‘ನಮಗೂ ವೈಯಕ್ತಿಕ ಬದುಕಿದೆ’

7

‘ನಮಗೂ ವೈಯಕ್ತಿಕ ಬದುಕಿದೆ’

Published:
Updated:
Deccan Herald

‘ಸಿನಿಮಾಗಳಲ್ಲಿ ನಟಿಸಿರುವುದರಿಂದ ನಾನು ಪಬ್ಲಿಕ್‌ ಫಿಗರ್‌ ಆಗಿರಬಹುದು, ಆದರೆ ಖಂಡಿತ ಪಬ್ಲಿಕ್‌ ಪ್ರಾಪರ್ಟಿ ಅಲ್ಲ. ನಿಮ್ಮ ಮನೆಯ ಹೆಣ್ಣುಮಕ್ಕಳ ಜೊತೆ ಹೀಗೆ ನೀವು ವರ್ತಿಸುತ್ತೀರಾ? ನಾನೂ ಒಬ್ಬ ಮಹಿಳೆ, ಮತ್ತೆ ನನ್ನನ್ಯಾಕೆ ಗೌರವದಿಂದ ಕಾಣಬಾರದು?’ ಎಂದು ಗರಂ ಆಗಿ ಪ್ರಶ್ನೆ ಎಸೆದವರು ಬಾಲಿವುಡ್‌ನ ನೀಳಕಾಯದ ಸುಂದರಿ ಇಲಿಯಾನಾ ಡಿ ಕ್ರೂಜ್‌. 

ಸಿನಿಮಾ, ಕಿರುತೆರೆ ನಟಿಯರು ತಮ್ಮ ವೈಯಕ್ತಿಕ ಅಥವಾ ಬೋಲ್ಡ್‌ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ ಕೆಟ್ಟ ಭಾಷೆಯಲ್ಲಿ ಕಮೆಂಟ್ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಸೆಲ್ಫಿ ಅಥವಾ ಅಟೋಗ್ರಾಫ್‌ಗಾಗಿ ಮುಗಿಬೀಳುವಾಗ ಬೇಕೆಂದೇ ಮೈ ಮುಟ್ಟುವುದು... ಇಂತಹವುಗಳಿಂದ ನಟಿಯರಿಗೆ ಇರಿಸು– ಮುರಿಸು ಆಗುತ್ತದೆ. ಇದನ್ನು ಬಾಯಿಬಿಟ್ಟು ಹೇಳುವ ಹಾಗೂ ಇರುವುದಿಲ್ಲ. ಇದರಿಂದ ವೃತ್ತಿ ಬದುಕಿಗೆ ಏನಾದರೂ ಆದರೆ ಎಂದು ಸುಮ್ಮನಿರುವವರೇ ಜಾಸ್ತಿ. ಆದರೆ ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌, ವೈಯಕ್ತಿಕ ನಿಂದನೆ ಹೆಚ್ಚಾಗುತ್ತಿರುವುದರಿಂದ ನಟಿಯರೂ ತಿರುಗಿ ಬಿದ್ದಿದ್ದಾರೆ. 

ಚಂದನವನದಲ್ಲೂ ನಟಿಯರಿಗೆ ಇಂತಹ ಅನುಭವಗಳಾಗಿವೆ. ‘ಸಿನಿಮಾ ನಟಿಯರು, ಸೆಲೆಬ್ರಿಟಿಗಳು ಎಂಬ ಒಂದೇ ಕಾರಣಕ್ಕೆ ಬೇಕೆಂದಲ್ಲಿ ಹೀನಾಯವಾಗಿ ಮಾತನಾಡಿಸುವುದು, ಸಲುಗೆಯಿಂದ ವರ್ತಿಸುವುದು, ಅನುಚಿತವಾಗಿ ನಡೆದುಕೊಳ್ಳುವುದು ಸರಿಯಲ್ಲ, ನಮಗೂ ವೈಯಕ್ತಿಕ ಬದುಕಿದೆ. ಎಲ್ಲರಿಗೂ ನೀಡುವ ಹಾಗೇ ನಮಗೂ ಗೌರವ ನೀಡಬೇಕು’ ಎಂಬುದು ಚಂದನವನದ ನಟಿಯರ ಮಾತುಗಳು.

ಅಭಿಮಾನವಲ್ಲ

ನಾನು ಶಾರ್ಟ್‌ ಡ್ರೆಸ್‌ಗಳನ್ನು ಹಾಕಿ ತೆಗೆಸಿಕೊಂಡ ಫೋಟೊಗಳಿಗೆ ಕೆಲವರು ಅಂಥ ಡ್ರೆಸ್ ಹಾಕಬಾರದು, ಇಂಥ ಡ್ರೆಸ್‌ ಹಾಕಬಾರದು ಎಂದು ಪ್ರತಿಕ್ರಿಯಿಸುತ್ತಾರೆ. ನನ್ನ ಸಿನಿಮಾ, ನಟನೆ, ಕೆರಿಯರ್‌ ತಪ್ಪು ಆಯ್ಕೆಗಳ ಬಗ್ಗೆ ಅವರಿಗೆ ಮಾತನಾಡುವ ಹಕ್ಕಿದೆ. ನಾವು ನಟಿಯಾಗಿ ಸಾರ್ವಜನಿಕ ಬದುಕಿನಲ್ಲಿರುವುದರಿಂದ ನಮ್ಮನ್ನು ಸಮಾಜಕ್ಕೆ ಹೇಗೆ ತೆರೆದುಕೊಳ್ಳಬೇಕು ಎಂಬ ಬಗ್ಗೆ ನಮಗೂ ಗೊತ್ತಿದೆ. ನಮ್ಮ ಇಮೇಜ್‌ ಹಾಳಾಗುವ ಹಾಗೇ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಅದು ಅಭಿಮಾನವಲ್ಲ.

 -ಕೃಷಿ ತಾಪಂಡ

‘ಈ ಕಿರಿಕಿರಿಗಳಿಂದ ಬೇಸತ್ತು ನಾನು ‘ಸಾಮಾನ್ಯರಂತೆ ನಾವೂ ಫೇಸ್‌ಬುಕ್‌, ಟ್ವಿಟ್ಟರ್‌ಗಳಲ್ಲಿ ಪೋಟೊಗಳನ್ನು ಹಂಚಿಕೊಳ್ಳುತ್ತೇವೆ. ಬೇರೆಯವರಿಗೆ ತೋರಿಸುವ ಹಾಗೇ ನಮಗೂ ಪ್ರೀತಿ, ಬಾಂಧವ್ಯ, ಗೌರವ ತೋರಿಸಿ’ ಎಂದು ಫೇಸ್‌ಬುಕ್‌ನಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದೆ. ಅನಂತರ ಹಾಗೇ ಕಮೆಂಟ್‌ ಮಾಡುವವರ ಸಂಖ್ಯೆ ಸ್ವಲ್ಪ ಕಡಿಮೆಯಾಯಿತು. ಅಂತಹ ಕಮೆಂಟ್‌ ಬಂದಾಗಲೂ ಅವರಿಗೆ ಏನೂ ಪ್ರತಿಕ್ರಿಯಿಸಲ್ಲ. ಇಂತಹ ಜನರಲ್ಲಿ ನಟಿಯರು, ನಾವು ಏನೂ ಹೇಳಿದರೂ ಕೇಳಬೇಕು ಎಂಬ ಮನಸ್ಥಿತಿ ಇರುತ್ತದೆ. ಸಮಯ, ಸಂದರ್ಭ ಅರ್ಥ ಮಾಡಿಕೊಳ್ಳದೇ ಸೆಲ್ಫಿಗೆ ಮುಗಿಬೀಳುತ್ತಾರೆ. ಈಚೆಗೆ ಧರ್ಮಸ್ಥಳಕ್ಕೆ ತಂಗಿ ಹಾಗೂ ಗೆಳತಿ ಜೊತೆಗೆ ಹೋಗಿದ್ದೆ. ನಾವು ಮೂವರು ನಟನಾ ಕ್ಷೇತ್ರದಲ್ಲಿರುವುದರಿಂದ ಮೂರು ಜನರ ಜೊತೆ ಜನ ಸೆಲ್ಫಿ ತೆಗೆಸಿಕೊಂಡರು. ಅನಂತರ ನಾವು ಅಲ್ಲಿಂದ ಹೊರಟೆವು. ಒಂದು ಯುವಕರ ಗುಂಪು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ‘ಸೆಲ್ಫಿ ಚೆನ್ನಾಗಿ ಬಂದಿಲ್ಲ, ಇನ್ನೊಂದು ಫೋಟೊ ಬೇಕು’ ಅಂತ ಹಿಂದೆ ಬಿದ್ದರು. ಅವರಿಗೆ ಬೈದುಬಿಟ್ಟೆ. ಆ ಯುವಕರಿಗೆ ಹುಡುಗಿಯರ ಬಳಿ ಕನಿಷ್ಠ ಗೌರವಯುತವಾಗಿ ನಡೆದುಕೊಳ್ಳಬೇಕು ಎಂಬ ಪರಿಜ್ಞಾನನೂ ಇರಲಿಲ್ಲ’

    –ಕಾರುಣ್ಯಾ ರಾಮ್

ತಬು, ಕರೀನಾ ಗರಂ

ಕೆಟ್ಟ ಕಮೆಂಟ್‌, ಟ್ರೋಲ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ನಟಿ ಇಲಿಯಾನಾನೇ ಮೊದಲಿನವರಲ್ಲ. ಈ ಹಿಂದೆ ನಟಿ ಕರೀನಾ ಕಪೂರ್‌, ಟಬು ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಟಿ ತಬು ಅವರನ್ನು ‘ನಿಮಗೆ ಮದುವೆಯಾಗಬೇಕೆಂದು ಅನಿಸುವುದೇ ಇಲ್ಲವೇ?’ ಎಂದು ಯಾರೋ ಪ್ರಶ್ನಿಸಿದಾಗ ‘ನನ್ನ ವೈಯಕ್ತಿಕ ಬದುಕು ಸಾರ್ವಜನಿಕ ಆಸ್ತಿಯಲ್ಲ’ ಎಂದು ಖಡಕ್ಕಾಗಿ ಪ್ರತಿಕ್ರಿಯಿಸಿದ್ದರು. 

ಈಚೆಗೆ ನಟಿ ಕರೀನಾ ಅವರು ಮಗುವಾದ ಬಳಿಕ ಆಧುನಿಕ ಬಟ್ಟೆ ತೊಡುವುದಕ್ಕೆ ಕೆಟ್ಟದಾಗಿ ಟ್ರೋಲ್‌ ಮಾಡಿದ್ದರು. ಆಗ ಕರೀನಾ ‘ಯಾರು ಯಾವುದರಲ್ಲಿ ಚೆನ್ನಾಗಿ ಕಾಣ್ತಾರೋ, ಅದನ್ನ ತೊಡಬೇಕು. ನನಗೆ ಮಗು ಆದ ಕಾರಣ ನಾನು ಶಾರ್ಟ್ ಡ್ರೆಸ್ ಧರಿಸಬಾರದು ಅಂತೇನಿಲ್ಲ. ನಾನು ಗರ್ಭಿಣಿ ಆಗಿದ್ದಾಗಲೂ, ನನ್ನ ತೂಕದ ಬಗ್ಗೆ ಹಲವರು ಕಾಮೆಂಟ್ ಮಾಡಿದ್ದರು. ಮಹಿಳೆ ಸಾಗುವ ಪ್ರತಿಯೊಂದು ಘಟ್ಟವನ್ನೂ ಎಲ್ಲರೂ ಗೌರವಿಸಬೇಕು’ ಎಂದು ಟ್ರೋಲಿಗರ ಬಾಯಿಗೆ ಬೀಗ ಜಡಿದಿದ್ದರು.  

ಗೌರವ ಇಲ್ವಾ?

ಎಲ್ಲಾ ಕ್ಷೇತ್ರದವರೂ ಅವರವರ ವೃತ್ತಿಗೆ ತಕ್ಕಂತೆ ಅವರನ್ನು ಮಾರ್ಕೆಟಿಂಗ್‌ ಮಾಡಿಕೊಳ್ಳುತ್ತಾರೆ. ಹಾಗೇ ನನ್ನದು ನಟನಾ ಕ್ಷೇತ್ರ. ನಾನು ಕೆಲವೊಂದು ಬೋಲ್ಡ್‌ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇನೆ. ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗಿದೆಯೆಂದು ನಾನು ಆ ಫೋಟೊಗಳನ್ನು ಹಂಚಿಕೊಂಡಿಲ್ಲ. ನಾನು ಗ್ಲಾಮರಸ್‌ ಆಗಿದ್ದೇನೆ ಎಂಬುದನ್ನು ಫೋಟೊದಲ್ಲಿ ತೋರಿಸುತ್ತೇನೆ. ಆದರೆ ಕೆಲವರು ಅವರ ಮೂಗಿನ ನೇರಕ್ಕೆ ಯೋಚನೆ ಮಾಡುತ್ತಾರೆ, ಮಾತಾನಾಡುತ್ತಾರೆ. ಇನ್ನು ಕೆಲವರು ಮದ್ಯಪಾನ ಮಾಡಿ ಕೆಟ್ಟದ್ದಾಗಿ ಮಾತಾನಾಡಿದ್ದೂ ಇದೆ. ಆದರೆ ಅದನ್ನು ಪ್ರಶ್ನಿಸಿದರೆ ನಮ್ಮನ್ನೇ ಕೆಟ್ಟವರು ಎಂಬಂತೆ ನೋಡುತ್ತಾರೆ. ನಟಿಯಾದ ಮಾತ್ರಕ್ಕೆ ವೈಯಕ್ತಿಕ ಗೌರವ ಇಲ್ವಾ?

ಅನಿತಾ ಭಟ್‌, ನಟಿ

ಪ್ರತಿಕ್ರಿಯೆ ನೀಡಲ್ಲ...

‘ನಟನಾ ಕ್ಷೇತ್ರವನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಅದು ನಮ್ಮ ಕರ್ಮಭೂಮಿ. ಕಲಾವಿದರಿಗೆ ಕಲಾದೇವಿ ಒಲಿದಿದ್ದಾಳೆ. ಅದು  ಕೆಲವರಿಗಷ್ಟೇ ಒಲಿದಿರುವ ವರ. ನಟನೆ ಎಂಬುದು ಎಲ್ಲರಿಗೂ ಒಲಿಯುವಂಥದ್ದಲ್ಲ. ಆದರೆ ಕೆಲವು ಜನ ನಮ್ಮ ಈ ಕ್ಷೇತ್ರವನ್ನೇ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ’

‘ನಟಿಯರು ಎಲ್ಲಾದರೂ ಹೋದಾಗ ಕೆಲವರು ಏಕವಚನದಲ್ಲೇ ಅವರ ಬಗ್ಗೆ ಮಾತನಾಡುತ್ತಾರೆ. ಗೌರವ ಕೊಡುವುದಿಲ್ಲ. ಇನ್‌ಸ್ಟಾಗ್ರಾಂ ಅಥವಾ ಟ್ವಿಟ್ಟರ್‌ನಲ್ಲಿ ಪೋಟೊ ಹಂಚಿಕೊಂಡಾಗ ಕೆಲವರು ಟ್ರೋಲ್‌ ಮಾಡುವುದು, ನೆಗೆಟೀವ್‌ ಕಮೆಂಟ್‌ ಹಾಕುತ್ತಾರೆ. ಆದರೆ ನಾನು ಅಲ್ಲಿ ಏನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಪ್ರತಿಕ್ರಿಯಿಸಿದರೆ ಅಂತಹವರಿಗೆ ಸಲುಗೆ ನೀಡಿದಂತಾಗುತ್ತದೆ. ಕೆಲವರು ಸಿನಿಮಾದ ಫೋಟೊಗಳನ್ನು ಡೌನ್‌ಲೋಡ್‌ ಮಾಡಿ, ಅದಕ್ಕೆ ಕೆಟ್ಟದಾಗಿ ಕಮೆಂಟ್‌ ಮಾಡುವವರೂ ಇದ್ದಾರೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ನನಗೆ ಅಂತಹ ಕೆಟ್ಟ ಅನುಭವಗಳಾಗಿಲ್ಲ’

– ಮಾನ್ವಿತಾ ಹರೀಶ್‌

ತೊಂದರೆ ನೀಡುವ ಹಕ್ಕಿಲ್ಲ

ಸುಕೃತಾ ವಾಗ್ಳೆ, ‘ನಾವು ಸೆಲೆಬ್ರಿಟಿಗಳೆಂದಾಕ್ಷಣ ನಮ್ಮ ವೈಯಕ್ತಿಕ ಬದುಕಿಗೆ ತೊಂದರೆ ನೀಡುವ ಹಕ್ಕು ಯಾರಿಗೂ ಇಲ್ಲ’ ಎನ್ನುತ್ತಾರೆ. ‘ನಾನು ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಂಡರೆ ಕೆಲವರು ಬಾಯಿಗೆ ಬಂದಂತೆ ಕಮೆಂಟ್‌ ಮಾಡುತ್ತಾರೆ. ಸೆಲೆಬ್ರಿಟಿಗಳ ನಟನಾ ಬದುಕಿಗೆ ಹಾಗೂ ವೈಯಕ್ತಿಕ ಬದುಕು ಬೇರೆಬೇರೆಯಾಗಿರುತ್ತದೆ ಎಂದು ಕೆಲ ವ್ಯಕ್ತಿಗಳು ಅರ್ಥ ಮಾಡಿಕೊಳ್ಳುವುದಿಲ್ಲ. ಇನ್ನು ಕೆಲವರಿಗೆ ನಮ್ಮ ಬದುಕಿನ ಬಗ್ಗೆ ಭಾರಿ ಕುತೂಹಲ. ಏನೇನೋ ಅಸಂಬದ್ಧ ಪ್ರಶ್ನೆಗಳು. ಅವರ ಒತ್ತಡಗಳನ್ನೆಲ್ಲಾ ನಮ್ಮ ಮೇಲೆ ತೋರಿಸಿಕೊಳ್ಳುತ್ತಾರೆ’

– ಸುಕೃತಾ ವಾಗ್ಳೆ

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !