ಭಾನುವಾರ, ಸೆಪ್ಟೆಂಬರ್ 27, 2020
24 °C

ಅಖಾಡಕ್ಕಿಳಿದ ಪೈಲ್ವಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಡೀ ದೇಶದ ಸಿನಿಮಾಸಕ್ತರು ಕನ್ನಡ ಚಿತ್ರರಂಗದತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಚಿತ್ರ ‘ಕೆಜಿಎಫ್’. ಕನ್ನಡ ಮಾರುಕಟ್ಟೆಯನ್ನು ಹಿಗ್ಗಿಸಿದ ಶ್ರೇಯ ಇದಕ್ಕೆ ಸಲ್ಲುತ್ತದೆ. ಇದರ ಯಶಸ್ಸಿನ ಹಾದಿಯಲ್ಲಿಯೇ ಈಗ ಕನ್ನಡದಲ್ಲಿ ಬಿಗ್‌ ಬಜೆಟ್‌ ಚಿತ್ರಗಳು ಸದ್ದು ಮಾಡುತ್ತಿವೆ. ಕೃಷ್ಣ ನಿರ್ದೇಶನದ ನಟ ಸುದೀಪ್‌ ನಟನೆಯ ‘ಪೈಲ್ವಾನ್’ ಕೂಡ ಇದರಲ್ಲಿ ಒಂದಾಗಿದೆ ಎನ್ನುವುದು ವಿಶೇಷ.

‘ಕೆಜಿಎಫ್‌’ ಚಿತ್ರ ಐದು ಭಾಷೆಗಳಲ್ಲಿ ತೆರೆಕಂಡಿತ್ತು. ‘ಪೈಲ್ವಾನ್’ ಕನ್ನಡ ಸೇರಿದಂತೆ ಎಂಟು ಭಾಷೆಗಳಲ್ಲಿ ತೆರೆಕಾಣುತ್ತಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆ.‌

‘ಹೆಬ್ಬುಲಿ’ ಚಿತ್ರದ ಬಳಿಕ ಕೃಷ್ಣ ಮತ್ತು ಸುದೀಪ್‌ ‘ಪೈಲ್ವಾನ್‌’ನಲ್ಲಿ ಒಂದಾಗಿದ್ದಾರೆ. ಕುಸ್ತಿ ಆಧಾರಿತ ಚಿತ್ರ ಇದು. ಚಿತ್ರದ ಬಾಕ್ಸಿಂಗ್‌ ಪೋಸ್ಟರ್‌ಗಳು ಈಗಾಗಲೇ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಹಲದ ಬೀಜ ಬಿತ್ತಿವೆ. ಆಗಸ್ಟ್‌ 8ರಂದು ಚಿತ್ರ ಬಿಡುಗಡೆಯಾಗಲಿದೆ.‌‌ ಹಂತ ಹಂತವಾಗಿ ಚಿತ್ರತಂಡ ಪ್ರಚಾರಕ್ಕೂ ಇಳಿದಿದೆ. ಮತ್ತೊಂದೆಡೆ ಚಿತ್ರದ ಹಿಂದಿಯ ಅವತರಣಿಕೆಯ ಕಿರುತೆರೆ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಲಿವೆಯಂತೆ.    

ಈ ಚಿತ್ರಕ್ಕೆ ಸಾಹಸ ನಿರ್ದೇಶಿಸಿರುವುದು ಹಾಲಿವುಡ್‌ನ ಸಾಹಸ ನಿರ್ದೇಶಕ ಲಾರ್ನೆಲ್‌ ಸ್ಟೋವಲ್. ಹಿಂದಿ ಭಾಷೆಯ ಕಿರುತೆರೆ ನಟಿ ಆಕಾಂಕ್ಷಾ ಸಿಂಗ್ ಈ ಚಿತ್ರದ ನಾಯಕಿ. ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ. ಪ್ರಸ್ತುತ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ‘ಬಾಕ್ಸಿಂಗ್‌ ಪೋಸ್ಟರ್‌’ ಬಿಡುಗಡೆಯಾಗಿದ್ದು, ವೈರಲ್‌ ಆಗಿದೆ.

ಕಬೀರ್‌ ದುಹಾನ್‌ ಸಿಂಗ್, ಸುಶಾಂತ್‌ ಸಿಂಗ್, ಅವಿನಾಶ್‌, ಶರತ್‌ ಲೋಹಿತಾಶ್ವ ತಾರಾಗಣದಲ್ಲಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕರುಣಾಕರ್‌ ಅವರದ್ದು.

ಅಂದಹಾಗೆ ‘ಪೈಲ್ವಾನ್’ ಬಿಡುಗಡೆಯ ಮಾರನೇ ದಿನವೇ (ಆಗಸ್ಟ್‌ 9ರಂದು) ನಟ ದರ್ಶನ್‌ ಮುಖ್ಯಭೂಮಿಕೆಯಲ್ಲಿರುವ ‘ಮುನಿರತ್ನ ಕುರುಕ್ಷೇತ್ರ’ ತೆರೆಕಾಣುತ್ತಿದೆ. ನಾಗಣ್ಣ ಈ ಚಿತ್ರ ನಿರ್ದೇಶಿಸಿದ್ದಾರೆ. ನಿರ್ಮಾಪಕ ಮುನಿರತ್ನ ಕುರುಕ್ಷೇತ್ರ ಚಿತ್ರದ ಬಿಡುಗಡೆಗೆ ಈಗಾಗಲೇ ವಿಳಂಬವಾಗಲಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ದಿನಾಂಕ ಮುಂದೂಡುವುದಿಲ್ಲ ಎಂದಿದ್ದಾರೆ. ಕನ್ನಡದ ಇಬ್ಬರು ಸ್ಟಾರ್‌ ನಟರ ಮುಖಾಮುಖಿಗೆ ಆಗಸ್ಟ್‌ನಲ್ಲಿ ಅಖಾಡ ಸಿದ್ಧವಾಗಿರುವುದು ಸತ್ಯ.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು