ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪೇಪರ್‌ ಸ್ಟೂಡೆಂಟ್‌’ ತುಳು ಸಿನಿಮಾ ಡಿ. 23ರಂದು ತೆರೆಗೆ

Last Updated 19 ಅಕ್ಟೋಬರ್ 2022, 14:36 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರಥಮ್‌ ಫಿಲ್ಮ್‌ ಪ್ರೊಡಕ್ಷನ್ಸ್‌ ನಿರ್ಮಿಸಿರುವ ‘ಪೇಪರ್‌ ಸ್ಟೂಡೆಂಟ್‌’ ತುಳು ಸಿನಿಮಾ ಡಿ. 23ರಂದು ಬಿಡುಗಡೆಯಾಗಲಿದೆ’ ಎಂದು ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕ ವಾದಿರಾಜ ಉಪ್ಪೂರ್‌ ತಿಳಿಸಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏನೇ ಸಂಕಷ್ಟಗಳು ಎದುರಾದರೂ ಒಗ್ಗಟ್ಟಿನಿಂದ ಎದುರಿಸುವ ಹದಿಹರೆಯದ ಗೆಳೆಯರ ಕತೆಯನ್ನು ಈ ಸಿನಿಮಾ ಆಧರಿಸಿದೆ. ವಿದ್ಯಾರ್ಥಿ ಜೀವನದಲ್ಲಿ ಗೆಳೆತನಕ್ಕೆ ಭದ್ರ ಬುನಾದಿ ಸಿಕ್ಕರೆ, ಅದು ಹೇಗೆ ಕೊನೆಯವರೆಗೂ ಉಳಿಯುತ್ತದೆ ಎಂಬುದೇ ಕಥಾ ಹಂದರ’ ಎಂದರು.

‘ಹೊಸ ಮುಖಗಳನ್ನು ಹಾಕಿಕೊಂಡು ಸಿನಿಮಾ ನಿರ್ಮಿಸಿದ್ದೇವೆ. ಕಲಾವಿದರು ಹೊಸಬರಾದರೂ ತಮ್ಮ ಪಾತ್ರಗಳಿಗೆ ಚೆನ್ನಾಗಿ ಜೀವ ತುಂಬಿದ್ದಾರೆ. ನಾಯಕ ಪಾತ್ರಗಳಲ್ಲಿ ಹರ್ಷಿತ್‌ ಶೆಟ್ಟಿ ಹಾಗೂ ಗಗನ್ ಆಳ್ವ ನಟಿಸಿದ್ದಾರೆ. ಮೂವರು ನಾಯಕಿಯರ ಪಾತ್ರಗಳಿದ್ದು ಯಶಸ್ವಿ ದೇವಾಡಿಗ, ಡೀನಾ ಹಾಗೂ ಸಲೋಮ್‌ ಡಿಸೋಜಾ ಅಭಿನಯಿಸಿದ್ದಾರೆ. ಆಕರ್ಷ್, ನಿರೀಕ್ಷಿತ್‌, ಸಾಯಿರಾಮ್‌, ಶಬರಿ, ಶ್ರಿಯಾ, ಸಚಿನ್‌ ಕುಂಬಳೆ, ಮಾನ್ವಿ, ಪ್ರಸಾದ್‌ ಕುಮರ್‌, ರಮ್ಯಾ ಸುಧೀಂದ್ರ ಅವರೂ ಮುಖ್ಯ ಭೂಮಿಕೆಯಲ್ಲಿದ್ದಾರೆ. ಒಟ್ಟು 150 ಮಂದಿ ಅಭಿನಯಿಸಿದ್ದಾರೆ’ ಎಂದರು.

‘ಚಿತ್ರದಲ್ಲಿ ಐದು ಹಾಡುಗಳಿವೆ. ಶೀನಾ ನಾಡೋಳಿ ಹಾಗೂ ದೀಪ್ತಿ ನಿಕ್ಷಿತ್‌ ಅವರ ಸಾಹಿತ್ಯವಿದೆ. ವಿನೋದ್‌ ಸುವರ್ಣ ಹಾಗೂಶೀನಾ ನಾಡೋಳಿ ಅವರ ಸಂಗೀತ ನೀಡಿದ್ದಾರೆ. ಮಹಾಬಲೇಶ್ವರ ಹೊಳ್ಳ ಅವರ ಛಾಯಾಗ್ರಹಣವಿದೆ. ಸುಬ್ರಹ್ಮಣ್ಯ ಹೊಳ್ಳ ಅವರು ಸಂಕಲನ ನಡೆಸಿದ್ದಾರೆ. ಶೈಲೇಶ್‌ ದೇವಾಡಿಗ, ಪ್ರಕಾಶ್‌ ಭಾನುಶಾಲಿ, ವಿನಾಯಕ ಬಾಳಿಗಾ ಹಾಗೂ ಚೇತನ್‌ ವೀರನಗರ ಅವರು ನಿರ್ದೇಶನದಲ್ಲಿ ಸಹಕರಿಸಿದ್ದಾರೆ’ ಎಂದರು.

‘ತುಳು ಭಾಷೆ ಹಾಗೂ ಸಾಹಿತ್ಯವನ್ನು ಉಳಿಸಿ ಬೆಳೆಸುವ ಮಹತ್ವದ ಸಂದೇಶವೂ ಸಿನಿಮಾದಲ್ಲಿದೆ’ ಎಂದು ಶೀನಾ ನಾಡೋಳಿ ಹೇಳಿದರು.ನಟಿ ಸಲೋಮೆ ಡಿಸೋಜಾ, ಲಕ್ಷ್ಮೀಶ, ವಿ.ಜಿ.ಪಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT