ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಹದ್ ಚಿತ್ರಗಳಲ್ಲಿ ಹಾಲಿವುಡ್ ಛಾಯೆ

Last Updated 9 ಮೇ 2019, 19:30 IST
ಅಕ್ಷರ ಗಾತ್ರ

ಫಹದ್ ಫಾಸಿಲ್ ಮಲಯಾಳ ಚಿತ್ರರಂಗದ ಭರವಸೆಯ ನಟ. ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಈ ನಟನ ಸಿನಿಮಾ ಬಿಡುಗಡೆಯಾದರೆ ಅದು ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತದೆ.

ಭಿನ್ನ ಪಾತ್ರಗಳಿಗೆ ಹೆಚ್ಚು ಆದ್ಯತೆ ನೀಡುವ ಫಹದ್ ಅವರು ತಮ್ಮ ಸಹಜ ನಟನೆಯಿಂದ ಮಲಯಾಳದ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ. ಸದ್ಯ ಬಿಡುಗಡೆಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಫಹದ್ ಅಭಿನಯದ ಚಿತ್ರ ‘ಅತಿರನ್’. ಇದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಫಹದ್ ಜೊತೆ ಸಾಯಿ ಪಲ್ಲವಿ ಕೂಡ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದೇ ರೀತಿ ಈ ಸಿನಿಮಾದ ಬಗ್ಗೆ ಹೆಚ್ಚು ಚರ್ಚೆ ಕೂಡ ನಡೆಯುತ್ತಿದೆ.

ಇದು 2010ರಲ್ಲಿ ಬಿಡುಗಡೆಗೊಂಡಿದ್ದ ಹಾಲಿವುಡ್ ಸಿನಿಮಾ ‘ಷಟರ್ ಐಲ್ಯಾಂಡ್’ನಿಂದ ಪ್ರೇರಣೆಗೊಂಡು ನಿರ್ಮಾಣಗೊಂಡಿರುವ ಸಿನಿಮಾ ಎಂಬ ಟೀಕೆಗಳೂ ಕೇಳಿಬಂದಿವೆ. ಸಿನಿಮಾದ ನಿರ್ದೇಶಕ ವಿವೇಕ್ ‘ಷಟರ್ ಐಲ್ಯಾಂಡ್‌ಗೂ ನನ್ನ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾರೆ.

‘ಅತಿರನ್’ 70ರ ದಶಕದಲ್ಲಿ ನಡೆಯುವ ಕಥೆ ಹೊಂದಿದೆ. ಮಾನಸಿಕ ಸಮಸ್ಯೆ ಇರುವ ಯುವತಿಯ ಚಿಕಿತ್ಸೆಗಾಗಿ ತೆರಳುವ ಮನೋತಜ್ಞ ಎದುರಿಸುವ ಸಮಸ್ಯೆಗಳೇ ಇದರ ಕಥಾಹಂದರ.

ಡೆನ್ನಿಸ್ ಲೆಹೇನ್ ಅವರ ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿ ‘ಷಟರ್ ಐಲ್ಯಾಂಡ್’ ಸಿನಿಮಾ ನಿರ್ಮಿಸಲಾಗಿದೆ. ಲಿಯ
ನಾರ್ಡೊ ಡಿ ಕಾಪ್ರಿಯೊ ಮುಖ್ಯ ಭೂಮಿಕೆಯಲ್ಲಿದ್ದ ಈ ಸಿನಿಮಾ ಕೂಡ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ. ಇದನ್ನು ಮಾರ್ಟಿನ್ ಸ್ಕಾರ್ಸೆಸೆ ನಿರ್ದೇಶಿಸಿದ್ದರು.
ಈ ಚಿತ್ರ ಕೂಡ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಮತ್ತು ಅದರ ಸುತ್ತಲಿನ ಘಟನಾವಳಿಗಳ ಕಥಾಹಂದರ ಹೊಂದಿದೆ.

‘ಅತಿರನ್’ ಸಿನಿಮಾದಲ್ಲೂ ಇಂತಹ ಕೆಲವು ಸಮಾನ ಅಂಶಗಳು ಕಂಡುಬರುತ್ತವೆ. ಫಹದ್ ಅಭಿನಯದಲ್ಲಿ 2018ರಲ್ಲಿ ಬಿಡುಗಡೆಗೊಂಡಿದ್ದ ‘ವರತ್ತನ್’ ಸಿನಿಮಾ ಕೂಡ ಹಾಲಿವುಡ್‌ನ ‘ಸ್ಟ್ರೊ ಡಾಗ್ಸ್’ ಸಿನಿಮಾದ ರಿಮೇಕ್ ಎಂಬ ಟೀಕೆಗಳು ಕೇಳಿಬಂದಿದ್ದವು. ಅಮಲ್ ನೀರದ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ವರತ್ತನ್’ ಸಿನಿಮಾದಲ್ಲಿ ಐಶ್ವರ್ಯಾ ಲಕ್ಷ್ಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ದುಬೈಯಲ್ಲಿ ನೆಲೆಸಿದ್ದ ದಂಪತಿ ಅನಿವಾರ್ಯ ಕಾರಣಗಳಿಂದಾಗಿ ಊರಿಗೆ ಮರಳಬೇಕಾಗುತ್ತದೆ. ಊರಿನ ತೋಟದ ಮನೆಯಲ್ಲಿ ನೆಲೆಸುವ ಅವರು ಅನಿರೀಕ್ಷಿತವಾಗಿ ಎದುರಿಸುವ ಸಮಸ್ಯೆಗಳೇ ಈ ಚಿತ್ರದ ಕಥಾಹಂದರ. ಕಥಾ ವಸ್ತುವನ್ನು ಗಮನಿಸಿದರೆ ‘ಸ್ಟ್ರೊ ಡಾಗ್ಸ್’ ಸಿನಿಮಾದೊಂದಿಗಿನ ಸಮಾನ ಅಂಶಗಳು ಸಾಕಷ್ಟು ಗೋಚರವಾಗುತ್ತವೆ. ಇಲ್ಲಿ ಕಥೆಯಲ್ಲಿ ಸಾಮ್ಯವಿದ್ದರೂ ‘ವರತ್ತನ್’ ಸಿನಿಮಾವನ್ನು ಮಲಯಾಳದ ಮಣ್ಣಿನ ಗುಣಕ್ಕೆ ಅನುಗುಣವಾಗಿ ನಿರ್ದೇಶಕರು ಒಗ್ಗಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಗಾರ್ಡನ್ ಎಂ. ವಿಲಿಯಮ್ಸ್ ಅವರ ‘ದಿ ಸೀಜ್ ಆಫ್ ಟ್ರೆಂಚರ್ಸ್ ಫಾರ್ಮ್’ ಕಾದಂಬರಿ ಆಧರಿಸಿ 1971ರಲ್ಲಿ ‘ಸ್ಟ್ರೊ ಡಾಗ್ಸ್’ ಸಿನಿಮಾ ನಿರ್ಮಾಣವಾಗಿತ್ತು. ಸ್ಯಾಮ್ ಪೆಕಿನ್ಪಾ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಡಸ್ಟಿನ್ ಹಾಫ್ ಮ್ಯಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಇದೇ ಸಿನಿಮಾ 2011ರಲ್ಲಿ ರಿಮೇಕ್ ಆಗಿ ಬಿಡುಗಡೆಗೊಂಡಿತ್ತು. ರಾಡ್ ಲೂರಿ ಇದನ್ನು ನಿರ್ದೇಶಿಸಿದ್ದರು. ಜೇಮ್ಸ್ ಮಾರ್ಸ್ ಡೆನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT