ಪಂಚತಂತ್ರ 2: ನಟ್ಟಿರುಳಲ್ಲಿ ನಾಮಕರಣ

7

ಪಂಚತಂತ್ರ 2: ನಟ್ಟಿರುಳಲ್ಲಿ ನಾಮಕರಣ

Published:
Updated:

ಸಿನಿಮಾ ಸ್ಕ್ರಿಪ್ಟ್‌: ಯೋಗರಾಜ್‌ ಭಟ್, ಮಾಸ್ತಿ, ಕಾಂತ್‌ರಾಜ್‌

ಕಾದಂಬರಿ ರೂಪ: ರಘುನಾಥ ಚ ಹ, ಪದ್ಮನಾಭ ಭಟ್

ಆ ದಿನ, ಅಂದ್ರೆ ರಂಗಪ್ಪನ ಜತೆ ಜಗಳ ಆದ ರಾತ್ರಿ... ಅದನ್ನು ನಾನ್ಯಾವತ್ತೂ ಮರೆಯೋಕೆ ಸಾಧ್ಯವೇ ಇಲ್ಲ. ನಾನಷ್ಟೇ ಅಲ್ಲ, ನಮ್ಮ ಗುಂಪಿನ ಯಾರೂ ಮರೆಯಲ್ಲ. ಯಾಕೆಂದ್ರೆ ಅದು ನಾವೆಲ್ಲ ನಮ್ಮ ಈಗಿನ ಹೆಸರುಗಳನ್ನು ಪಡೆದುಕೊಂಡ ದಿನ. ಈಗ ನಾವು ಏನಾಗಿದ್ದೆವೋ ಅದು ಆಗಬೇಕು ಎಂದು ನಿರ್ಧಾರ ಆದ ದಿನವದು. ಈಗ ಯೋಚಿಸಿದ್ರೆ ಯಾವ್ದೋ ಸಿನಿಮಾದ ಮೆಲೊಡ್ರಾಮಾ ಸೀನು ಅನಿಸಿಡುತ್ತದೆ ಅವೆಲ್ಲ. ಬಹುಶಃ ಬಾಂಡ್ ಕೊಂಚ ಭಾವುಕ ಆಗಿದ್ದನ್ನು ನಾನು ನೋಡಿದ್ದು ಅವತ್ತೇ. 

ರಂಗಪ್ಪನೊಂದಿಗೆ ಜಗಳ ನಡೆದ ಜಾಗದಲ್ಲಿಯೇ ಒಂದು ಮೂಲೆಯಲ್ಲಿ ಸಿಮೆಂಟ್‌ಶೀಟ್‌ ಹಾಕಿದ ಟೆಂಟ್ ಇತ್ತು. ಅದರ ಒಂದು ಭಾಗಕ್ಕೆ ಮಣ್ಣಿನ ಗೋಡೆಯ ಸಣ್ಣ ಕೋಣೆ. ಬಾಂಡ್ ನಮ್ಮನ್ನೆಲ್ಲ ಅಲ್ಲಿಗೆ ಕರೆದೊಯ್ದ. ಅರ್ಥ ಬಾಗಿಲು ತೆಗೆದಳು. ಒಳಗೆ ಒಂದಿಷ್ಟು ಪಾತ್ರೆಗಳು, ಬಟ್ಟೆಗಳು ಅಷ್ಟೆ. ಉಳಿದೆಲ್ಲ ಖಾಲಿ ಖಾಲಿ. ಗೋಡೆಯ ಮೇಲೊಂದು ಮುದುಕನ ಫೋಟೊವನ್ನು “ನನ್ನಪ್ಪ ಗಂಟೆ ಬಾಂಡು’ ಎಂದು ಪರಿಚಯಿಸಿದ ಬಾಂಡ್. ಫೋಟೊದೊಳಗಿದ್ದ ಮುದುಕನ ಹುಬ್ಬಿಗೆ ಚುಚ್ಚಿದ್ದ ಸಣ್ಣ ಗಂಟೆಯನ್ನು ನಮ್ಮ ಹತ್ತಿರಕ್ಕೆ ತಂದು ತೋರಿಸಿದ.

ರಾತ್ರಿಯಾಗಿತ್ತು. ಕಗ್ಗತ್ತಲು. ಬಾಂಡ್ ಎಲ್ಲಿಂದಲೋ ಒಂದಿಷ್ಟು ಕಟ್ಟಿಗೆ ತಂದು ಬಯಲಲ್ಲಿ ಬೆಂಕಿ ಉರಿಸಿದ. ನಾವೆಲ್ಲ ಅಲ್ಲಿಲ್ಲಿಂದ ಸಣ್ಣಪುಟ್ಟ ಕಡ್ಡಿಗಳನ್ನು ತಂದು ತಂದು ಬೆಂಕಿಗೆ ಹಾಕಿ ಅದು ಚಟಪಟ ಉರಿಯುವುದು ನೋಡಿ ಖುಷಿಪಡ್ತಿದ್ದೆವು. ಬಾಂಡ್ ಜೀಪಿನತ್ತ ಹೋಗಿ ಒಂದು ಚೀಲ ತಂದ. ಕಾರ್ತಿಕ್ ಚೀಲ ನೋಡಿ ಓಡಿ ಹೋಗಿ ಕಸಿದುಕೊಂಡವನು ಒಂದೊಂದಾಗಿ ಡಬ್ಬಗಳನ್ನು ತೆಗೆದ. ಆಟಿಕೆಗಳು, ಬಟ್ಟೆಗಳು, ಪುಸ್ತಕಗಳು... ಆಟಿಕೆಗಳಲ್ಲಿ ಇದ್ದ ಕಾರ್ ನೋಡಿ ಕಾರ್ತಿಕ್ ಕುಣಿದಾಡಿಬಿಟ್ಟ. ಉಳಿದವರೂ ಏನೇನೋ ಆಟಿಕೆ ತಗೊಂಡ್ರು. ನಾನು ಮತ್ತು ಅರ್ಥ ಬೆಂಕಿಗೆ ಕೈಯೊಡ್ಡಿ ಒಂದು ಬದಿಯಲ್ಲಿ ಕೂತಿದ್ವಿ. ನಮ್ಮ ಹತ್ತಿರಕ್ಕೆ ಬಂದ ಬಾಂಡ್ ಅರ್ಥಳ ನೆತ್ತಿ ನೇವರಿಸಿ ಬಟ್ಟೆಯನ್ನು ಅವಳ ಒಡಲಿಗೆ ಹಾಕಿದ. ನಕ್ಕಳು. ನಾನು “ನಂಗೆ?’ ಅಂದೆ. ತನ್ನ ಕೈಲಿದ್ದ ಪಂಚತಂತ್ರ, ಚಂದಮಾಮ ಪುಸ್ತಕಗಳನ್ನು ನನ್ನ ತೊಡೆಯ ಮೇಲೆ ಮಡಗಿದ.

ಈಗ ಎಲ್ಲರೂ ಬೆಂಕಿಯೆದುರು ಕೂತಿದ್ದೆವು. ಚಟಪಟ ಶಬ್ದ ಮಾಡ್ತಾ, ಅತ್ತಿತ್ತ ಕಿಡಿ ಎಸೆಯುತ್ತ, ನೀಲಿಯಾಗಿ ಕೆಂಪಾಗಿ, ಹಳದಿಯಾಗಿ ಯಾವುದೋ ಕೇಳದ ನಾದಕ್ಕೆ ನೃತ್ಯ ಮಾಡುತ್ತಿರುವಂತೆ ಉರಿಯುತ್ತಿದ್ದ ಜ್ವಾಲೆಗಳನ್ನು ನೋಡುತ್ತಾ ಮೈಮರೆತಿದ್ದೆವು. ಬಾಂಡ್, ಸಿಗಾರ್ ತೆಗೆದು ಎದುರಿನ ಬೆಂಕಿಯಲ್ಲಿಯೇ ಹೊತ್ತಿಸಿಕೊಂಡು ತುಟಿಗಿಟ್ಟು ಉಸಿರೆಳೆದುಕೊಂಡು ಮಾತಾಡತೊಡಗಿದ.

‘ಮಕ್ಳಾ’ ಎಂದ. ನಾನು, ಈಗ ಇವ ನಾವು ಎಲ್ಲಿಂದ ಬಂದಿರೋದು ಅಂತೆಲ್ಲ ಕೇಳ್ತಾನೆ ಅಂದುಕೊಂಡೆ. ಅವನ ಮಾತು ಬೇರೆಯೇ ಆಗಿತ್ತು. ಆ ರಾತ್ರಿ, ಆ ಉರಿವ ಬೆಂಕಿ, ಬೀಸುವ ಗಾಳಿ, ಬಯಲಲ್ಲಿ ಅವನು ಹಗಲಿಗಿಂತ ಬೇರೆಯದೇ ಆಗಿ ಕಾಣ್ತಿದ್ದ. “ನೋಡಿ... ನೀವು ಯಾರು? ಇಲ್ಲಿವರೆಗೆ ಎಲ್ಲಿದ್ರಿ, ಹೇಗಿದ್ರಿ ಅನ್ನೋದೆಲ್ಲ ಈಗ್ಲೇ ಈ ಬೆಂಕಿಗೆ ಹಾಕ್ಬಿಡಿ. ಹಳೆಯದೆಲ್ಲ ಉರಿದು ಹೋಗ್ಲಿ. ಗಾಡೀಲಾಗ್ಲಿ, ಫುಡ್ಡಲ್ಲಾಗಿ, ಬದುಕಲ್ಲಾಗ್ಲಿ ‘ಫಾಸ್ಟ್’ ಎನ್ನೋದು ಆರೋಗ್ಯಕ್ಕೆ ಒಳ್ಳೇದಲ್ಲ. ಪ್ರೆಸೆಂಟು ಇಂಪಾರ್ಟೆಂಟು. ಫ್ಯೂಚರು ಅದೃಷ್ಟಕ್ಕೆ ಬಿಟ್ಟಿದ್ದು. ಅದ್ರ ಬಗ್ಗೆ ತುಂಬ ತಲೆಕೆಡಿಸ್ಕೋಬೇಡಿ. ಈಗ ನಿಮಗೆ ಬೇಕಾದ ಹೆಸರನ್ನು ನೀವೇ ಸೆಲೆಕ್ಟ್ ಮಾಡ್ಕೊಳಿ. ಹೊಸ ಹೆಸರು. ಸ್ವಯಂ ನಾಮಕರಣ. ಯಾವ ಸರ್ ನೇಮೂ ಇಲ್ಲ. ಇದೊಂಥರ ಅಗ್ನಿಸಾಕ್ಷಿಯಾಗಿ ಮರುನಾಮಕರಣ ಕಾರ್ಯಕ್ರಮ’’ ಎಂದ. ಅವನ ಮಾತು ಮುಗಿಯುತ್ತಿದ್ದಂತೆಯೇ ತನ್ನ ತೊಡೆಯ ಮೇಲೆಯೇ ಕಾರನ್ನು ಓಡಿಸುತ್ತಿದ್ದವನು ಒಮ್ಮೆಲೆ ತಲೆಯೆತ್ತಿ ‘ನಂಗೆ ಕಾರ್ತಿಕ್ ಅಂತ ಹೆಸರು ಇಡಿ’ ಎಂದ. ಬಾಂಡ್ ನಕ್ಕ. ಥಮ್ಸ್ ಅಪ್ ಸನ್ನೆ ಮಾಡಿದ. ಪಕ್ಕ ಕೂತಿದ್ದ ವಿ4ಗಳ ಕಡೆಗೆ ತಿರುಗಿ ಹುಬ್ಬು ಹಾರಿಸಿದ. ಅವರಲ್ಲಿ ಒಬ್ಬ, ಕಾರ್ತಿಕ್‍ನನ್ನು ತಿವಿದು ನಂಗೂ ಒಂದು ಹೆಸರು ಹೇಳೋ’ ಎಂದು ಪಿಸುಗುಟ್ಟಿದ. ತುಸು ಯೋಚಿಸಿದ ಕಾರ್ತಿಕ್, ‘ವಿಕ್ರಮ್’ ಎಂದ. ಮತ್ತೆ ತುಸು ತಡೆದು ‘ವಿಜೇತ್’ ಎಂದ. ವಿಕ್ರಮ್ ಪಕ್ಕ ಕೂತಿದ್ದವ ಥಟ್ಟನೆ ‘ಅದು ನಂಗೆ’ ಎಂದ. ಮತ್ತಿಬ್ಬರಿಗೆ ಬಾಂಡ್‍ನೇ ‘ವಿಕಾಸ್, ವಿವೇಕ್ ಅಂತ ಇಟ್ಕೊಂಬ್ರಿಡ್ರೋ ಸರಿಯಾಗ್ತದೆ ನೀವು’ ಎಂದು ನಕ್ಕ. ‘ಹೌದ್ ಹೌದು... ವಿ ವಿ ವಿ ವಿ’ ಎಂದು ಅರ್ಥ ನಕ್ಕಳು.

ನನಗೆ ಯಾವ ಹೆಸರೂ ಹೊಳೆಯಲಿಲ್ಲ. ಕೊನೆಗೆ ನಾನು ಸೊಲ್ಯೂಶನ್ ಕದೀತಿದ್ದ ಪಂಕ್ಚರ್ ಅಂಗ್ಡಿ ಮಾಲೀಕನ ಹೆಸರು ನೆನಪಾಯ್ತು; ದಿನೇಶ್. ಅದನ್ನೇ ಹೇಳಿದೆ.

ಬಾಂಡ್‌ ನಮ್ಮ ಮುಂದೆ ಬಿರಿಯಾನಿ ಇರಿಸಿದ. ಅದನ್ನು ತಿನ್ನುತ್ತಲೇ ಕಾರಾಟ ಆಡ್ತಿದ್ದ ಕಾರ್ತಿಕ್ ಒಮ್ಮೆಲೇ “ನಾ ಕಾರ್ ಡ್ರೈವರ್ ಆಗ್ತೀನಿ’ ಅಂದ. “ಲೋ ಪಂಕ್ಚರ್ ಆಗತ್ತೆ ಕಣೋ’ ಎಂದ ವಿಜೇತ್. ಅಷ್ಟೇ ಜೋರಾಗಿ ಕಾರ್ತಿಕ್‌ “ನೀವು ನಾಲ್ಕು ಜನಾನೂ ಮೆಕ್ಯಾನಿಕ್ ಆಗಿ. ಒಬ್ಬೊಬ್ರು ಒಂದೊಂದು ಟಯರ್ ಪಂಕ್ಚರ್ ಹಾಕಿ’’ ಎಂದ.

ನಾನು ತೊಡೆಯ ಮೇಲೆ ಪಂಚತಂತ್ರ ಪುಸ್ತಕ ಇಟ್ಟುಕೊಂಡು ಓದುತ್ತಿದ್ದೆ. ಓದ್ತಾ ಓದ್ತಾ ‘‘ನ್ಯಾಯ ಅಂದ್ರೆ ಏನು?’’ ಎಂದು ಕೇಳಿದೆ. ಬಾಂಡ್, ‘‘ಲಾಯರ್ ಆಗು ಗೊತ್ತಾಗತ್ತೆ’’ ಎಂದ. ‘‘ಲಾಯರ್ ಆದ್ರೆ ಪೊಲೀಸರ ಜೊತೆ ಜಗಳ ಮಾಡ್ಬೋದಾ?’’. “ಪೊಲೀಸರ ಜೊತೆ ಜಗಳ ಅಷ್ಟೇ ಅಲ್ಲ, ಕಳ್ಳರೊಂದಿಗೆ ಫ್ರೆಂಡ್‍ಷಿಪ್ಪೂ ಮಾಡ್ಬೋದು... ಜಗತ್ತಿನ ಜೊತೆಗೇ ಜಗಳ ಆಡ್ಬೋದು’’ ಎಂದ. ನಾನು ಖುಷಿಯಿಂದ ‘‘ಹಾಗಾದ್ರೆ ನಾನು ಲಾಯರ್ ಆಗ್ತೀನಿ’’ ಅಂದೆ.

‘ನಿಮಗೆ ಏನಾಗ್ಬೇಕು ಅನ್ನಿಸುತ್ತೋ ಅದಾಗಿ. ಇಷ್ಟವಾದ್ದನ್ನು ಓದಿ. ಇಷ್ಟವಾದ ಕೆಲಸ ಮಾಡಿ. ಮಜಾ ಮಾಡಿ ಅಷ್ಟೆ. ಕಷ್ಟ ಬಂದ್ರೆ ಅದನ್ನೂ ಎಂಜಾಯ್ ಮಾಡಿ. ಗೋಳಾಡ್ತಾ ಬದುಕ್ಬೇಡಿ. ಮಜಾದಲ್ಲಿ ತೇಲಾಡ್ತಾ ಬದುಕಿ ಅಷ್ಟೇ’ ಎಂದು ಪಕ್ಕದಲ್ಲಿದ್ದ ಸೀಸೆಯ ಮುಚ್ಚಳವನ್ನು ಹಲ್ಲಲ್ಲೇ ಕಚ್ಚಿ ಉಗುಳಿ ಬಿಯರ್ ಸುರಿದುಕೊಳ್ಳತೊಡಗಿದ. ನಮಗ್ಯಾರಿಗೂ ಅವನ ಮಾತು ಅರ್ಥ ಆಗ್ಲಿಲ್ಲ. ಆದ್ರೆ ಆ ಮಾತುಗಳಲ್ಲಿ ಏನೋ ಇದೆ ಅನಿಸ್ತಿತ್ತು. ಬಾಂಡ್ ದೊಡ್ ಮನುಷ್ಯ ಅನಿಸ್ತು.


ಬಾಂಡ್‌ ಗ್ಯಾರೇಜು ಹಿಂಗಿದೆ ನೋಡಿ

ಊಟ ಆದಕೂಡ್ಲೇ ನಿದ್ದೆ ಎಳ್ಕೊಂಡು ಬಂತು. ಬಾಂಡ್ ಕೋಣೆಯೊಳಗೆ ಹೋಗಿ ಎಲ್ಲರಿಗೂ ಒಂದೊಂದು ಚಾಪೆ ಕೊಟ್ಟ. ಬಯಲಲ್ಲೇ ಹಾಸಿ ಮಲ್ಕೊಂಡ್ವಿ. ಅರ್ಥ ಬಾಂಡ್‍ನ ತೊಡೆ ಮೇಲೆ ತಲೆ ಇಟ್ಟು ಮಲಗಿದಳು. ಬಾಂಡ್ ಮಾತ್ರ ನಡುರಾತ್ರಿಯವರೆಗೂ ಕೂತೇ ಇದ್ದ. ನನಗೆ ಒಮ್ಮೆ ಜೋಂಪು ಹತ್ತಿ ಎಚ್ಚರವಾದಾಗಲೂ ಅವನು ಕೂತು ಕುಡಿಯುತ್ತಲೇ ಇದ್ದ. ಬೆಂಕಿ ಬಹುತೇಕ ನಂದಿ, ಗಾಳಿ ಬೀಸಿದಾಗ ಬೂದಿ ಹಾರಿ ಕಿಡಿಗಳು ಕತ್ತಲಲ್ಲಿ ಹೊಳೆಯುತ್ತಿದ್ದವು. ಅದಕ್ಕೆ ಪ್ರತಿಯಾಗಿ ಬಾಂಡ್ ಕೈಲಿದ್ದ ಸಿಗರೇಟೂ ಆ ಕಗ್ಗತ್ತಲನ್ನು ತೂತು ಮಾಡುವಂತೆ ಜ್ವಲಿಸುತ್ತಿತ್ತು. ಖಾಲಿ ಆಕಾಶವನ್ನು ನೋಡುತ್ತಿದ್ದ ಬಾಂಡ್ ನಿಧಾನವಾಗಿ ಅರ್ಥಳ ತಲೆಯನ್ನು ತೊಡೆಯ ಮೇಲಿಂದ ಎತ್ತಿ ನೆಲಕ್ಕಿಟ್ಟ. ಎದ್ದುನಿಂತ. ನಾನು ನಿದ್ದೆಯಲ್ಲಿಯೇ ಇದ್ದವನಂತೆ ನಟಿಸುತ್ತಾ ತುಸುವೇ ಕಣ್ಣು ತೆರೆದು ಅವನನ್ನು ನೋಡುತ್ತಿದ್ದೆ.

ಒಳಗಿಂದ ಬೆಡ್‍ಶೀಟ್ ತಂದು ಒಬ್ಬೊಬ್ಬರಿಗೂ ಹೊದಿಸಿದ. ಬಾಗಿ ಮಂಡಿಯೂರಿ ಒಬ್ಬೊಬ್ಬರ ನೆತ್ತಿಯನ್ನೂ ಮೂಸಿ ಹಣೆಗೆ ಮುತ್ತಿಟ್ಟ. ನನ್ನ ಬಳಿ ಬಂದಾಗ ಗಟ್ಟಿ ಕಣ್ಮುಚ್ಚಿಕೊಂಡೆ. ನನ್ನೊಮ್ಮೆ ನೆತ್ತಿ ನೇವರಿಸಿ ಮುತ್ತಿಟ್ಟ. ಒಂದು ಹನಿ ನನ್ನ ಕೆನ್ನೆಯ ಮೇಲೆ ಬಿತ್ತು. ‘ಬಾಂಡ್ ಅಳ್ತಿದ್ದಾನಾ?’ ಕಣ್ತೆರೆದು ನೋಡೇ ಬಿಡಲಾ ಅಂತ ಬಲವಾಗಿ ಅನಿಸಿದರೂ ಹಾಗೆ ಮಾಡದೆ ಮಲಗಿಯೇ ಇದ್ದೆ. ನಂತರ ಅರ್ಥಳ ಬಳಿಗೆ ಹೋದ. ಅವಳಿಗೂ ಹಣೆಗೆ ಮುತ್ತಿಟ್ಟು, ತನ್ನ ಕಿಸೆಯಿಂದ ದುಡ್ಡಿನ ಕಂತೆಯನ್ನು ತೆಗೆದು ಅವಳ ಜೇಬಿಗೆ ಹಾಕಿದ. ಮತ್ತೆ ಎದ್ದು ನಿಂತು ಆಕಾಶ ನೋಡುತ್ತ ಎದೆಮುಟ್ಟಿಕೊಂಡು ಏನೋ ಬೇಡಿಕೊಂಡ. ಒಮ್ಮೆ ಆರಿದ ಬೆಂಕಿಯನ್ನೂ, ಇನ್ನೊಮ್ಮೆ ಗುಡಿಸಲನ್ನೂ, ಮಲಗಿದ್ದ ನಮ್ಮೆಲ್ಲರ ಮೇಲೂ ಒಮ್ಮೆ ಕಣ್ಣು ಹಾಯಿಸಿ ದುಡುದುಡು ನಡೆದು ದೂರದಲ್ಲಿದ್ದ ಜೀಪಿನಲ್ಲಿ ಹತ್ತಿ ಕೂತು ಹೊರಟುಬಿಟ್ಟ.

‘ನಿಮಗೆ ಏನಾಗ್ಬೇಕು ಅನ್ಸತ್ತೊ ಅದಾಗಿ. ಇಷ್ಟವಾದ್ದನ್ನು ಓದಿ. ಇಷ್ಟವಾದ ಕೆಲಸ ಮಾಡಿ. ಮಜಾ ಮಾಡಿ ಅಷ್ಟೆ. ಕಷ್ಟ ಬಂದ್ರೆ ಅದನ್ನೂ ಎಂಜಾಯ್ ಮಾಡಿ. ಗೋಳಾಡ್ತಾ ಬದುಕ್ಬೇಡಿ. ಮಜದಲ್ಲಿ ತೇಲಾಡ್ತಾ ಬದುಕಿ ಅಷ್ಟೆ’ -ಬಾಂಡ್‌

ನಾನೊಬ್ಬನೇ ನಿದ್ದೆಯ ನಾಟಕ ಮಾಡಿ ಮಲಗಿದ್ದೆ ಅಂದುಕೊಂಡಿದ್ದೆ. ಇಲ್ಲ. ಅರ್ಥಳೂ ಎದ್ದು ಕೂತು ನೋಡಿದಳು. ಜೀಪಿನ ಹಿಂಭಾಗದ ಕೆಂಪುದೀಪಗಳು ಕ್ಷಣಕಾಲ ಕಂಡು ಮಾಯವಾದವು. ಅವಳು ಎದ್ದು ಓಡುತ್ತಾಳೆ. ಕೂಗುತ್ತಾಳೆ ಎಂದು ನಾನು ಕಾಯ್ತಿದ್ದೆ. ಆದರೆ ಹಾಗೇನೂ ಆಗಲಿಲ್ಲ. ಒಮ್ಮೆ ತನ್ನ ಜೇಬು ಸವರಿಕೊಂಡು ಬಾಂಡ್ ಬಿಟ್ಟು ಹೋಗಿದ್ದ ಹಣವನ್ನು ಸರಿಯಾಗಿ ಹಾಕಿಕೊಂಡು ಮತ್ತೆ ಮಲಗಿಬಿಟ್ಟಳು. ನಾನು ದಿಗ್ಭ್ರಾಂತನಾಗಿದ್ದೆ. ನಾಳೆ ಆ ಪೊಲೀಸರು ಬಂದು ನಮ್ಮನ್ನು ಓಡಿಸಿದರೆ ಏನು ಗತಿ? ಈಗಲೇ ಎಲ್ಲಿಗಾದ್ರೂ ಓಡಿಹೋಗ್ಬಿಟ್ರೆ ಹೇಗೆ? ಅರ್ಥಳ ಬಳಿ ಇರುವ ಹಣ ಕದ್ದು ಓಡಿ ಹೋದ್ರೆ ಸೊಲ್ಯೂಶನ್ ತಗೊಂಡು ಆರಾಮಾಗಿ ಇರಬಹುದು? ಹೀಗೆ ಏನೇನೋ ಯೋಚಿಸ್ತಾ ಮಲಗಿದ್ದೆ. ಸುಮ್ಮನೆ ಮಲಗಿಯೇ ಇದ್ದೆ. ಎಷ್ಟೊತ್ತಿಗೆ ನಿದ್ದೆಬಂತೋ...

ಲಾಯರ್ ಆಗಿ ಪೊಲೀಸರಿಗೆ ಬೈಯುತ್ತಿರುವ, ಅವರೆಲ್ಲರೂ ನನ್ನೆದುರು ತಲೆತಗ್ಗಿಸಿ ನಿಂತಿರುವ ಕನಸು ಬಿತ್ತು. ಬಹುಶಃ ಆ ಕನಸೇ ನನ್ನನ್ನು ಎಲ್ಲಿಗೂ ಓಡಿಹೋಗದ ಹಾಗೆ ತಡೆದಿತ್ತು. ಉಳಿದವರಿಗೂ ಇಂಥದ್ದೇ ಯಾವ್ಯಾವ ಕನಸು ಬಿದ್ದಿತ್ತೋ ಗೊತ್ತಿಲ್ಲ. ಅಂದಿನಿಂದ ಅದೇ ನಮ್ಮ ಮನೆಯಾಯ್ತು. ಯಾರಿಗೂ ಅದನ್ನು ಬಿಟ್ಟು ಹೋಗಬೇಕು ಅನಿಸಲಿಲ್ಲ.

ವಿಕಾಸ್ ಒಬ್ಬನನ್ನು ಬಿಟ್ಟು...

(ಸಶೇಷ) 


ಬಾಂಡ್‌ ಲುಕ್‌

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !