ಭಾನುವಾರ, ಸೆಪ್ಟೆಂಬರ್ 19, 2021
29 °C

ಪಂಗಾ: ತಂದೀತೇ ಬದಲಾವಣೆ?!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬಳು ಮಹಿಳೆ ಇದ್ದಾಳೆ’ ಎಂಬ ಜನಪ್ರಿಯ ಮಾತು ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಅವರಿಗೆ ಸರಿ ಕಾಣುತ್ತಿಲ್ಲ! ಪುರುಷ ಪ್ರಧಾನ ವ್ಯವಸ್ಥೆಯಲ್ಲಿ, ಹೆಣ್ಣು ತನ್ನ ಕುಟುಂಬದ ಅಗತ್ಯಗಳಿಗೇ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಧೋರಣೆಗೆ ಈ ಮಾತು ಇಂಬು ಕೊಡುತ್ತದೆ ಎಂಬುದು ಅಶ್ವಿನಿ ಅವರ ನಂಬಿಕೆ.

ಒಳ್ಳೆಯ ವಿಮರ್ಶೆ ಗಿಟ್ಟಿಸಿದ್ದ ‘ನಿಲ್ ಬಟ್ಟೆ ಸನ್ನಾಟಾ’ ಮತ್ತು ‘ಬರೇಲಿ ಕಿ ಬರ್ಫಿ’ ಸಿನಿಮಾಗಳನ್ನು ನಿರ್ದೇಶಿಸಿದ್ದವರು ಅಶ್ವಿನಿ. ‘ಪುರುಷ ಪ್ರಧಾನ ವ್ಯವಸ್ಥೆ ಅದೆಷ್ಟು ಆಳವಾಗಿ ಬೇರು ಬಿಟ್ಟಿದೆ ಎಂದರೆ, ಮಹಿಳೆ ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಮನೆಯಿಂದ ಹೊರಗೆ ಕಾಲಿಟ್ಟ ಕ್ಷಣದಿಂದ ಅವಳಲ್ಲಿ ಅಪರಾಧಿ ಪ್ರಜ್ಞೆ ಮೂಡುತ್ತದೆ’ ಎಂದು ಅಶ್ವಿನಿ ಹೇಳುತ್ತಾರೆ.

‘ಕೆಲವು ಮಹಿಳೆಯರಿಗೆ ಮನೆಯಲ್ಲಿ ಕೆಲಸಕ್ಕೆ ನೆರವಾಗಲು ಜನ ಇರುತ್ತಾರೆ. ಕೆಲವರಿಗೆ ತಂದೆ–ತಾಯಿಯಿಂದ ಬೆಂಬಲ ಸಿಗುತ್ತದೆ. ಅಥವಾ ಪತಿ ಬೆಂಬಲಕ್ಕೆ ನಿಲ್ಲುತ್ತಾರೆ. ಆದರೆ, ಬಹುತೇಕ ಹೆಣ್ಣುಮಕ್ಕಳಿಗೆ ಇಂತಹ ನೆರವು ಇರುವುದಿಲ್ಲ. ತಾವು ಕುಟುಂಬದ ಕೆಲಸಗಳಿಗೆ ನೆರವಾಗಬೇಕು ಎಂಬ ಭಾವವೇ ಅವರನ್ನು ಸದಾ ಕಾಡುತ್ತ ಇರುತ್ತದೆ. ಹೆಣ್ಣು, ಕುಟುಂಬದ ಜವಾಬ್ದಾರಿಯನ್ನೆಲ್ಲ ನಿಭಾಯಿಸಬೇಕು. ಪುರುಷ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಬೇಕು ಎಂಬ ಪುರುಷ ಪ್ರಧಾನ ಧೋರಣೆ ಸಮಾಜದಲ್ಲಿ ಇದೆ’ ಎಂದು ಅಶ್ವಿನಿ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಧೋರಣೆಯ ಕುರಿತ ಒಂದು ಕಥೆಯನ್ನು ಅಶ್ವಿನಿ ಅವರು ತಮ್ಮ ‘ಪಂಗಾ’ ಚಿತ್ರದ ಮೂಲಕ ಹೇಳಲು ಯತ್ನಿಸಿದ್ದಾರೆ. ಇದರಲ್ಲಿ ಕಂಗನಾ ರನೋಟ್ ಅವರು ರಾಷ್ಟ್ರಮಟ್ಟದ ಕಬಡ್ಡಿ ಚಾಂಪಿಯನ್ ‘ಜಯಾ ನಿಗಂ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಸುಪ್ತ ಬಯಕೆ ಎಲ್ಲ ಹೆಣ್ಣುಮಕ್ಕಳಲ್ಲೂ ಇರುತ್ತದೆ. ಆದರೆ, ‘ಅಪರಾಧಿ ಪ್ರಜ್ಞೆ’ಯು ಅವಳಲ್ಲಿನ ಆಸೆಗಳನ್ನು ಈಡೇರಿಸಿಕೊಳ್ಳುವ ದಾರಿಗೆ ಅಡ್ಡಿಯಾಗಿ ಬರುತ್ತದೆ ಎನ್ನುತ್ತಾರೆ ಅಶ್ವಿನಿ.

‘ಆ ಅಪರಾಧ ಪ್ರಜ್ಞೆ ಕಾಡದೆ ಇದ್ದರೆ ಅವರು ತಮ್ಮ ಕನಸುಗಳ ಬೆಂಬತ್ತಿ ಓಡಬಹುದು. ನಾನು ಈಗ ಕೆಲವು ದಿನಗಳಿಂದ ನನ್ನ ಸಿನಿಮಾ ಕಾರಣಕ್ಕಾಗಿ ಸುತ್ತಾಟದಲ್ಲಿ ಇದ್ದೇನೆ. ಆದರೆ ನನ್ನಲ್ಲಿ ಕೂಡ ಒಂದು ಅಪರಾಧಿ ಪ್ರಜ್ಞೆ ಮನೆಮಾಡಿದೆ (ನನ್ನ ಮಕ್ಕಳ ಹತ್ತಿರ ಇಲ್ಲವಲ್ಲಾ ಎಂಬ ಅಪರಾಧಿ ಪ್ರಜ್ಞೆ). ಈ ಪ್ರಜ್ಞೆ ನಮ್ಮ ಆಂತರ್ಯದಲ್ಲೇ ಇರುತ್ತದೆ’ ಎನ್ನುವುದು ಅವರ ಮಾತು.

ಪಂಜಾಬಿ ಗಾಯಕ, ನಟ ಜೆಸ್ಸಿ ಗಿಲ್ ಅವರು ಕಂಗನಾ ಅವರ ಪತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆಸ್ಸಿ ಅವರದ್ದು ತಮ್ಮ ಪತ್ನಿಗೆ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ನೆರವಾಗುವ ಪಾತ್ರ. ‘ಪಂಗಾ’ ಚಿತ್ರ ಬಿಡುಗಡೆ ಆದ ನಂತರ ಒಂದಿಷ್ಟು ಬದಲಾವಣೆಗಳು ಕಂಡುಬರಬಹುದು ಎಂಬುದು ಅಶ್ವಿನಿ ಅವರಲ್ಲಿನ ನಿರೀಕ್ಷೆ.

ಕ್ರೀಡೆಯನ್ನು ಕಥೆಯ ಕೇಂದ್ರವಾಗಿ ಇರಿಸಿಕೊಂಡ ಈಚಿನ ಇತರ ಸಿನಿಮಾಗಳಿಗಿಂತ ತಾನು ಭಿನ್ನ ಎಂಬುದನ್ನು ‘ಪಂಗಾ’ ಚಿತ್ರವು ಮೊದಲ ಟ್ರೇಲರ್ ಮೂಲಕ ಸ್ಪಷ್ಟಪಡಿಸಿತ್ತು. ಕ್ರೀಡಾಲೋಕದ ಕಥೆ ಹೊಂದಿರುವ, ವಾಸ್ತವ ಜೀವನಕ್ಕೆ ಹತ್ತಿರವಾಗಿರುವ ಸಿನಿಮಾ ಮಾಡಬೇಕು ಎಂಬುದು ಅಶ್ವಿನಿ ಅವರ ಬಯಕೆಯಾಗಿತ್ತು.

‘ಕ್ರೀಡೆಯ ರೋಚಕತೆ ಮತ್ತು ನಿಜ ಜೀವನಕ್ಕೆ ಹತ್ತಿರವಿರುವ ವಿಚಾರಗಳ ನಡುವೆ ನಾನು ಸಮತೋಲನ ಕಾಯ್ದುಕೊಳ್ಳಬೇಕಿತ್ತು. ಕ್ರೀಡೆಗೆ ಸಂಬಂಧಿಸಿದ ಎಲ್ಲ ಸಿನಿಮಾಗಳಲ್ಲೂ ಧೈರ್ಯ–ಸ್ಥೈರ್ಯದ ಭಾವಗಳು ಹೆಚ್ಚಿರುತ್ತವೆ. ಎರಡು ಸಿನಿಮಾ ಕಥೆಗಳನ್ನು ಒಂದೇ ಸಿನಿಮಾದಲ್ಲಿ ಹೇಳಲು ನನ್ನಿಂದ ಸಾಧ್ಯವಿಲ್ಲ’ ಎಂದರು ಅಶ್ವಿನಿ.

ಕ್ರೀಡೆಯನ್ನು ಸಂಪೂರ್ಣವಾಗಿ ಭಿನ್ನ ರೀತಿಯಲ್ಲಿ ತೋರಿಸುವುದು ತಮ್ಮ ಉದ್ದೇಶ ಆಗಿತ್ತು ಎನ್ನುತ್ತಾರೆ ಅಶ್ವಿನಿ. ನೀನಾ ಗುಪ್ತಾ ಮತ್ತು ರಿಚಾ ಛಡ್ಡಾ ಅವರೂ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದು ಶುಕ್ರವಾರ (ಜ. 24) ತೆರೆಗೆ ಬರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು