀವನವನ್ನು ಕಠಿಣಗೊಳಿಸಿಕೊಳ್ಳುತ್ತಿದ್ದಾನೆ. ಹಾಗಾದರೆ ನೆಮ್ಮದಿಯಿಂದ ಬಾಳಲು ಏನು ಬೇಕು ಎನ್ನುವ ಪ್ರಶ್ನೆಗೆ ‘ಎಲ್ಲರೂ ಒಂದಾಗಬೇಕು’ ಎಂದು ಈ ಹಾಡು ಉತ್ತರಿಸಲು ಪ್ರಯತ್ನಿಸುತ್ತದೆ. ‘ಜಾತಿ, ದ್ವೇಷ ಮರೆತು ಬಾಳುವಾ, ಒಂದೇ ನಾವು ಎಂದು ಹಾಡುವಾ’ ಎನ್ನುವ ಸಾಲುಗಳಲ್ಲಿ ಪ್ರತಿಬಿಂಬಿತವಾಗಿರುವುದು ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎನ್ನುವ ನಾಣ್ಣುಡಿಯ ಸಾರವೇ. ಎಲ್ಲರಿಗೂ ಬದುಕಲು ಜಾಗ, ಉಸಿರಾಡಲು ಗಾಳಿ ಕೊಟ್ಟಿರುವ ತಾಯಿ ಭೂಮಿಗೆ ನಾವು ಕೊಡಬಹುದಾದ ಅತ್ಯುತ್ತಮ ಉಡುಗೊರೆಯೆಂದರೆ ಶಾಂತಿ ಮತ್ತು ನೆಮ್ಮದಿ ಎಂದು ಹೇಳುವ ಮೂಲಕ ಅಂತ್ಯಗೊಳ್ಳುವ ಈ ಹಾಡು ಮಕ್ಕಳಿಗೆ ಭಾವೈಕ್ಯದಿಂದ ಬದುಕುವ ಪಾಠ ಮಾಡಿದರೆ, ಹಿರಿಯರಿಗೆ ಒಂದಾಗಿ ಬಾಳುವುದನ್ನು ಮರೆಯುತ್ತಿದ್ದೇವಾ ಎಂದು ಒಮ್ಮೆ ಯೋಚಿಸುವಂತೆ ಮಾಡುತ್ತದೆ’ ಎಂಬುದು ನಿರ್ದೇಶಕರ ವ್ಯಾಖ್ಯಾನ.

ಈ ಗೀತೆಯ ಜೊತೆಗೆ ಆಡಿಷನ್ ಪ್ರಕ್ರಿಯೆಯ ವಿಡಿಯೊ ತುಣುಕುಗಳನ್ನು ಸೇರಿಸಲಾಗಿದೆ. ‘ಒಂದಲ್ಲಾ ಎರಡಲ್ಲಾ’ ಚಿತ್ರದ ಮುಖ್ಯಪಾತ್ರದಲ್ಲಿ ಏಳು ವರ್ಷದ ಮಾ. ರೋಹಿತ್‌ ನಟಿಸಿದ್ದಾರೆ. ಈ ಪಾತ್ರದ ನಟನ ಆಯ್ಕೆಗಾಗಿ ನಡೆಸಲಾದ ಹುಡುಕಾಟದ ಕಿರುನೋಟವನ್ನು ಈ ವಿಡಿಯೊ ತುಣುಕುಗಳು ತೋರಿಸುತ್ತವೆ. ಈ ಚಿತ್ರದ ‘ಸಮೀರ’ನ ಪಾತ್ರಧಾರಿಗಾಗಿ ತಂಡ ರಾಜ್ಯದಾದ್ಯಂತ 1500ಕ್ಕೂ ಹೆಚ್ಚು ಮಕ್ಕಳ ಆಡಿಷನ್ ನಡೆಸಿದೆಯಂತೆ. ಮೈಸೂರಿನಲ್ಲಿ ನಡೆದ ಆಡಿಷನ್‌ನಲ್ಲಿ ಕೊನೆಯ ಸ್ಪರ್ಧಿಯಾಗಿ ಬಂದ ಪಾಂಡವಪುರದ ಮಾಸ್ಟರ್ ರೋಹಿತ್ ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. 

ಹಾಡಲು ಒಂದು ರಾಗ ಬೇಕು ಹಾಡನ್ನು ಕೇಳಲು ಆನಂದ್‌ ಆಡಿಯೊ ಯೂಟ್ಯೂಬ್‌ ಚಾನೆಲ್‌ ಕೊಂಡಿ: https://bit.ly/2nfgwyi


‘ಒಂದಲ್ಲಾ ಎರಡಲ್ಲಾ’ ಆಡಿಷನ್‌ ಸಂದರ್ಭ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !