ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾಸ್‌ಗೆ ಸಾಹೊ! ಶುಕ್ರವಾರ ತೆರೆಗೆ

Last Updated 29 ಆಗಸ್ಟ್ 2019, 11:58 IST
ಅಕ್ಷರ ಗಾತ್ರ

‘ಬಾಹುಬಲಿ’ ಪ್ರಭಾಸ್ ಅವರು ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಅಭಿನಯಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಇದು, ಮುಂದೊಂದು ದಿನ ಪ್ರಭಾಸ್ ಅವರು ಕನ್ನಡದಲ್ಲೂ ಒಂದು ಸಿನಿಮಾ ಮಾಡಬಹುದೇ ಎಂಬ ಆಸೆಯನ್ನು ಅವರ ಅಭಿಮಾನಿಗಳಲ್ಲಿ ಮೂಡಿಸಿದೆ.

ತೆಲುಗಿನ ಸೂಪರ್‌ ಸ್ಟಾರ್‌ ಪ್ರಭಾಸ್ ಅಭಿನಯದ ‘ಸಾಹೊ’ ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರವು ತೆಲುಗು ಸೇರಿದಂತೆ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಆದರೆ, ಇದು ಕನ್ನಡದಲ್ಲಿ ಡಬ್ ಆಗಿಲ್ಲ. ಸಾಹೊ ಸಿನಿಮಾ ಪ್ರಚಾರಕ್ಕಾಗಿ ಅವರು ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಎದುರಾದ ಪ್ರಶ್ನೆಯೊಂದಕ್ಕೆ ಪ್ರಭಾಸ್‌, ಮೇಲಿನಂತೆ ಉತ್ತರಿಸಿದರು.

ಸಾಹೊ ಚಿತ್ರದ ಕಥೆಯನ್ನು ಅವರಿಗೆ ಬಾಹುಬಲಿ ಸಿನಿಮಾ ಕೆಲಸಗಳು ನಡೆಯುತ್ತಿದ್ದ ಸಮಯದಲ್ಲೇ ಹೇಳಲಾಗಿತ್ತು. ಅವರು ‘ಬಾಹುಬಲಿ’ ಕೆಲಸಗಳನ್ನು ಪೂರ್ಣಗೊಳಿಸಿದ ನಂತರ ಈ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡರು. ಅಂತೂ, ಪ್ರಭಾಸ್ ಅವರು ಮತ್ತೆ ಅಭಿಮಾನಿಗಳ ಎದುರು ಬಂದು ನಿಂತಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಮಾತಿಗ ಸಿಕ್ಕ ಪ್ರಭಾಸ್, ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಹೇಳುತ್ತ ಮಾತು ಆರಂಭಿಸಿದರು. ‘ಬಾಹುಬಲಿ ಸಿನಿಮಾ ನಂತರ ನನಗೆ ಕರ್ನಾಟಕದಲ್ಲಿ ಕೂಡ ಸಾಕಷ್ಟು ಅಭಿಮಾನಿಗಳು ಸಿಕ್ಕಿದ್ದಾರೆ. ಹಾಗಾಗಿಯೇ, ಇಲ್ಲಿಗೆ ಬಂದಿದ್ದೇನೆ’ ಎಂದರು.

ತಾವು ಕಂಡ ಬೆಂಗಳೂರಿನ ಬಗ್ಗೆ ಖುಷಿಯಿಂದ ಒಂದೆರಡು ಮಾತು ಆಡಿದ ಅವರು, ‘ತಾರುಣ್ಯದ ದಿನಗಳಲ್ಲಿ ನಾನು ಬೆಂಗಳೂರಿಗೆ ಬರುತ್ತಿದ್ದೆ. ಆಗ ಬ್ರಿಗೇಡ್‌ ರಸ್ತೆಗೆ ಬಂದು ಅಡ್ಡಾಡಿದ್ದು ಇದೆ. ಆ ಪ್ರದೇಶವನ್ನು ನೋಡಿದಾಗ ನನಗೆ, ಇದು ಭಾರತದ ನಗರ ಅಲ್ಲ, ವಿದೇಶದ ಯಾವುದೋ ಒಂದು ನಗರ ಎಂದು ಅನಿಸುತ್ತಿತ್ತು’ ಎಂದರು. ಈ ನಗರದ ಸೌಂದರ್ಯಕ್ಕೆ ಪ್ರಭಾಸ್‌ ಮಾರುಹೋಗಿದ್ದರಂತೆ. ‘ಇದು ನಗರವಷ್ಟೇ ಅಲ್ಲ, ಯಾವುದೋ ಸಿನಿಮಾದ ಸೆಟ್‌ನಂತೆ ಕಾಣಿಸುತ್ತಿತ್ತು ನನಗೆ’ ಎಂದೂ ಅವರು ಹೇಳಿದರು.

ಮಾತಿನ ನಡುವೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಒಂಚೂರು ಸುಳಿವು ನೀಡಿದರು. ‘ನನ್ನ ಮುಂದಿನ ಚಿತ್ರ ಪ್ರೀತಿ–ಪ್ರೇಮ ಆಧರಿಸಿದ್ದು. ಅದರಲ್ಲಿ ಆ್ಯಕ್ಷನ್ ಇರುವುದಿಲ್ಲ’ ಎಂದರು. ‘ಬಾಹುಬಲಿ’ ಸಿನಿಮಾ ಬಗ್ಗೆ ಪ್ರಶ್ನಿಸಿದಾಗ, ‘ಆ ಚಿತ್ರ ಇತಿಹಾಸ ಸೃಷ್ಟಿಸಿತು. ನಾನು ಆ ಸಿನಿಮಾ ಕಾರಣದಿಂದಾಗಿ ಎಲ್ಲ ಕಡೆಯೂ ಅಸ್ಮಿತೆ ಪಡೆದುಕೊಂಡೆ. ಅದು ಯಾವಾಗಲೂ ನನ್ನ ಫೇವರೇಟ್‌ ಸಿನಿಮಾ ಆಗಿರಲಿದೆ’ ಎಂದರು.

ಕನ್ನಡದ ಕೆಜಿಎಫ್‌ ಸಿನಿಮಾವನ್ನು ಪ್ರಭಾಸ್‌ ವೀಕ್ಷಿಸಿದ್ದಾರಂತೆ. ತೆಲುಗಿನ ಸಿನಿಪ್ರೇಮಿಗಳು ಈ ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT