ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ಕುಮಾರ್‌ ಸಿನಿಮಾಗಳ ಶೀರ್ಷಿಕೆ ಮರುಬಳಕೆಗೆ ವಿರೋಧ: ಅಭಿಮಾನಿಗಳ ಪ್ರತಿಭಟನೆ

ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಅಭಿಮಾನಿಗಳ ಪ್ರತಿಭಟನೆ
Last Updated 30 ಆಗಸ್ಟ್ 2021, 12:50 IST
ಅಕ್ಷರ ಗಾತ್ರ

ಬೆಂಗಳೂರು: ವರನಟ ರಾಜ್‌ಕುಮಾರ್‌ ಅವರ ಸಿನಿಮಾಗಳ ಹೆಸರುಗಳನ್ನು ಮರುಬಳಕೆಗೆ ನೀಡಬಾರದು ಎಂದು ಆಗ್ರಹಿಸಿ ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಸದಸ್ಯರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಮರುಬಳಕೆ ಮಾಡಲಾದ ಶೀರ್ಷಿಕೆ ಹೊಂದಿದ್ದ ಹೊಸ ಸಿನಿಮಾಗಳ ಪೋಸ್ಟರ್‌ಗಳನ್ನು ಪ್ರದರ್ಶಿಸಿದ ಸದಸ್ಯರು ಈ ರೀತಿ ಶೀರ್ಷಿಕೆ ಮರುಬಳಕೆಗೆ ಅವಕಾಶ ನೀಡಬಾರದು ಎಂದು ಮನವಿಪತ್ರವನ್ನು ವಾಣಿಜ್ಯ ಮಂಡಳಿಗೆ ನೀಡಿದರು.‘ಅಣ್ಣಾವ್ರ ಸಿನಿಮಾಗಳ ಶೀರ್ಷಿಕೆ ಕಥೆಗೆ ಹೊಂದಿಕೊಂಡಿರುವಂತೆ ಇತ್ತು. ಆ ಸಿನಿಮಾಗಳು ಉತ್ತಮ ಸಂದೇಶ ಹೊಂದಿದ್ದವು. ಇಷ್ಟು ಸಂಖ್ಯೆಯ ಅಭಿಮಾನಿಗಳನ್ನು ರಾಜ್‌ಕುಮಾರ್‌ ಅವರು ಹೊಂದಿದ್ದಾರೆ ಎಂದರೆ ಅದರ ಹಿಂದೆ ಅವರ ದೊಡ್ಡ ತ್ಯಾಗ ಇದೆ. ನಿರ್ಮಾಪಕರು, ನಿರ್ದೇಶಕರು ಈ ಶೀರ್ಷಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅಭಿಮಾನಿಗಳಿಗೆ ನೋವಾಗುತ್ತದೆ.ಯಾರೇ ಆದರೂ ಶೀರ್ಷಿಕೆ ಮರುಬಳಕೆ ಮಾಡಿದರೆ ಸಿನಿಮಾ ಚಿತ್ರೀಕರಣಕ್ಕೆ ಮುತ್ತಿಗೆ ಹಾಕುತ್ತೇವೆ. ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ. ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ಮಾಡುತ್ತೇವೆ’ ಎಂದುಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಸದಸ್ಯರು ಎಚ್ಚರಿಕೆ ನೀಡಿದರು.

‘ಶೀರ್ಷಿಕೆ ಮರುಬಳಕೆ ವಿಚಾರದಲ್ಲಿ 10 ವರ್ಷಗಳ ಕಾಲ ಶೀರ್ಷಿಕೆ ಬಳಕೆ ಮಾಡಬಾರದು ಎನ್ನುವ ಯಾವುದೇ ಕಾನೂನು ಇಲ್ಲ. ಇದು ನಾವೇ ಮಾಡಿಕೊಂಡಿರುವ ಒಳಒಡಂಬಡಿಕೆ. ರಾಜ್‌ಕುಮಾರ್‌ ಅವರ ಸಿನಿಮಾಗಳ ಶೀರ್ಷಿಕೆ ಇಟ್ಟುಕೊಂಡು ಸಿನಿಮಾದಲ್ಲಿ ಇಲ್ಲಸಲ್ಲದ ವಿಷಯ ಹೇಳಿದರೆ ಎಲ್ಲರಿಗೂ ನೋವಾಗುತ್ತದೆ. ಇದನ್ನು ನಿರ್ದೇಶಕರು, ನಿರ್ಮಾಪಕರೇ ಅರ್ಥಮಾಡಿಕೊಳ್ಳಬೇಕು’ ಎಂದು ಮಂಡಳಿಯ ಉಪಾಧ್ಯಕ್ಷ ಉಮೇಶ್‌ ಬಣಕಾರ್‌ ಹೇಳಿದರು.

‘ರಾಜ್‌ಕುಮಾರ್‌ ಅವರ ಸಿನಿಮಾಗಳು ಜನಕ್ಕೆ ಉತ್ತಮ ಸಂದೇಶ ನೀಡಿದೆ. ಶೀರ್ಷಿಕೆ ನೋಂದಣಿಗೆ ಬರುವಂತಹ ನಿರ್ಮಾಪಕರೇ ತಿಳಿದುಕೊಳ್ಳಬೇಕು. ಈ ಶೀರ್ಷಿಕೆ ಇಟ್ಟರೆ ಚಿತ್ರಕ್ಕೆ ಸಮಂಜಸವೇ? ರಾಜ್‌ಕುಮಾರ್‌ ಅವರ ಹೆಸರಿಗೆ ಚ್ಯುತಿ ಬರಬಹುದೇ ಎಂದು ತಿಳಿದುಕೊಳ್ಳಬೇಕು. ರಾಜ್‌ಕುಮಾರ್‌ ಅವರು ಒಬ್ಬ ಮೇರು ನಟ. ಶೀರ್ಷಿಕೆ ಕೊಡಲು ಸಾಧ್ಯವಿಲ್ಲ ಎಂದರೆ ಕೋರ್ಟ್‌ ಕಚೇರಿಗೆ ಹೋಗುವ ಪರಿಸ್ಥಿತಿಯೂ ನಮ್ಮ ಮುಂದಿದೆ’ ಎಂದು ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT