ತರ್ಕರಹಿತ ಹಾಸ್ಯಕ್ಕೂ ಎಟುಕದ ಚಿತ್ರ ‘ಪತಿಬೇಕು.ಕಾಮ್’

7
ಪತಿಬೇಕು.ಕಾಮ್ ಚಿತ್ರದ ವಿಮರ್ಶೆ

ತರ್ಕರಹಿತ ಹಾಸ್ಯಕ್ಕೂ ಎಟುಕದ ಚಿತ್ರ ‘ಪತಿಬೇಕು.ಕಾಮ್’

Published:
Updated:
Deccan Herald

ಸಿನಿಮಾ: ಪತಿಬೇಕು.ಕಾಮ್‌

ನಿರ್ಮಾಣ: ರಾಕೇಶ್‌, ಶ್ರೀನಿವಾಸ್ ಮತ್ತು ಮಂಜುನಾಥ್‌

ನಿರ್ದೇಶನ: ರಾಕೇಶ್‌

ತಾರಾಗಣ: ಶೀತಲ್ ಶೆಟ್ಟಿ,  ಹರಿಣಿ, ಕೃಷ್ಣ ಅಡಿಗ, ಅರುಣ್ ಗೌಡ

ಸಿನಿಮಾ ಗೆಲ್ಲಲು ಒಂದೋ ಗಟ್ಟಿಯಾದ ಕಥೆ ಇರಬೇಕು. ಇಲ್ಲವೇ ಸನ್ನಿವೇಶಗಳು, ನಿರೂಪಣಾ ತಂತ್ರ, ತಾಂತ್ರಿಕ ಸಾಧ್ಯತೆಗಳನ್ನು ಬಳಸಿಕೊಂಡೇ ಸಿನಿಮಾವನ್ನು ಗಟ್ಟಿಯಾಗಿ ಕಟ್ಟುವ ಕೌಶಲ ನಿರ್ದೇಶಕನಿಗಿರಬೇಕು. ಇವೆರಡು ಬಿಟ್ಟೂ, ತರ್ಕರಹಿತ ಹಾಸ್ಯವನ್ನು ಬಳಸಿಕೊಂಡು ಪ್ರೇಕ್ಷಕನನ್ನು ನಕ್ಕು ನಗಿಸುತ್ತಲೇ ‘ಪೈಸಾ ವಸೂಲ್’ ಭಾವ ಹುಟ್ಟಿಸಿ ಗೆದ್ದಿರುವ ಉದಾಹರಣೆಗಳೂ ಸಾಕಷ್ಟಿವೆ. ಆದರೆ ಹೀಗೆ ತರ್ಕರಹಿತ ಹಾಸ್ಯವನ್ನೇ ಇಟ್ಟುಕೊಂಡು ಸಿನಿಮಾ ಮಾಡುವಾಗ ನಿರ್ದೇಶಕ ಗಂಭೀರವಾಗಿಯೇ ಸಿದ್ಧತೆ ನಡೆಸಬೇಕಾಗುತ್ತದೆ. ನಗುವನ್ನು ಹಗುರವಾಗಿ ತೆಗೆದುಕೊಂಡರೆ ಹೇಗೆ ನಗೆಪಾಟಲಿಗೀಡಾಗಬೇಕಾಗುತ್ತದೆ ಎನ್ನುವುದಕ್ಕೆ ‘ಪತಿಬೇಕು.ಕಾಮ್’ ಒಳ್ಳೆಯ ಉದಾಹರಣೆ ಆಗಬಲ್ಲದು.

ಗಂಭೀರವಾದ ವಿಷಯವೊಂದನ್ನು ಹಾಸ್ಯದ ಮೂಲಕ ಹೇಳಬೇಕು ಎಂಬ ಉದ್ದೇಶ ಈ ಸಿನಿಮಾ ಹಿಂದೆ ಇದೆ ಎಂದು ಕಷ್ಟಪಟ್ಟು ಊಹಿಸಿಕೊಳ್ಳಬಹುದು. ಆದರೆ ನಾಯಕಿಯ ತಂದೆಯ ಕೈಲಿಂದ ಪದೆ ಪದೆ ಕೈ ಜಾರಿ ಬೀಳುತ್ತಾ ಕರ್ಕಶ ಶಬ್ದ ಹೊರಡಿಸುವ ಊಟದ ತಾಟಿನಂತೆ ಸಿನಿಮಾ ನಿರ್ದೇಶಕರ ಕೈಯಿಂದ ಜಾರಿಬಿದ್ದು ಚೆಲ್ಲಾಪಿಲ್ಲಿಯಾಗಿದೆ.

 ‘ಹೇಳೋದು ಈಸಿ ಹೆಣ್ಣು ಸೀತೆ / ಬಾಳೋದು ಕಷ್ಟ ಹೆಣ್ಮಕ್ಕಳಂತೆ’ – ಚಿತ್ರದಲ್ಲಿ ಇರುವ ಒಂದೇ ಒಂದು ಹಾಡಿನಲ್ಲಿ ಬರುವ ಈ ಸಾಲುಗಳು ಹೆಣ್ಣಿನ ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿವ ಹಾಗಿದೆ. ಆದರೆ ಈ ಒಂದು ಸಾಲು ಮಾಡುವ ಪರಿಣಾಮವನ್ನು ಇಡೀ ಚಿತ್ರದಲ್ಲಿ ಮಾಡಲು ಸಾಧ್ಯವಾಗಲ್ಲ.‌

ಮಧ್ಯಮವರ್ಗದ ಕುಟುಂಬದ ಹುಡುಗಿ ಭಾಗ್ಯ. ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು. ಕೆಲಸದಿಂದ ನಿವೃತ್ತರಾಗಿರುವ ತಂದೆ ಮಗಳ ಮದುವೆಗಾಗಿ ಹಣ ಕೂಡಿಟ್ಟಿಲ್ಲ. ಮಗಳೇ ರಸ್ತೆಯಲ್ಲಿ ಕುರುಡಿಯಂತೆ, ಮೂಗಿಯಂತೆ ನಾಟಕ ಮಾಡಿ ಜನರನ್ನು ವಂಚಿಸುತ್ತಾ ಹಣ ಸಂಪಾದಿಸಿ ಮನೆ ಸಾಗಿಸುತ್ತಿದ್ದಾಳೆ. ಅವಳಿಗೆ ಮದುವೆ ಮಾಡಬೇಕು ಎಂಬುದು ತಂದೆ ತಾಯಿಯ ಆಸೆ. ಆದರೆ ಅರವತ್ತು ಗಂಡು ಮಕ್ಕಳು ಬಂದು ನೋಡಿ ಹೋದರೂ ವರದಕ್ಷಿಣೆ ಕಾರಣಕ್ಕೆ ಮದುವೆ ಸಾಧ್ಯವಾಗಿಲ್ಲ. ಕೊನೆಗೆ ಭಾಗ್ಯ ಮದುವೆಯಾಗಲು ಹೊಸ ಹೊಸ ದಾರಿಗಳನ್ನು ಹುಡುಕುತ್ತ ಹೋಗುತ್ತಾಳೆ. ಗಂಡು ಹುಡುಕುವಾಗ ಆಗುವ ಗಂಡಾಂತರಗಳನ್ನೇ ಒಂದರ ನಂತರ ಒಂದು ಪೇರಿಸುತ್ತಾ ಹೋಗಿದ್ದಾರೆ ನಿರ್ದೇಶಕರು.

ಇಂದಿನ ನಗರದ ಹೆಣ್ಣಿನ ಪರಿಸ್ಥಿತಿಯಾಗಲಿ, ಮನಸ್ಥಿತಿಯಾಗಲಿ ನಿರ್ದೇಶಕರಿಗೆ ಕಿಂಚಿತ್ ಅರಿವಿಲ್ಲ ಎನ್ನುವುದಕ್ಕೆ ಚಿತ್ರದುದ್ದಕ್ಕೂ ಪುರಾವೆಗಳು ಸಿಗುತ್ತ ಹೋಗುತ್ತವೆ. ಅದನ್ನು ಮುಚ್ಚಿಕೊಳ್ಳಲಿಕ್ಕೋಸ್ಕರ ನಾಯಕಿಯಿಂದ ಅವರು ಆಗೀಗ ಭಯಂಕರ ಗಂಡುವಿರೋಧಿ, ಸ್ತ್ರೀಪರ ಸಂಭಾಷಣೆಗಳನ್ನೂ ಉದುರಿಸುತ್ತಾರೆ. 

ಭಾಗ್ಯ ಹುಡುಗನ ರೂಪ, ಗುಣಗಳನ್ನು ಬಿಟ್ಟು, ಅವನಿಗೆ ಬರುವ ಸಂಬಳ ನೋಡಿ, ಅವನ ಬಳಿ ಇರುವ ಕಾರ್ ನೋಡಿ ಮದುವೆ ಮಾಡಿಕೊಳ್ಳಲು ಬಯಸುತ್ತಾಳೆ. ಆದರೆ ಅದೇ ಕೆಲಸವನ್ನು ಹುಡುಗರು ಮಾಡಿದಾಗ ಅವರ ಕೆನ್ನೆಗೆ ಬಾರಿಸಿ ತಾನು ಸುಭಗಳಂತೆ ಫೋಸ್ ಕೊಡುತ್ತಾಳೆ.

ಇಡೀ ಸಮಸ್ಯೆಯನ್ನು ನಿರ್ದೇಶಕರು ಗ್ರಹಿಸಿರುವ ಬಗೆಯೇ ಸರಿ ಇಲ್ಲ. ಕೊನೆಗೂ ಹೇಗಾದರೂ ಮಾಡಿ ಹೆಣ್ಣು ಮದುವೆಗೆ ಮೊರೆ ಹೋಗಲೇ ಬೇಕು, ಇಲ್ಲದಿದ್ದರೆ ಅವಳಿಗೆ ಬದುಕೇ ಇಲ್ಲ ಎನ್ನುವುದನ್ನು ಧ್ವನಿಸುವ ಹಾಗೆ ಚಿತ್ರ ಮುಗಿಯುತ್ತದೆ. ಆಧುನಿಕ ಹೆಣ್ಣಿನ ಸಮಸ್ಯೆಯಾಗಲಿ, ಸವಾಲುಗಳಾಗಲಿ ಎಲ್ಲಿಯೂ ಮುಟ್ಟದೆ ಚರ್ವಿತ ಚರ್ವಣ ಸಂಗತಿಗಳನ್ನು ಇಟ್ಟುಕೊಂಡು ಹೆಣೆದಿರುವ ಜಾಡು ಬೇಸರ ಹುಟ್ಟಿಸುವ ಹಾಗಿದೆ. ತೆರೆಯ ಮೇಲೆ ನಾಯಕಿ ಪತಿಯನ್ನು ಹುಡುಕುತ್ತಿದ್ದರೆ, ಪ್ರೇಕ್ಷಕ ತೆರೆಯ ಮೇಲೆ ಕತೆಯನ್ನು ಹುಡುಕಲು ಪ್ರಯಾಸಪಡಬೇಕಾಗುತ್ತದೆ.  

ಹರಿಣಿ, ನಾಯಕಿಯ ತಾಯಿಯಾಗಿ ನಟಿಸಿದ್ದಾರೆ. ಆದರೆ ತೆರೆಯ ಮೇಲೆ ತಂಗಿಯ ಹಾಗೆ ಕಾಣಿಸುತ್ತಾರೆ. ಹರಿಣಿ ಮತ್ತು ಕೃಷ್ಣ ಅಡಿಗ ಇಬ್ಬರೂ ಅತಿರೇಕದ ನಟನೆಯಿಂದ ಕೆಟ್ಟ ವಿದೂಷಕರಂತೆ ಕಾಣಿಸುತ್ತಾರೆ. ಯರ್ರಾಬಿರ್ರಿ ಅಲ್ಲಾಡುವ ಕ್ಯಾಮೆರಾ, ಕ್ಷಣ ಪುರಸೊತ್ತೂ ಇಲ್ಲದೆ ಮೊಳಗುತ್ತಲೇ ಇರುವ ಹಿನ್ನೆಲೆ ಸಂಗೀತ ಚಿತ್ರವೀಕ್ಷಣೆಯನ್ನು ಇನ್ನಷ್ಟು ಅಸಹನೀಯಗೊಳಿಸುತ್ತವೆ. 

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !