ಬೆಂಗಳೂರು – ಗೋವಾ ಪ್ರಯಾಣದಲ್ಲಿ...

ಶನಿವಾರ, ಏಪ್ರಿಲ್ 20, 2019
27 °C

ಬೆಂಗಳೂರು – ಗೋವಾ ಪ್ರಯಾಣದಲ್ಲಿ...

Published:
Updated:
Prajavani

ಜೀವನ ಒಂದು ಪಯಣ. ಅಲ್ಲಿ ಎಲ್ಲರೂ ಪಯಣಿಗರು. ಎಲ್ಲರೂ ಅವರ ನಿಲ್ದಾಣ ಬಂದಾಗ ಇಳಿದುಕೊಳ್ಳಬೇಕು. ಇದು ಜೀವನದ ಬಗ್ಗೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳುವ, ಆಡುವ ಮಾತು.

ಇದೇ ಮಾತನ್ನು ಇರಿಸಿಕೊಂಡು ‘ಪಯಣಿಗರು’ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ ರಾಜ್ ಗೋಪಿ. ಈ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಏಪ್ರಿಲ್‌ 19ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಚಿತ್ರದ ಟ್ರೇಲರ್‌ ತೋರಿಸಿ, ಕಥೆಯ ಬಗ್ಗೆ ಒಂದಿಷ್ಟು ಮಾಹಿತಿ ನೀಡಲು ರಾಜ್ ಗೋಪಿ ಅವರು ಸುದ್ದಿಗೋಷ್ಠಿ ಕರೆದಿದ್ದರು.

ಇದು ಐದು ಜನ ಮಧ್ಯವಯಸ್ಸಿನವರ ಕಥೆ. ಇವರೆಲ್ಲ ಸಮಾನ ಮನಸ್ಕರು. ಐದೂ ಜನ ತಮ್ಮ ಪತ್ನಿಯರನ್ನು ಹಾಗೂ ಹೀಗೂ ಒಪ್ಪಿಸಿ, ಗೋವಾ ಪ್ರವಾಸಕ್ಕೆ ತೆರಳುತ್ತಾರೆ. ಅಲ್ಲಿ ಅವರಿಗೆ ಎದುರಾಗುವ ಅನಿರೀಕ್ಷಿತ ಘಟನೆಗಳು ಸಿನಿಮಾ ಕಥೆಯ ಕೇಂದ್ರಬಿಂದು.

ಟ್ರೇಲರ್‌ನ ಕೊನೆಯಲ್ಲಿ ಗುಂಡಿನ ಸದ್ದು ಕೇಳುತ್ತದೆ, ಪೊಲೀಸ್ ಸಮವಸ್ತ್ರ ಕಾಣಿಸುತ್ತದೆ. ಟ್ರೇಲರ್‌ ಆರಂಭದಲ್ಲಿ ಈ ಚಿತ್ರ ಸ್ನೇಹಿತರ ಮೋಜಿಗೆ ಸಂಬಂಧಿಸಿದ್ದು ಎಂಬಂತೆ ಕಂಡರೂ, ಕೊನೆಯಲ್ಲಿ ಒಂದಿಷ್ಟು ಸಸ್ಪೆನ್ಸ್ ಅಂಶಗಳನ್ನು ತೋರಿಸಲಾಗಿದೆ.

‘ಪ್ರಯಾಣದ ಕಥಾವಸ್ತು ಇರಿಸಿಕೊಂಡು ಹಲವರು ಸಿನಿಮಾ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಹೊಸದೇನಿದೆ ಎಂಬ ಪ್ರಶ್ನೆ ಎದುರಾಗಬಹುದು. ನಾವು ಒಮ್ಮೆ ನಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದೆವು. ಪ್ರವಾಸಕ್ಕೆ ಹೋದಾಗ ಈ ರೀತಿಯ ಘಟನೆ ಆದರೆ ಹೇಗಾಗಬಹುದು ಎಂಬ ಪ್ರಸ್ತಾಪ ಬಂತು. ಆ ಕಲ್ಪನೆಯಿಂದಾಗಿಯೇ ನಮಗೆ ಶಾಕ್ ಆಯಿತು. ಹಾಗಾಗಿ ಈ ಸಿನಿಮಾ ಮಾಡಿದೆವು’ ಎಂದರು ರಾಜ್. ಆದರೆ, ‘ಈ ರೀತಿಯ ಘಟನೆ’ ಅಂದರೆ ಏನು ಎಂಬ ಗುಟ್ಟು ಬಿಟ್ಟುಕೊಡಲಿಲ್ಲ.

‘ಪಯಣಿಗರು ಎನ್ನುವುದು ಸಿನಿಮಾ ಹೆಸರು. ಇಲ್ಲಿ ನಾವು ಮಾತ್ರವೇ ಪಯಣಿಗರಲ್ಲ. ಎಲ್ಲರೂ ಪಯಣಿಗರೇ. ನಮ್ಮ ಜೀವನದ ಪ್ರಯಾಣ ಹೇಗೆ ಮುಗಿಯುತ್ತದೆ, ಎಲ್ಲಿ‌ ಮುಗಿಯುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಆದರೆ ಪಯಣ ಮುಗಿಯುವವರೆಗೆ ನೀವೂ ಸಂತೋಷವಾಗಿರಿ, ಇತರರಿಗೂ ಸಂತೋಷವಾಗಿರಲು ಬಿಡಿ ಎಂಬುದು ಸಿನಿಮಾದ ಥೀಮ್‌’ ಎಂದರು ರಾಜ್.

ಪ್ರವಾಸಕ್ಕೆ ಹೋದ ನಂತರ, ಎಡವಟ್ಟಿನ ಪರಿಸ್ಥಿತಿಯಲ್ಲಿ ಸಿಲುಕುವ ಸ್ನೇಹಿತರು ಅದರಿಂದ ಹೇಗೆ ಪಾರಾಗಿ ಬರುತ್ತಾರೆ ಎಂಬುದು ಚಿತ್ರದ ಕಥೆ. ‘ಈ ಘಟನೆಯ ಕಾರಣದಿಂದಾಗಿ ಪಾತ್ರಧಾರಿಗಳು ತಮ್ಮ ಜೀವನದ ಬಗ್ಗೆ ಹೊಂದಿದ್ದ ನೋಟವನ್ನೇ ಬದಲಿಸಿಬಿಡುತ್ತದೆ. ಕುಟುಂಬಕ್ಕಾಗಿ ತಾವು ಸಮಯ ಕೊಡಬೇಕು ಎಂಬುದನ್ನು ಕಲಿಯುತ್ತಾರೆ’ ಎನ್ನುವುದು ನಿರ್ದೇಶಕರ ಹೇಳಿಕೆ.

ಅಷ್ಟೇ ಅಲ್ಲ. ರಾಜ್ ಅವರಲ್ಲಿ ಇನ್ನೂ ಒಂದು ವಿಶ್ವಾಸ ಗಟ್ಟಿಯಾಗಿ ಇದೆ. ‘ನಮ್ಮ ಸಿನಿಮಾ‌ ನೋಡಿದ ನಂತರ ಪ್ರತಿ ವೀಕ್ಷಕನೂ ತನ್ನ ಕುಟುಂಬದ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ಬೆಲೆ ಕೊಡಲು ಆರಂಭಿಸುತ್ತಾನೆ’ ಎನ್ನುತ್ತಾರೆ ರಾಜ್.

ಚಿತ್ರದ ಬಹುತೇಕ ದೃಶ್ಯಗಳ ಚಿತ್ರೀಕರಣ ಒಂದು ಕಾರಿ‌ನೊಳಗೆ‌ ನಡೆಯುತ್ತದೆ. ಇದು ಕುಟುಂಬದ ಎಲ್ಲರೂ ಕುಳಿತು ನೋಡಬಹುದಾದ ಸಿನಿಮಾ. ಬೆಂಗಳೂರು, ಬೆಂಗಳೂರು-ಗೋವಾ ಹೆದ್ದಾರಿ, ಅಂಕೋಲಾ ಕಡೆ ಚಿತ್ರೀಕರಣ ನಡೆದಿದೆ ಎಂದು ಸಿನಿತಂಡ ಹೇಳಿಕೊಂಡಿದೆ.

ಚಿತ್ರಕ್ಕೆ ಸಂಗೀತ ನೀಡಿರುವವರು ವಿನು ಮನಸು. ‘ಸಿನಿಮಾದ ಒಂದು ಹಾಡನ್ನು ಮಾತ್ರ ನಾವು ಸಿದ್ಧಪಡಿಸಿದೆವು. ಇನ್ನೊಂದು ಹಾಡು ಅದಾಗಿಯೇ ಸಿದ್ಧವಾಗಿಬಿಟ್ಟಿತು’ ಎಂದರು ವಿನು. ರಾಜ್ ಅವರಿಗೆ ಇದು ಮೂರನೆಯ ಸಿನಿಮಾ. ಲಕ್ಷ್ಮಣ್ ಶಿವಶಂಕರ್, ಅಶ್ವಿನ್‌ ಹಾಸನ್, ಸುಧೀರ್, ನಾಗರಾಜ ರಾವ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !