ಶುಕ್ರವಾರ, ಮಾರ್ಚ್ 31, 2023
32 °C

ಮೊದಲ ದಿನವೇ ದಾಖಲೆ: ₹100 ಕೋಟಿ ಗಳಿಕೆಯತ್ತ ಪಠಾಣ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

‘ಬೇಷರಮ್‌ ರಂಗ್‌’ ಹಾಡಿನಿಂದ ವಿವಾದಕ್ಕೆ ಗುರಿಯಾಗಿದ್ದ ಶಾರುಖ್‌, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ‘ಪಠಾಣ್‌’ ಮೊದಲ ದಿನವೇ ₹57 ಕೋಟಿ ದಾಖಲೆ ಗಳಿಕೆ ಕಂಡಿದೆ. 

ವಿಶ್ಲೇಷಕರ ಪ್ರಕಾರ ಮುಂದಿನ 5 ದಿನಗಳವರೆಗೂ ಗಳಿಕೆ ಹೆಚ್ಚುವ ನಿರೀಕ್ಷೆಯಿದೆ. ಜ.26ರಂದು ರಜೆಯಿದ್ದು, ಬಿಡುಗಡೆಗೊಂಡ 2ನೇ ದಿನವೇ ಚಿತ್ರ ₹100 ಕೋಟಿ ಕ್ಲಬ್‌ ಸೇರುವ ನಿರೀಕ್ಷೆಯಿದೆ ಎಂದು ಚಿತ್ರೋದ್ಯಮ ವಿಶ್ಲೇಷಕ ತರಣ್‌ ಆದರ್ಶ್‌ ಟ್ವೀಟ್‌ ಮಾಡಿದ್ದಾರೆ.

ಜ.25ರಂದು 8000 ಸ್ಕ್ರೀನ್‌ಗಳಲ್ಲಿ ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಪಠಾಣ್‌ ತೆರೆ ಕಂಡಿತ್ತು. ಹಿಂದಿ ಹೊರತಾಗಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಚಿತ್ರ ತೆರೆ ಕಂಡಿದೆ. ಮೊದಲ ದಿನ ಹಿಂದಿ ಅವತರಣಿಕೆ ₹55 ಕೋಟಿ ಗಳಿಸಿದ್ದು, ಡಬ್ಬಿಂಗ್‌ ಭಾಷೆಗಳಿಂದ ₹2 ಕೋಟಿ ಸಂಗ್ರಹವಾಗಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಯಶ್‌ರಾಜ್‌ ಫಿಲಂಸ್‌ ಹೇಳಿದೆ. 

ಇದರೊಂದಿಗೆ ಪಠಾಣ್‌ ಮೊದಲ ದಿನ ಗರಿಷ್ಠ ಗಳಿಕೆ ಕಂಡ ಬಾಲಿವುಡ್‌ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೀರ್‌ ಖಾನ್‌ ಅವರ ಹಿಂದೂಸ್ತಾನ್‌ ಮೊದಲ ದಿನ ₹50 ಕೋಟಿ ಗಳಿಸಿ ದಾಖಲೆ ಬರೆದಿತ್ತು. ಪಠಾಣ್‌ ಗಳಿಕೆ ಓಟ ನೋಡುತ್ತಿದ್ದಂತೆ ಬಾಯ್ಕಾಟ್‌ಗೆ ಕರೆ ನೀಡಿದ್ದ ಬಹುತೇಕರು ವರಸೆ ಬದಲಿಸಿ ತಣ್ಣಗಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪಠಾಣ್‌ ಪರ ಮತ್ತು ವಿರೋಧದ ಪೋಸ್ಟ್‌ಗಳು ಬರುತ್ತಿದ್ದು,  ಮೊದಲ ದಿನ ಪ್ರತಿಭಟನೆ, ಹನುಮಾನ್‌ ಚಾಲೀಸ್‌ ಪಠಿಸಿದವರಿಗೆ ಶಾರುಖ್‌ ಅಭಿಮಾನಿಗಳು ಚಿತ್ರ ಗೆಲ್ಲಿಸುವ ಮೂಲಕ ಖಾರವಾದ ಉತ್ತರ ನೀಡುತ್ತಿದ್ದಾರೆ.

ಬಹುತೇಕ ನೆಟ್ಟಿಗರು ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಬಾಲಿವುಡ್‌ ಚಿತ್ರ ವಿಮರ್ಶಕ ತರಣ್‌ ಆದರ್ಶ್‌, ಚಿತ್ರವನ್ನು ಒಂದೇ ಸಾಲಿನಲ್ಲಿ ಬ್ಲಾಕ್‌ಬಸ್ಟರ್‌ ಎಂದು ಬಣ್ಣಿಸಿದ್ದಾರೆ. ಸುದೀರ್ಘ ವಿರಾಮದ ಬಳಿಕ ಶಾರುಖ್‌ ಖಾನ್‌ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದು, ಭರ್ಜರಿ ಆ್ಯಕ್ಷನ್‌ನೊಂದಿಗೆ ಅಭಿಮಾನಿಗಳ ಮನ ಗೆದ್ದಿದ್ದಾರೆ ಎನ್ನುತ್ತಿದ್ದಾರೆ ಬಹುತೇಕ ನೆಟ್ಟಿಗರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು