ಶುಕ್ರವಾರ, ಮಾರ್ಚ್ 31, 2023
22 °C

ಪವರ್‌ ಸ್ಟಾರ್ ಟ್ರೇಲರ್‌ ವೀಕ್ಷಣೆಗೆ ₹25

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ ಆರಂಭವಾದಾಗಿನಿಂದ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇದ್ದಾರೆ.

ಈಗ ಅವರು ತಮ್ಮ ಮುಂದಿನ 'ಪವರ್‌ ಸ್ಟಾರ್' ಸಿನಿಮಾದ ಟ್ರೇಲರ್‌ ವೀಕ್ಷಣೆಗೆ ಹಣ ನಿಗದಿ ಮಾಡುವ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಮಾತ್ರವಲ್ಲ, ಟ್ರೇಲರ್‌ ವೀಕ್ಷಣೆಗೂ ಹಣ ನಿಗದಿ ಮಾಡಿರುವ ಮೊದಲ ನಿರ್ದೇಶಕ ಎನ್ನಿಸಿಕೊಂಡಿದ್ದಾರೆ.

ಪ್ರತಿ ಬಾರಿಯೂ ಹೊಸ ಹೊಸ ಪರಿಕಲ್ಪನೆಗಳನ್ನು ಜನರ ಮುಂದೆ ಇಡುವ ಆರ್‌ಜಿವಿ ಒಟಿಟಿ ವೇದಿಕೆಯಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ವರ್ಲ್ಡ್ ಥಿಯೇಟರ್ ಎಂಬ ವೆಬ್‌ಸೈಟ್ ಆರಂಭಿಸುವ ಮೂಲಕ ಅದರಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲು ಆರಂಭಿಸಿದ್ದಾರೆ ಆರ್‌ಜಿವಿ. ಈಗಾಗಲೇ ಇವರ ನಿರ್ದೇಶನದ ಕೆಲ ಸಿನಿಮಾಗಳು ಆ ವರ್ಲ್ಡ್‌ ಥಿಯೇಟರ್‌ನಲ್ಲಿ ಬಿಡುಗಡೆಯಾಗಿವೆ. 

‘ಪವರ್‌ಸ್ಟಾರ್‘ ಸಿನಿಮಾ ಆರಂಭದಿಂದಲೂ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟು ಹಾಕಿತ್ತು. ಅಲ್ಲದೇ ಸಿನಿಮಾ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ ಪೇಕ್ಷಕರು. ಈಗ ಟ್ರೇಲರ್‌ ರಿಲೀಸ್ ಮಾಡಿ, ಅದನ್ನು ನೋಡುವುದಕ್ಕೆ ಹಣ ನಿಗದಿಪಡಿಸಿರುವುದು, ಆ ಕುತೂಹಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

22ಕ್ಕೆ ಟ್ರೇಲರ್‌ ಬಿಡುಗಡೆ

ಪವರ್‌ ಸ್ಟಾರ್‌ ಸಿನಿಮಾದ ಟ್ರೇಲರ್‌ ಜುಲೈ 22ಕ್ಕೆ ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಹೇಳಿರುವ ರಾಮ್‌ಗೋಪಾಲ್‌ ವರ್ಮ, ಈ ಟ್ರೇಲರ್ ವೀಕ್ಷಣೆಗೆ ₹25 ದರ ನಿಗದಿ ಮಾಡಿದ್ದಾರೆ. ‘ಈ  ಸಿನಿಮಾವೂ ಜುಲೈ  25ರಂದು ಬೆಳಿಗ್ಗೆ 11 ಗಂಟೆಗೆ ಆರ್‌ಜಿವಿ ವರ್ಲ್ಡ್ ಥಿಯೇಟರ್‌ನಲ್ಲೇ ಬಿಡುಗಡೆಯಾಗಲಿದ್ದು ಇದಕ್ಕೆ ಮುಂಗಡ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ‘ ಎಂದು ತಿಳಿಸಿದ್ದಾರೆ ಆರ್‌ಜಿವಿ. 

‘ಇದು ಮನಸೇನಾ ಪಕ್ಷದ ಸೋಲಿನಿಂದ ನಿರಾಶೆಗೊಳ್ಳುವ ಪವರ್‌ಸ್ಟಾರ್ ಕತೆಯಾಗಿದೆ. ಈ ಪಕ್ಷದ ಸೋಲಿನೊಂದಿಗೆ ಈ ಸಿನಿಮಾ ಆರಂಭವಾಗುತ್ತದೆ’ ಎಂಬ ಸುಳಿವು ನೀಡಿದ್ದಾರೆ ನಿರ್ದೇಶಕರು. ಅಲ್ಲದೇ ಸಿನಿಮಾದಲ್ಲಿ ಪವನ್‌ ಕಲ್ಯಾಣ್ ಅವರ ರಷ್ಯಾ ಮೂಲದ 3ನೇ ಮಡದಿ ಹಾಗೂ ಅವರ ಫಾರ್ಮ್‌ಹೌಸ್‌ನ ಪ್ರಾಣಿಗಳು, ಗಿಡಗಳ ಬಗ್ಗೆಯೂ ತೋರಿಸಲಾಗುತ್ತದಂತೆ.

22ರಿಂದ ಸಿನಿಮಾ ಬುಕ್ಕಿಂಗ್‌

ಈಗಾಗಲೇ ಟ್ರೈಲರ್ ವೀಕ್ಷಣೆಗೆ ಬುಕ್ಕಿಂಗ್ ಆರಂಭವಾಗಿದೆ. www.rgvworldtheatre.com ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆಯಂತೆ. 

ಸಿನಿಮಾ ವೀಕ್ಷಣೆಯ ಟಿಕೆಟ್‌ನ ಮುಂಗಡ ಬುಕ್ಕಿಂಗ್‌ ಟ್ರೇಲರ್‌ ಬಿಡುಗಡೆಯ ದಿನವೇ (ಜು.22ರ ಬೆಳಿಗ್ಗೆ 11 ಗಂಟೆಯಿಂದ) ಆರಂಭವಾಗಲಿದೆ. ಮುಂಗಡ ಬುಕ್ಕಿಂಗ್‌ ₹150 + ಜಿಎಸ್‌ಟಿ ನಿ‌ಗದಿ ಮಾಡಲಾಗಿದೆ. ಈ ಆಫರ್‌ ಚಿತ್ರ ಬಿಡುಗಡೆಯ ಸಮಯವಾದ ಜುಲೈ 25ರ ಬೆಳಿಗ್ಗೆ 11ರ ವರೆಗೆ ಇರಲಿದೆ. ಆ ನಂತರ ಸಿನಿಮಾ ನೋಡಲು ₹250 + ಜಿಎಸ್‌ಟಿ ಪಾವತಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು