ಪೊಮೊಗ್ರಾನೆಟ್‌ ಆರ್ಚೆಡ್‌

6

ಪೊಮೊಗ್ರಾನೆಟ್‌ ಆರ್ಚೆಡ್‌

Published:
Updated:
Deccan Herald

ಅದೊಂದು ಕುಗ್ರಾಮ. ಸಮೃದ್ಧವಾದ ದಾಳಿಂಬೆ ತೋಟದಲ್ಲೊಂದು ಮನೆ. ಅಲ್ಲಿ ಒಬ್ಬ ವೃದ್ಧ, ಅವನ ಸೊಸೆ ಮತ್ತು ಮೊಮ್ಮಗ ವಾಸವಾಗಿದ್ದಾರೆ. ಮೊಮ್ಮಗನಿಗೆ ದೃಷ್ಟಿದೋಷ ಇದೆ. ಹನ್ನೆರಡು ವರ್ಷಗಳ ಹಿಂದೆ ನಡೆದ ಆ್ಯಕ್ಸಿಡೆಂಟ್‌ನಲ್ಲಿ ಹಿರಿಯ ಮಗ ತೀರಿಕೊಂಡಿದ್ದಾನೆ. ಆ ಸಮಯದಲ್ಲಿಯೇ ಕಿರಿಮಗ ಮನೆಬಿಟ್ಟು ಹೋದವನು ಇನ್ನೂ ಬಂದಿಲ್ಲ. 

ಆ ತೋಟವನ್ನು ಕೊಳ್ಳಲು ಹಲವರು ಹೊಂಚು ಹಾಕಿದ್ದಾರೆ. ಮುದುಕನಲ್ಲಿ ಕೇಳಿಯೂ ಇದ್ದಾರೆ. ಆದರೆ ಅವನು ಮಾತ್ರ ಅದನ್ನು ಮಾರಲೊಲ್ಲ. ಒಳಗೊಳಗೆ ಸೊರಗುತ್ತ, ಹೊರಗೆ ರಸಭರಿತ ದಾಳಿಂಬೆಗಳನ್ನು ಆಯುತ್ತ ಬದುಕುತ್ತಿರುವಾಗ ಒಂದು ಮಳೆರಾತ್ರಿ ಹನ್ನೆರಡು ವರ್ಷದ ಹಿಂದೆ ಮನೆಬಿಟ್ಟು ಹೋಗಿದ್ದ ಕಿರಿಯ ಮಗ ಇದ್ದಕ್ಕಿದ್ದಂತೆಯೇ ಮನೆಗೆ ಬರುತ್ತಾನೆ. ಅವನ ಬರುವು ಅವರ ಬದುಕಿನ ಸರೋವರದಲ್ಲಿ ಎದ್ದ ಸುನಾಮಿಯ ಮೊದಲ ಅಲೆ! ಇದ್ದಕ್ಕಿಂದ್ದಂತೆಯೇ ಆ ಮೂವರ ಬದುಕಿನ ಲಯವೂ ತಪ್ಪಿ ಹೊಯ್ದಾಡಲಾರಂಭಿಸುತ್ತದೆ. ಮೊಮ್ಮಗನಿಗೆ ಮನೆಗೆ ಬಂದ ಪರಿಚಿತನನ್ನು ಅಪ್ಪ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಮಗ ಮನೆಬಿಟ್ಟು ಹೋಗಿದ್ದಕ್ಕೆ ಮುದುಕನಿಗೆ ಸಿಟ್ಟೂ, ಅಷ್ಟು ವರ್ಷ ಎದೆಯೊಳಗೆ ಬೆಂಕಿಯಿಟ್ಟು ಬದುಕಿದ್ದಕ್ಕೆ ಹೆಂಡತಿಗೆ ಹತಾಶೆಯೂ ಇದೆ. ಆದರೆ ಅವುಗಳನ್ನು ಮನಸೊಳಗೇ ಮುಚ್ಚಿಟ್ಟುಕೊಂಡು ಅವರು ಅವನನ್ನು ಮನೆಯೊಳಗೆ ಸೇರಿಸುತ್ತಾರೆ.

ಇಂಥದ್ದೊಂದು ವಿಶಿಷ್ಟ ವಸ್ತುವನ್ನಿಟ್ಟುಕೊಂಡು ಮನುಷ್ಯ ಸ್ವಭಾವಗಳನ್ನು ಪ್ರಕೃತಿಯ ಎದುರಲ್ಲಿಟ್ಟು ತೂಗುವ ಚಿತ್ರ ‘ಪೊಮೊಗ್ರಾನೆಟ್‌ ಆರ್ಚೆಡ್‌’. ಮನುಷ್ಯನ ಮನಸ್ಸಿಗಿರುವ ವಂಚನೆಯ ಸಾಧ್ಯತೆಯನ್ನು ಶೋಧಿಸುವ ಜತೆಜತೆಗೇ ಸತತ ಆಘಾತಗಳಿಗೆ ಎದುರಾಗಿಯೂ ಬದುಕುವ ಅವನ ಚೈತನ್ಯವನ್ನೂ ಕಾಣಿಸುವ ಪ್ರಯತ್ನವನ್ನು ಈ ಚಿತ್ರ ಗಂಭೀರವಾಗಿ ಮಾಡುತ್ತದೆ.

ಎಷ್ಟೋ ವರ್ಷಗಳ ನಂತರ ಮಗ ಬಂದಿರುವುದು ಹಣ ತೆಗೆದುಕೊಂಡು ಹೋಗಲಿಕ್ಕಾಗಿ ಎಂಬ ವಿಷಯ ಅಪ್ಪನಿಗಾಗಲಿ ಸೊಸೆಗಾಗಲಿ ಗೊತ್ತಿಲ್ಲ. ಅವರ ಮುಗ್ಧತೆಯನ್ನು ಇರಿಯುವ ಮಗನ ವಂಚನೆಗೆ ಸಾಕ್ಷಿಯಾಗುವುದು ದಾಳಿಂಬೆ ಹಣ್ಣಿನ ತೋಟ ಮಾತ್ರ. 

ಚಿತ್ರದಲ್ಲಿನ ಕಥನವನ್ನು ಇನ್ನಷ್ಟು ಗಾಢಗೊಳಿಸುವುದು ಛಾಯಾಗ್ರಹಣ. ಸ್ಥಿರವಾಗಿರುವ ಛಾಯಾಗ್ರಹಣ ನಿಧಾನಕ್ಕೆ ಸಮೀಪವರ್ತಿಯಾಗುವ ತಂತ್ರ ಈ ಚಿತ್ರ ಮೂಡಿಸುವ ಇಮೇಜ್‌ಗಳಿಗೆ ಹೊಸ ಹೊಳಹುಗಳನ್ನು ನೀಡುವಂತಿದೆ. 

2017ರಲ್ಲಿ ಬಿಡುಗಡೆಯಾದ ಈ ಚಿತ್ರದ ನಿರ್ದೇಶಕ ಇಲ್ಗಾರ್‌ ನಝಾಪ್‌. ಚೆಕೋವ್‌ನ ‘ದಿ ಚೆರ್ರಿ ಆರ್ಚೆಡ್‌’ ನಾಟಕವನ್ನು ಆಧರಿಸಿದ ಈ ಚಿತ್ರಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರಕಿದೆ. 

 ಅಂತರ್ಜಾಲದಲ್ಲಿ https://bit.ly/2Kn8fBu ಈ ಕೊಂಡಿ ಬಳಸಿ ಚಿತ್ರವನ್ನು ವೀಕ್ಷಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !