ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೀರೋ’ ಚಿತ್ರಕ್ಕೆ ಪೈರಸಿ ಹಾವಳಿ: ರಿಷಬ್‌ ಬೇಸರ

Last Updated 7 ಮಾರ್ಚ್ 2021, 10:31 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾದ ರಿಷಬ್‌ ಶೆಟ್ಟಿ ನಟನೆಯ ‘ಹೀರೋ’ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಂದರ್ಭದಲ್ಲೇ, ಚಿತ್ರತಂಡಕ್ಕೆ ಪೈರಸಿ ಹಾವಳಿ ಕಾಡತೊಡಗಿದೆ.

ಈ ಕುರಿತು ಸ್ವತಃ ನಟ ರಿಷಬ್‌ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದು, ‘ಕೊರೊನಾ ಸಮಯದಲ್ಲಿ ಸಿನಿಮಾ ಮೇಲಿನ ಪ್ರೀತಿಗಾಗಿ ಕೇವಲ 24 ಜನರು ಸೇರಿ ಸಿನಿಮಾ ಮಾಡಿಯಾಗಿದೆ. ಚಿತ್ರಮಂದಿರಕ್ಕೆ ಬಿಟ್ಟಾಗಿದೆ. ಇಂದಿಗೆ ಪೈರೆಸಿ ಆಗಿದೆ. ಇನ್ನು ನಮ್ದೇನಿದೆ. #StopPiracy ಎಂದು ಟ್ವಿಟರ್‌ನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ.

‘ಹೀರೋ ಚಿತ್ರವು ಎರಡು ಕಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಒಂದು ಚಿತ್ರಮಂದಿರದಲ್ಲಿ ಇನ್ನೊಂದು ಪೈರೆಸಿಯಲ್ಲಿ. ಬಹಳ ಬೇಜಾರಿನ ವಿಷಯ ಏನೆಂದರೆ, ಇಡೀ ಊರು ಮಲಗಿದ್ದಾಗ ಪ್ರೇಕ್ಷಕರಿಗೆ ಮನರಂಜನೆ ನೀಡಬೇಕು ಎನ್ನುವ ಉದ್ದೇಶದಿಂದ ತುಂಬಾ ವೇಗದಲ್ಲಿ ಒಂದು ಸಿನಿಮಾ ಮಾಡುತ್ತೇನೆ. ಅದನ್ನು ಎಲ್ಲಿ ಪ್ರದರ್ಶನ ಮಾಡಬೇಕು ಎನ್ನುವ ಅಂದಾಜೂ ಅಂದು ನಮಗೆ ಇರಲಿಲ್ಲ. ಚಿತ್ರಮಂದಿರಗಳು ತೆರೆಯಲು ಅವಕಾಶ ನೀಡಿದ ಸಂದರ್ಭದಲ್ಲಿ ಅದಕ್ಕೆ ತಕ್ಕಂತೆ ಸಿನಿಮಾದ ಸಿದ್ಧತೆ ಮಾಡಿದೆವು. ಬಹುತೇಕ ಪ್ರೇಕ್ಷಕರಿಗೆ ಚಿತ್ರ ಬಹಳ ಇಷ್ಟವಾಯಿತು. ಆದರೆ, ಚಿತ್ರ ಬಿಡುಗಡೆಯಾಗಿ ಕೇವಲ ಮೂರನೇ ದಿನಕ್ಕೇ ಇವತ್ತು ಪೈರಸಿ ಕಾಪಿಗಳು ಹರಿದಾಡುತ್ತಿವೆ’ ಎಂದು ರಿಷಬ್‌ ಹೇಳಿದ್ದಾರೆ.

‘ಆ್ಯಂಟಿ ಪೈರೆಸಿ ತಂಡದ ಜೊತೆ ಕೂತು ಹಲವು ವೆಬ್‌ಸೈಟ್‌ಗಳಿಂದ ಪೈರಸಿ ಕಾಪಿಗಳ ಲಿಂಕ್‌ ತೆಗೆದರೂ, ಅದು ನಿರಂತರವಾಗಿ ಬರುತ್ತಿದೆ. ಒಂದು ಚಿತ್ರಮಂದಿರದೊಳಗೆ ಕ್ಯಾಮೆರಾ ತೆಗೆದುಕೊಂಡು ಹೋಗಿ ಇಡೀ, ಸಿನಿಮಾವನ್ನು ಚಿತ್ರೀಕರಿಸಿ ಅದನ್ನು ಅಪ್‌ಲೋಡ್‌ ಮಾಡುತ್ತಿರುವುದು ನೋಡಿದರೆ ಚಿತ್ರಮಂದಿರದ ಮಾಲೀಕರ ಜವಾಬ್ದಾರಿ ಏನು ಎಂಬ ಪ್ರಶ್ನೆ ಮೂಡುತ್ತದೆ. ಒಂದೂವರೆ ವರ್ಷ ಚಿತ್ರಮಂದಿರವೇ ತೆರೆದಿಲ್ಲ. ಇದೀಗ ಚಿತ್ರಮಂದಿರ ತೆರೆದಿದೆ. ಚಿತ್ರಗಳ ಪ್ರದರ್ಶನ ಪ್ರಾರಂಭವಾದ ಸಂದರ್ಭದಲ್ಲಿ, ಮೊಬೈಲ್‌, ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಿ ಚಿತ್ರೀಕರಿಸಲು ಹೇಗೆ ಅನುವು ಮಾಡುತ್ತಾರೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

‘ಇದು ಹೊಸ ಸಮಸ್ಯೆ ಅಲ್ಲ. ದೊಡ್ಡ ನಟರ ಚಿತ್ರಗಳಿಗೂ ಇದು ಕಾಡಿದೆ. ಪೈಲ್ವಾನ್‌ನಂತಹ ಚಿತ್ರಕ್ಕೂ ಈ ಸಮಸ್ಯೆ ಎದುರಾಗಿತ್ತು. ಇನ್ನು ನಾವು ಮಾಡಿದ ಈ ರೀತಿ ಸಿನಿಮಾಗಳೂ ಪೈರಸಿ ಆಗುತ್ತದೆ ಎಂದರೆ ಬಹಳ ಬೇಸರದ ವಿಷಯ. ಇಂತಹ ಪೈರಸಿ ಚಿತ್ರಗಳನ್ನು ಹಾಕುವ ವೆಬ್‌ಸೈಟ್‌ಗಳನ್ನು ಏಕೆ ನಿಷೇಧಿಸುತ್ತಿಲ್ಲ ಎನ್ನುವುದು ಅರ್ಥ ಆಗುತ್ತಿಲ್ಲ. ತುಂಬಾ ಜನರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ನಮ್ಮ ನಮ್ಮ ಬುಡಕ್ಕೆ ಬಂದಾಗಲೇ ನಮಗೆ ಗೊತ್ತಾಗುತ್ತದೆ. ಜನರು ಕೇಳಬಹುದು, ಏನು ನೀವಾಗಿಯೇ ಮಾತನಾಡುತ್ತಿದ್ದೀರಲ್ಲ ಎಂದು. ನಾನು ಕಿರಿಕ್‌ ಪಾರ್ಟಿ ಸಂದರ್ಭದಿಂದಲೂ ಮಾತನಾಡುತ್ತಿದ್ದೇನೆ. ಯಾವ್ಯಾವುದೋ ಕಾರಣಕ್ಕೆ ವೆಬ್‌ಸೈಟ್‌, ಆ್ಯಪ್‌ಗಳನ್ನು ನಿಷೇಧಿಸುತ್ತಾರೆ. ಹೀಗಿರುವಾಗ ಪೈರಸಿ ಆದ ಚಿತ್ರ ಪ್ರಸಾರ ಮಾಡುವ ವೆಬ್‌ಸೈಟ್‌, ಆ್ಯಪ್‌ಗಳನ್ನು ಏಕೆ ನಿಷೇಧಿಸುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ’ ಎಂದಿದ್ದಾರೆ.

‘ಜನರಲ್ಲಿ ನನ್ನ ಮನವಿ ಇಷ್ಟೇ. ನಿಮಗೆ ಸಿಕ್ಕಿರುವ ಲಿಂಕ್‌ಗಳನ್ನು ನಮಗೆ ಕಳುಹಿಸಿ. ಅದನ್ನು ತೆಗೆಯುವ ಪ್ರಯತ್ನ ಮಾಡುತ್ತೇವೆ. ಸಂಪೂರ್ಣವಾಗಿ ನಿಲ್ಲಿಸಲು ನಮ್ಮ ಕೈಯಲ್ಲಿ ಸಾಧ್ಯವಿಲ್ಲ. ಜನರು ಚಿತ್ರಮಂದಿರದಲ್ಲೇ ಚಿತ್ರವನ್ನು ನೋಡಿದರೆ, ಚಿತ್ರರಂಗ ಉಳಿದುಕೊಳ್ಳುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT