ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಮಂತ್ರಪಠಿಸಿದ ಯೋಭ

Last Updated 21 ಮಾರ್ಚ್ 2019, 19:30 IST
ಅಕ್ಷರ ಗಾತ್ರ

‘ತುಂಬಾ ಆಸೆ, ಮುದ್ದಿನಿಂದ ಈ ಸಿನಿಮಾ ಮಾಡಿದ್ದೇನೆ. ಚಿತ್ರ ತಯಾರಾಗುವವರೆಗೂ ಮಾತ್ರ ಅದು ನನ್ನದು. ಬಿಡುಗಡೆಯ ಬಳಿಕ ಜನತೆಗೆ ಸೇರಿದ್ದು. ಚಿತ್ರ ಸೂಪರ್‌ ಹಿಟ್‌ ಆಗುವ ಭರವಸೆ ಇದೆ’ ಎಂದು ಮಾತು ಆರಂ‌ಭಿಸಿದರು ನಿರ್ದೇಶಕ ಯೋಗರಾಜ್‌ ಭಟ್‌.

ಭಟ್ಟರು ನಿರ್ದೇಶಿಸಿರುವ ‘ಪಂಚತಂತ್ರ’ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ಡಿಸೆಂಬರ್‌ನಲ್ಲಿಯೇ ಜನರ ಮುಂದೆ ಬರಬೇಕಿತ್ತು. ಮೂರು ತಿಂಗಳು ವಿಳಂಬವಾದರೂ ಜನರಿಗೆ ಚಿತ್ರ ಮುಟ್ಟಲಿದೆ ಎನ್ನುವ ವಿಶ್ವಾಸ ಅವರಲ್ಲಿತ್ತು. ಇದೇ 29ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಈ ಖುಷಿ ಹಂಚಿಕೊಳ್ಳಲು ಅವರು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

ನಟ ಯಶ್‌ ಟ್ರೇಲರ್‌ ಬಿಡುಗಡೆಗೊಳಿಸಿದರು. ಜೊತೆಗೆ, ಸಿನಿಮಾದ ಸೆಕೆಂಡ್‌ ಹಾಫ್‌ನ ಜೀವಾಳವಾದ ಕಾರ್‌ರೇಸ್‌ಗೆ
ಪೂರಕವಾಗಿ ಸಿದ್ಧಪಡಿಸಿರುವ ಮೊಬೈಲ್‌ ಗೇಮ್‌ಗೂ ಚಾಲನೆ ನೀಡಿದರು. ಬಳಿಕ ‘ಭಟ್ಟರ ಪಂಚತಂತ್ರದಲ್ಲಿ ತಂತ್ರವಿದೆ. ಯಂತ್ರವಿದೆ. ಗೆಲ್ಲುವ ಮಂತ್ರವೂ ಇದೆ’ ಎಂದು ಭಟ್ಟರಂತೆಯೇ ಮಾತುಗಳನ್ನು ಪೋಣಿಸಿದರು. ಕೊನೆಯಲ್ಲಿ ಭಟ್ಟರ ಶ್ರಮ ವರ್ಕೌಟ್‌ ಆಗಲಿದೆ ಎಂದು ಉದ್ದನೆಯ ಗಡ್ಡ ನೇವರಿಸಿಕೊಂಡು ನಕ್ಕರು.

‘ಭಟ್ಟರು ಯಾವುದೇ ಸಿನಿಮಾ ಮಾಡಲಿ, ಹೊಸ ಹಾಡು ಬರೆಯಲಿ ಅದನ್ನು ಮೊದಲು ನನ್ನೊಂದಿಗೆ ಹಂಚಿಕೊಂಡು ಅಭಿಪ್ರಾಯ ಕೇಳುತ್ತಾರೆ. ಚೆನ್ನಾಗಿದ್ದರೆ ಚೆನ್ನಾಗಿದೆ ಎನ್ನುತ್ತೇನೆ. ಚೆನ್ನಾಗಿಲ್ಲದಿದ್ದರೆ ಡಬ್ಬಾ ಥರಾ ಇದೆ ಎನ್ನುತ್ತೇನೆ. ಅವರೊಂದಿಗಿನ ಸಿನಿಮಾ ಚರ್ಚೆ ನಮಗೆ ಶ್ರೀಗಂಧದೊಂದಿಗೆ ಗುದ್ದಾಟವಿದ್ದಂತೆ’ ಎಂದು ಗುರುಭಕ್ತಿ ಮೆರೆದರು.

‘ಯಾವುದೇ ಬ್ಯಾಕ್‌ಗ್ರೌಂಡ್‌ ಇಲ್ಲದ ನನ್ನಂತಹ ಹೊಸಬನನ್ನು ನೆಚ್ಚಿಕೊಂಡು ಇಷ್ಟೊಂದು ದೊಡ್ಡ ಬಜೆಟ್‌ ಹೂಡಿಕೆ ಮಾಡುವುದು ಒಂದು ಸಾಹಸವೇ ಸರಿ. ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಹ್ಯಾಟ್ಸ್‌ ಆಫ್‌ ಹೇಳಲೇಬೇಕು. ದೊಡ್ಡ ಕಲಾವಿದರ ನಡುವೆ ಅಭಿನಯಿಸುವುದು ನನಗೆ ಸವಾಲೇ ಆಗಿತ್ತು. ಒಟ್ಟಿನಲ್ಲಿ ನನ್ನ ಟೈಮ್‌ ಚೆನ್ನಾಗಿದೆ. ಸಿನಿಮಾ ಚೆನ್ನಾಗಿ ಬಂದಿದೆ. ಪ್ರೇಕ್ಷಕರು ಸಿನಿಮಾ ಗೆಲ್ಲಿಸಬೇಕು ಅಷ್ಟೆ’ ಎಂದರು ಚಿತ್ರದ ನಾಯಕ ವಿಹಾನ್‌.

ಸೋನಾಲ್‌ ಮೊಂತೇರೊ ಅವರದು ಚಿತ್ರದಲ್ಲಿ ನಾಟಿ ಆಂಡ್‌ ಬೋಲ್ಡ್‌ ವ್ಯಕ್ತಿತ್ವದ ಪಾತ್ರವಂತೆ. ಈ ಸಿನಿಮಾ ತನಗೊಂದು ಬ್ರೇಕ್‌ ಕೊಡಲಿದೆ ಎನ್ನುವುದು ಅವರ ವಿಶ್ವಾಸ. ‘ನಾನು ಚಿತ್ರರಂಗಕ್ಕೆ ಬರಬೇಕೆನ್ನುವುದು ಅಮ್ಮನ ಕನಸು. ಭಟ್ಟರು ನೀಡಿದ ಯೋಗದಿಂದ ಅದು ನನಸಾಗಿದೆ’ ಎಂದು ಕೃತಜ್ಞತೆ ಹೇಳುವುದನ್ನು ಅವರು ಮರೆಯಲಿಲ್ಲ.

ಛಾಯಾಗ್ರಹಣ ನೀಡಿರುವ ಸುಜ್ಞಾನ್, ‘ನನ್ನ ಚಿತ್ರ ಬದುಕಿನಲ್ಲಿ ಇಂತಹ ಸಿನಿಮಾ ಮಾಡಿರಲಿಲ್ಲ. ಮುಂದೆ ಮತ್ತೆ ಮಾಡುತ್ತೇನೆ ಎನ್ನುವ ನಂಬಿಕೆಯೂ ಇಲ್ಲ. ಚಿತ್ರದ ಸೆಕೆಂಡ್‌ ಹಾಫ್‌ ಸ್ಟೋರಿ ಕೇಳಿ ಅಕ್ಷರಶಃ ಭಯಭೀತನಾಗಿದ್ದೆ’ ಎಂದು ಮೆಲುಕು ಹಾಕಿದರು.

ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಹರಿಪ್ರಸಾದ್‌ ಜಯಣ್ಣ ಮತ್ತು ಹೇಮಂತ್‌ ಪರಾಡ್ಕರ್‌ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅಕ್ಷರಾ, ರಂಗಾಯಣ ರಘು, ಬಾಲರಜವಾಡಿ, ದೀಪಕ್ ತಾರಾಗಣವಿದೆ. ಚಿತ್ರಗಳ ಹಾಡುಗಳು ಈಗಾಗಲೇ ಹಿಟ್‌ ಆಗಿವೆ.

ಯಶ್‌ ಜತೆ ಸಿನಿಮಾ

ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ನಿರ್ದೇಶಕ ಯೋಗರಾಜ್‌ ಭಟ್‌ ಕಾಂಬಿನೇಷನ್‌ನಲ್ಲಿ ಸಿನಿಮಾ ತಯಾರಿಗೆ ವೇದಿಕೆ ಅಣಿಯಾಗುತ್ತಿದೆ. ಶಿವರಾಜ್‌ಕುಮಾರ್‌ ಜತೆಯಲ್ಲೂ ಒಂದು ಸಿನಿಮಾ ಮಾಡಲು ಭಟ್ಟರು ಮಾತುಕತೆ ನಡೆಸಿದ್ದಾರೆ. ಈ ಗುಟ್ಟನ್ನು ಸ್ವತಃ ಭಟ್ಟರೇ ಸುದ್ದಿಗೋಷ್ಠಿ ವೇಳೆ ಬಿಚ್ಚಿಟ್ಟರು.

‘ಯಶ್‌ ಪ್ರತಿ ಕ್ಷಣವೂ ಬ್ಯುಸಿಯಾಗಿರುವ ನಟ. ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಬೆಳೆಯುವುದು ಸಾಮಾನ್ಯದ ಮಾತಲ್ಲ. ಅಷ್ಟರಮಟ್ಟಿಗೆ ನಮ್ಮ ನಡುವೆ ಬೆಳೆದ ಹುಡುಗ ಹೆಸರು ಮಾಡುತ್ತಿರುವುದು ನಾವೆಲ್ಲರೂ ಹೆಮ್ಮೆಪಡುವ ಸಂಗತಿ. ಅವರ ಡೆಡಿಕೇಷನ್‌ ಅನುಕರಣೀಯ. ರಂಗಭೂಮಿಯಿಂದಲೂ ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದವರು. ನಾವಿಬ್ಬರು ಒಳ್ಳೆಯ ಸ್ನೇಹಿತರು ಕೂಡ.ಯಶ್‌ ಜತೆಗೆ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆದಿದೆ. ಯಶ್‌ ಅವರ ಜನಪ್ರಿಯತೆ ಮತ್ತು ಮ್ಯಾನರಿಸಂಗೆ ಸರಿಹೊಂದುವಂತಹ ಕಥೆಯನ್ನು ಸಿದ್ಧಪಡಿಸುವ ಯೋಚನೆ ಇದೆ’ ಎನ್ನುವ ಸಂಗತಿಯನ್ನು ಭಟ್ಟರು ಹೊರಗೆಡವಿದರು.

ಯಶ್‌ ‘ಕೆಜಿಎಫ್‌ ಚಾಪ್ಟರ್‌ 2’ನಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ನಂತರ, ಜಯಣ್ಣ ನಿರ್ದೇಶನದ ‘ಮೈ ನೇಮ್‌ ಈಸ್‌ ಕಿರಾತಕ’ ಪೂರ್ಣಗೊಳಿಸಲಿದ್ದಾರೆ. ಶಿವರಾಜ್‌ಕುಮಾರ್‌ ಜತೆಗಿನ ಸಿನಿಮಾ ಪೂರ್ಣವಾದ ನಂತರವೇ ಭಟ್ಟರ ಜತೆಗಿನ ಯಶ್‌ ಚಿತ್ರ ಸೆಟ್ಟೇರಲಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT